Friday, January 4, 2013

ಸಿಟ್ಟು, ಕೋಪ, ಆಕ್ರಮಣಶೀಲತೆ

ನಾವು ಹೆತ್ತ ಮಗ ಸರ್. ಹೊಟ್ಟೆ, ಬಟ್ಟೆ ಕಟ್ಟಿ ಪ್ರೀತಿಯಿಂದ ಸಾಕಿದ್ದಕ್ಕೆ ನಮಗೆ ಕೊಟ್ಟ ಉಡುಗೊರೆ, ನನ್ನ ಕೈ ಮೂಳೆ ಮುರಿದಿದೆ. ಇವರ ಹುಬ್ಬಿನ ಮೇಲೆ ನಾಲ್ಕು ಇಂಚಿನ ಗಾಯ, ಏಟು ಅರ್ಧ ಅಂಗುಲ ಕೆಳಗೆ ಬಿದ್ದಿದ್ದರೆ, ಇವರ ಕಣ್ಣೇ ಹೋಗುತ್ತಿತ್ತು. ಬೈಕ್ ಬೇಕು ಎಂದು ಹಠ ಮಾಡಿದ. ಸಾಲ ಮಾಡಿ ತೆಗೆದುಕೊಟ್ಟೆವು. ಮೊಬೈಲ್ ಬೇಕು ಎಂದ. ಸ್ನೇಹಿತರನ್ನು ಬೇಡಿ, ತಂದು ಕೊಟ್ಟೆವು. ಕಂಪ್ಯೂಟರ್ ಕೋರ್ಸ್‌ಗೆ ಸೇರುತ್ತೇನೆಂದ. ಬ್ಯಾಂಕ್‌ಲೋನ್ ತೆಗೆದು ಸೇರಿಸಿದೆವು. ಒಂದು ತಿಂಗಳು ಹೋಗಿ, ಟೀಚರ್ಸ್ ಸರಿ ಇಲ್ಲ. ಚೆನ್ನಾಗಿ ಹೇಳಿಕೊಡೋಲ್ಲ ಎಂದುಬಿಟ್ಟ. ಹಣ ಹೋಯಿತು, ಅವನು ಕೇಳಿದ್ದೆಲ್ಲ, ನಾವು ಪೂರೈಸಲೇಬೇಕು. ಇಲ್ಲದಿದ್ದರೆ ಚೀರಾಟ, ಕೂಗಾಟ, ಕೆಟ್ಟ ಮಾತಿನ ಬೈಗುಳ. ನಿಮ್ಮ ತೀಟೆ ತೀರಿಸಿಕೊಂಡು ನನ್ನನ್ನು ಏಕೆ ಹುಟ್ಟಿಸಿದಿರಿ, ಮಗನಿಗೆ ಒಳ್ಳೆಯ ಜೀವನ ಕೊಡಲಾಗದ ನೀವು ಏಕೆ ಬದುಕಿರಬೇಕು ಎಂದು ಮೆಟ್ಟಿಲ ಮೇಲಿಂದ ನಮ್ಮಿಬ್ಬರನ್ನು ದೂಡಿದ. ಆಯತಪ್ಪಿ ಬಿದ್ದ ನನಗೆ ನನ್ನ ಗಂಡನಿಗೆ ಪೆಟ್ಟಾಯಿತು. ಇವರ ಹಣೆಯಿಂದ ರಕ್ತ ಹರಿಯುತ್ತಿದ್ದರೂ, ನೋಡದೆ ಹೊರಹೋದ. ನಾನು ಬಾಯಿ ಬಡಿದುಕೊಂಡೆ, ಅಕ್ಕಪಕ್ಕದವರು ಬಂದು ನಮ್ಮನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಿದರು ಎಂದಾಗ ಸೌಮ್ಯಳ ಕಣ್ಣುಗಳು ಕಣ್ಣೀರಿನ ಮಡುವಾಗಿದ್ದವು.


ಅಸಾಧ್ಯ ಸಿಟ್ಟು ಸರ್ ಇವಳಿಗೆ. ಹಾಗಲ್ಲ ಹೀಗೆ ಎಂದು ಹೇಳುವಂತಿಲ್ಲ. ಸಿಟ್ಟಿನಿಂದ ಕೂಗಾಡಿ ಬಿಡುತ್ತಾಳೆ. ಕೈಗೆ ಸಿಕ್ಕಿದ ವಸ್ತುಗಳನ್ನು ನಮ್ಮ ಮೇಲೆ ಎಸೆಯುತ್ತಾಳೆ. ಇಲ್ಲವೇ ನೆಲಕ್ಕೆ ಗೋಡೆಗೆ ಅಪ್ಪಳಿಸಿ ಹಾಳು ಮಾಡುತ್ತಾಳೆ. ಮುನಿಸಿಕೊಂಡರೆ, ಇಡೀ ದಿವಸ ಉಪವಾಸ ಇರುತ್ತಾಳೆ. ಚಂಡಿಕತೆ ಕೇಳಿದ್ದೀರಲ್ಲ, ಮಾಡು ಎಂಬುದನ್ನು ಮಾಡುವುದಿಲ್ಲ, ಮಾಡಬೇಡ ಎಂಬುದನ್ನು ಮಾಡುತ್ತಾಳೆ. ಎಲ್ಲವೂ ಅವಳು ಹೇಳಿದಂತೆಯೇ ಆಗಬೇಕು. ಅದು ಊಟದ ವಿಚಾರವಾಗಬಹುದು, ಬಟ್ಟೆ, ಬರೆ ಅಲಂಕಾರವಾಗಬಹುದು. ಅವಳು ಮನೆಯನ್ನು ಯಾವಾಗ ಬಿಡುತ್ತಾಳೆ, ಯಾವಾಗ ವಾಪಸ್ ಬರುತ್ತಾಳೆ ಎಂದು ನಾವು ಕೇಳುವಂತಿಲ್ಲ. ನನ್ನ ಮೇಲೆ ನಿಮಗೆ ನಂಬಿಕೆ ಇಲ್ಲ, ನಾನು ಮನೆ ಬಿಟ್ಟು ಹೋಗಿಬಿಡುತ್ತೇನೆ ಎಂದು ಕೂಗಾಡುತ್ತಾಳೆ ಏನು ಮಾಡಬೇಕೆಂದು ತೋಚುತ್ತಿಲ್ಲ ಎಂದರು ರಾಜಮ್ಮ.

ಸಿಟ್ಟು ಆಕ್ರಮಣಶೀಲತೆ ಯಾವುದೇ ಜೀವಿಗೆ ನೈಸರ್ಗಿಕವಾಗಿ ಬರುವ ಭಾವನೆ. ಪ್ರಾಣಿಗಳ ಮಟ್ಟದಲ್ಲಿ ಇದು ಅತ್ಯವಶ್ಯಕ. ಅವು ಬದುಕುಳಿಯಲು ಇವು ಬೇಕೇಬೇಕು. ಆಹಾರ ಸಂಪಾದಿಸಲು, ಆಕ್ರಮಣ ಮಾಡಬೇಕು. ತನ್ನ ಜಾಗಕ್ಕೆ ಇನ್ನೊಂದು ಪ್ರಾಣಿ ಅತಿಕ್ರಮಣ ಮಾಡಿದರೆ ಸಿಟ್ಟು ಮಾಡಿ, ಆಕ್ರಮಣ ನಡೆಸಬೇಕು, ಸಂತಾನೋತ್ಪತ್ತಿ ಮಾಡಲು, ಸಂಗಾತಿಯನ್ನು ಆಯ್ಕೆ ಮಾಡಲು, ಪಡೆಯಲು ಇತರರೊಡನೆ ಹೋರಾಟ ಮಾಡಬೇಕು.
ಆದರೆ ಮನುಷ್ಯನಲ್ಲಿ ಸಿಟ್ಟು, ಆಕ್ರಮಣಶೀಲತೆ, ಇಷ್ಟೊಂದು ಪ್ರಮಾಣದಲ್ಲಿ ಬೇಕಿಲ್ಲ.
ನಿತ್ಯ ಜೀವನದಲ್ಲಿ ಸಹಕಾರ, ಸ್ನೇಹಪರತೆ, ಸಹನೆ, ಶಾಂತತೆಗೇ ಹೆಚ್ಚು ಮಹತ್ವ ನೀಡಬೇಕಾಗುತ್ತದೆ. ಬೇಕು ಬೇಡಗಳು ಪೂರೈಕೆಯಾಗದೇ ನಿರಾಶೆಯಾದಾಗ ಸಿಟ್ಟು ಬರುತ್ತದೆ. ಪ್ರೀತಿ, ವಿಶ್ವಾಸ ತೋರಿಸಬೇಕಾದವರು, ಪ್ರೀತಿ ತೋರಿಸದೆ, ತಿರಸ್ಕಾರ-ಉದಾಸೀನ ಮಾಡಿದಾಗ ಸಿಟ್ಟು ಬರುತ್ತದೆ. ತನ್ನ ಹಕ್ಕುಗಳನ್ನು ಇತರರು ಉಲ್ಲಂಘಿಸಿದಾಗ ವ್ಯಕ್ತಿ ಕೋಪಿಸಿಕೊಳ್ಳುತ್ತಾನೆ. ಅನ್ಯಾಯ, ಅಕ್ರಮಗಳಾದಾಗ ಸಿಟ್ಟು ಮಾಡಿ ಅನ್ಯಾಯ-ಅಕ್ರಮಗಳನ್ನು ಮಾಡಿದವರ ಮೇಲೆ ಅಕ್ರಮಣ ಮಾಡುತ್ತಾನೆ. ಹೀಗಾಗಿ ಸಿಟ್ಟು, ಕೋಪ, ಅಕ್ರಮಣಶೀಲತೆ, ಸಹಜ ಸ್ವಾಭಾವಿಕ ಭಾವನೆ, ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಮನುಷ್ಯನಿಗಿರಬೇಕು. ಆದರೆ ಅದರ ಪ್ರಮಾಣ ಮತ್ತು ಪ್ರಕಟಣೆಯಲ್ಲಿ ಪ್ರತಿಯೊಬ್ಬರೂ ವಿವೇಚನೆಯನ್ನು ತೋರಬೇಕು. ಇಲ್ಲದಿದ್ದರೆ, ಹಿಂಸೆಯಾಗುತ್ತದೆ. ಅನಾಹುತಗಳಾಗುತ್ತವೆ. ಲಗಾಮಿಲ್ಲದ ಕೋಪ, ಆಕ್ರಮಣಶೀಲತೆ, ಬೆಂಕಿಯಂತೆ ವ್ಯಕ್ತಿಯನ್ನು ಸೇರಿದಂತೆ ಎಲ್ಲರನ್ನೂ ಸುಡುತ್ತದೆ. ನೋವನ್ನುಂಟುಮಾಡುತ್ತದೆ.
ಕೋಪ-ಆಕ್ರಮಣಕಾರಿ ಭಾವನೆಗಳು ಬರುತ್ತಿದ್ದಂತೆ, ದೇಹದಲ್ಲಿ ಹೆಚ್ಚು "ಅಡ್ರಿನಲಿನ್ ಮತ್ತು ಕಾರ್ಟಿಸಾಲ್" ಹಾರ್ಮೋನುಗಳು ಉತ್ಪತ್ತಿಯಾಗಿ ವ್ಯಕ್ತಿಯನ್ನು ಹೋರಾಟಕ್ಕೆ ಸಜ್ಜು ಮಾಡುತ್ತವೆ. ಮಿದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿ, ವ್ಯಕ್ತಿಯ ವಿವೇಚನೆ, ಬೌದ್ಧಿಕ ಸಾಮರ್ಥ್ಯಗಳನ್ನು ತಗ್ಗಿಸುತ್ತದೆ. ವ್ಯಕ್ತಿ ವಿವೇಚನಾ ರಹಿತನಾಗಿ, ಸರಿತಪ್ಪುಗಳ ತುಲನೆ ಮಾಡದೇ ಪರಿಣಾಮಗಳನ್ನು ಲೆಕ್ಕಿಸದೆ, ಕೋಪವನ್ನು ಪ್ರದರ್ಶಿಸಲು ಸಜ್ಜಾಗುತ್ತಾನೆ. ಅನೇಕ ಹೀನ ಅಪರಾಧಗಳನ್ನು ಮಾಡಲೂ ಹೇಸುವುದಿಲ್ಲ.
ಸಾಮಾನ್ಯವಾಗಿ ಹದಿಹರೆಯದವರಿಗೆ,ಯುವ ಜನರಿಗೆ ಸಿಟ್ಟು, ಕೋಪ ಹೆಚ್ಚು. ಆಕ್ರಮಣಶೀಲತೆಯೂ ಹೆಚ್ಚು. ಆದ್ದರಿಂದಲೇ ಅವರನ್ನು "ಬಿಸಿರಕ್ತದವರು ಎಂದು ಜನ ಹೇಳುತ್ತಾರೆ". ಅನ್ಯಾಯ, ಅಕ್ರಮ, ಮೋಸ, ವಂಚನೆಗಳನ್ನು ಕಂಡರೆ, ಯುವ ಜನರಲ್ಲದೆ, ಇನ್ಯಾವ ವಯಸ್ಸಿನವರು ಸಿಡಿದೇಳಲು ಸಾಧ್ಯ?
ವಯಸ್ಸಾಗುತ್ತಿದ್ದಂತೆ ಆಕ್ರಮಣ ಶೀಲತೆ ಕುಗ್ಗುತ್ತದೆ. ಅಡ್ರಿನಲಿನ್, ಕಾರ್ಟಿಸಾಲ್ ಉತ್ಪತ್ತಿ ಕಡಿಮೆಯಾಗುತ್ತದೆ. ಹೃದಯ ಶ್ವಾಸಕೋಶಗಳ, ಸ್ನಾಯುಗಳ ಬಲವೂ ಕುಂಠಿತಗೊಳ್ಳುತ್ತದೆ.ಆದರೆ ಇತ್ತೀಚೆಗೆ, ಹರೆಯದವರಲ್ಲಿ ಸಿಟ್ಟು, ಕೋಪ ಆಕ್ರಮಣಶೀಲತೆ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಈ ಸಿಟ್ಟು ಕೋಪಗಳ ದುಷ್ಪರಿಣಾಮಗಳಿಗೆ, ಹೆತ್ತವರು, ಒಡಹುಟ್ಟಿದವರು, ಮನೆಯವರು, ಸಹಪಾಠಿಗಳು, ಅಧ್ಯಾಪಕರು ಮತ್ತು ಇತರರು ಒಳಗಾಗುತ್ತಾರೆ. ಇದಕ್ಕೆ ಕಾರಣಗಳು ಹಲವಾರು:
ಹದಿಹರೆಯದವರ ಬೇಕು-ಬೇಡಗಳು, ನಿರೀಕ್ಷೆಗಳು ಹೆಚ್ಚುತ್ತಿವೆ:
ಆಹಾರ, ವಸ್ತ್ರ, ವಸತಿ, ಭೋಗವಸ್ತುಗಳು, ಹಣ, ಮನರಂಜನಾ ಚಟುವಟಿಕೆಗಳು, ಸ್ವಾತಂತ್ರ್ಯ, ಸ್ಥಾನಮಾನ, ಕೀರ್ತಿಗಳು ಎಷ್ಟಿದ್ದರೂ ಅವರಿಗೆ ಸಾಲದಾಗುತ್ತಿವೆ. "ಕೊಳ್ಳಬಾಕ ಸಂಸ್ಕೃತಿಯಲ್ಲಿ ಎಲ್ಲ ಉತ್ಪಾದಕರು ಹರೆಯದವರನ್ನು ಗಮನದಲ್ಲಿಟ್ಟುಕೊಂಡು, ವಸ್ತು ವಿಶೇಷಗಳನ್ನು ತಯಾರಿಸಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ". ಒಬ್ಬರು ಕೊಂಡರೆ ಸಾಕು ಉಳಿದವರೆಲ್ಲರಿಗೂ ಅದು ಬೇಕು. ಅಗತ್ಯವಿಲ್ಲದಿದ್ದರೂ ಪ್ರತಿಷ್ಠೆಗಾಗಿ, ಸ್ಪರ್ಧೆಗಾಗಿ ಕೊಂಡುಕೊಳ್ಳುವ ಆತುರವನ್ನು ಎಲ್ಲರಲ್ಲೂ ಮೂಡಿಸುತ್ತಾರೆ. ಸಿಗದಿದ್ದಾಗ, ಕೊಂಡುಕೊಳ್ಳಲು ಆಗದಿದ್ದಾಗ, ತಂದೆ-ತಾಯಿಗಳು ಬೇಡವೆಂದಾಗ, ನಿರಾಶೆಗೊಳಗಾಗಿ ಸಿಟ್ಟಿಗೇಳುತ್ತಾರೆ.
ಮುಖ್ಯವಾಗಿ ಹರೆಯದವರಿಗೆ ಪರಿಪೂರ್ಣ ಸ್ವಾತಂತ್ರ-ಸ್ವಾಯತ್ತತೆ ಬೇಕೆನಿಸುತ್ತದೆ. ತಮ್ಮಿಷ್ಟ ಬಂದಂತೆ ನಡೆದುಕೊಳ್ಳಲು, ಜೀವಿಸಲು, ಎಲ್ಲ ಚಿಕ್ಕ-ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಅವರು ಇಚ್ಚಿಸುತ್ತಾರೆ. ಅವರಿಗೆ ಯಾರ ಸಲಹೆ, ಬುದ್ಧಿವಾದ, ಮಾರ್ಗದರ್ಶನ ಪಡೆಯಲು ಇಷ್ಟವಾಗುವುದಿಲ್ಲ. ತಮ್ಮ-ತಮ್ಮಲ್ಲೇ ಮಾತಾಡಿಕೊಂಡು, ನಿರ್ಧಾರ ಮಾಡುತ್ತಾರೆಯೇ ಹೊರತು ಹಿರಿಯರ, ಅಧ್ಯಾಪಕರ ಮಾತುಗಳನ್ನು ಕೇಳಲು ಅಥವಾ ಅವರೊಂದಿಗೆ ಚರ್ಚಿಸಲು ತಯಾರಿರುವುದಿಲ್ಲ. ಹಿರಿಯರ ಹಳೆಯ ಕಾಲದ ರೀತಿನೀತಿಗಳು, ಧೋರಣೆಗಳು, ಜೀವನ ಶೈಲಿ ಅವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಇದರಿಂದ ನಿರಾಶೆ ನಿತ್ಯದ ಸಂಗತಿಯಾಗುತ್ತದೆ.
ವಿಪರೀತ ಸ್ಪರ್ಧೆ, ದೊಡ್ಡ ಗುರಿ ನಿತ್ಯ ಯೋಗ್ಯತೆಯ ಪರೀಕ್ಷೆ:
ಇತ್ತೀಚಿನ ದಿನಗಳಲ್ಲಿ, ಸ್ಪರ್ಧೆ ಮುಗಿಲನ್ನು ಮುಟ್ಟಿದೆ. ಕೆಲವೇ ಅವಕಾಶಗಳು; ಸಾವಿರಾರು ಮಂದಿಗೆ ಅವುಗಳ ಮೇಲೆ ಕಣ್ಣು. ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಅಥವಾ ತಂದೆ ತಾಯಿಯ ಬಳಿ ಎಷ್ಟು ದೊಡ್ಡದಾದ ಹಣದ ಥೈಲಿ ಇದೆ ಎಂಬುದರ ಮೇಲೆ ಗುರಿಮುಟ್ಟಬಹುದೇ ಇಲ್ಲವೇ ಎಂಬುದು ನಿರ್ಧಾರವಾಗುತ್ತದೆ. ಹೀಗಾಗಿ ಹೆಚ್ಚೆಚ್ಚು ಅಂಕಗಳನ್ನು ಗಳಿಸಲು ತಂದೆತಾಯಿಗಳು, ಶಿಕ್ಷಕರು ಮಕ್ಕಳ ಮೇಲೆ ಅಸಾಧ್ಯ ಒತ್ತಡ ಹೇರುತ್ತಾರೆ. ೯೦% ಅಂಕಗಳನ್ನು ತೆಗೆಯಲು ಬಹುಮಾನಗಳ ಆಮಿಷವನ್ನು ಒಡ್ಡುತ್ತಾರೆ. ಶೇಕಡಾ ೨೦ರಿಂದ೨೫ರಷ್ಟು ವಿದ್ಯಾರ್ಥಿಗಳು ಯಶಸ್ವಿಯಾದರೆ ಉಳಿದವರು ವಿಫಲರಾಗುತ್ತಾರೆ. ನಿರಾಶೆ ಅವರಿಗೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಮನೆಯಲ್ಲಿ ಒಬ್ಬರು ೯೦% ತೆಗೆಯುವಲ್ಲಿ ಸಫಲರಾದರೆ, ಉಳಿದವರು ಇತರರ ತಿರಸ್ಕಾರ ಹೀನಾಯದಲ್ಲಿ ಬದುಕಬೇಕಾಗುತ್ತದೆ.
ಮಾಧ್ಯಮಗಳ ಪ್ರಭಾವ:
ವೈಭವದ ಶ್ರೀಮಂತ ಜೀವನ ಶೈಲಿಯನ್ನು ಬಿಂಬಿಸುವ ಸಿನೆಮಾ, ಟೀವಿ ಧಾರಾವಾಹಿಗಳು, ಜಾಹೀರಾತುಗಳು, ಹಣ-ಆಸ್ತಿ-ಕೀರ್ತಿ-ಸ್ಥಾನಮಾನಗಳನ್ನು ಅಡ್ಡದಾರಿಯಲ್ಲಿ. ಅಕ್ರಮವಾಗಿ ಸಂಪಾದಿಸುವ ಪಾತ್ರಗಳು ಅಥವಾ ವ್ಯಕ್ತಿಗಳ ವೈಭವೀಕರಣ, ಲೈಂಗಿಕತೆ ಮತ್ತು ಹಿಂಸೆ, ಆಕ್ರಮಣಶೀಲತೆಯನ್ನು ರೋಚಕವಾಗಿ ಚಿತ್ರಿಸುವ ವರದಿಗಳು, ಕಲ್ಪನೆಗಳು, ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಕಂದಕವನ್ನು ಪ್ರಚೋದನಾತ್ಮಕ ರೀತಿಯಲ್ಲಿ ವಿವರಿಸುವುದು. ನೀತಿನಿಯಮಗಳನ್ನು ಭಂಗ ಮಾಡುವುದೇ ಸರಿ. ರಾಜಿಸಂಧಾನಕ್ಕಿಂತ ಬಲಪ್ರಯೋಗವೇ ಉತ್ತಮ ಇತ್ಯಾದಿ ಅಕ್ರಮಣಕಾರಿ ಧೋರಣೆಗಳನ್ನು ಪ್ರೇರೇಪಿಸುವ ಚಿತ್ರಣಗಳು ಹರೆಯದವರ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನುಂಟುಮಾಡುತ್ತವೆ.
ಆನುವಂಶೀಯತೆಯಿಂದ , ಮಿದುಳಿಗಾಗುವ ಸಣ್ಣಪ್ರಮಾಣದ ಹಾನಿ:
ಗರ್ಭಧಾರಣೆ ಅವಧಿಯಲ್ಲಿ ಹೆರಿಗೆಯಾಗುವಾಗ ಮತ್ತು ಆನಂತರದ ಐದು ವರ್ಷಗಳಲ್ಲಿ ನಾನಾ ಕಾರಣಗಳಿಂದ ಮಿದುಳಿಗೆ ಅತಿ ಅಲ್ಪಮಟ್ಟದ ಹಾನಿಯುಂಟಾಗಬಹುದು. ಇದನ್ನು minimum brain damage ಎನ್ನುತ್ತಾರೆ. ಈ ಮಟ್ಟದ ಹಾನಿಗೀಡಾದ ಮಕ್ಕಳಲ್ಲಿ ಇತರ ಮಕ್ಕಳಿಗೆ ಹೋಲಿಸಿದರೆ, ಆಕ್ರಮಣಶೀಲನೆ, ಸಿಟ್ಟುಕೋಪ, ನೀತಿ ನಿಯಮಗಳನ್ನು ಭಂಗ ಮಾಡುವ ಪ್ರವೃತ್ತಿ ಅಪರಾಧ ಮಾಡುವ ಮನೋಭಾವ ಹೆಚ್ಚಾಗಿ ಕಂಡು ಬರುತ್ತದೆ ಎಂಬುದು ಗಮನಾರ್ಹ. ಸಿಟ್ಟು-ಆಕ್ರಮಣಶೀಲತೆ ಅನುವಂಶೀಯವಾಗಿಯೂ ಬರಬಹುದು.
ಮಧ್ಯಪಾನ ಮಾದಕವಸ್ತುಗಳ ಸೇವನೆ: 
ಮಧ್ಯಪಾನ ಮತ್ತು ಮಾದಕ ವಸ್ತುಗಳು ವ್ಯಕ್ತಿಯ ವಿವೇಚನೆಯನ್ನು ಹಾಳು ಮಾಡುತ್ತವೆ. ಹಾಗೆಯೇ ಅಮಲಿನಲ್ಲಿ ಅದುಮಿಟ್ಟ ನಕಾರಾತ್ಮಕ ಭಾವನೆಗಳು ಪ್ರಕಟಗೊಳ್ಳುತ್ತವೆ. ಜೊತೆಗೆ ಈಗಾಗಲೇ ಮಧ್ಯಪಾನ-ಮಾದಕ ವಸ್ತಗಳು ಸೇವನೆಯ ಚಟಕ್ಕೆ ವ್ಯಕ್ತಿ ತುತ್ತಾಗಿದ್ದರೆ. ನಿಗದಿತ ಪ್ರಮಾಣದ ಮದ್ಯಮಾದಕ ವಸ್ತುವನ್ನು ನಿರ್ದಿಷ್ಟ ವೇಳೆಗೆ ವ್ಯಕ್ತ ಸೇವಿಸದೇ ಹೋದರೆ ಹಿಂದೆಗೆತದ ಚಿನ್ಹೆಗಳು ಕಾಣಿಸಿಕೊಳ್ಳುತ್ತವೆ (withdrawal sysmtoms) ಅವು ದೈಹಿಕವಾಗಿ ಮಾನಸಿಕವಾಗಿ ವ್ಯಕ್ತಿಗೆ  ಹಿಂಸೆಯನ್ನುಂಟು ಮಾಡುತ್ತವೆ. ಆಗ ವ್ಯಕ್ತಿ ಸಿಟ್ಟು ಕೋಪ, ಅಕ್ರಮಣಶೀಲತೆಯನ್ನು ಪ್ರಕಟಿಸುತ್ತಾನೆ.
ಮಾನಸಿಕ ಕಾಯಿಲೆಗಳು
ಖಿನ್ನತೆ, ಮೇನಿಯ, ಸ್ಕಿಜೋಫ್ರೀನಿಯಾದಂತಹ ತೀವ್ರತರದಮಾನಸಿಕ ಕಾಯಿಲೆಗಳಲ್ಲಿ ಸಿಟ್ಟು ಕೋಪ, ಆಕ್ರಮಣ ಪ್ರವೃತ್ತಿ ರೋಗಲಕ್ಷಣಗಳಾಗಿ ಕಾಣಿಸಕೊಳ್ಳುತ್ತವೆ. ನಿರಾಶೆ, ಅಸಹಾಯಕತೆ, ಸಂಶಯ, ಭ್ರಮೆಗಳು ಆಕ್ರಮಣ ಶೀಲತೆಯನ್ನು ಹೆಚ್ಚಿಸುತ್ತವೆ.
ಸಿಟ್ಟು ಕೋಪ, ಆಕ್ರಮಣ ಶೀಲತೆಯನ್ನು ತಗ್ಗಿಸುವುದು ಹೇಗೆ?
ಸರಳ ಜೀವನ, ನಿತ್ಯತೃಪ್ತಿ: ಮಕ್ಕಳಿಗೆ ತಮ್ಮ ಬೇಕು ಬೇಡಗಳನ್ನು ತಗ್ಗಿಸಲು, ಸರಳ ಜೀವನವನ್ನು ನಡೆಸಲು ತಂದೆತಾಯಿಗಳು ಮೊದಲಿನಿಂದಲೇ ತರಬೇತಿಕೊಡಬೇಕು. ಹಾಗೆಯೇ ಈ ವಿಚಾರದಲ್ಲಿ ತಾವೇ ಮಾದರಿಯಾಗಿರಬೇಕು. ನಿತ್ಯ ಏನು ಲಭ್ಯವೋ, ಎಷ್ಟ ಲಭ್ಯವೋ ಅಷ್ಟರಲ್ಲಿ ತೃಪ್ತಿ ಸಂತೋಷ ಪಡಲು ಪ್ರೇರಣೆ ನೀಡಬೇಕು. ತನಗೆ ಸಿಕ್ಕದ್ದು, ಸಾಲದು, ಇತರರಿಗೆ ಹೆಚ್ಚು ಸಿಕ್ಕಿದೆ ಎಂಬ ಧೋರಣೆ ಭಾವನೆಯನ್ನು ಬಿಡಬೇಕು. ಪಾಲಿಗೆ ಬಂದದ್ದೇ ಪಂಚಾಮೃತ ಎಂದುಕೊಳ್ಳಬೇಕು.
ಅಗತ್ಯಗಳ ಪೂರೈಕೆಗೆ ಶಿಸ್ತು ವಿಧಿವಿಧಾನಗಳ ಬಳಕೆ ಮತ್ತು ಸಂಪನ್ಮೂಲಕ್ಕೆ ತಕ್ಕಂತೆ, ನಿಧಾನಗತಿಯಲ್ಲಿ ಅಗತ್ಯ ಪೂರೈಕೆ ಮಾಡಿಕೊಳ್ಳಲು ಕಲಿಸಬೇಕು.ಸಂಬಂಧಗಳಲ್ಲಿ ಪ್ರೀತಿ, ವಿಶ್ವಾಸಕ್ಕೆ ಹೆಚ್ಚು ಮಾನ್ಯತೆ, ಇರುವುದನ್ನು ಹಂಚಿಕೊಳ್ಳಲು ಪ್ರೋತ್ಸಾಹ ನೀಡಬೇಕು ಇತರರ ತಪ್ಪು ನ್ಯೂನತೆಗಳನ್ನು ಕೊರತೆಗಳನ್ನು ಒಪ್ಪಿಕೊಂಡು, ಹೊಂದಿಕೊಳ್ಳಲು ಒತ್ತಾಸೆ ನೀಡಬೇಕು.
ಸಿಟ್ಟು ಆಕ್ರಮಣಶೀಲತೆಯ ದುಷ್ಟರಿಣಾಮಗಳನ್ನು ಸಮಯ ಸಂದರ್ಭ ಸಿಕ್ಕಾಗಲೆಲ್ಲಾ ವಿವರಿಸಬೇಕು. ಸಹನೆ ಸಹಕಾರದ ಸತ್ಪರಿಣಾಮಗಳನ್ನು ತಿಳಿಸಿಕೊಳ್ಳಬೇಕು.
ಇತರರು ಅನ್ಯಾಯ ಮಾಡಿದಾಗ, ಅನುಚಿತವಾಗಿ ನಡೆದುಕೊಂಡಾಗ, ಅವರು ಏಕೆ ನಡೆದುಕೊಂಡರು, ಉದ್ದೇಶಪೂರ್ವಕವಾಗಿ ಮಾಡದೆ, ತಪ್ಪು ಗ್ರಹಿಕೆಯಿಂದ ಮಾಡಿದರೇ ಸನ್ನಿವೇಶ ಸಂದರ್ಭದ ಅಗತ್ಯತೆಗಳಿಂದ ಮಾಡಿದರೇ ಎಂದು ವಿವೇಚಿಸಬೇಕು. ತಮ್ಮ ವರ್ತನೆಗೆ ಕಾರಣ ತಿಳಿಸಲು ಅವರಿಗೊಂದು ಅವಕಾಶ ನೀಡಬೇಕು. ಅವರು ಪಶ್ಚಾತ್ತಾಪಪಟ್ಟರೆ ಅದನ್ನು ಮಾನ್ಯ ಮಾಡಬೇಕು. ಮನೆಯವರಾಗಲೀ, ಹೊರಗಿನವರಾಗಲೀ ಅವರನ್ನು ಅರ್ಥಮಾಡಿಕೊಂಡು, ಅವರಿಂದ ಏನನ್ನು, ಎಷ್ಟನ್ನು ನಿರೀಕ್ಷಿಸಬಹುದು. ಎಂಬುದನ್ನು ಅರಿತುಕೊಳ್ಳಬೇಕು ಟೀಕೆ ತಿರಸ್ಕಾರಗಳನ್ನು ಆದಷ್ಟು ನಿವಾರಿಸಿಕೊಂಡು, ಶ್ಲಾಘನೆ ಮೆಚ್ಚುಗೆಯನ್ನು ಧಾರಾಳವಾಗಿ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಮೌನಾಚರಣೆ: ಸಿಟ್ಟು ಕೋಪ ಬಂದಾಗ ಅರ್ಧ ನಿಮಿಷ, ಅಲ್ಲೇ ಕುಳಿತು ಅಥವಾ ಆ ಜಾಗದಿಂದ ಹೊರಬಂದು, ಮೌನವಾಗಿರಬೇಕು. ತಕ್ಷಣದ ಪ್ರತಿಕ್ರಿಯೆಯನ್ನು ಪ್ರಕಟಿಸಬಾರದು. ಮೌನವಾಗಿರಲು ಸಾಧ್ಯವಿಲ್ಲವಾದರೆ, ಒಂದು ಲೋಟ ನೀರು ಕುಡಿಯುವುದು, ಒಂದು ಕಾಗದವನ್ನು ಹತ್ತು ಚೂರಾಗಿ ಹರಿಯುವುದೋ, ಕಣ್ಣುಮುಚ್ಚಿ ದೀರ್ಘವಾದ ಉಸಿರಾಟ ಮಾಡುವುದೋ ಮಾಡಬೇಕು. ವಾಕಿಂಗ್ ಇಲ್ಲವೇ ಬಯಲಿಗೆ ಹೋಗಿ ಯಾವುದಾದರೂ ವ್ಯಾಯಾಮ ಅಥವಾ ಆಟವಾಡಿದರೆ, ಮನಸ್ಸು ಸ್ಥಿಮಿತಕ್ಕೆ ಬರುತ್ತದೆ.
ಸಿಟ್ಟು, ಕೋಪ, ತಾಪಗಳ ಸೌಮ್ಯ ಪ್ರಕಟಣೆ: ನಮಗೆ ಮತ್ತು ಇತರರಿಗೆ ಹಿಂಸೆಯಾಗದ ರೀತಿಯಲ್ಲಿ ಸೌಮ್ಯವಾಗಿ ಆದರೆ ಅಷ್ಟೇ ಪರಿಣಾಮಕಾರಿಯಾಗಿ ನಮ್ಮ ಅಸಮಾಧಾನ ಪ್ರತಿಭಟನೆಯನ್ನು ಹೇಗೆ ಮಾಡಬೇಕೆಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು. ಗಾಂಧಿಕಲ್ಪಿಸಿದ ಹಿಂಸೆಗೆ ಹಿಂಸೆ ಮದ್ದಲ್ಲ, ಹಿಂಸೆಗೆ ಅಹಿಂಸೆಯೇ ಸರಿಯಾದ ಉತ್ತರ ನಮ್ಮ ದಾರಿದೀಪವಾಗಬೇಕು.

ಪುಸ್ತಕ: ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?
ಲೇಖಕರು: ಸಿ. ಆರ್. ಚಂದ್ರಶೇಖರ್

ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು

Thursday, January 3, 2013

ಸಕಾರಾತ್ಮಕ ಧೋರಣೆ ಯಶಸ್ವಿ ವ್ಯಕ್ತಿಗಳು

ನಾವು ನಮ್ಮ ಜೀವನದಲ್ಲಿ ಅನೇಕ ಗುರಿಗಳನ್ನು ಸಾಧಿಸುವುದಕ್ಕೆ ಬಹಳ ಹಂಬಲಿಸುತ್ತೇವೆ. ಆದರೆ ಎಲ್ಲರೂ ತಮ್ಮ ಗುರಿಗಳನ್ನು ತಲುಪುವುದರಲ್ಲಿ ಯಶಸ್ವಿಯಾಗುವುದಿಲ್ಲ. ಸಾಧಿಸಿ ಯಶಸ್ವೀ ವ್ಯಕ್ತಿಗಳೆಂದು ಪ್ರಸಿದ್ಧರಾದ ಜನರ ಬದುಕನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟವಾಗುತ್ತದೆ. ಅದು ಏನೆಂದರೆ ಯಶಸ್ವಿ ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಹಾಗೂ ಗುರಿ ಮುಟ್ಟುವುದರ ಬಗ್ಗೆ ತಳೆದಿದ್ದ ಸಕಾರಾತ್ಮಕ ಧೋರಣೆ. ಅನೇಕ ರೀತಿ ಗುರಿ ಮುಟ್ಟುವುದರಲ್ಲಿ ನಿಷ್ಪಲರಾದವರಲ್ಲಿ ಕಂಡುಬರುವ ಸಕಾರಾತ್ಮಕ ಧೋರಣೆ. ಈ ವಾದಕ್ಕೆ ಬೆಂಬಲ ನೀಡುವ ಕೆಳಕಂಡ ಸಂಗತಿಯನ್ನು ಗಮನಿಸಿ.
ಬಹಳ ಪ್ರಸಿದ್ಧವಾದ ಪಾದರಕ್ಷೆ ತಯಾರಿಕಾ ಸಂಸ್ಥೆ ಅವರ ವ್ಯಾಪಾರೀ ವಿಭಾಗದ ಅಧಿಕಾರಿಯನ್ನು ಆಫ್ರಿಕಾ ಖಂಡದ ಒಂದು ದೇಶಕ್ಕೆ ಕಳುಹಿಸಿದರಂತೆ. ಆ ಅಧಿಕಾರಿಯು ತನ್ನ ವರದಿಯಲ್ಲಿ ಸಂಸ್ಥೆಯು ಆ ದೇಶದಲ್ಲಿ ವ್ಯಾಪಾರ ಮಾಡಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿನ ಜನರು ಪಾದರಕ್ಷೆಯನ್ನು ಧರಿಸುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ. ಆದರೆ ಇನ್ನೊಂದು ಸಂಸ್ಥೆಯ ಅಧಿಕಾರಿ ಅದೇ ದೇಶಕ್ಕೆ ಭೇಟಿ ನೀಡಿ ಅಲ್ಲಿ ಪಾದರಕ್ಷೆಗಳಿಗೆ ಅತ್ಯಂತ ಬೇಡಿಕೆ ಬರುವಂತೆ ಮಾಡಬಹುದು, ಏಕೆಂದರೆ ಅಲ್ಲಿ ಯಾರೂ ಪಾದರಕ್ಷೆಗಳನ್ನು ಧರಿಸಿಯೇ ಇಲ್ಲ ಎಂದಂರಂತೆ. ಇದರಲ್ಲಿ ಯಶಸ್ವಿಯಾದರು ಯಾರು ಎಂಬುದನ್ನು ಹೇಳಬೇಕಾಗಿಲ್ಲ. ಅದಕ್ಕೆ ಅವರ ಸಕಾರಾತ್ಮಕ ಧೋರಣೆಯೇ ಕಾರಣ ಎಂಬುದು ಸ್ಪಷ್ಟವಾಗುತ್ತದೆ.
ನಾವು ಈ ರೀತಿಯ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳಬೇಕಾಗಿದೆ. ನಮ್ಮ ಬದುಕನ್ನು ನಮ್ಮದೇ ಆದ ದೃಷ್ಟಿಕೋನದಲ್ಲಿ ವೀಕ್ಷಿಸುತ್ತೇನೆ. ಈ ದೃಷ್ಟಿಕೋನವನ್ನು ನಮ್ಮ ಅನುಭವಗಳು, ಶಿಕ್ಷಣ, ಮನೆಯ ವಾತಾವರಣ, ಬೆಳೆಯುವಾಗ ಶಾಲೆಯ ಕಾಲೇಜಿನ ಹಾಗೂ ಸ್ನೇಹಿತರ ಪ್ರಭಾವ ಇತ್ಯಾದಿಗಳು ರೂಪಿಸುತ್ತವೆ. ಆದರೆ ನಮ್ಮ ಅನುಭವಗಳು ಸರ್ವಕಾಲಿಕ ಸತ್ಯವಾಗಿರುವುದಿಲ್ಲ. ಒಮ್ಮೆ ಸರಿಯೆನಿಸಿದ್ದು ಇನ್ನೊಮ್ಮೆ ಸರಿಯಿಲ್ಲವೆನಿಸುವುದು. ಗಮನಿಸಬೇಕಾದ ಇನ್ನೂ ಒಂದು ಅಂಶವೆಂದರೆ ಯಾವುದೇ ಒಂದು ಸಮಸ್ಯೆಗೂ ಅನೇಕ ಮುಖಗಳಿರುತ್ತದೆ. ನಾವು ಯಾವುದೇ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಬೇಕಾದರೆ ಎಲ್ಲಾ ದೃಷ್ಟಿಕೋನಗಳಿಂದ ನೋಡುವುದು ಅವಶ್ಯಕ. ಇಲ್ಲದಿದ್ದರೆ ಪರಿಹಾರ ಸಂಪೂರ್ಣವಾಗಿರುವುದಿಲ್ಲ.
ಸಕಾರಾತ್ಮಕ ಧೋರಣೆ ಬೆಳೆಸಿ, ಉಳಿಸಿಕೊಳ್ಳಬೇಕಾದರೆ ನಮ್ಮ ನಿರೀಕ್ಷೆಗಳು ವಾಸ್ತವಿಕವಾಗಿರುವುದು ಅವಶ್ಯಕ. ನಮ್ಮ ಅನೇಕ ಹಂಬಲ, ಆಸೆ, ಆಕಾಂಕ್ಷೆಗಳು ವಿಪರೀತವಾಗಿದ್ದರೆ ನಮ್ಮ ಮಾನಸಿಕ ಒತ್ತಡ ಏರುತ್ತದೆ. ಈ ರೀತಿಯ ಸಂದರ್ಭಗಳು ಮೊದಲೇ ನಾವು ತಿಳಿದುಕೊಂಡಿದ್ದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಎದುರಿಸಿ ಗೆಲ್ಲಬಹುದು. ನಮ್ಮ ನಿರೀಕ್ಷೆಗಳನ್ನು ಇನ್ನು ಕೆಲವು ವೇಳೆ ವಾಸ್ತವಿಕವಾಗಿ ಯೋಚಿಸಿ ಬದಲಿಸಬಹುದು ಅಥವಾ ಕೈ ಬಿಡಬಹುದು. ನಾವು ಈ ರೀತಿಯ ಸಕಾರಾತ್ಮಕ ದೃಷ್ಟಿ ಬೆಳೆಸಿಕೊಳ್ಳಬೇಕಾದರೆ ನಮ್ಮ ಸ್ವ ಸಾಮರ್ಥ್ಯ ಹಣಕಾಸಿನ ವ್ಯವಸ್ಥೆ, ಜನರ ಬೆಂಬಲಗಳನ್ನು ಪರಿಗಣಿಸಿ ಜೀವನದ ನಿರೀಕ್ಷೆಗಳನ್ನು ರೂಪಿಸಿಕೊಳ್ಳಬೇಕು. ನಮ್ಮ ಜೀವನದ ಗುರಿ ಅಥವಾ ಆಕಾಂಕ್ಷೆಗಳನ್ನು ರೂಪಿಸಿಕೊಳ್ಳಲು ಕೆಳಕಂಡ ಅಂಶಗಳನ್ನು ಗಮನಿಸುವುದು ಅವಶ್ಯಕ.



. ಸ್ಟ್ರೆಂತ್  = ಅರ್ಹತೆಗಳು
ಗುರಿಯನ್ನು ಮುಟ್ಟಲು ನಮ್ಮಲ್ಲಿ ಇರುವ ಮೂಲಭೂತ ಅರ್ಹತೆಗಳು ಮಾನಸಿಕ ಶಕ್ತಿ ದೈಹಿಕ ಕ್ಷಮತೆ, ವಿದ್ಯಾರ್ಹತೆ ಹಾಗೂ ಇವುಗಳನ್ನು ವೃದ್ಧಿಸಿಕೊಳ್ಳುವ ಅವಕಾಶಗಳನ್ನು ಗಮನಿಸಬೇಕು.
. ವೀಕ್ನೆಸ್ = ನ್ಯೂನತೆಗಳು
ನಮ್ಮಲ್ಲಿ ಇರುವ ಲೋಪ ದೋಷಗಳು ಅರ್ಹತೆಗಳನ್ನು ಪಟ್ಟಿಮಾಡಿ ಅವುಗಳನ್ನು ಸರಿಪಡಿಸಿಕೊಳ್ಳಬೇಕು ಅಥವಾ ಕಡಿಮೆ ಮಾಡಿಕೊಳ್ಳಬೇಕು. ಅರ್ಹತೆಗಳು ಹೆಚ್ಚಾದಷ್ಟೂ ಹಾಗೂ ನ್ಯೂನತೆಗಳು ಕಡಿಮೆಯಾದಷ್ಟೂ ನಾವು ಗೆಲ್ಲುವ ಸಾಧ್ಯತೆ ಹೆಚ್ಚು.
. ಆಪರ್ಚ್ಯುನಿಟೀಸ್ = ಅವಕಾಶಗಳು
ನಮ್ಮ ಗುರಿ ಮುಟ್ಟಲು ಇರುವ ಅನೇಕ ಅವಕಾಶಗಳು ಅದು ಸಿಗುವ ಸ್ಥಳ, ಬೆಳೆಯುವ ಸಾಧ್ಯತೆ ಇತ್ಯಾದಿಗಳನ್ನು ವಿದವಾಗಿ ಅಭ್ಯಸಿಸಬೇಕು.
. ಥ್ರೆಟ್ಸ್ = ಬೆದರಿಕೆಗಳು
ನಮ್ಮ ಗುರಿ ಸಾಧನೆಯ ಮಾರ್ಗದಲ್ಲಿ ಬರಬಹುದಾದ ಅಡಚಣೆ ಕಷ್ಟಗಳು ಗೊತ್ತಿರುವ ಅಥವಾ ಗೊತ್ತಾಗದ ಸಮಸ್ಯೆಗಳು ಹಾಗೂ ಅವುಗಳನ್ನು ಪರಿಹರಿಸುವ ಉಪಾಯಗಳು ಯಾವುವು ಎಂಬುದನ್ನು ತಿಳಿದುಕೊಂಡರೆ ನಾವು ನಮ್ಮ ಗುರಿ ಸಾಧನೆಗೆ ಸಹಕಾರಿಯಾಗುತ್ತದೆ.
ಈ ರೀತಿ ನಮ್ಮ ಗುರಿ ಅಭಿಲಾಷೆಗಳನ್ನು ವೈಜ್ಞಾನಿಕವಾಗಿ ವಿಮರ್ಶಿಸುವ ಪದ್ಧತಿಯನ್ನು ಎಸ್‌ ಡಬ್ಲ್ಯೂ ಟಿ ಅನಾಲಿಸಿಸ್ ಎಂದು ಕರೆಯುತ್ತಾರೆ. ಇದರಿಂದ ನಮಗೆ ನಮ್ಮ ಗುರಿಗಳನ್ನು ತಲುಪುವುದರಲ್ಲಿ ಅತ್ಯಂತ ಪ್ರಮುಖವಾದ ಸಕಾರಾತ್ಮಕ ಧೋರಣೆ ಬೆಳೆಸಿಕೊಳ್ಳುವುದರಲ್ಲಿ ಸಹಕಾರಿಯಾಗುತ್ತದೆ.

ನಾನು ಯಾರು?


ಕೆಟ್ಟ ಚಟ ಬಹು ಬೇಗನೆ ಕಲಿತು ಬಿಡುತ್ತೇವೆ . ಆದರೆ ಅದನ್ನು ಬಿಡುವುದು ಕಲಿತಷ್ಟು ಸುಲಭವಲ್ಲ. ಕೆಲವರು ತುಂಬಾ ಮಾನಸಿಕ ಸಿದ್ಧತೆ ಮಾಡಿ ಅದನ್ನು ಬಿಟ್ಟರೂ ಕೆಟ್ಟ ಚಟಗಳಗಳ ನೆನಪು ಪದೇಪದೆ ಬರ್ತಾ ಇರುತ್ತದೆ. ಅಲ್ಲದೆ ತಲೆನೋವು, ಖಿನ್ನತೆ ಉಂಟಾಗುವುದು. ಈ ಎಲ್ಲಾ ಸಮಸ್ಯೆಗಳನ್ನು ಆಹಾರದ ಮುಖಾಂತರ ಪರಿಹರಿಸಬಹುದು.

1. ಸಕ್ಕರೆ: ಮದ್ಯ ಕುಡಿಯುವುದನ್ನು ನಿಲ್ಲಿಸಿದ ನಂತರ ಸಕ್ಕರೆ ಅಥವಾ ಸಿಹಿ ತಿನ್ನ ಬೇಕೆನಿಸುತ್ತಿರುತ್ತದೆ. ಈ ರೀತಿ ಅನಿಸಿದಾಗ ಖರ್ಜೂರ, ಬಾಳೆಹಣ್ಣು ತಿನ್ನಬೇಕು.ಮದ್ಯಬಿಟ್ಟ ತಕ್ಷಣ ಅನ್ನ, ಆಲೂಗೆಡ್ಡೆ, ಒಣದ್ರಾಕ್ಷಿ ಅಂತಹ ಪದಾರ್ಥಗಳನ್ನು ಸ್ವಲ್ಪ ಸಮಯತಿನ್ನಬಾರದು.

2. ವಿಟಮಿನ್ ಮತ್ತು ಖನಿಜಾಂಶಗಳು: ಮದ್ಯ ಬಿಟ್ಟ ತಕ್ಷಣ ವಿಟಮಿನ್ ಮತ್ತು ಖನಿಜಾಂಶಗಳನ್ನು ಅಧಿಕ ತಿನ್ನಬೇಕು. ಈ ಸಮಯದಲ್ಲಿ ಮೊಟ್ಟೆ, ತರಕಾರಿ, ಮಾಂಸ, ಟೊಮೆಟೊ, ಈರುಳ್ಳಿ, ದವಸಧಾನ್ಯಗಳು ಮತ್ತು ಮೃದ್ವಂಗಿಗಳನ್ನು ಆಹಾರಕ್ರಮದಲ್ಲಿ ಸೇರಿಸಬೇಕು.

3. ಮದ್ಯದ ಬೇಡಿಕೆಗೆ ಕಡಿವಾಣ: ಮದ್ಯ ಕುಡಿಯಬೇಕೆಂದು ಅನಿಸಿದಾಗ ಸಿಹಿಗೆಣಸು ಬೇಯಿಸಿದ್ದು, ಸೇಬು, ಚೆರಿ ಹಣ್ಣುಗಳನ್ನು ತಿನ್ನಿ. ಸಮುದ್ರ ಆಹಾರ ಸೇವನೆ ಒಳ್ಳೆಯದು. ದಿನವೂ 8 ಲೋಟಕ್ಕಿಂತ ಅಧಿಕ ನೀರನ್ನು ಕುಡಿಯಬೇಕು.

4. ಮದ್ಯ ಮನೆಯಲ್ಲಿ ಇಡಬೇಡಿ: ಯಾವುದೇ ಕಾರಣಕ್ಕೂ ಮದ್ಯವನ್ನು ಮನೆಯಲ್ಲಿ ಇಡಬಾರದು. ಮದ್ಯದ ಬಾಟಲಿಯತ್ತ ನೋಡಿದಾಗ ಕುಡಿಯಬೇಕೆನಿಸುವುದು. ಹೊತ್ತಿಗೆ ಸರಿಯಾಗಿ ಊಟ ಮಾಡಬೇಕು.

ಖಿನ್ನತೆಯನ್ನು ಗುಣ ಪಡಿಸದಿದ್ದರೆ ಜೀವಕ್ಕೆ ಅಪಾಯ

ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಕೆಲಸದ ಒತ್ತಡ, ಒಂಟಿತನ, ಮೋಸ, ಆರ್ಥಿಕ ಸಮಸ್ಯೆ ಇವೆಲ್ಲಾ ಮಾನಸಿಕ ಸಮಸ್ಯೆ ಉಂಟಾಗಲು ಪ್ರಮುಖ ಕಾರಣಗಳಾಗಿವೆ.ಈ ರೀತಿ ಉಂಟಾದರೆ ಖಿನ್ನತೆ, ಸುಸ್ತು, ನಿರಾಸೆ, ನಿರಾಸಕ್ತಿ ಉಂಟಾಗುತ್ತದೆ. ಈ ರೀತಿ ಒಂದು ಅಥವಾ ಎರಡು ದಿನವಿದ್ದರೆ ಸರಿ, ಆದರೆ ಇದೇ ಖಿನ್ನತೆ ತುಂಬಾ ದಿನಗಳವರೆಗೆ ಇದ್ದರೆ ಆ ವ್ಯಕ್ತಿ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು. ಆದ್ದರಿಂದ ನಮ್ಮ ಮನೆಯಲ್ಲಿ ಯಾರಾದರೂ ಅಥವಾ ನಮ್ಮ ಗೆಳೆಯರು ಖಿನ್ನತೆಯಲ್ಲಿದ್ದರೆ ಮೊದಲನೇ ಹಂತದಲ್ಲಿಯೇ ಅವರನ್ನು ಅದರಿಂದ ಹೊರತರಲು ಶ್ರಮಿಸಬೇಕು. ಇಲ್ಲದಿದ್ದರೆ ಅವರ ಸ್ಥಿತಿ ಮತ್ತಷ್ಟು ಗಂಭೀರವಾಗಬಹುದು ಅಥವಾ ಏನಾದರೂ ಅನಾಹುತ ಮಾಡಿಕೊಳ್ಳಬಹುದು.ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಿ: ಅವರು ಈ ರೀತಿ ಖಿನ್ನತೆಯಿಂದ ಇರಲು ಕಾರಣವೇನು ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಅವರು ಹೇಳದಿದ್ದರೂ ಹೇಗಾದರೂ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಿ. ಕಾರಣ ತಿಳಿದರೆ ಅದಕ್ಕೆ ಪರಿಹಾರ ಹುಡುಕುವುದು ಸುಲಭವಾಗುತ್ತದೆ.ನೈಜತೆಯನ್ನು ಒಪ್ಪಿಕೊಳ್ಳಲು ಹೇಳಿ: ಕೆಲವೊಂದು ಆಘಾತಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದಾಗ ಖಿನ್ನತೆ ಉಂಟಾಗಬಹುದು. ಆಗ ಅವರಿಗೆ ಇದೇ ವಾಸ್ತವೆಂದು ಮನವೊಲಿಸಿ.

ಕೌನ್ಸಿಲಿಂಗ್ ಕೊಡಿಸಿ: ನಿಮಗೆ ಅವರ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗದಿದ್ದರೆ ಕೌನ್ಸಿಲಿಂಗ್ ಕೊಡಿಸಿ. ಬರೀ ಮಾತ್ರೆ ನುಂಗುವುದರಿಂದ ಪ್ರಯೋಜನವಿಲ್ಲ, ಈ ಸಮಯದಲ್ಲಿ ಅವರಿಗೆ ಭಾವನಾತ್ಕವಾದ ಬೆಂಬಲ (ಸಪೋರ್ಟ್) ನೀಡಬೇಕು.ಸ್ಥಳ ಬದಲಾವಣೆ: ಆ ಸ್ಥಳದಿಂದ ಅವರನ್ನು ಪ್ರಕೃತಿ ರಮಣೀಯ ಸ್ಥಳಗಳಿಗೆ ಕೊಂಡೊಯ್ಯಿರಿ. ಇದರಿಂದ ಅವರಿಗೊಂದು ಚೇಂಜ್ ದೊರೆಯುತ್ತದೆ, ಅವರ ಮಾನಸಿಕ ಸ್ಥಿತಿಯೂ ಸುಧಾರಿಸುತ್ತದೆ.
ಒತ್ತಡವಿದ್ದರೆ ಅದರಿಂದ ಅನಾಹುತವಲ್ಲದ ಬೇರೆ ಯಾವುದೇ ಪ್ರಯೋಜನವಿರುವುದಿಲ್ಲ. ಉತ್ತಮ ಕೆಲಸದಲ್ಲಿ ಇದ್ದಷ್ಟೂ ಟಾರ್ಗೆಟ್ ಜಾಸ್ತಿ ಇರುತ್ತದೆ. ಅದನ್ನು ತಲುಪಲು ಸಾಕಷ್ಟು ಒತ್ತಡ, ಮನೆ ಸಮಸ್ಯೆ ಈ ಎಲ್ಲಾ ಕಾರಣಗಳಿಂದ ನೆಮ್ಮದಿ ಹಾಳಾಗಿ ಜೀವನವೇ ಸಾಕಾಗುತ್ತದೆ. ಆದರೆ ಈ ಒತ್ತಡವನ್ನು ಕಡಿಮೆ ಮಾಡಿದಿದ್ದರೆ ಏನೇನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಒತ್ತಡವಿದ್ದಾಗ ಈ ಕೆಳಗಿನ ಅಂಶಗಳನ್ನು ಪಾಲಿಸಿದರೆ ಒತ್ತಡ ಕಡಿಮೆಯಾಗುವುದು ಮತ್ತು ನಿಮ್ಮ ಗುರಿಯನ್ನು ತಲುಪುವ ಹಾದಿ ಸ್ಪಷ್ಟವಾಗುತ್ತದೆ.

1. ಒತ್ತಡಕ್ಕೆ ಕಾರಣವೇನು ಎಂದು ಕಂಡು ಹಿಡಿಯಬೇಕು: ಕಾಯಿಲೆ ಗೊತ್ತಾದರೆ ಮಾತ್ರ ಔಷಧಿ ಮಾಡಲು ಸುಲಭ. ಅದೇ ರೀತಿ ತುಂಬಾ ಮಾನಸಿಕ ಒತ್ತಡವಿದ್ದರೆ ಅದಕ್ಕೆ ಕಾರಣವೇನು ಎಂದು ಕಂಡುಹಿಡಿಯಬೇಕು. ಮನೆಯೇ, ಕೆಲಸವೇ, ಟಾರ್ಗೆಟ್ ಇನ್ಯಾವೊದೋ ಸಮಸ್ಯೆ ಇರಬಹುದು. ಮೊದಲು ಆ ಸಮಸ್ಯೆಯ ಬಗ್ಗೆ ಯೋಚಿಸಿ.

2. ಒತ್ತಡಕ್ಕೆ ಹೊಂದಿಕೊಂಡು ಹೋಗಲು ಸಾಧ್ಯವೇ ಎಂದು ಯೋಚಿಸಿ: ಬದುಕು ಎಂದ ಮೇಲೆ ಒಂದಲ್ಲಾ ಒಂದು ಒತ್ತಡವಿದ್ದೇ ಇರುತ್ತದೆ. ಈ ಒತ್ತಡವನ್ನು ಸಹಿಸಲು ಸಾಧ್ಯನಾ ಎಂದು ಯೋಚಿಸಿ. ಪ್ರತಿಯೊಬ್ಬರಿಗೆ ಅವರವರ ಸಮಸ್ಯೆ ತುಂಬಾ ದೊಡ್ಡದಾಗಿ ಕಾಣುತ್ತದೆ. ಆದ್ದರಿಂದ ಇಷ್ಟು ಒತ್ತಡವನ್ನು ಸಹಿಸುವ ಅವಶ್ಯಕತೆ ಇದೆಯೇ ಎಂದು ಯೋಚಿಸಿ.

3. ಆ ಪರಿಸ್ಥಿತಿಯಿಂದ ಬದಲಾಗಲು ಪ್ರಯತ್ನಿಸಿ: ಒತ್ತಡಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದರೆ ಆ ಪರಿಸ್ಥಿತಿಯಿಂದ ಹೊರಬರಲು ಪ್ರಯತ್ನಿಸಿ. ಕೆಲಸದಲ್ಲಿ ಟಾರ್ಗೆಟ್ ಮುಟ್ಟಲಿಲ್ಲ ಅಂದರೆ ಅಸಮರ್ಥರು ಅನ್ನಿಸಿಕೊಳ್ಳಬೇಕಾಗುತ್ತದೆ, ಇದನ್ನು ನೆನೆಸಿಕೊಂಡರೆ ಮತ್ತಷ್ಟು ಒತ್ತಡ ಉಂಟಾಗುತ್ತದೆ. ಆದರೆ ಸಹಿಸಲು ಅಸಾಧ್ಯವಾದ ಒತ್ತಡವನ್ನು ಹೊರಲು ಸಿದ್ಧರಾಗಬೇಡಿ, ಯಾವುದೇ ಗುರಿ ಮುಟ್ಟಲು ಸ್ಪಷ್ಟ ನಿರ್ಧಾರದಿಂದ ಮಾತ್ರ ಸಾಧ್ಯ ಹೊರತು ಒತ್ತಡದಿಂದಲ್ಲ.

4. ವಾಸ್ತವತೆಯನ್ನು ಒಪ್ಪಿಕೊಳ್ಳುವುದು: ಕೆಲವೊಂದು ವಿಷಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ, ಅಂತಹ ಸಂದರ್ಭದಲ್ಲಿ ವಾಸ್ತವತೆಯನ್ನು ಒಪ್ಪಿಕೊಳ್ಳುವುದರಿಂದ ಅರ್ಧದಷ್ಟು ಒತ್ತಡ ಕಡಿಮೆಯಾಗುತ್ತದೆ. ನಮ್ಮಿಂದ ಆಗದ ವಿಷಯದ ಬಗ್ಗೆ ಚಿಂತಿಸಿ ಕೊರಗಿ ಅನಾರೋಗ್ಯ ಹೆಚ್ಚು ಮಾಡಿಕೊಳ್ಳುವುದಕ್ಕಿಂತ ವಾಸ್ತವತೆಯನ್ನು ಒಪ್ಪಿಕೊಳ್ಳಿ. ಈ ರೀತಿ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ.

5. ಮನರಂಜನೆ ವಿಷಯದ ಕಡೆಗೆ ಗಮನ ಹರಿಸಬೇಕು: ತುಂಬಾ ಜನರು ಒತ್ತಡ ಹೆಚ್ಚಾದಂತೆ ಒತ್ತಡ ಕಡಿಮೆ ಮಾಡಿಕೊಳ್ಳಲು ಧೂಮಪಾನ, ಮದ್ಯಪಾನದಂತಹ ಕೆಟ್ಟ ಚಟಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ. ಈ ರೀತಿಯ ಅಭ್ಯಾಸದಿಂದ ಮೈಮರೆತು ಒತ್ತಡವನ್ನು ಕ್ಷಣ ಕಾಲ ಮರೆಯಬಹುದು ಅಲ್ಲದೆ ಈ ಅಭ್ಯಾಸಗಳಿಂದ ಜೀವನ ಮತ್ತಷ್ಟು ನರಕವಾಗುವುದು. ಅದರ ಬದಲು ತುಂಬಾ ಒತ್ತಡವಿದ್ದಾಗ ಪ್ರಾಣಾಯಾಮ ಮಾಡುವುದು ಒಳ್ಳೆಯ ಸಂಗೀತವನ್ನು ಕೇಳುವುದು, ಮನಸ್ಸಿಗೆ ಖುಷಿ ಕೊಡುವ ಆಟ ಆಡುವುದು ಇವುಗಳಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬಹುದು



ನಾನು ಯಾರು? ಎಂಬ ಪ್ರಶ್ನೆ ತುಂಬಾ ಸರಳ ಅನಿಸಬಹುದು. ಆದರೆ ನಾವು ಹುಟ್ಟಿ ಕೆಲವು ದಿನಗಳ ನಂತರ ನಮಗೆ ಒಂದು ಹೆಸರು ದೊರೆಯುತ್ತದೆ. ಅಲ್ಲಿಯವರೆಗೆ ನಮ್ಮನ್ನು ಹೆಣ್ಣು/ಗಂಡು ಎಂದು ಗುರುತಿಸಿರುತ್ತಾರೆ.ನಾವು ಸತ್ತ ನಂತರ ನಮ್ಮ ದೇಹದ ಎದುರಿಗೇ ನಿಂತು ಜನರು ನಮ್ಮನ್ನು ಕುರಿತು "ಇವರು ಇನ್ನಿಲ್ಲ" ಎಂದು ಹೇಳುತ್ತಾರೆ. ನಮ್ಮ ದೇಹ ಅಲ್ಲೇ ಇದ್ದರು ಜನ ನಮ್ಮನ್ನು ನೋಡಿ "ಇವರು ಇನ್ನಿಲ್ಲ" ಎಂದು ಏಕೆ ಹೇಳಿದರು? ದೈಹಿಕವಾಗಿ ಸಾಯುವ ಮೊದಲು ಇತರ ವ್ಯಕ್ತಿಗಳಂತೆಯೇ ಇರುತ್ತೇವೆ, ಆದರೂ ಸತ್ತ ಕೂಡಲೇ ಅವರ ಪಾಲಿಗೆ ಇಲ್ಲವಾಗಿ ಬಿಡುತ್ತೇವೆ? ಆದ್ದರಿಂದಲೇ ನಾವು ಯಾರು? ಅನ್ನುವುದು ಮೂಲಭೂತವಾದ ಆಧ್ಯಾತ್ಮಿಕವಾದ ಪ್ರಶ್ನೆಯಾಗಿದೆ.ನಾನು ಯಾರು? ದೇಹವೋ ಅಥವಾ ಆತ್ಮವೋ ನಮ್ಮ ದೇಹದಲ್ಲಿ ಆತ್ಮ ಅನ್ನುವುದು ಇರುವವರೆಗೆ ಯೋಚನಾ ಶಕ್ತಿ ಇರುತ್ತದೆ. ದೇಹದ ಅಂಗಾಂಗಗಳು ಕೆಲಸ ಮಾಡುತ್ತವೆ, ಭಾವನೆಗಳಿರುತ್ತೆ ನಾವು ಅಳುತ್ತೇವೆ, ನಗಾಡುತ್ತೇವೆ, ಕೋಪಗೊಳ್ಳುತ್ತೇವೆ. ನಮ್ಮ ಯೋಚನೆಗಳು ಮತ್ತು ಭಾವನೆ ಕ್ಷಣದಿಂದ-ಕ್ಷಣಕ್ಕೆ ಬದಲಾಗುತ್ತಿರುತ್ತವೆ. ಹಾಗಾದರೆ ನಾನು ಯಾರು? ಆತ್ಮವೋ, ದೇಹವೋ ನಮ್ಮ ದೇಹದಲ್ಲಿ ಎಷ್ಟು ಜೀವಕಣಗಳಿವೆ, ಎಷ್ಟು ರಕ್ತ ಕಣಗಳಿವೆ ಎಂದು ಹೇಲು ಸಾಧ್ಯ. ಆತ್ಮ ಮಾತ್ರ ಕಣ್ಣಿಗೆ ಅಗೋಚರವಾದದು. ಇದು ಆಂತರಿಕವಾದ ರಹಸ್ಯವಾಗಿದೆ. ಯಾರಿಂದಲೂ ಇದನ್ನು ಬೇಧಿಸಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ಉಪನಿಷತ್ತುಗಳಲ್ಲಿ (ರಿಗ್ ವೇದಿಕ್ ಉಪನಿಷತ್ತು (1.3.11) ನಾನು ಯಾರು ಎಂಬ ಮೂಲಭೂತ ಪ್ರಶ್ನೆ ಕೇಳಲಾಗಿದೆ.

Tuesday, January 1, 2013

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ ಕನ್ನಡಾನುವಾದ



 

1893, September 11, ಸ್ವಾಮಿ ವಿವೇಕಾನಂದರ ಸರ್ವಧರ್ಮ ಸಮ್ಮೇಳನದ ಚಿಕಾಗೋ ಉಪನ್ಯಾಸಎಂದೇ ಖ್ಯಾತವಾದ ಭಾಷಣದ ಕನ್ನಡಾನುವಾದವಿದು. ಇದನ್ನು ಪರಮ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರ ವಿಶ್ವ ವಿಜೇತ ವಿವೇಕಾನಂದಪುಸ್ತಕದಿಂದ ಸಂಗ್ರಹಿಸಲಾಗಿದೆ.


ಅಮೆರಿಕದ ಸೋದರಿಯರೇ ಮತ್ತು ಸೋದರರೇ!


ನೀವು ನಮಗೆ ನೀಡಿದ ಉತ್ಸಾಹಯುತ ಆದರದ ಸ್ವಾಗತಕ್ಕೆ ಪ್ರತಿಕ್ರಿಯಿಸಲು ಹೊರಟಾಗ ಅನಿರ್ವಚನೀಯ ಆನಂದವೊಂದು ನನ್ನ ಹೃದಯವನ್ನು ತುಂಬುತ್ತದೆ. ಪ್ರಪಂಚದ ಅತ್ಯಂತ ಪ್ರಾಚೀನವಾದ ಸಂನ್ಯಾಸಿಗಳ ಸಂಘದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಬೌದ್ಧ ಧರ್ಮ, ಜೈನ ಧರ್ಮಗಳೆರಡೂ ಯಾವುದರ ಶಾಖೆಗಳು ಮಾತ್ರವೋ ಅಂತಹ ಸಕಲ ಧರ್ಮಗಳ ಮಾತೆಯಾದ ಹಿಂದೂ ಧರ್ಮದ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಮತ್ತು ವಿವಿಧ ಜಾತಿ ಮತಗಳಿಗೆ ಸೇರಿದ ಕೋತ್ಯಂತರ ಹಿಂದುಗಳ ಪರವಾಗಿ ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಅಲ್ಲದೆ, ‘ಇಲ್ಲಿ ಕಂಡುಬರುತ್ತಿರುವ ಸಹಿಷ್ಣುತಾಭಾವವನ್ನು ದೂರದೂರದ ದೇಶಗಳಿಂದ ಬಂದಿರುವ ಈ ಪ್ರತಿನಿಧಿಗಳು ತಮ್ಮೊಂದಿಗೆ ಒಯ್ದು ಪ್ರಸಾರ ಮಾಡುತ್ತಾರೆಎಂದು ಸಾರಿದ ಈ ವೇದಿಕೆಯ ಮೇಲಿನ ಕೆಲವು ಭಾಷಣಕಾರರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.


ಜಗತ್ತಿಗೆ ಸಹಿಷ್ಣುತೆಯನ್ನೂ ಸರ್ವಧರ್ಮ ಸ್ವೀಕರ ಮನೋಭಾವವನ್ನೂ ಬೋಧಿಸಿದ ಧರ್ಮಕ್ಕೆ ಸೇರಿದವನು ನಾನೆಂಬ ಹೆಮ್ಮೆ ನನ್ನದು. ನಾವು ಸರ್ವ ಮತ ಸಹಿಷ್ಣುತೆಯನ್ನು ಒಪ್ಪುತ್ತೇವಷ್ಟೇ ಅಲ್ಲದೆ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಯಾವ ಧರ್ಮದ ಪವಿತ್ರ ಭಾಷೆಗೆ ಎಕ್ಸ್ಕ್ಲೂಶನ್ಎಂಬ ಪದವನ್ನು ಅನುವಾದಿಸಿಕೊಳ್ಳುವುದುಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದ ಹೆಮ್ಮೆ ನನ್ನದು.


ಪ್ರಪಂಚದ ಎಲ್ಲ ಧರ್ಮಗಳ ಎಲ್ಲ ರಾಷ್ಟ್ರಗಳ ಸಂಕಟಪೀಡಿತ ನಿರಾಶ್ರಿತರಿಗೆ ಆಶ್ರಯವಿತ್ತ ರಾಷ್ಟ್ರಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ರೋಮನ್ನರ ದಬ್ಬಾಳಿಕೆಗೆ ಗುರಿಯಾಗಿ ತಮ್ಮ ಪವಿತ್ರ ದೇವಾಲಯವು ನುಚ್ಚುನೂರಾದಾಗ ದಕ್ಷಿಣಭಾರತಕ್ಕೆ ವಲಸೆ ಬಂದ ಇಸ್ರೇಲೀಯರ ಒಂದು ಗುಂಪನ್ನು ನಾವು ಆಶ್ರಯಕೊಟ್ಟು ಮಡಿಲಲ್ಲಿಟ್ಟುಕೊಂಡಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ. ಘನ ಜರತೃಷ್ಟ್ರ ಜನಾಂಗದ ಅವಶೇಷಕ್ಕೆ ಆಶ್ರಯವಿತ್ತ ಹಾಗೂ ಅವರನ್ನು ಈಗಲೂ ಪೋಷಿಸುತ್ತಿರುವ ಧರ್ಮಕ್ಕೆ ನಾನು ಸೇರಿದವನೆಂಬುದು ನನ್ನ ಹೆಮ್ಮೆ.


ಸೋದರರೇ, ನಾನು ಬಾಲ್ಯದಿಂದಲೂ ಪಟಿಸುತ್ತಿದ್ದ, ಮತ್ತು ಈಗಲೂ ಲಕ್ಷಾಂತರ ಹಿಂದೂಗಳು ಪಠಿಸುವ ಶ್ಲೋಕವೊಂದರಿಂದ ಕೆಲ ಸಾಲುಗಳನ್ನು ಉದ್ಧರಿಸಿ ನಿಮಗೆ ಹೇಳುತ್ತೇನೆ;

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣಮತಿ|
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ||
ರುಚೀನಾಂ ವೈಚಿತ್ರ್ಯಾತ್ ಋಜ್ ಕುಟಿಲ ನಾನಾ ಪಥ ಜುಷಾಂ|
ನೃಣಾಮೇಕೋ ಗಮ್ಯಃ ತ್ವಮಸಿ ಪಯಸಾಂ ಅರ್ಣವ ಇವ||

ಎಂದರೆ, “ಹೇ ಭಗವಂತ! ಭಿನ್ನ ಭಿನ್ನ ಸ್ಥಾನಗಳಿಂದ ಉದಿಸಿದ ನದಿಗಳೆಲ್ಲವೂ ಹರಿದು ಕೊನೆಯಲ್ಲಿ ಸಾಗರವನ್ನು ಸೇರುವಂತೆ, ಮಾನವರು ತಮ್ಮತಮ್ಮ ವಿಭಿನ್ನ ಅಭಿರುಚಿಗಳಿಂದಾಗಿ ಅನುಸರಿಸುವ ಅಂಕುಡೊಂಕಿನ ಬೇರೆಬೇರೆ ದಾರಿಗಳೆಲ್ಲವೂ ಕೊನೆಗೆ ಬಂದು ನಿನ್ನನ್ನೇ ಸೇರುತ್ತವೆ

ಜಗತ್ತಿನಲ್ಲಿ ಇಲ್ಲಿಯವರೆಗೆ ನಡೆಸಲ್ಪಟ್ಟ ಮಹಾದ್ಭುತ ಸಮ್ಮೇಳನಗಳಲ್ಲಿ ಒಂದಾದ ಇಂದಿನ ಈ ಸಭೆಯು, ಭಗವದ್ಗೀತೆಯು ಬೋಧಿಸಿರುವ ಈ ಅದ್ಭುತ ತತ್ತ್ವಕ್ಕೆ ಸಾಕ್ಷಿಯಾಗಿದೆ, ಮತ್ತು ಅದನ್ನೇ ಸಾರುತ್ತದೆ;

ಯೇ ಯಥಾಂ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ|
ಮಮ ವರ್ತ್ಯಾನುವರ್ತಂತೇ ಮನುಷ್ಯಾಃ ಪಾರ್ಥಃ ಸರ್ವಶಃ||

ಅರ್ಥ- ಯಾರು ಯಾರು ನನ್ನಲ್ಲಿಗೆ ಯಾವ ಯಾವ ಮಾರ್ಗದಿಂದ ಬರುತ್ತಾರೋ ಅವರವರನ್ನು ನಾನು ಅದದೇ ಮಾರ್ಗದಿಂದ ತಲುಪುತ್ತೇನೆ. ಮಾನವರು ಅನುಸರಿಸುವ ಮಾರ್ಗಗಳೆಲ್ಲ ಕೊನೆಗೆ ಬಂದು ಸೇರುವುದು ನನ್ನನ್ನೇ

ಗುಂಪುಗಾರಿಕೆ, ತಮ್ಮ ಮತದ ಬಗ್ಗೆ ದುರಭಿಮಾನ ಹಾಗೂ ಅದರ ಘೋರ ಪರಿಣಾಮವಾದ ಧರ್ಮಾಂಧತೆಗಳು ಬಹುಕಾಲದಿಂದ ಈ ಸುಂದರ ಭೂಮಿಯನ್ನು ಆಕ್ರಮಿಸಿಕೊಂಡಿವೆ. ಅವು ವಿಶ್ವವನ್ನು ಹಿಂಸೆಯಿಂದ ತುಂಬಿ, ಮತ್ತೆ ಮತ್ತೆ ಮಾನವನ ರಕ್ತದಿಂದ ತೋಯಿಸಿವೆ ; ಅದೆಷ್ಟೋ ನಾಗರಿಕತೆಗಳನ್ನು ನಾಶ ಮಾಡಿವೆ. ದೇಶದೇಶಗಳನ್ನೇ ನಿರಾಶೆಯ ಕೂಪಕ್ಕೆ ತಳ್ಳಿವೆ. ಆ ಘೋರ ರಾಕ್ಷಸತನವಿಲ್ಲದಿದ್ದಲ್ಲಿ ಮಾನವ ಸಮಾಜವು ಈಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ಮುಂದುವರೆದಿರುತ್ತಿತ್ತು. ಆದರೆ ಈಗ ಆ ರಾಕ್ಷಸತನದ ಅಂತ್ಯಕಾಲ ಸಮೀಪಿಸಿದೆ. ಈ ಸಮ್ಮೇಳನದ ಪ್ರತಿನಿಧಿಗಳ ಗೌರವಾರ್ಥವಾಗಿ ಇಂದು ಬೆಳಿಗ್ಗೆ ಮೊಳಗಿದ ಘಂಟಾನಾದವು ಎಲ್ಲ ಬಗೆಯ ಮತಾಂಧತೆಗೆ ಮೃತ್ಯುಘಾತವನ್ನೀಯುವುದೆಂದು ಆಶಿಸುತ್ತೇನೆ. ಮತ್ತು ಅದು ಖಡ್ಗ- ಲೇಖನಿಗಳ ಮೂಲಕ ಸಂಭವಿಸುತ್ತಿರುವ ಹಿಂಸಾದ್ವೇಷಗಳಿಗೆ, ಹಾಗೂ ಒಂದೇ ಹುರಿಯೆಡೆಗೆ ಸಾಗುತ್ತಿರುವ ಪಥಿಕರೊಳಗಿನ ಅಸಹನೆ- ಮನಸ್ತಾಪಗಳಿಗೆ ಮೃತ್ಯುಘಾತವನ್ನೀಯುವುದೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ

ಈ ಭಾಷಣ ಅಂದಿನ ಅತ್ಯಂತ ಪ್ರಭಾವೀ ಭಾಷಣವೆಂದು ಪರಿಗಣಿಸಲ್ಪಟ್ಟಿತ್ತು. ಎಲ್ಲ ದೇಶ-ಧರ್ಮಗಳ ಸಭಿಕರು- ಶ್ರೋತೃಗಳು ಸ್ವಾಮೀಜಿಯವರ ತೇಜಸ್ಸಿಗೆ, ವಾಗ್ವೈಖರಿಗೆ, ಪಂಡಿತ್ಯಕ್ಕೆ, ಹಿಂದೂ ಧರ್ಮದ ಶ್ರೇಷ್ಠತೆಗೆ ಮಾರುಹೋದರು. ಎಲ್ಲಕ್ಕಿಂತ ಹೆಚ್ಚಾಗಿ ಭಾಷಣದ ಆರಂಭದಲ್ಲಿನ ಅವರ ಸಂಬೋಧನೆ ಅವರೆಲ್ಲರನ್ನೂ ಭಾವೋನ್ನತಿಗೆ ಏರಿಸಿಬಿಟ್ಟಿತ್ತು.

ಈ ಭಾಷಣವನ್ನು ಸ್ವಾಮೀಜಿ ಮಾಡಿದ್ದು ಸಾವಿರಾರು ಶ್ರೋತೃಗಳ ಎದುರಿಗೆ. ಗುಲಾಮಗಿರಿಯಿಂದ ನರಳುತ್ತಿದ್ದ ದೇಶವೊಂದರಿಂದ ಬಂದ ಬಡ ಸಂನ್ಯಾಸಿಯಾಗಿದ್ದರು ಅವರು. ಈ ಹಿನ್ನೆಲೆಯನ್ನೂ, ಭಾಷಣಾನಂತರದ ಪರಿಣಾಮಗಳನ್ನೂ ತಾಳೆ ಹಾಕಿದಾಗ ಸ್ವಾಮಿ ವಿವೇಕಾನಂದರ ಪ್ರಭಾವ ಎಷ್ಟಿತ್ತು ಎನ್ನುವುದು ಅರ್ಥವಾಗುತ್ತದೆ.

Source: http://yuvashakti.wordpress.com