Thursday, July 3, 2014

ಓ ಮನಸೇ ನೀನೆಷ್ಟು ಸುಂದರ ?




ಕೆಟ್ಟ ದಿನ, ಒಳ್ಳೆಯ ದಿನ ಎಂಬುದೇನೂ ಇಲ್ಲ. ಒಂದೋ ನಾವು ದಿನವನ್ನು ಆಳಬೇಕು ಇಲ್ಲವೇ ದಿನವು ನಮ್ಮನ್ನು ಆಳುತ್ತದೆಸಂಸಾರವೆಂಬುದು ಒಂದು ಮಹಾ ಪ್ರವಾಹ, ಅಥವಾ ತುಂಬಿ ಹರಿಯುವ ನದಿ ಇದ್ದಂತೆ ಅದರಲ್ಲಿ ನಮ್ಮ ಜೀವನವೆಂಬುದು ಒಂದು ಸಣ್ಣ ನೌಕೆ. ಅದನ್ನು ಪ್ರಪಂಚದ ದಡದಿಂದ ಪರಮಾರ್ಥಿಕ ದಡಕ್ಕೆ ಸುರಕ್ಷಿತವಾಗಿ ತಲುಪಿಸಲು ಅಘಾದವಾದ ಪ್ರಯತ್ನ ಬೇಕು. ಈ ಪ್ರಪಂಚದ ಪ್ರವಾಹದಲ್ಲಿ ಯಾರೇ ಇರಲಿ, ಅವರ ಜೀವನ ನೌಕೆಯು ಸುರಕ್ಷಿತವೆಂದು ಹೇಳಲಾಗದು. ಪ್ರತಿಯೊಬ್ಬರ ಜೀವನದಲ್ಲಿಯೂ ಕಷ್ಟ-ಕಾರ್ಪಣ್ಯ, ಎಡರು-ತೊಡರುಗಳು ಸಾಕಷ್ಟು ಇದ್ದೇ ಇರುತ್ತವೆ ವ್ಯಕ್ತಿ-ವ್ಯಕ್ತಿಗಳ ಮಧ್ಯದಲ್ಲಿ, ಕುಟುಂಬಗಳ ಮಧ್ಯೆದಲ್ಲಿ ಅದೆಷ್ಟೇ ಯುದ್ಧಗಳು, ರಾಗದ್ವೇಶಗಳು, ಹೋರಾಟಗಳು ನಡೆದರೂ. ಅವೆಲ್ಲವುಗಳ ಮದ್ಯದಲ್ಲಿದ್ದುಕೊಂಡೇ ಶಾಂತಿ, ಸಮಾಧಾನದಿಂದ ಬದುಕುವುದು ಒಂದು ಸುಂದರ ಕಲೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ನಿಜ, ಆದರೆ ಅವೆಲ್ಲವುಗಳನ್ನು ಆತ್ಮವಿಶ್ವಾಸದಿಂದ ಎದುರಿಸಿ ಶಾಂತಿ, ಸಮಾಧಾನದಿಂದ ಬದುಕುವುದನ್ನು ಕಲಿಸುವವರು ಯಾರೇ ಆದರೂ ಅವರನ್ನು ಗುರುಗಳೆಂದೇ ಪರಿಗಣಿಸಬೇಕಲ್ಲವೇ.

ಮನುಷ್ಯನ ಜೀವನವೆಂಬುದು ನಿರಂತರ ನಡೆಯುವ ಪಯಣ ಅಥವಾ ಯಾತ್ರೆ. ಎಲ್ಲಿಂದ ಎಲ್ಲಿಗೋ ನಡೆಯುವ ಈ ಪಯಣವು ನಮ್ಮ ಶ್ವಾಸ ನಿಲ್ಲುವ ತನಕ ನಿಲ್ಲದು. ಮಾನವನ ಜನನದೊಂದಿಗೆ ಆರಂಬವಾಗುವ ಈ ಮೊದಲನೆಯ ಹೆಜ್ಜೆಯ ಪಯಣದಲ್ಲಿ ಜೀವನದ ಕೊನೆಯವರೆಗೆ ನಾವು ಹೆಜ್ಜೆ ಹಾಕುತ್ತಲೇ ಇರಬೇಕಾಗುತ್ತದೆ. ಯಾವುದೋ ಒಂದು ದಿನ ಆರಂಭವಾದ ಈ ಜೀವನದ ಪಯಣವು ನಿರಂತರ ನಡೆದು ಮುಂದೊಂದು ದಿನ ಕೊನೆಗೊಳ್ಳುವುದು ಮಾತ್ರ ನಿಶ್ಚಿತ, ನಮ್ಮ ಬದುಕನ್ನು ರೂಪಿಸುವ ಸಂಗತಿಗಳು ಒಂದಲ್ಲ, ಎರಡಲ್ಲ ಹತ್ತು ಹಲವು. ನಮ್ಮ ಸುತ್ತ ಮುತ್ತಲಿನ ನಿಸರ್ಗ, ಜನ, ವಸ್ತುಗಳು, ಘಟನೆಗಳು.... ಮೊದಲಾದವುಗಳು ನಮ್ಮ ಬದುಕನ್ನು ರೂಪಿಸುತ್ತವೆ. ನಮ್ಮ ಬದುಕು ಹೇಗೆ ಇರಬೇಕು ಎಂಬುದನ್ನು ಮೊದಲು ನಾವು ನಿರ್ಧರಿಸಬೇಕು. ನಂತರ ನಾವೇ ಅದಕ್ಕೆ ತಕ್ಕ ಪರಿಸರ ನಿರ್ಮಿಸಿಕೊಳ್ಳಬೇಕು. ನಾವು ಬಯಸುವ ಬದುಕೇ ಬೇರೆ, ಪರಿಸರವೇ ಬೇರೆಯಾದರೆ ನಮ್ಮ ಬಯಕೆ ಕೈಗೂಡುವುದಿಲ್ಲ. ಕನಸು ನನಸಾಗುವುದಿಲ್ಲ, ಸಂಕಲ್ಪ ಸಾಕಾರವಾಗುವುದಿಲ್ಲ.

ಹೆತ್ತವರು ನಮ್ಮನ್ನು ಪ್ರಪಂಚಕ್ಕೆ ಪರಿಚಯಿಸುವಾಗ ನಾವುಗಳೆಲ್ಲರೂ  ಸ್ವಚ್ಛ ಸುಂದರ ಮನಸ್ಸನ್ನೇ ತಂದಿದ್ದೆವು. ಅಲ್ಲಿ ಅಹಂಕಾರ-ಮಮಕಾರಗಳ ಬಿರುಗಾಳಿ ಇರಲಿಲ್ಲ. ಕಾಮ-ಕ್ರೋಧದ ಕಸವಿರಲಿಲ್ಲ. ಸಮಸ್ತ ಜಗತ್ತನ್ನೇ ನನ್ನದೆಂದು ಕಂಡು ಕುಣಿಯುವ ಆ ಮಗುವಿನ ಮನಸ್ಸು ಅದೆಷ್ಟು ಸ್ವಚ್ಛ, ಸುಂದರ. ಆದರೆ ಅಂತಹ ಹಸನಾದ ಹೃದಯವನ್ನು ಮತ್ತು ಮನಸ್ಸನ್ನು ನಮ್ಮ ಜೀವನದ ಕೊನೆಯವರೆಗೂ ಉಳಿಸಿಕೊಂಡು ಹೋಗುವುದು ಸಾದ್ಯವೇ ಇಲ್ಲ ಆದರೆ ನಮ್ಮ ಇತಿ ಮಿತಿಗಳನ್ನು ಅರಿತು ಅನುಭವಪೂರ್ವಕವಾಗಿ ನಮ್ಮ ಹಿರಿಯರು ನಿರ್ಮಿಸಿಕೊಟ್ಟಿರುವ ಸನ್ಮಾರ್ಘಗಳಲ್ಲಿ ನಡೆಯಬೇಕು ಆದರೆ ಅದು ಅಷ್ಟು ಸುಲಭವಾದುದಲ್ಲ. ಕಾರಣ ಮನಸ್ಸು, “ಮನಸ್ಸು ಚಂಚಲ. ಅದು ಸ್ಥಿರವಾಗಿರುವುದು ಸಾಧ್ಯವೇ ಇಲ್ಲ. ವಸ್ತುಶಃ ಅಸ್ಥಿರತೆ ಮತ್ತು ಚಾಂಚಲ್ಯದ ಮತ್ತೊಂದು ಹೆಸರೇ ಮನಸ್ಸು”. ಆದರೂ ಜಗತ್ತಿನಲ್ಲಿ ಬದುಕಿಗಿಂತ ಮಹತ್ವವಾದುದು ಯಾವುದಿದೆ ಹೇಳಿ ? ಸಮಸ್ತ ಜಗತ್ತು ಇರುವುದು ನಮ್ಮ ಬದುಕನ್ನು ಸಿಂಗರಿಸುವುದಕ್ಕೆ ಅಲ್ಲವೆ ? ನಮ್ಮ ಬದುಕು ಈ ಜಗತ್ತಿನ ಅಮೂಲ್ಯ ಕಲಾಕೃತಿ. ದೇವರು ನಮಗೆ ಕರುಣಿಸಿರುವ ತನು- ಮನ, ಬುದ್ಧಿ-ಭಾವಗಳ ಸುಂದರ ಸಾಂಗತ್ಯ ಅನುಪಮವಾದುದು. ಇವುಗಳನ್ನು ಬಳಸಿಕೊಂಡು ನಾವು ಮುಗಿಲೆತ್ತರ ಬೆಳೆಯಬಹುದು. ನಮಗೆ ದೊರೆತಿರುವ ತನು ಮನ, ಬುದ್ಧಿ, ಭಾವಗಳು ಬೇರೆ ಬೇರೆಯಾಗಿರಬಹುದು. ಕೆಲವರು ಸಿರಿವಂತರಿರಬಹುದು, ಕೆಲವರು ಬಡವರಾಗಿರಬಹುದು, ಆದರೆ ನಮಗೆಲ್ಲರಿಗೂ ಇರುವ ಬದುಕು ಮಾತ್ರ ಒಂದೇ ನಮ್ಮ ಬದುಕನ್ನು ಸುಂದರಗೊಳಿಸುವುದಕ್ಕೆ ನೀರು, ಅನ್ನ, ಒಳ್ಳೆಯ ಮಾತು ಇವು ಮೂರು ಮುಖ್ಯವಾಗಿ ಬೇಕು. ಇವೇ ನಿಜವಾದ ರತ್ನಗಳಾಗಿವೆ ಪ್ರಾಣಕ್ಕೆ ಪ್ರಾಣವಾಗಿರುವ ಇಂಥ ನೀರು, ಅನ್ನ ಮತ್ತು ಮಧುರ ಮಾತುಗಳನ್ನು ಯಾರು ಎಲ್ಲಿಯವರೆಗೆ ಎಲ್ಲರೊಂದಿಗೆ ಹಂಚಿಕೊಂಡು ಬದುಕುತ್ತಾರೆಯೋ ಅಲ್ಲಿಯವರೆಗೆ ಅವರು ದಿನವನ್ನು ಆಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ.

ಆದರೆ, ಮನುಷ್ಯ ಸಂಘಜೀವಿಯಲ್ಲವೇ ? ಆದ್ದರಿಂದ ಅದು ಎಲ್ಲರಿಗೂ ಸಾದ್ಯವಾಗುವಂತದ್ದಲ್ಲ ಯಾಕೆಂದರೆ ಎಲ್ಲಾದರೂ ಶಾಂತವಾಗಿರುವ ಬಿರುಗಾಳಿಯನ್ನು ಕಂಡಿದ್ದೀರಾ ? ಆ ಬಗ್ಗೆ ಎಲ್ಲಾದರೂ ಓದಿದ್ದೀರಾ ಅಥವಾ ಅವರಿವರ ಬಾಯಿಂದ ಕೇಳಿದ್ದೀರಾ ? ಇಲ್ಲವಲ್ಲ. ಹಾಗೆಯೇ ಶಾಂತ ಮನಸ್ಸೆಂಬುದು ಯಾವುದೂ ಇಲ್ಲ. ಅಶಾಂತಿ, ಮತ್ತು ತುಮುಲಗಳ ತವರು ಮನಸ್ಸು ಎಂದರೆ ತಪ್ಪಾಗಲಾರದು. ''ನಮ್ಮನ್ನು ನಾವು ಹೇಗೆ ನೋಡಿಕೊಳ್ಳುತ್ತೇವೋ ಆ ದೃಷ್ಟಿಯನ್ನು ಜಗತ್ತಿನ ಮೇಲೆ ಆರೋಪಿಸುತ್ತೇವೆ,'' ಎಂದು ಓಶೋ ಹೇಳುತ್ತಾರೆ. ಮತ್ತೊಬ್ಬರ ಅಭಿಪ್ರಾಯಗಳನ್ನು ನಮ್ಮೊಳಗೆ ನಾವೇ ರೂಪಿಸಿಕೊಳ್ಳುತ್ತಾ, ಅದಕ್ಕೆ ಸ್ಪಂದಿಸುತ್ತಾ ಮನಸ್ಸನ್ನು ಕದಡಿಕೊಳ್ಳುತ್ತೇವೆ. ಇದರಿಂದ ಅಶಾಂತಿ ಉಂಟಾಗುತ್ತದೆ. ವಾಸ್ತವವಾಗಿ ಕೊಳದ ನೀರು ನೆಲದ ಕಂಪನದಿಂದ ಕಲಕಿ ರಾಡಿಯಾಗುತ್ತಾ ಇರುತ್ತದೆ. ನಾವು ಮಾತ್ರ ಯಾರೋ ಹೊರಗಿನಿಂದ ಕಲ್ಲೆಸೆಯುತ್ತಾ ಇದ್ದಾರೆಂದು ದೂರುತ್ತೇವೆ. ಸಮಸ್ಯೆಯ ಮೂಲ ನಮ್ಮೊಳಗೇ ಇದೆ ಎಂಬುದನ್ನು ಕಂಡುಕೊಳ್ಳಲು ಯಾರೂ ಇಷ್ಟಪಡುವುದಿಲ್ಲ.

ಮನುಷ್ಯ ತನ್ನ ಅಸ್ತಿತ್ವವನ್ನು ಖಾತ್ರಿಪಡಿಸಿಕೊಳ್ಳುವುದೇ ಅಹಂಕಾರದಿಂದ. ಒಂದು ದಿನ ತಾನು ಅವಜ್ಞೆಗೆ ಒಳಗಾದೆ, ಯಾರೂ ನನ್ನನ್ನು ಗಮನಿಸುತ್ತಿಲ್ಲ ಎಂದು ಅನ್ನಿಸಿದರೂ ಸಾಕು ತೀವ್ರ ಚಡಪಡಿಸಿಹೋಗುತ್ತಾನೆ. ಜನರ ಗಮನ ಸೆಳೆಯಲು ತಂತ್ರಗಳನ್ನು ಹೂಡುತ್ತಾನೆ. ಇದು ಅತಿರೇಕಕ್ಕೆ ಹೋದಾಗಲೇ ಅಪರಾಧಗಳು ಸಂಭವಿಸುವುದು. ತನ್ನ ಅಹಂಕಾರ ತೃಪ್ತಿಗಾಗಿ ವ್ಯಕ್ತಿಯು ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಹೊರಡುತ್ತಾನೆ. ಇತರರೆದುರು ಅದನ್ನು ಮಾಡಲಾಗದೆ ಹೋದಾಗ 'ಇಡೀ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ.' ಎಂದು ಹೇಳಿಕೊಳ್ಳುತ್ತಾ ತನ್ನನ್ನು ತಾನೇ ತೃಪ್ತಿಪಡಿಸಿಕೊಳ್ಳಲು ಹೊರಡುತ್ತಾನೆ. ಎಲ್ಲ ವಿಕೃತಿಗಳ ಬೀಜ ಮೊಳೆಯುವುದು ಈ ಗಳಿಗೆಯಲ್ಲೇ. 'ಇಡೀ ಜಗತ್ತು ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ....' ಏನಿದರ ಅರ್ಥ? ಜಗತ್ತಿಗೆ ತನ್ನದೇಯಾದ ಪಾಡು ಇರುತ್ತದೆ. ಜನಕ್ಕೆ ನಿತ್ಯವೂ ತುತ್ತಿನಚೀಲ ತುಂಬಿಸಿಕೊಳ್ಳುವ ಅನಿವಾರ್ಯತೆ. ಹೀಗಿರುವಾಗ ಯಾರದ್ದಾದರೂ ವಿರುದ್ಧ ಕತ್ತಿ ಮಸೆಯುತ್ತಾ ಕೂರಲು ಅದಕ್ಕೆಲ್ಲಿ ಪುರುಸೊತ್ತು? ನಮಗೆ ಹಾಗನ್ನಿಸುವುದು ನಮ್ಮೊಳಗಿನ ಕೊರತೆಯಿಂದಷ್ಟೆ. ನಮ್ಮನ್ನು ನಾವು ದ್ವೇಷಿಸಿಕೊಳ್ಳುತ್ತಿರುವಷ್ಟೂ ದಿನ, ನಮ್ಮನ್ನು ನಾವು ವಂಚಿಸಿಕೊಳ್ಳುತ್ತಾ ಇರುವಷ್ಟೂ ದಿನ ಹಾಗೆ ಭಾವಿಸುತ್ತಾ ಇರುತ್ತೇವೆ. ಅಂದ ಮೇಲೆ ದುಸ್ಸಂಗಕ್ಕೆ ಒಳಗಾದ ಮನಸ್ಸು ನೋಡಿದ ವಸ್ತು ವ್ಯಕ್ತಿಗಳ ಆಕರ್ಷಣೆಗೆ ಒಳಗಾಗುತ್ತದೆ. ಅದನ್ನು ಬೇಡಿ ಬಯಸಿ ಬಳಲುತ್ತದೆ. ಅದನ್ನು ಪಡೆಯುವುದಕ್ಕೆ ಎಂಥ ಹೇಯ ಕಾರ್ಯ ಮಾಡುವುದಕ್ಕೂ ಅದು ಹಿಂದು ಮುಂದು ನೋಡುವುದಿಲ್ಲ. ಪರಿಣಾಮ,ದ್ವೇಷ, ಇನ್ನೊಬ್ಬರ ಉನ್ನತಿಯನ್ನು ಕಂಡರೆ ಸಹನವಾಗದಿರುವುದು.

ಹಾಗಾದರೆ ಮನಸ್ಸನ್ನು ಸ್ಥಿಮಿತತೆಯಲ್ಲಿಟ್ಟುಕೊಳ್ಳಲು ಸಾದ್ಯವೇ ಇಲ್ಲವೇ ? ಎಂದು ನೀವು ಕೇಳಬಹುದು, ವೈ ನಾಟ್ ಖಂಡಿತಾ ಸಾಧ್ಯವಿದೆ, ಆದರೆ ಅದಕ್ಕೆ ಅಪಾರ ಪರಿಶ್ರಮದ ಅಗತ್ಯವಿದೆ, ನೋಡೀ ಪ್ಲಾಸ್ಟಿಕ್ ಹೂವು ಮರದ ಹೂವಿಗಿಂತ ಸುಂದರವಾಗಿರಬಹುದು. ಆದರೆ ದುಂಬಿಗಳು ಮರದ ಹೂವನ್ನು ಹುಡುಕಿಕೊಂಡು ಹೋಗುತ್ತವೆಯೇ ವಿನಃ ಪ್ಲಾಸ್ಟಿಕ್ ಹೂವನ್ನಲ್ಲ. ಕಾಗದದ ಮೇಲೆ ಬರೆದ ಚಿತ್ರದ ದೀಪವು ಲಕ್ಷಾಂತರ ಬೆಲೆ ಬಾಳುತ್ತಿರಬಹುದು. ಆದರೆ ಅದು ಬೆಳಕನ್ನು ನೀಡಲಾರದು. ಎಣ್ಣೆಯ ಹಣತೆಗೆ ಒಂದೆರಡು ರೂಪಾಯಿ ಬೆಲೆ ಇರಬಹುದಷ್ಟೇ. ಆದರೆ ಅದು ನಮಗೆ ಬೆಳಕನ್ನು ನೀಡುತ್ತದೆ. ನಮ್ಮ ಬದುಕು ಒಂದು ಹೂವಾಗಿ ಅರಳಿ ಕಿರುಹಣತೆಯಾಗಿ ಹೊಳೆದು ಥಳ ಥಳ ಬೆಳಕನ್ನು ನೀಡಬೇಕು. ಇಂಥ ಆದರ್ಶ ಬದುಕು ನಮ್ಮದಾಗಬೇಕಾದರೆ ದಿನದಿಂದ ದಿನಕ್ಕೆ ನಾನು ಒಳ್ಳೆಯವನಾಗುತ್ತಿದ್ದೇನೆ ಎಂಬ ನಂಬಿಕೆಯನ್ನು ನಮ್ಮಲ್ಲಿ ನಾವು ಬೆಳೆಸಿಕೊಳ್ಳಬೇಕು, ಈ ನಂಬಿಕೆಯೇ ನಮಗೆ ಸಾಧನಾ ಪಥದಲ್ಲಿ ನಿರಂತರ ಮುನ್ನಡೆಯುವುದಕ್ಕೆ ಪ್ರೇರಣೆ ನೀಡುತ್ತದೆ. ನಮ್ಮ ತನು, ಮನ, ಬುದ್ಧಿ ಶುದ್ಧವಾದರೆ ಕಾರ್ಯ ಸಿದ್ಧಿಯಾದಂತೆಯೇ. ಅದಕ್ಕಾಗಿ ನಾವು ನಮ್ಮ ಅಂತರಂಗವನ್ನು ಮತ್ತು ಮನಸ್ಸನ್ನು ಆಗಾಗ ಅವಲೋಕಿಸಬೇಕು, ಪರಿಶೋಧಿಸಬೇಕು. ಅಲ್ಲಿರುವ ಕೊಳೆ-ಕಲ್ಮಶಗಳನ್ನು ಹೊರಗೆ ಹಾಕುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು, ಪ್ರಾರ್ಥಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ಹೃತ್ಪೂರ್ವಕವಾಗಿ ಬಯಸಬೇಕು, ಬಯಕೆ ಸಿದ್ಧಿಯ ಕಡೆಗೆ ಸಾಗುವ ಶಕ್ತಿಯನ್ನು ನೀಡುತ್ತದೆ. ಬಯಕೆ ಇಲ್ಲದಿರೆ ಸಾಧನೆಯೂ ಇಲ್ಲ, ಸಿದ್ಧಿಯೂ ಇಲ್ಲ. ಬಯಕೆ ಒಳ್ಳೆಯದಾದರೆ ಬದುಕೇ ಒಳ್ಳೆಯದಾಗುತ್ತದೆ. ನಮ್ಮ ಬಯಕೆಗಳು ರಚನಾತ್ಮಕವಾಗಿರಬೆಕೇ ವಿನಃ ವಿನಾಶಕಾರಿಯಾಗಿರಬಾರದು. ಸುಂದರವಾದ ಅರಣ್ಯವನ್ನು ಬೆಳೆಸುವುದಕ್ಕೆ ನೂರಾರು ವರುಷಗಳೇ ಬೇಕು. ಅದೇ ಅರಣ್ಯ ನಾಶಮಾಡುವುದಕ್ಕೆ ಒಂದೇ ಒಂದು ಬೆಂಕಿಯ ಕಡ್ಡಿ ಕೊರೆದರೆ ಸಾಕು. ಒಳ್ಳೆಯ ಬಯಕೆಗಳಿಂದ ಮಾತ್ರ ಸ್ವ-ಪರ ಕಲ್ಯಾಣವಾಗುತ್ತದೆ. ಹಾಗಾಗಿ ಮನಸ್ಸನ್ನು ಹಿಡಿದು ನಿಲ್ಲಿಸುವ ಪ್ರಯತ್ನ ಬಿಡಿ. ಅದನ್ನು ಒಂದೆಡೆ ಸ್ಥಿರವಾಗಿ ನಿಲ್ಲಿಸಲು ಹೆಣಗಬೇಡಿ. ಅದನ್ನು ಹಿಡಿದಿಡುವ ಉಪಾಯವನ್ನು ಹುಡುಕುವ ವ್ಯರ್ಥಪ್ರಯತ್ನವೂ ಬೇಕಿಲ್ಲ. ಏಕೆಂದರೆ ಈ ಎಲ್ಲಾ ಉಪಾಯಗಳೂ ಹುಟ್ಟುವುದು ಅದೇ ಮನಸ್ಸಿನಿಂದ.

ಸಹಾನುಭೂತಿ, ವಿವೇಕ ಮತ್ತು ತಾಳ್ಮೆ ತುಂಬ ಒಳ್ಳೆಯ ಗುಣಗಳು ಎಂದು ಬರಿ ಚಿಂತನೆ ನಡೆಸುವುದರಿಂದ ಅವುಗಳನ್ನು ಮೈಗೂಡಿಸಿಕೊಳ್ಳುವುದು ಸಾಧ್ಯವಿಲ್ಲ. ಅವುಗಳನ್ನು ನಿಜವಾಗಿಯೂ ಅಳವಡಿಸಿಕೊಳ್ಳಬೇಕಾದರೆ ಸಮಸ್ಯೆಗಳು ಎದುರಾಗಲೇಬೇಕು ಆಗಲೇ ಸಹನೆಯ ಪರೀಕ್ಷೆಯಾಗುತ್ತದೆ. ಹಾಗೆಯೇ ಅದನ್ನು ಅಳವಡಿಸಿಕೊಳ್ಳುವ ಪರಿಯೂ ಕರಗತವಾಗುತ್ತದೆ. ಅಂತಹ ಅವಕಾಶಗಳನ್ನು ಕೊಡುವವರು ಯಾರು ? ಅಂತಹ ಅವಕಾಶಗಳನ್ನು ಒದಗಿಸುವವರು ನಮ್ಮ ವಿರೋಧಿಗಳು. ನಾವು ಪಾಠ ಕಲಿಯಬೇಕಿರುವುದು ಅವರಿಂದಲೇ. ಹಾಗಾಗಿ ಅವರೇ ನಮ್ಮ ಗುರುಗಳೆಂದು ಪರಿಣಗಣಿಸಬೇಕು. ಪ್ರೀತಿ ಸಹಾನುಭೂತಿಗಳನ್ನು ಇಷ್ಟಪಡುವ ವ್ಯಕ್ತಿ ಸಹನೆಯನ್ನು ಅಭ್ಯಾಸ ಮಾಡಿಕೊಳ್ಳುವುದು ಅತ್ಯಗತ್ಯ. ಸಹನೆಯ ಕಲೆ ಕರಗತವಾಗಬೇಕಿದ್ದರೆ ಶತ್ರುವಿರುವುದೂ ಅನಿವಾರ್ಯ. ಹಾಗಾಗಿಯೇ ನಾವು ನಮ್ಮ ಶತ್ರಗಳಿಗೆ ಕೃತಜ್ಞರಾಗಿರಲೇಬೇಕು. ಎಂತಹ ಪರಿಸ್ಥಿತಿಯಲ್ಲೂ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುವುದನ್ನು ಕಲಿಸುವುದು ಅವರೇ. ಅಲ್ಲದೆ ಸಾರ್ವಜನಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ಶತ್ರುಗಳೂ ಮಿತ್ರರಾಗಿ ಪರಿವರ್ತಿತರಾಗುತ್ತಾರೆ ಎಂಬುದು ಎಸ್ಟೋ ಘಟನೆಗಳಲ್ಲಿ ಸಾಬೀತಾಗಿರುವ ಸತ್ಯ.

ನಮ್ಮ ಸಾಮಾಜಿಕ ಮಾನದಂಡಗಳು ನಾವು ಶಾಂತಿಯಿಂದ, ತಾರ್ಕಿಕವಾಗಿ ಸಮಸ್ಯೆಗಳೊಂದಿಗೆ ವ್ಯವಹರಿಸಬೇಕೆಂದು ಭಲವಾಗಿ ನಿರ್ದೇಶಿಸುತ್ತವೆಯಾದ್ದರಿಂದ ಸಾಮಾನ್ಯವಾಗಿ ನಮ್ಮಲ್ಲಿ ಅನೇಕರು ‘ಹೋರಾಟ ಅಥವಾ ಹಾರಾಟ’'ದ ರೀತಿಯ ಮನೋಭಾವವನ್ನು ವ್ಯಕ್ತಪಡಿಸುವುದಿಲ್ಲ. ನಮ್ಮ ಭಾವನೆಗಳನ್ನು ಅದುಮಿಟ್ಟುಕೊಂಡು ಸನ್ನಿವೇಶವನ್ನು ಎದುರಿಸುತ್ತೇವೆ. ಇದರ ಪರಿಣಾಮ ? ನಮ್ಮ ಹಾರ್ಮೋನ್‌ಗಳು ಅಗೋಚರ ರೀತಿಯಲ್ಲಿ ಕ್ರೋಧಗೊಳ್ಳುತ್ತವೆ. ಅಧಿಕ ರಕ್ತದೊತ್ತಡ, ಹೃದಯರೋಗ, ಉಸಿರಾಟದ ತೊಂದರೆ, ಅಜೀರ್ಣ, ತಲೆನೋವು ವಿಭಿನ್ನ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಅದರ ಪರಿಣಾಮ ? “ಒತ್ತಡ, ಬೇಸರ, ಸಿಟ್ಟು. ನಾವು ಸಿಟ್ಟಾದಾಗ ಅಥವಾ ಬೇಸರಗೊಂಡಾಗ, ದೇಹವು 'ಹೋರಾಟ ಅಥವಾ ಹಾರಾಟ'ಕ್ಕೆ ಸಿದ್ಧರಾಗುವಂತೆ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಹಾಗಾದರೆ ಇದಕ್ಕೆ ಪರಿಹಾರ ? ಮರಳಿ ಹೋರಾಡುವುದು ಅಥವಾ ಇವುಗಳಿಂದ ತಪ್ಪಿಸಿಕೊಳ್ಳುವುದು ಅಲ್ಲ, ಇಂತಹ ಪ್ರಕ್ರಿಯೆಗಳು ನಮ್ಮ ಸಂಬಂಧಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ, ಏನ್ರಿ ಇದು ಹೋರಾಡೋದು ಅಲ್ಲ ತಪ್ಪಿಸಿಕೊಳ್ಳೋದು ಅಲ್ಲ ಅಂದರೆ ಇದಕ್ಕೆ ಪರಿಹಾರನೇ ಇಲ್ಲವೆ ಎಂದು ಕೇಳಬಹುದು ವೈ ನಾಟ್ ಖಂಡಿತಾ ಇದೆ (ಆದರೆ ಅದನ್ನ ಕಾರ್ಯರೂಪಕ್ಕೆ ತರೋದು ಹೇಗೆ ಅನ್ನೋದು ಮಾತ್ರ ನಿಮ್ಮ ವಿವೇಚನೆಗೆ ಬಿಟ್ಟಿದ್ದು).

ನೋಡೀ ನಮ್ಮಲ್ಲಿ ಅನೇಕ ಜನರು ತಾವು ಮಾಡುವ ಕೆಲಸಕ್ಕೆ ಫಲವನ್ನು ಆ ಕಾರ್ಯ ಆರಂಭಿಸುವ ಅಥವಾ ಕರ್ತವ್ಯ ನಿರ್ವಹಣೆಗಿಂತ ಮೊದಲೇ ನಿರೀಕ್ಷಿಸುತ್ತಾರೆ. ಹಾಗಾಗದೆ ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಮತ್ತು ಫಲಿತಾಂಶವು ನಮ್ಮ ಕೈಗಳಲ್ಲಿ ಇಲ್ಲ ಎಂಬ ತತ್ತ್ವವನ್ನು ಅನುಸರಿಸಿದರೆ, ಆಗ ನೋವನ್ನು ಅನುಭವಿಸುವುದಿಲ್ಲ. ಏಕೆಂದರೆ ಆಗ ನಮ್ಮ ಮನಸ್ಸು ಬಯಕೆರಹಿತ ಸ್ಥಿತಿಯಲ್ಲಿರುತ್ತದೆ. ಹಾಗಂತ ನಮಗೆ ಬಯಕೆಗಳು ಇರಬಾರದು ಅಂತ ಅಲ್ಲ ನಮ್ಮಲ್ಲಿ ಪ್ರತಿಯೊಬ್ಬರಿಗೂ ಬಯಕೆಗಳಿವೆ, ಇರಲೇ ಬೇಕು ಕೂಡಾ, ಸಾಮಾನ್ಯವಾಗಿ ನಾವು ಬಯಕೆಗಳನ್ನು ನಮ್ಮ ದೈನಂದಿನ ಬದುಕಿನ ಸಂತೋಷಕ್ಕಾಗಿ, ತೃಪ್ತಿಗೊಳಿಸಲು ನೋಡುತ್ತೇವೆ. ಆದರೆ ಒಂದು ಬಯಕೆಯು ಅಸಂಖ್ಯಾತ ಬಯಕೆಗಳನ್ನು ಹುಟ್ಟುಹಾಕುತ್ತದೆ. ಆ ಬಯಕೆಗಳು ಪೂರ್ಣಗೊಳ್ಳದಿದ್ದರೆ ಅಥವಾ ಭಾಗಶಃ ಪೂರ್ಣಗೊಂಡರೆ, ಅವು ಅಸಂತೋಷ ಮತ್ತು  ನೋವನ್ನು ಹುಟ್ಟುಹಾಕುತ್ತವೆ. ನಾವು ಅವುಗಳ ಬಗ್ಗೆ ಯೋಚಿಸಿದಷ್ಟೂ ಮತ್ತಷ್ಟು ಸಂಕಟಪಡುತ್ತೇವೆ. ಹೀಗೆ ಮಾಡುತ್ತ ಸ್ವತಃ ನೋವುಂಟುಮಾಡಿಕೊಳ್ಳುತ್ತೇವೆ. ಜನರು ಭಿನ್ನ ಬಗೆಯ ಒತ್ತಡ-ಹುಟ್ಟಿಸುವಂತಹ ಸ್ಥಿತಿಗತಿಯಲ್ಲಿರುವಾಗ ಈ ಬಗೆಯ ಬದುಕು ಪ್ರಸ್ತುತ ಸಂದರ್ಭದಲ್ಲಿ ಸುಸ್ಥಿರವಾಗಿ ಉಳಿಯಬಲ್ಲದೇ ? ಅಷ್ಟೆಲ್ಲ ದುರಾಸೆ, ಆತಂಕ ಮತ್ತು ಅಸಂತೃಪ್ತಿಯ ಮಧ್ಯದಲ್ಲಿ ಸಂತೋಷವನ್ನು ಹೇಗೆ ಕಾಣಬಲ್ಲೆವು ? ನೈಜ ಸಂತೋಷವು ಬಯಕೆಗಳನ್ನು ಹುಟ್ಟುಹಾಕುವುದರಿಂದ ಬರುವುದಿಲ್ಲ; ಅದು ಬಯಕೆಗಳನ್ನು ನಿಧಾನವಾಗಿ ಕಡಿಮೆಗೊಳಿಸುವುದರಿಂದ ಅಥವಾ ಅವುಗಳನ್ನು ಪೂರ್ಣ ತೊಡೆದುಹಾಕುವುದರಿಂದ ಬರುತ್ತದೆ. ನೋವು ಮತ್ತು ಸಂತೋಷ ಒಂದೇ ನಾಣ್ಯದ ಎರಡು ಮುಖಗಳು. ನಿಮಗೆ ನೋವನ್ನು ಅನುಭವಿಸುವ ಸಾಮರ್ಥ್ಯವಿದ್ದರೆ ಸಂತೋಷವನ್ನು ಅನುಭವಿಸುವ ಸಾಮರ್ಥ್ಯವೂ ಇರುತ್ತದೆ. ಆದರೆ ನೋವು ಮತ್ತು ಸಂತೋಷ, ಸುಖ ಮತ್ತು ದುಃಖ, ಎರಡನ್ನೂ ಮೀರಲು ನೀವು ಕಲಿತಾಗಲೇ ನೈಜ ಪ್ರಗತಿ ಸಾಧ್ಯವಿದೆ. ನೋವು ಮತ್ತು ಆನಂದದಿಂದ ನಿಮ್ಮನ್ನು ನೀವು ದೂರ ಇರಿಸಿಕೊಳ್ಳುವುದರಲ್ಲಿಯೇ ಪರಿಹಾರ ಅಡಗಿದೆ. ಆದರೆ ಹೃದಯದಿಂದ ಹುಟ್ಟಿವ ಸಂತೋಷವು ಭದುಕಿಗೆ ಮುಗುಳ್ನಗು ಮತ್ತು ತಾಜಾತನವನ್ನು ಕೊಡುತ್ತದೆ. ಇಂತಹ ಸಹಜ ನಗೆ ನಮ್ಮ ಸುತ್ತಲೂ ಇರಬೇಕೆಂದರೆ, ಅಂತಹ ನಗೆಗೆ ನಾವು ಕಾರಣಕರ್ತರಾಗಬೇಕು. ಜಗತ್ತು ನೆಮ್ಮದಿಯ ತಾಣವಾಗಬೇಕೆಂದರೆ ಸಹಾನುಭೂತಿಯ ಅನುಭವವಾಗಬೇಕು. ಅದಕ್ಕಾಗಿ ಯಾವುದೇ ಆದರ್ಶ ಅಥವಾ ಧರ್ಮದಲ್ಲಿ ನಂಬುಗೆ ಇಡಬೇಕಿಲ್ಲ. ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡರೆ ಸಾಕು.

ಹಾಗಾದರೆ ಸಂತೋಷವನ್ನು ಅರಸಿ ಹೋಗುವುದೆಲ್ಲಿಗೆ ? ಎಲ್ಲಿಗೂ ಹೋಗಬೇಕಾಗಿಲ್ಲ ಅದು ನಿಮ್ಮೊಳಗೇ ಇರುತ್ತದೆ. ನೀವು ಇರುವಲ್ಲೇ ಸಂತೋಷ ಪಡಲಾರಿರಿ ಎಂದಾದ ಮೇಲೆ ಅದನ್ನು ಬೇರೆಲ್ಲೂ ಪಡೆಯುಲು ಸಾಧ್ಯವೇ ಇಲ್ಲ!'' ನಮ್ಮೊಳಗಿನ ಆನಂದವನ್ನು ಹೊರಗೆ ತರಬೇಕೆಂದರೆ ಮೊದಲು ಅದರ ಇರುವನ್ನು ಅರಿತುಕೊಳ್ಳಬೇಕು. ಈ ಅರಿವು ಸಾಧ್ಯವಾಗುವುದು ಅಹಂಕಾರದ ತೆರೆ ಸರಿದಾಗ ಮಾತ್ರ. ಅಹಂಕಾರದ ಮುಸುಕಿನಿಂದ ಈಚೆ ಬಂದರೆ ನಮ್ಮೆಲ್ಲ ಒಳಿತು ಕೆಡುಕುಗಳಿಗೂ ನಾವೇ ಬಾಧ್ಯಸ್ಥರು ಎನ್ನುವ ಅರಿವು ಮೂಡುತ್ತದೆ. ಇದರ ಜತೆಗೇ ನಮ್ಮ ನಮ್ಮ ಸುಖದುಃಖಗಳಿಗೂ ನಾವೇ ಜವಾಬ್ದಾರರೆಂಬುದು ಮನದಟ್ಟಾಗಿ, ಸದಾ ಸಂತಸದಿಂದ ಇರುವ ಮನಸ್ಸಿನ ಸಹಜ ಸ್ವಭಾವವು ಪ್ರಕಟಗೊಳ್ಳುತ್ತದೆ.
ಆದರೆ ಈ ಅಹಂಗೆ ಸ್ವತಂತ್ರವಾದ ಅಸ್ತಿತ್ವವಿಲ್ಲ (ವೆಂದರೆ ಕೆಲವರಿಗೆ ನಂಬುವುದಕ್ಕೆ ಕಷ್ಟವಾಗಬಹುದು ಆದರೆ ಅದೇ ಸತ್ಯ). ಯಾವುದೋ ರೂಪದಲ್ಲೇ ಅದು ತನ್ನ ಅಸ್ತಿತ್ವವನ್ನು ಸಾರುತ್ತದೆ. ಹಾಗಾಗಿಯೇ ಗಾಢ ನಿದ್ದೆಯಿಂದೆ ಎಚ್ಚರಗೊಳ್ಳುವಾಗಲೇ 'ನಾನು' ಅಥವಾ ಅಹಂ ಕೂಡ ಏಳುತ್ತದೆ. ಹಾಗೆಯೇ ಇಂದ್ರಿಯಗಳ ಮೂಲಕ ತನ್ನ ಇರವನ್ನು ಸೂಚಿಸುತ್ತಲೇ ಕೆಲಸ ಮಾಡತೊಡಗುತ್ತದೆ. ದೇಹದೊಂದಿಗೆ ತನ್ನ ಇರುವಿಕೆಯ ಸುಳಿವು ಕೊಡತೊಡಗುತ್ತದೆ. ಮನಸ್ಸಿನ ಎಲ್ಲ ಸಾರವೂ ಸಾಕಾರಗೊಳ್ಳುವುದು ಜಾಗೃತಿ ಅಥವಾ ಪ್ರಜ್ಞೆಗಳಲ್ಲಿ. ಆದರೆ ಅದಕ್ಕೆ ಅಹಂ ಮುಸುಕಿದಾಗ, ಅದರ ತರ್ಕ ಚಿಂತನೆಗಳು ಬದಲಾಗುತ್ತವೆ. ಮನಸ್ಸು ಅಹಂಗೆ ಮಾತ್ರ ಸೀಮಿತವಾಗುವುದಿಲ್ಲ. ಹಾಗು ಅದರಿಂದ ಹೊರಗೆ ಏನೂ ಇರುವುದಿಲ್ಲ. ಹಾಗಾಗಿಯೇ ಅದು ಬರಿ ಜಾಗೃತವಾಗಿರುತ್ತದೆ.

ಅಹಂ ಎನ್ನುವುದು ನಿಮ್ಮ ಬಗ್ಗೆ ನಿಮಗಿರುವ ತಪ್ಪು ಕಲ್ಪನೆ. ಇದರ ಮೂಲ ನಿಮ್ಮ ಮನಸ್ಸೇ. ಇದು ನೀವೆಂದರೆ ಏನು, ಹೇಗಿರಬೇಕು ಎಂದು ಬಯಸುವಿರೋ ಅದನ್ನು ಆಧರಿಸಿ ಮನಸ್ಸೇ ನಿರ್ಮಿಸಿದ ಚಿತ್ರ ಇದು. ಇದಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧವಿಲ್ಲ. ಲೌಕಿಕ ವ್ಯವಹಾರಗಳಲ್ಲಿ ಇದು ಅತ್ಯಂತ ಉಪಯುಕ್ತ. ಇಲ್ಲಿ ನೀವು ಇತರೆ ಅಹಂಗಳೊಡನೆ ವ್ಯವಹರಿಸುತ್ತೀರಿ. ನೀವು ನಿಮ್ಮ ಮನಸ್ಸನ್ನು ಮೀರಿದಾಗಲೇ ನಿಮ್ಮ ಅಹಂಕಾರವನ್ನೂ ಜಯಿಸಿ ಮುಂದೆ ಸಾಗುತ್ತೀರಿ. ಆಗಲೇ ನಿಮ್ಮ ಬಗೆಗಿನ ಸತ್ಯದ ದರ್ಶನವಾಗುತ್ತದೆ. ನೀವು ಚಿತ್ರಿಸಿಕೊಂಡ ನಿಮ್ಮ ವ್ಯಕ್ತಿತ್ವಕ್ಕೂ, ವಾಸ್ತವದಲ್ಲಿ ನೀವಿರುವ ರೀತಿಗೂ ಅಗಾಧವಾದ ವ್ಯತ್ಯಾಸವಿದೆ ಎಂಬುದನ್ನು ಮನಗಾಣುತ್ತೀರಿ. ನಿಮ್ಮ ಅಹಂ ಚಿತ್ರಿಸಿದ ನಿಮ್ಮ ಚಿತ್ರದಲ್ಲಿ ನಿಮ್ಮ ದೇಹ ಮತ್ತು ಮನಸ್ಸುಗಳೆರಡೂ ಇಲ್ಲವೆಂಬುದು ನಿಮ್ಮ ಅರಿವಿಗೆ ಬರುತ್ತದೆ. ಆಗ ದಕ್ಕುವ ಅನುಭವ ಮತ್ತು ತಿಳಿವನ್ನು ಪದಗಳಲ್ಲಿ ಹಿಡಿದಿಡುವುದು ಸಾಧ್ಯವಾಗುವುದಿಲ್ಲ.

ಹಾಗೆಂದು ಇದೂ ಕೂಡಾ ಪರಮೋಚ್ಛ ಸತ್ಯವೇನಲ್ಲ. ಇದು ಜ್ಞಾನೋದಯಕ್ಕೂ ಮತ್ತು ಕಡು ಮೂರ್ಖತನಗಳಿವೆಯಲ್ಲ ಅವುಗಳ ನಡುವೆ ಇರುವಂತಹ ತಿಳಿವು ಇದು. ಸುಳ್ಳಿಗಿಂತ ಸ್ವಲ್ಪ ಉತ್ತಮವೇ ಆದರೂ ಪರಮ ಸತ್ಯಕ್ಕಿಂತ ಸ್ವಲ್ಪ ಕೆಳಮಟ್ಟದ ಸ್ಥಿತಿ ಇದು. ಇಲ್ಲಿ ನಿಮಗೆ ಇನ್ನೂ ನಿಮಗೂ ನಿಮ್ಮ ಅಸ್ತಿತ್ವಕ್ಕೂ ಅಂತರವಿದೆ ಎಂಬ ಭಾವನೆ ನಿಮ್ಮೊಳಗೆ ಬೇರೂರಿರುತ್ತದೆ. ಈ ಭಾವನೆಯು ನಿಮಗೆ ದೊರೆಯಬೇಕಾದ ಸಕಲ ಅನುಗ್ರಹಗಳೂ ನಿಮಗೆ ದೊರೆಯದಂತೆ ಮಾಡುತ್ತದೆ. ನಿಮ್ಮಲ್ಲಿರುವ ಈ ಎಲ್ಲಾ ಕಲ್ಮಷಗಳನ್ನು ತೊಡೆದು ಹಾಕಿ ಅಖಂಡ ಸತ್ಯಕ್ಕೆ ಮೈಯೊಡ್ಡಿದ ಕ್ಷಣ ನೀವು ಮತ್ತು ನಿಮ್ಮ ಅಸ್ತಿತ್ವ ಬೇರೆಬೇರೆ ಎಂಬ ಪ್ರತ್ಯೇಕತಾ ಭಾವ ಮರೆಯಾಗಿ ಬಿಡುತ್ತದೆ. ಇದರಿಂದ ದಕ್ಕುವ ನಿರಂತರ, ಅಪರಿಮಿತ, ಅಸೀಮ ಆನಂದದ ಅನುಭವಕ್ಕೆ ಎಣೆಯಿರುವುದಿಲ್ಲ. ಈ ಸ್ಥಿತಿಯೇ ಜ್ಞಾನೋದಯ.


ಈಗ ನಿಜವಾಗಿಯೂ ನೀವು ಇದೇನು ನಕಾರಾತ್ಮಕ ಚಿಂತನೆಯೋ ಅಥವಾ ಸಕಾರಾತ್ಮಕ ಚಿಂತನೆಯೋ, ಆಸ್ತಿಕವಾದವೋ ಇಲ್ಲ ನಾಸ್ತಿಕವಾದವೋ ಎಂಬ ಜಿಜ್ಞಾಸೆಗೆ ಒಳಗಾಗಿರಬಹುದು,ಅಥವಾ ನಮ್ಮ ಬದುಕಿಗೆ ನಿಜಕ್ಕೂ ಒಂದು ಅರ್ಥ ಎಂಬುದು ಇದೆಯಾ ? ಎಂದು ಕೇಳಬಹುದು.
ನೋಡೀ ನಾವು ಆಚರಿಸುವ ಧರ್ಮಗಳು,  ಯುದ್ಧ, ಸಂಪ್ರದಾಯಗಳು, ಹಿಂಸೆ, ಭಿನ್ನ ಭಿನ್ನವಾಗಿ ಪ್ರತಿರೂಪ ಪಡೆಯುವ ಕ್ರೌರ್ಯ, ನಮ್ಮ ಐಡಿಯಾಲಜಿಗಳು, ಅಥವಾ ನಮ್ಮ ಆಲೋಚನಾ ಲಹರಿಗಳು, ಅಹಂ, ಸ್ವಾರ್ಥ, ವ್ಯಾಮೋಹ, ಲಾಲಸೆ, ರಾಷ್ಟ್ರೀಯತೆ,ಧರ್ಮ,......... ಏನು ಇದೆಲ್ಲಾ ? ನಿಜಕ್ಕೂ ಇದೇ ನವ್ಮು ಜೀವನವಾ ಅಥವಾ ಇದಕ್ಕೂ ಮೀರಿದ್ದು ಇನ್ನೇನಾದರೂ ಇದೆಯಾ ಎಂಬ ಪ್ರಶ್ನೆಗಳನ್ನು ಮನುಷ್ಯ ಅನಾಧಿ ಕಾಲದಿಂದಲೂ ಸದಾ  ಕೇಳಿಕೊಳ್ಳುತ್ತಲೇ ಬಂದಿದ್ದಾನೆ. ನಕರಾತ್ಮಕ ಮಾತು ಉತ್ತಮ ಆರಂಭವಾದರೂ ಒಳ್ಳೆಯ ಅಂತ್ಯವಲ್ಲ. ನಕಾರಾತ್ಮಕ ಮಾತು ಬೀಜದಂತೆ, ಸಕಾರಾತ್ಮಕ ಮಾತು ಅದರಿಂದ ಹೂ ಬಿರಿದಂತೆ. ಸಕಾರವು ನಕಾರದ ಮೂಲಕ ಬರಬೇಕು- ನಕಾರವು ಸಕಾರದ ಗರ್ಭ. ನಕಾರದ ಮಾತುಗಳನ್ನಾಡದ ವ್ಯಕ್ತಿಯ ಸಕಾರಮಾತುಗಳು ನಿರ್ವೀರ್ಯ. ಅದಕ್ಕೇನೂ ಮಹತ್ವವಿಲ್ಲ. ಅದು ನಿಮ್ಮ ಜೀವನವನ್ನು ರೂಪಾಂತರಿಸದು. ಅದು ಕೇವಲ ಬಾಯಿ ಮಾತಾಗಿರುತ್ತದೆ, ಹೃದಯದ ನುಡಿಯಲ್ಲ.
ಶಾಂತಿ ಮತ್ತು ಆನಂದಕ್ಕಾಗಿ ನಾವೆಲ್ಲರೂ ನಿರಂತರ ಹುಡುಕಾಟದಲ್ಲಿದ್ದೇವೆ. ಈ ಹುಡುಕಾಟ ಸಾರ್ವತ್ರಿಕ. ನಿಜ ಹೇಳಿ, ತಾನು ದುಃಖದಲ್ಲಿರಬೇಕು ಎಂದುಕೊಳ್ಳುವವರು ಯಾರಾದರೂ ಇದ್ದಾರೆಯೇ? ಜನ ಹಲವು ಬಗೆಯಲ್ಲಿ ಸಂತೋಷದ ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವರಿಗೆ ಸಂಪತ್ತು ಮತ್ತು ವಸ್ತುಗಳು ಸಂತೋಷ ಕೊಟ್ಟರೆ ಇನ್ನೂ ಕೆಲವರಿಗೆ ಖ್ಯಾತಿ ಆನಂದವನ್ನುಂಟುಮಾಡುತ್ತದೆ. ಮತ್ತು ಕೆಲವರು ಚಲನಚಿತ್ರ ನೋಡುವುದರಿಂದ, ಸಂಗೀತ ಕೇಳುವುದರಿಂದ ಟಿವಿ ನೋಡುವುದರಿಂದ ಐಹಿಕ ಸುಖಭೋಗಗಳಲ್ಲಿ ತೊಡಗಿಕೊಳ್ಳುವುದರಲ್ಲಿ ಖುಷಿ ಕಾಣುತ್ತಾರೆ. ಕೆಲವರಿಗೆ ಆಟೋಟಗಳಲ್ಲಿ ಭಾಗವಹಿಸುವುದು ಮತ್ತು ಅದನ್ನು ನೋಡುವುದೆಂದರೆ ಎಲ್ಲಿಲ್ಲದ ಉತ್ಸಾಹ, ಇನ್ನು ಅನೇಕರು ಮಾದಕ ವ್ಯಸನ ಮತ್ತು ಕುಡಿತದಲ್ಲಿ ತಮ್ಮ ಆನಂದ ಕಂಡುಕೊಳ್ಳುತ್ತಾರೆ. ಹೀಗೆ ತಮ್ಮ ಇಷ್ಟಗಳನ್ನು ಈಡೇರಿಸಿಕೊಳ್ಳುವುದರಲ್ಲೇ ಅನೇಕರು ಸುಖ ಕಂಡಿದ್ದಾರೆ. ಒಂದು ಕಾರು, ಮನೆ ಕೊಳ್ಳವ ಇಚ್ಛೆ ಇರಬಹುದು, ಆಳವಾದ ಅಧ್ಯಯನ ಮಾಡುವ ತುಡಿತ ಅಥವಾ ಜಗತ್ತಿನ ಇನ್ಯಾವುದೇ ವಿಷಯ ಅಥವಾ ವಸ್ತುವನ್ನು ಹೊಂದುವ ಬಯಕೆ ಇರಬಹುದು.
ಒಂದಲ್ಲ ಒಂದು ಬಯಕೆ ಈಡೇರಿಸಿಕೊಳ್ಳಲು ಶ್ರಮಿಸುತ್ತಿರುವಾಗಲೇ ಇಡೀ ಬದುಕು ಮುಗಿದು ಹೋಗುತ್ತದೆ. ಆದರೂ ನಮ್ಮ ಇಚ್ಛೆಗಳಿಗೆ ಕೊನೆಯಿಲ್ಲ. ಒಂದು ಬಯಕೆ ಮುಗಿದಾಗ ಮತ್ತೊಂದು ಎದ್ದು ನಿಲ್ಲುತ್ತದೆ. ಅದನ್ನೂ ಪೂರೈಸಿದಾಗ, ಇನ್ನೊಂದು ಪುಟಿದೇಳುತ್ತದೆ. ಪ್ರತಿಬಾರಿಯೂ ಹೊಸ ಕೊಂಡಿ ಸೇರಿಕೊಳ್ಳುತ್ತಲೇ ಇರುತ್ತದೆ. ಆದುದ್ದರಿಂದ ನಮ್ಮೆಲ್ಲಾ ಕೆಲಸಗಳು ಅದು ವೈಯಕ್ತಿಕವೇ ಆಗಿರಲಿ ಇಲ್ಲಾ ಸಮೂದಾಯಿಕವಾಗಿರಲಿ ಕಾಲಕಾಲಕ್ಕೆ ಅವುಗಳನ್ನು ಅವಲೋಕಿಸಿ ಮನನ ಮಾಡಿಕೊಂಡು ಅಗತ್ಯ ಬದಲಾವಣೆ ಮಾಡಿಕೊಳ್ಳಬೇಕಾದ ಅಗತ್ಯವಿದೆ. ಯಾವುದೇ ಕೆಲಸದಲ್ಲಿ ನಾವು ನಿರೀಕ್ಷಿಸಿದ ಫಲಿತಾಂಶ ದೊರೆಯದಿದ್ದಾಗ, ಅದಕ್ಕೆ ಬೇರೆಯವರನ್ನು ಹೊಣೆ ಮಾಡಿ ದೂರುತ್ತಾ ಕೂರುವುದಕ್ಕಿಂತ, ಈ ಅನುಭವದಿಂದ ಪಾಠ ಕಲಿಯಬೇಕು. ಇದು ಬೆಳವಣಿಗೆಯ ಮೆಟ್ಟಿಲಾಗಬೇಕು. ಮುಂದಿನ ಬಾರಿ ಒಳ್ಳೆಯ ಅನುಭವ ಪಡೆಯಲು ನಮ್ಮೊಳಗನ್ನು ಬದಲಾವಣೆಗೆ ಒಡ್ಡಿಕೊಳ್ಳಬೇಕು.''ಪರಸ್ಪರ ಸಹಕಾರ ಮತ್ತು ಪ್ರತಿಸ್ಪಂದನೆ ಮಾನವಜನಾಂಗದ ಅಗತ್ಯ. ಮನುಷ್ಯರಲ್ಲಿ ಸಹಭಾಗಿತ್ವದ ಕೊಂಡಿ ಬಲವಾದಷ್ಟೂ, ಎಲ್ಲ ಕ್ಷೇತ್ರಗಳ್ಲಲೂ ರಚನಾತ್ಮಕ ಪ್ರಗತಿ ಮತ್ತು ಔನ್ನತ್ಯವನ್ನು ಸಾಧಿಸಲು ಸಾಧ್ಯ.

'ಮನಸ್ಸಿನಂತೆ ಮಹಾದೇವ' ಎನ್ನುವ ಮಾತೊಂದಿದೆ. ಹೌದು, ಮನಸ್ಸು ಎನ್ನುವುದು ಹವ್ಯಾಸ ಅಥವಾ ಚಟಗಳ ಉತ್ಪನ್ನ. ಚಟಗಳನ್ನು ಬಿಡುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಾಕಷ್ಟು ಸಮಯ ಸಹ ಬೇಕಾಗುತ್ತದೆ. ಮನಸ್ಸಿನೊಂದಿಗೆ ಮಾತನಾಡುವುದನ್ನು ಕಲಿತರೆ, ಇಲ್ಲವೆ ಅಭ್ಯಾಸ ಮಾಡಿದ ಪಕ್ಷದಲ್ಲಿ ಯಾವುದು ಆಗುವುದಿಲ್ಲ ಎಂದುಕೊಳ್ಳುತ್ತೇವೆಯೋ ಅದೆಲ್ಲವೂ ಆಗುತ್ತವೆ. ಯಾವುದೋ ಒಂದು ಚಟ ಬಿಡಬೇಕು ಎಂದುಕೊಳ್ಳಿ. ಆಗ ನೀವು ಕೇವಲ 'ನಿಲ್ಲಿಸುತ್ತೇನೆ' ಎಂದಷ್ಟೇ ಹೇಳಿಕೊಳ್ಳಿ. ಅದು ನಿಮ್ಮೊಳಗೆ ಬಿಡದ ಅಂಟಿನಂತೆ ಕಚ್ಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಿಮ್ಮ ಶಕ್ತಿಯನ್ನೂ ಖರ್ಚು ಮಾಡಬೇಕು. ಹೀಗಾದರೆ, ಚಟಗಳಿಗೆ ತೆರೆ ಬೀಳುವುದು ಖಚಿತ. ಕೆಲವು ಚಟಗಳು ಮನಸ್ಸನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿರುತ್ತವೆ. ಹೀಗಾಗಿ, ನಕಾರಾತ್ಮಕ ಹವ್ಯಾಸಗಳನ್ನು ಹೊರದೂಡಬೇಕು. ಅಧ್ಯಾತ್ಮಿಕ ಅಭ್ಯಾಸವು ಈ ನಿಟ್ಟಿನಲ್ಲಿ ಪರಿಣಾಮಕಾರಿ. ಮನಸ್ಸಿನ ಭ್ರಾಂತಿಗಳನ್ನು ತೊಲಗಿಸುವುದನ್ನೇ ಅಧ್ಯಾತ್ಮಿಕ ಸಾಧನೆ ಎನ್ನುತ್ತೇವೆ. ಒಳ್ಳೆಯದೋ, ಕೆಟ್ಟದ್ದೋ... ಬದುಕಿನಲ್ಲಿ ನಾವಂತೂ ನಾನಾ ಕೆಲಸಗಳನ್ನು ಮಾಡುತ್ತಲೇ ಇರುತ್ತೇವೆ. ವಿವೇಕಿಯಾದವನು ಎಚ್ಚರಿಕೆಯಿಂದ, ಅರಿವಿನ ಬೆಳಕಲ್ಲಿ ಹೆಜ್ಜೆ ಹಾಕುತ್ತಾನೆ. ಆ ಮೂಲಕ ತನ್ನನ್ನು ತಾನು ಉದ್ಧಾರ ಮಾಡಿಕೊಳ್ಳುತ್ತಾನೆ.

ಈ ಸಾಧನೆ ನಿಮಗೆ ದಕ್ಕಬೇಕಾದರೆ ನಿಮ್ಮ ಅಹಂ ಅನ್ನು ಬೇರು ಸಮೇತ ಕಿತ್ತೊಗೆಯಬೇಕು. ಈ ಅಹಂ ಎಂಬುದು ನಿಮ್ಮ ಮನಸ್ಸಿನೊಳಗೆ ನಡೆಯುವ ಸಂಘರ್ಷ ಅಥವಾ ಅದನ್ನು ನಿಮ್ಮ ಮನಸ್ಸಿನ ನಾಟಕ ಎಂದರೆ ಹೆಚ್ಚು ಸೂಕ್ತವೇನೋ. ನಾನು ನಾಸ್ತಿಕತೆಯನ್ನೂ ಒಂದು ಧರ್ಮವೆಂದೇ ಭಾವಿಸುತ್ತೇನೆ. ಹಿಂದು,ಕ್ರೈಸ್ತ, ಮುಸಲ್ಮಾನ, ಯಹೂದಿ....... ಮುಂತಾದ ಎಲ್ಲಾ ಧರ್ಮಗಳು ಸತ್ಯವನ್ನು ಕಾಣಲು ಅಹಂ ಅನ್ನು ಬಿಡಬೇಕೆಂದು ಬೋಧಿಸುತ್ತವೆ. ಆದರೆ ಝೆನ್ ಈ ವಿಷಯದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಸಾಗುತ್ತದೆ.

ಇಲ್ಲಿ ಅಹಂ ಎನ್ನುವುದನ್ನು ನಿರ್ಮೂಲನೆ ಮಾಡುವಲ್ಲಿಗೆ ನಿಲ್ಲುವುದಿಲ್ಲ. ಅಹಂ ಸೇರಿದಂತೆ ಸಕಲವನ್ನೂ ಬಿಟ್ಟುಕೊಟ್ಟ ಸ್ಥಿತಿಯೇ ಜ್ಞಾನೋದಯ ಎಂದು ಇದು ನಂಬುತ್ತದೆ. ನಾನು ಎಂಬುದು ನಾಶವಾದಾಗ, ಅಂದರೆ ಸಂಪೂರ್ಣ ಶೂನ್ಯತೆ ಸಾಧಿಸಿದಾಗಲೇ ಪರಮೋಚ್ಚ ಜ್ಞಾನ ಸಾಧನೆಯ ಹಾದಿ ಮೊದಲಾಗುತ್ತದೆ. ಅದು ಎಲ್ಲಿಂದಲೋ ಬಂದಿದ್ದಲ್ಲ ನಮ್ಮೊಳಗೇ ಉದ್ಭವವಾದದ್ದು ಅಂದರೆ ನಮ್ಮ ಮನಸ್ಸೆಂಬ ಕಾರ್ಕಾನೆಯಲ್ಲಿ ತಯಾರಾದದ್ದು.

ಹಾಗಾದರೆ ಯಾವುದಕ್ಕಾದರೂ ತುಡಿಯುವುದು ತಪ್ಪೇ ? ಎಂಬ ಸಂದೇಹ ನಿಮ್ಮಲ್ಲಿ ಬರಬಹುದು ಅಥವಾ ಬಯಕೆಯೇ ಇಲ್ಲದ ಬದುಕು ಸಾಧ್ಯವೇ?, ಸಹಜವೇ ? ಎಂಬ ಪ್ರಶ್ನೆಗಳು ಕಾಡಬಹುದು, ಹೌದು ತುಡಿತವಿರಬೇಕು ನಿಜ ಆದರೆ ನಶ್ವರದೆಡೆಗೆ ಅಲ್ಲ. ಬಯಕೆಯೂ ಇರಲೇಬೇಕು ಆದರೆ ಮಾನವತ್ವ ಮತ್ತು ಅನುಭಾವದೆಡೆಗೆ. ಪಡೆಯುವುದಕ್ಕಿಂತ ಕೊಡುವುದರಲ್ಲಿನ ಸುಖವನ್ನು ಒಮ್ಮೆ ಅನುಭವಿಸಿ ನೋಡಿ. ನೀವು ಏನನ್ನೂ ನಿರೀಕ್ಷಿಸದೆ, ಪ್ರತಿಯಾಗಿ ಬಯಸದೆ ಕೊಟ್ಟರೆ, ಕೊಡುತ್ತಿದ್ದರೆ ಕೊಡುವುದರಲ್ಲಿ ಆನಂದ ನಿಮ್ಮದಾಗುತ್ತದೆ. ಕೊಡುವುದರಲ್ಲಿನ ಸುಖವನ್ನು ನೀವು ಕಾಣುತ್ತೀರಿ. ಯಾವ ವಸ್ತುವನ್ನು ಸುಖಕ್ಕೆ ಪ್ರತಿನಿಧಿಯೆಂದು, ಸುಖವಾಗಲೆಂದು ನೀವು ಕೊಡುತ್ತೀರೋ ಅದರಲ್ಲಿ ಸುಖವು ಮೈದಾಳುತ್ತದೆ. ಅದರ ಅನುಭೂತಿಯು ನಿಮ್ಮನ್ನು ಆವರಿಸುತ್ತದೆ. ನೀವು ಸ್ವೀಕರಿಸುವುದೇ ಸುಖವೆಂದು ಭಾವಿಸಬೇಡಿ. ಪಡೆಯುವುದರಲ್ಲೇ ಸುಖವನ್ನು ಹುಡುಕಬೇಡಿ. ಒಮ್ಮೆ ಕೊಟ್ಟು ನೋಡಿ, ಒಮ್ಮೆ ಕೊಡುವುದರಲ್ಲಿನ ಸುಖದ ಸವಿ ಸಿಕ್ಕರೆ ಮುಗಿಯಿತು ಅದರತ್ತಲೇ ಆಕರ್ಷಿತರಾಗುತ್ತೀರಿ. ಕೊಡುವುದು ಯಾವಾಗಲೂ ಸುಖವನ್ನೇ ಕೊಡುತ್ತದೆ, ಹಾಗಾಗಿ ಜೀವನಕ್ಕೆ ಸುಖವಲ್ಲದೆ ಬೇರೇನು ಬೇಕು ?