Friday, May 30, 2014

ಸೌಂದರ್ಯ ಎಂದರೇನು ?



ಬದುಕಿನಲ್ಲಿ ಸುಖಕ್ಕೆ ತನ್ನದೇಯಾದ ಸ್ಥಾನವಿದ್ದರೂ, ಸಂತೋಷಕ್ಕೆ ಅದು ಸಮವಲ್ಲ ಉದಾಹರಣೆಗೆ ಶ್ರೀಮಂತ ದೇಶಗಳಲ್ಲಿ ದಿನದ ಅಗತ್ಯಗಳಿಗೆ ಪರದಾಡಬೇಕಿಲ್ಲ. ಆದರೂ ಅವರು ಆನಂದವಾಗಿಲ್ಲ. ಹಾಗಾಗಿಯೇ ಅವರು ಸಂತೋಷವನ್ನು ವಿಲಾಸದಲ್ಲಿ ಹುಡುಕುತ್ತಾರೆ, ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುತ್ತಲೇ ಒಂಟಿತನ, ಸುಖದ ಭ್ರಮೆಯ ವಿಷವರ್ತುಲಕ್ಕೆ ಸಿಕ್ಕಿಬೀಳುತ್ತಾರೆ. ನಮ್ಮ ಅಗತ್ಯಗಳನ್ನು ಪೂರೈಸಿಬಿಟ್ಟರೆ ನಮಗೆ ಸಂತೋಷ ದಕ್ಕುತ್ತದೆ ಎಂಬುದು ಭ್ರಮೆ. ಈ ಭ್ರಮೆಯೇ ನಮ್ಮ ಜೀವನವನ್ನು ಹೋರಾಟ, ಬಿಕ್ಕಟ್ಟುಗಳಿಂದ ತುಂಬಿಬಿಡುತ್ತದೆ. ನಿಜವಾದ ಆತ್ಮಾನಂದ ಆನಂದ ದೊರೆತಾಗ ಈ ಸಂಘರ್ಷ ಕೊನೆಗೊಳ್ಳುತ್ತದೆ. ಹಾಗಾದರೆ ಈ ಆತ್ಮಾನಂದ ಆನಂದ ದೊರೆಯುವುದು ಹೇಗೆ? ವ್ಯಕ್ತಿಯು ಮಾನಸಿಕ ವಿಕಸನ ಹೊಂದಿ ನಿಮ್ಮಲ್ಲಿ ಪ್ರೀತಿ ತುಂಬಿದಾಗ. ಹಾಗಾದರೆ ಪ್ರೀತಿ ಅಂದರೆ ಏನು? ಸೂಕ್ಷ್ಮಜ್ಞತೆಯೇ ಪ್ರೀತಿ, ಆಂತರಿಕ ಸೌಂದರ್ಯ ಬೆಳೆದಂತೆ ಸೂಕ್ಷ್ಮಜ್ಞತೆ ಬೆಳೆಯುತ್ತದೆ ಅಂತಹ ಸೂಕ್ಷ್ಮಜ್ಞತೆ ದಕ್ಕಿಸಿಕೊಂಡಾಗ/ಇದ್ದಾಗಲೇ ಜೀವನದ ಅನುಭವ ದಕ್ಕುವುದು.

ಬೇಸಿಗೆ ರಜೆ ಕಳೆಯಲು ಕಳೆದವಾರ ಮಕ್ಕಳ ಸಮೇತ ನನ್ನ ಶ್ರೀಮತಿಯ ತವರಿನಲ್ಲಿ ಬಿಡಾರ, ಹಾಗೆ ಕಾಲ ಕಳೆಯಲು ತೋಟದ ಕಡೆ ಹೋದಾಗ ಹಸಿರು ಹೊಲದಲ್ಲಿ ಗಾಳಿಗೆ ತೂಗುವ ಹಳದಿ ಸೇವಂತಿ ಹೂಗಳು, ಹರಿವತೊರೆ ಎಂತಹ ಸುಂದರ ದೃಶ್ಯ ಎಂದು ಅನ್ನಿಸಿತು. ಸದ್ದುಗದ್ದಲಗಳಿಂದ ದೂರವಾದ ಗ್ರಾಮೀಣ ಬದುಕನ್ನು ತನ್ಮಯತೆಯಿಂದ ಅನುಭವಿಸುತ್ತಿದ್ದೆ. ಇಂತಹ ಸಂದರ್ಭಗಳಲ್ಲೇ ಸೌಂದರ್ಯ ಎಂದರೇನು ಎಂದು ಪ್ರಶ್ನೆ ತಾನೇತಾನಾಗಿ ಮೊಳೆಯಿತು. ಚೆಲುವನ್ನು ನೋಡಿದಾಗ ಅಥವಾ ಕುರೂಪವನ್ನು ಕಂಡಾಗ, ಖುಷಿಯಾದಾಗ ಅಥವಾ ನೋವುಂಡಾಗ ನಮ್ಮ ಭಾವನೆಗಳಿಗೆ 'ಸುಂದರವಾಗಿದೆ..' ಅಥವಾ 'ಇದು ಚೆನ್ನಾಗಿಲ್ಲ' ಎನ್ನುವ ಮೂಲಕ ಪದಗಳ ರೂಪ ನೀಡುತ್ತೇವೆ. ಇಲ್ಲಿ ಮುಖ್ಯವಾಗುವುದು ಸಂವೇದನೆಗಳು

ಹಾಗಾದರೆ ಸೌಂದರ್ಯ ಎಂದರೇನು? ಸ್ವಚ್ಛತೆ, ಒಪ್ಪ ಓರಣವಾಗಿರುವ ಬಟ್ಟೆ, ಮುಗುಳ್ನಗೆ, ವಿನಯಶೀಲ ನಡೆ, ಬೇರೆಯವರ ಬಗ್ಗೆ ಸಹಾನುಭೂತಿ, ಸಮಯ ಪ್ರಜ್ಞೆ- ಇವೆಲ್ಲವೂ ಸೌಂದರ್ಯದಲ್ಲಿ ಮೇಳೈಸಿವೆ. ಆದರೆ ಇದೆಲ್ಲವೂ ಬರಿಗಣ್ಣಿಗೆ ಹೊರನೋಟಕ್ಕೆ ಕಾಣುವುದಷ್ಟೇ ಅಲ್ಲವೇ, ನಿಜ ಹೇಳಿ? ಬದುಕಿನ ಕಣಕಣಗಳಲ್ಲೂ ಸೌಂದರ್ಯ ತುಂಬಿದೆ. ಸುಂದರ ಮುಖ ನಿಮ್ಮದಾಗಿರಬಹುದು, ಆಕರ್ಷಕ ಮೈಕಟ್ಟು, ಚೆಂದವಾದ ಉಡುಗೆ ತೊಡುವ ಅಭಿರುಚಿಯನ್ನು ಮೈಗೂಡಿಸಿಕೊಂಡಿರಬಹುದು, ಸೌಜನ್ಯದ ನಡವಳಿಕೆ ಹೊಂದಿದವವರಾಗಿರಬಹುದು ಉತ್ತಮವಾಗಿ ಚಿತ್ರ ಬಿಡಿಸುವುದೋ ಅಥವಾ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯವನ್ನು ಪದಗಳಲ್ಲಿ ಸೆರೆಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡಿರಬಹುದು, ಆದರೆ ಆಂತರಿಕ ಉತ್ತಮಿಕೆಯ ಗುಣವೊಂದಿಲ್ಲದಿದ್ದರೆ ಅದು ಬರಿ ಬಾಹ್ಯ ಸೌಂದರ್ಯವಾಗಿ ಮಾತ್ರ ಉಳಿದುಬಿಡುತ್ತದಲ್ಲವೇ. ಆಂತರಿಕ ಸೌಂದರ್ಯ ನಿಮ್ಮ ವ್ಯಕ್ತಿತ್ವಕ್ಕೆ ಸೊಗಸನ್ನು ಕೊಡುತ್ತದೆ. ನಿಮ್ಮ ನಡೆ ನುಡಿಯಲ್ಲಿ ಅದೊಂದು ಬಗೆಯ ಆರ್ದ್ರತೆ ಮತ್ತು ಲಾಲಿತ್ಯವನ್ನು ತುಂಬುತ್ತದೆ. ಆಂತರಿಕ ಸೌಂದರ್ಯವಿಲ್ಲದೇ ಇದ್ದಾಗ ಲೌಕಿಕ ಬದುಕಿಗೊಂದು ಅರ್ಥವೇ ಇಲ್ಲದಂತಾಗುತ್ತದೆ ಎನ್ನುವುದನ್ನು ನೀವು ಒಪ್ಪುವಿರಾದರೆ ಸೌಂದರ್ಯದ ಬಗ್ಗೆ ಮಾತನಾಡೋಣ.

ವಾಸ್ತವದಲ್ಲಿ ಆಂತರಿಕ ಸೌಂದರ್ಯವನ್ನು ಹುಡುಕಿಕೊಳ್ಳಲು ಯಾವುದೇ ವ್ಯಕ್ತಿಗೆ ಪ್ರಾಥಮಿಕವಾಗಿ ನೆರವಾಗುವುದು ಶಿಕ್ಷಣದ ಕೆಲಸ. ಹಾಗೆಯೇ ನಮ್ಮ ಬದುಕಿನ ಬಗ್ಗೆ, ಸೌಂದರ್ಯದ ಬಗ್ಗೆ ಆಳವಾದ ಪ್ರೀತಿ ಮತ್ತು ಮೆಚ್ಚುಗೆ ಹೊಂದುವುದೂ ಅಗತ್ಯವೇ ಅರ್ಥಾತ್ ಮೊದಲು “ನಿನ್ನನ್ನು ನೀನು ಪ್ರೀತಿಸು” ಎನ್ನುವ ತತ್ವವನ್ನು ಅನುಸರಿಸುವುದು ಇದರಿಂದ ಕೀಳರಿಮೆ, ಸಂಕೋಚ, ನಾಚಿಕೆ, ಹಿಂಜೆರಿಕೆಗಳು ದೂರವಾಗಿ ಸಂಕುಚಿತ ಮನಸ್ಸೂ ಸಹ ವಿಕಸನಗೊಳ್ಳುತ್ತದೆ ಮಾನಸಿಕವಾಗಿ ವಿಕಸನಗೊಂಡರೆ ಜ್ಞಾನಾರ್ಜನೆಯ ಮಾರ್ಘ ಸುಲಲಿತವಲ್ಲವೇ?.

ಜ್ಞಾನವಿಲ್ಲದ ಮನಸ್ಸಿಗೆ ಸೌಂದರ್ಯವನ್ನು ಆಸ್ವಾದಿಸುವುದು ಸಾಧ್ಯವೇ? ಖಂಡಿತವಾಗಿಯೂ ಸಾದ್ಯವಿಲ್ಲ ಏಕೆಂದರೆ ಜ್ಞಾನವಿಲ್ಲದ ಮನಸ್ಸೂ ಸಹ ಸೀಮಿತವೇ ಅಥವಾ ಸಂಕುಚಿತವೆ ಆಗಿದೆ ಆದ್ದರಿಂದ ಅದು ಸೌಂದರ್ಯದ ಬಗ್ಗೆ ಮಾತನಾಡಬಹುದು, ಆದರೆ ತನ್ನದೇ ಸೀಮಿತ ಜಗತ್ತಿನಲ್ಲಿ ಸುತ್ತುವ ಮನಸ್ಸಿಗೆ ಸೌಂದರ್ಯವನ್ನು ನೋಡಿದಾಗ ಉಂಟಾಗುವ ಆನಂದವನ್ನು ಅನುಭವಿಸುವುದು ಸಾಧ್ಯವಿಲ್ಲ, ಜ್ಞಾನದ ಸ್ಪರ್ಶವಿಲ್ಲದ ಮನಸ್ಸು ಕುರೂಪಿಯೇ ಆಗಿದೆ. ಹಾಗಾಗಿ ಅದಕ್ಕೆ ಸೌಂದರ್ಯದ ಅನುಭವವೇ ಆಗದು. ಆದರೆ ಮನಸ್ಸು ಅಲೌಕಿಕ ಅನಗತ್ಯ ಆಕಾಂಕ್ಷೆಗಳಿಂದ ಮುಕ್ತವಾಗಬೇಕು. ತನ್ನದೇ ಆಸೆಗಳ ಬಲೆಯಲ್ಲಿ ಸಿಕ್ಕಿರಬಾರದು, ಆಫ್ಕೋರ್ಸ್ ಆಸೆ ಇರಲಿ ದುರಾಸೆ ಬೇಡ ಹಾಗೆಯೇ ಯಶಸ್ಸು ಬೇಕು ಹಾಗಂತ ಯಶಸ್ಸಿನ ಬೆನ್ನು ಹತ್ತಿ ಓಡುತ್ತಿರಬಾರದು. ಇಂತಹ ಮನಃಸ್ಥಿತಿ ಸೌಂದರ್ಯವನ್ನು ಕೊಡುತ್ತದೆ. ಇಂತಹ ಆಂತರಿಕ ಸೌಂದರ್ಯವಿದ್ದಾಗ ಕುರೂಪಿ ಮೊಗವೂ ಸುಂದರವಾಗಿ ಕಾಣುತ್ತದೆ.

ನಾವು ಎಷ್ಟೆಲ್ಲ ಕಷ್ಟಪಡುತ್ತೇವೆ ಆದರೆ ಸುಖವಿಲ್ಲ ಜೀವನದಲ್ಲಿ ಸಂತೋಷವಿಲ್ಲ, ಲಕ್ಷ ಲಕ್ಷ ಸಂಪಾದನೆ ಗಳಿಸಿದರೂ ಮನಸ್ಸಿಗೆ ನೆಮ್ಮದಿಯಿಲ್ಲ ಎನ್ನುವುದು ಅನೇಕರ ಗೊಣಗು, ದೇವರು, ಪೂಜೆ, ಪುನಸ್ಕಾರ ಮತ್ತು ಧ್ಯಾನ-ಯೋಗಗಳಲ್ಲಿ ತೊಡಗಿಸಿಕೊಂಡರೂ ಶಾಂತಿಯಿಲ್ಲ, ಮನಸ್ಸೆಂಬುದು ಸದಾ ಅಶಾಂತಿಯ ಕಡಲು ಎಂಬುದು ಬಹುತೇಕರ ದೂರು ಮತ್ತು ಗೊಂದಲ, ಈ ಸಾಲುಗಳನ್ನು ಬರೆಯುತ್ತಿದ್ದಂತೆ ಸ್ವಾಮೀ ವಿವೇಕಾನಂದರ ಮಾತುಗಳು ನೆನಪಾದವು.

 “ಒಮ್ಮೆ ತನ್ನ ಕೊಠಡಿಯ ಎಲ್ಲ ಬಾಗಿಲುಗಳನ್ನು ಮುಚ್ಚಿ ದೇವರಿಗಾಗಿ ಧ್ಯಾನ ಮಾಡಿದರೂ ಏನೂ ಪ್ರಯೋಜನವಾಗಲಿಲ್ಲವೆಂದು ಸ್ವಾಮಿ ವಿವೇಕಾನಂದರನ್ನು ಯುವಕನೊಬ್ಬ ಕೇಳಿದನಂತೆ, ಆಗ ವಿವೇಕಾನಂದರು, ''ವತ್ಸ, ನನ್ನ ಮಾತಿಗೆ ನೀನೇನಾದರೂ ಬೆಲೆ ಕೊಡುವುದಾದರೆ ನಾನು ನಿನಗೆ ಹೇಳುವುದಿಷ್ಟೆ. ಮೊದಲು ನಿನ್ನ ಕೊಠಡಿಯ ಬಾಗಿಲುಗಳನ್ನೆಲ್ಲ ತೆರೆದು ಕಣ್ಣು ಬಿಟ್ಟು ಹೊರಗೆ ನೋಡು. ನಿನ್ನ ನೆರೆಹೊರೆಯಲ್ಲಿ ಬಹಳಷ್ಟು ಜನರು ದುಃಖ-ದಾರಿದ್ರ್ಯದಲ್ಲಿ ಮುಳುಗಿದ್ದಾರೆ. ಅವರಲ್ಲಿಗೆ ಹೋಗಿ ಶಕ್ತಿಯನುಸಾರ ಉತ್ಸಾಹದಿಂದ ಸೇವೆಯನ್ನು ಮಾಡಬೇಕು. ರೋಗಿಗಳಿಗೆ ಔಷಧ ವಿತರಣೆಯ ವ್ಯವಸ್ಥೆಯನ್ನು ಮಾಡಿ ಆದಷ್ಟೂ ಉಪಚಾರ ಮಾಡು. ಹೊಟ್ಟೆಗಿಲ್ಲದವರಿಗೆ ಅನ್ನದಾನ ಮಾಡು; ನಿರಕ್ಷರಕುಕ್ಷಿಗಳಿಗೆ ನಿನಗೆ ಗೊತ್ತಿರುವಷ್ಟು ವಿದ್ಯಾದಾನ ಮಾಡು. ನಿನ್ನ ಸಹೋದರರನ್ನು ಈ ರೀತಿ ಸೇವೆ ಮಾಡಲು ಪ್ರೇರೇಪಿಸು. ಇದರಿಂದ ನಿನಗೆ ಶಾಂತಿ ಸಮಾಧಾನಗಳು ದೊರಕುತ್ತವೆ ಎಂದು ಹೇಳಬಲ್ಲೆ,'' ಎಂದರಂತೆ.

ಮನುಷ್ಯರಾಗಿ ಹುಟ್ಟಿದ ಮೇಲೆ ನಾಲ್ಕು ಜನಕ್ಕೆ ನೆರವಾಗಬೇಕು ಎನ್ನುವ ಮಾತಿದೆ. ನೆರವು ನೀಡುವುದರಿಂದ ಸಿಗುವ ಸುಖ ನಿಜಕ್ಕೂ ದೊಡ್ಡದು, ಹಂಚಿ ತಿನ್ನುವುದೊಂದು ದೊಡ್ಡ ಮೌಲ್ಯ. ಕರ್ಮಗಳನ್ನು ಸವೆಸಲು ದಾನ ಧರ್ಮಗಳನ್ನು ಮಾಡಿ ಎಂದು ಎಲ್ಲ ಧರ್ಮಗಳೂ ಒತ್ತಿ ಹೇಳುತ್ತವೆ. ದೀನ ದುರ್ಬಲರ ಸೇವೆಯಲ್ಲಿ ಸುಖವಿದೆ ಎನ್ನುವುದನ್ನು ಎಲ್ಲ ಸಾಧು- ಸಂತರು ಪ್ರತಿಪಾದಿಸಿದ್ದಾರೆ. “ನಾನು ಬದುಕಿರುವುದು ನನಗಾಗಿ ಅಲ್ಲ. ಇತರರಿಗಾಗಿ, ಎಲ್ಲರಿಗಾಗಿ. ಈ ಜೀವನದಲ್ಲಿ ಎಷ್ಟೆಲ್ಲ ಮಹಾನುಭಾವರ ನೆರವನ್ನು ಪಡೆದಿದ್ದೇನೆ. ಅದೆಲ್ಲವನ್ನೂ ಸಮಾಜ ಸೇವೆಯ ಮೂಲಕವೇ ತೀರಿಸಬೇಕು. ಇದು ಪ್ರತಿಯೊಬ್ಬರ ಕರ್ತವ್ಯ,'' ಎನ್ನುವ ಐನ್‌ಸ್ಟೀನ್ ಅವರ ಮಾತು ಎಷ್ಟು ಅರ್ಥಗರ್ಭಿತವಲ್ಲವೇ.

ನಾನಕ್ ಕೊಹ್ಲಿ ಎನ್ನುವ 81 ವರ್ಷದ ಅನಿವಾಸಿ ಭಾರತೀಯ ಉದ್ಯಮಿಯ ಬದುಕು ನಿಜಕ್ಕೂ ಆಸಕ್ತಿದಾಯಕವಾಗಿದೆ, ತಾವು ಸಮಾಜಕ್ಕೆ ನಾನಾ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರಿಂದ ಅಪಾರ ಆನಂದವನ್ನು ಹೊಂದಿದ್ದಾಗಿ ಅವರು ಹೇಳಿಕೊಳ್ಳುತ್ತಾರೆ. ಅಂದು ತಾವು ಮಾಡಿದ ಕೆಲಸ ಮತ್ತು ಅದರಿಂದ ಹೊಂದಿದ ಪರಮಾನಂದವನ್ನು ಅವರು ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ ಅದರ ಯಥಾವತ್ ಕನ್ನಡ ಅನುವಾದ ಇಲ್ಲಿದೆ ನೋಡಿ.
''2004
ರಲ್ಲಿ ಕುಶ್ವಂತ್ ಸಿಂಗ್‌ರನ್ನು ನಾನು ಭೇಟಿ ಮಾಡಿದೆ. ನನ್ನ ಪೋಷಕರ ಹೆಸರಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ರೂಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳುಹಿಸುವುದು ನನ್ನ ಆಲೋಚನೆಯಾಗಿತ್ತು, ಈ ಆಲೋಚನೆಯನ್ನು ನಾನು ಕುಶ್ವಂತ್ ಜತೆ ಹಂಚಿಕೊಂಡೆ. ಅವರು ಈ ಬಗ್ಗೆ ಅಷ್ಟೇನೂ ಆಸಕ್ತಿ ತೋರಲಿಲ್ಲ ಬದಲಿಗೆ, “ನಿನ್ನ ಉದ್ದೇಶ ಚೆನ್ನಾಗಿದೆ ಆದರೆ, ನಿನ್ನಿಂದ ನೆರವು ಪಡೆದು ವಿದೇಶ ಸೇರಿದ ವಿದ್ಯಾರ್ಥಿಗಳು, ಮತ್ತೆ ಸ್ವದೇಶಕ್ಕೆ ಮರಳುತ್ತಾರೆ ಇಲ್ಲಿಗೆ ಬಂದು ಸೇವೆ ಮಾಡುತ್ತಾರೆ ಎಂದು ಹೇಳಲಾಗದುಎಂದು ಬೆದರಿಸಿದರು. ಅಲ್ಲದೆ, 'ನೆರವಾಗುವ ಹಂಬಲ ನಿಜಕ್ಕೂ ನಿನ್ನಲ್ಲಿ ಇದ್ದರೆ ಮಜಾಬಿ ಸಿಖ್ ಬಾಲಕಿಯರತ್ತ ಗಮನ ನೀಡು ಅವರಿಗೆ ನೆರವಿನ ಅಗತ್ಯವಿದೆಎಂದು ಸಲಹೆ ನೀಡಿದರು.
ಅವರ ಮಾತಿನಂತೆಯೇ ನನ್ನ ಗೆಳೆಯ ಎಸ್ ಎಸ್ ಧನೋವಾ ಅವರ ಗ್ರಾಮವಾದ ಘರೋನಾದಲ್ಲಿ ಒಂದು ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಲು ಮುಂದಾದೆ. ಅದಕ್ಕೆ ಸೂಕ್ತ ಸ್ಥಳ, ಶಿಕ್ಷಕರು, ಇಪ್ಪತ್ತು ಕಂಪ್ಯೂಟರ್‌ಗಳು ಸೇರಿದಂತೆ ಎಲ್ಲವನ್ನೂ ವ್ಯವಸ್ಥೆಗೊಳಿಸಿದೆ. ಸ್ವಲ್ಪ ಸಮಯದಲ್ಲೇ ಇಂಥದ್ದೇ ಕೇಂದ್ರಗಳನ್ನು ಇನ್ನೂ 21 ಹಳ್ಳಿಗಳಲ್ಲಿ ಆರಂಭಿಸಿದೆ. ಅಲ್ಲಿ ಕಂಪ್ಯೂಟರ್ ತರಬೇತಿಯಲ್ಲದೆ, ಇಂಗ್ಲಿಷ್ ಸ್ಪೀಕಿಂಗ್ ಕ್ಲಾಸ್‌ಗಳೂ ನಡೆದವು. ಸಿಖ್ ಸಮುದಾಯದ ಸಾವಿರಾರು ಬಾಲಕಿಯರು ಇಲ್ಲಿ ತರಬೇತಿ ಪಡೆದು, ಡೇಟಾ ಎಂಟ್ರಿ ಉದ್ಯೋಗದಲ್ಲಿ ನೆಲೆ ಕಂಡರು. ತಮ್ಮ ಕಾಲ ಮೇಲೆ ತಾವು ನಿಂತರು. ಕೇವಲ ಬಾಲಕಿಯರಿಗಷ್ಟೇ ನೀವು ಏಕೆ ತರಬೇತಿ ನೀಡಿದಿರಿ? ಏಕೆ ಈ ಪಕ್ಷಪಾತ ಎನ್ನುವಿರೇನೋ? ಆದರೆ, ಬಾಲಕರಿಗಿಂತಲೂ ಇಂಥ ನೆರವು ಬಾಲಕಿಯರಿಗೆ ನಿಜಕ್ಕೂ ಬೇಕಾಗಿದೆ.
ಹಳ್ಳಿಯ ಬಡ ವರ್ಗದ ಹುಡುಗಿಯರಿಗೆ ನಮ್ಮ ಯೋಜನೆಯಿಂದ ನೆರವಾಗಿದೆ. ಕುಟುಂಬದ ಒಬ್ಬ ಬಾಲಕಿಗೆ ಇಂಥ ನೆರವು ಸಿಕ್ಕಿದರೆ ಸಾಕು ಆ ಕುಟುಂಬವೇ ನೆಮ್ಮದಿ ಕಾಣುತ್ತದೆ. ತರಬೇತಿ ಹೊಂದಿದ ಬಹುತೇಕ ಬಾಲಕಿಯರು ಮೆಡಿಕಲ್ ಟ್ರಾನ್ಸ್‌ಕ್ರಿಪ್ಟನ್ ಸೇರಿದಂತೆ ನಾನಾ ವೃತ್ತಿಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ ಇಲ್ಲಿ ಪಡೆದ ಆರು ತಿಂಗಳ ತರಬೇತಿ ಅವರ ಬದುಕಿಗೆ ಬೆಳಕಾಗಿದೆ ನಮ್ಮ ಅಂದಿನ ಪ್ರಯತ್ನ ಅನೇಕರಿಗೆ ಸ್ಫೂರ್ತಿಯಾಗಿದೆ, ಪಂಜಾಬ್‌ನ ಗ್ರಾಮೀಣ ಪ್ರದೇಶದಲ್ಲಿ ಇಂಥ ಜ್ಞಾನದ ದೀವಿಗೆಗಳು ಕಾಣುತ್ತಿವೆ ನನ್ನಲ್ಲಿರುವುದನ್ನು ಇಲ್ಲದ ವರಿಗೆ ಹಂಚುವ ಮೂಲಕ ಜನರ ಪ್ರೀತಿಯನ್ನು ನಾನು ಪಡೆದೆ. ಇತರರಿಗೆ ನೆರವಾಗುವ ಮೂಲಕವೇ ನಾನು ಮನುಷ್ಯನಾಗಿ ರೂಪುಗೊಳ್ಳಲು ಸಾಧ್ಯವಾಯಿತು.''

ಬದುಕು ಯೋಗ್ಯವಾಗಿರಬೇಕು ಎಂಬ ಆಸೆ ಯಾರಿಗಿರುವುದಿಲ್ಲ? ನಮ್ಮ ಭಾವಕೋಶ ಹೇಗಿರುತ್ತದೆಯೋ ಬದುಕು ಸಹ ಹಾಗೆಯೇ ಇರುತ್ತದೆ, ನಿಮ್ಮಲ್ಲಿ ನೋವು, ಕೀಳರಿಮೆ ಅಥವಾ ಭಯದ ಭಾವವಿದ್ದರೆ ಮೊದಲು ಆ ಮನಸ್ಥಿತಿಯಿಂದ ಹೊರಬನ್ನಿ. ಬದುಕಿನಲ್ಲಿ ಸಂಭವಿಸಿದ ಸಂತೋಷದ ಘಳಿಗೆಯನ್ನು, ನೀವು ಸಂಭ್ರಮಿಸಿದ ಘಟನೆಯನ್ನು ನೆನಪಿಸಿಕೊಳ್ಳಿ ನಿಮ್ಮ ಭಾವಕೋಶ ಆ ಖುಷಿಯಲ್ಲಿ ತುಂಬುವಂತೆ ನೋಡಿಕೊಳ್ಳಿ ಭಾವಕೋಶವನ್ನು ಸೆಟ್ ಮಾಡಿಕೊಂಡಂತೆಯೇ ನಮ್ಮ ವಿಚಾರಗಳನ್ನೂ ಯೋಗ್ಯವಾಗಿ ಹೊಂದಿಸಿಕೊಳ್ಳಬೇಕು ಒಳ್ಳೆಯತನ ಮತ್ತು ಜನರನ್ನು ಸಂಪರ್ಕಿಸುವಂಥ ಮೌಲ್ಯಗಳನ್ನು ನಾವು ಬದುಕಿನಲ್ಲಿ ತಂದುಕೊಳ್ಳಬೇಕು ಇಷ್ಟರ ಜತೆಗೆ ಬದುಕನ್ನು ಹಿತವಾಗಿಡಲು ಮಾನಸಿಕವಾಗಿ ಸಜ್ಜಾಗಬೇಕು.

ಅದಕ್ಕೆ ಪೂರಕವಾಗಿ ಇಲ್ಲೊಂದು ಸ್ವಾರಸ್ಯಕರ ಕತೆ ಇದೆ ನೋಡಿ ಇದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರೋ ಗೊತ್ತಿಲ್ಲ, ಒಮ್ಮೆ ಚೀನಾ ದೇಶದ ಕುಗ್ರಾಮವೊಂದರಲ್ಲಿ ಸುಪ್ರಾಪ್ತ ಬಾಲಕನೊಬ್ಬ (ಅತ್ತ ಪ್ರಾಪ್ತನೂ ಅಲ್ಲದ ಇತ್ತ ಅಪ್ರಾಪ್ತನೂ ಅಲ್ಲದವರನ್ನು ಸುಪ್ರಾಪ್ತರೆನ್ನಬಹುದೇನೋ ನನಗೂ ಸರಿಯಾಗಿ ಗೊತ್ತಿಲ್ಲಾ ಗೊತ್ತಿದ್ದವರು ತಿಳಿಸಿ) ಆಗಾಗ ಆಕಾಶವನ್ನು ನೋಡುತ್ತಲೇ ಇದ್ದ ಆತನ ಮುಖದಲ್ಲಿ ಭಯ ಭೀತಿಗಳು ತುಂಬಿದ್ದವು ಆಕಾಶ ಯಾವಾಗ ಬೇಕಾದರೂ ಕುಸಿಯಬಹುದು ಹೀಗಾದರೆ ಅಪಾಯ ತಪ್ಪದು ಎನ್ನುವ ಆತಂಕ ಆತನದು, ಆಕಾಶ ಕಂಬಗಳ ಮೇಲೆ ನಿಂತಿದ್ದರೆ ಕುಸಿಯುವ ಭಯ ಇರುತ್ತಿರಲಿಲ್ಲ ಆದರೆ ಅದು ತೇಲುತ್ತಿದೆ ಕುಸಿದರೆ ಮಾಡುವುದಾದರೂ ಏನು ಎಂಬ ದಿಗಿಲಿನಿಂದ ಕಾಡಿಗೆ ಓಡಿದ ಕಾಡಲ್ಲಿ ಸಾಕಷ್ಟು ಮರಗಳಿದ್ದು ಕಂಬಗಳಂತೆ ಆಕಾಶವನ್ನು ಹೊರುತ್ತವೆ ಎಂದು ಆತ ತುಸು ನೆಮ್ಮದಿಯ ನಿಟ್ಟುಸಿರುಬಿಟ್ಟ. ಅದೇ ಕಾಡಿಗೆ ಸನ್ಯಾಸಿಯೊಬ್ಬರು ಬಂದರು ಅವರನ್ನುದ್ದೇಶಿಸಿ, ''ಕಂಬಗಳ ಆಧಾರವಿಲ್ಲದ ಆಕಾಶ ಯಾವಾಗ ಬೇಕಾದರೂ ಬೀಳಬಹುದು ಎನ್ನುವ ಭಯ ನಿಮ್ಮಲ್ಲಿ ಇಲ್ಲವೇ?'' ಎಂದು ಬಾಲಕ ಪ್ರಶ್ನಿಸಿದ, ಆ ಮಾತಿಗೆ ಮುಗುಳ್ನಕ್ಕ ಸನ್ಯಾಸಿ, ''ಮಗು, ನಿಜಕ್ಕೂ ಕಂಬಗಳ ಆಧಾರದ ಮೇಲೆ ಆಕಾಶ ನಿಂತಿದೆ, ಆದರೆ ಅದನ್ನು ನೋಡಲು ವಿಶೇಷ ಕಣ್ಣುಗಳು ಬೇಕು ನಮಗೆ,'' ಎಂದರು.
''
ಹೌದಾ, ನಾನು ಅಂಥ ವಿಶೇಷ ಕಣ್ಣು ಪಡೆಯಬಹುದಾ? ದಯವಿಟ್ಟು ಸಹಾಯ ಮಾಡಿ ಎಂದು ಬಾಲಕ ಬೇಡಿಕೊಂಡ ಸರಿ ಹಾಗಾದರೆ ಈಗಲೇ ನೀನು ಪಕ್ಕದ ಹಳ್ಳಿಗೆ ಹೋಗಿ ತುಸು ಆಹಂಕಾರ ಮತ್ತು ಒರಟಾಗಿಯೇ ತಿನ್ನಲು ಆಹಾರವನ್ನು ಕೊಡುವಂತೆ ಜನರನ್ನು ಕೇಳು ಅವರು ಕೊಟ್ಟ ಆಹಾರದೊಂದಿಗೆ ಇಲ್ಲಿಗೆ ಬಾ ಎಂದರು, ಬಾಲಕ ಹಳ್ಳಿಗೆ ಹೋಗಿ ತನಗೆ ಆಹಾರ ಕೊಡುವಂತೆ ಜಂಭದಿಂದಲೇ ಕೇಳಿದ ಬಹುತೇಕರು ಏನನ್ನೂ ಕೊಡದೇ ಬಾಗಿಲು ಮುಚ್ಚಿದರು, ಆದರೆ, ಅಚ್ಚರಿಯ ಘಟನೆಯೊಂದು ನಡೆಯಿತು ಎಲ್ಲರನ್ನೂ ಕೇಳಿದಂತೆಯೇ ''ನನಗೆ ತಿನ್ನಲು ಏನಾದರೂ ಕೊಡಿ,'' ಎಂದು ಒರಟುತನ ಬೆರೆತ ಗಟ್ಟಿ ದನಿಯಲ್ಲಿಯೇ ಆ ಬಾಲಕ ಅಲ್ಲೂ ಕೇಳಿದ ಆ ಮನೆಯ ಮಹಿಳೆ ಎರಡು ನಿಮಿಷದ ನಂತರ ಆಹಾರದೊಂದಿಗೆ ಹೊರಬಂದು, ''ನನ್ನನ್ನು ಕ್ಷಮಿಸು, ಮಗುವಿಗೆ ಮೊಲೆಯೂಡಿಸುತ್ತಿದ್ದೆ ಹೀಗಾಗಿ ಬರಲು ತಡವಾಯಿತು,'' ಎಂದಳು ಅವಳಿಂದ ಆಹಾರ ಪಡೆದ ಬಾಲಕ ಕಾಡಿಗೆ ಬಂದು ನಡೆದದ್ದನ್ನು ಸನ್ಯಾಸಿಗೆ ವಿವರಿಸಿದ. ''ಆ ಮಹಿಳೆಯ ಒಳ್ಳೆತನವೇ ಆಕಾಶ ಬೀಳದಂತೆ ತಡೆದಿರುವ ಕಂಬಗಳಲ್ಲಿ ಒಂದಾಗಿದೆ,'' ಎಂದು ಸನ್ಯಾಸಿ ಹೇಳಿದರು ಹೌದು, ಪ್ರತಿಯೊಂದು ಸದುದ್ದೇಶದ ಕ್ರಿಯೆ ಸಹ ಆಕಾಶ ಹೊತ್ತಿರುವ ಕಂಬವೇ ಆಗಿದೆ ಅವು ಹೊರನೋಟಕ್ಕೆ ಕಾಣುವುದಿಲ್ಲ, ಒಳಗಣ್ಣಿಗೆ ಮಾತ್ರ ಗೋಚರ ಇಂಥ ನಂಬಿಕೆಯಿಂದ ನಾವು ಸಾಗಿದಾಗಲೇ ಹೆಚ್ಚಿನ ಶಕ್ತಿ ಚೈತನ್ಯಗಳು ನಮ್ಮದಾಗುತ್ತವೆ ಅನಾಮಿಕ ಮೂಲದಿಂದ ನಾವು ಈ ಶಕ್ತಿಯನ್ನು ಹೊಂದುತ್ತೇವೆ.

ಒಹೋ, ಒಳ್ಳೆತನವೇ ಬದುಕಿನ ಹಾದಿಯೇ? ಹಾಗಾದರೆ, ಒಳ್ಳೆಯವರಾದ ಅನೇಕರರು ಏಕೆ ಯಶಸ್ಸು ಪಡೆದಿಲ್ಲ? ಇಲ್ಲಿ ಒಳ್ಳೆತನ ಸೋತಿದೆಯೇ? ಎನ್ನುವ ಪ್ರಶ್ನೆ ಕೇಳಬಹುದು, ಇಂದಿನ ಕಾಲಕ್ಕೆ ಹಾಗೆ ಕೇಳುವುದು ಸಮಂಜಸವೂ ಹೌದು, ಆದರೆ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆತನ ಎನ್ನುವುದು ಬುನಾದಿಯಾಗಬೇಕು ಹಾಗಂತ ಶ್ರೀರಾಮನಂತೆ ಕಾಡಿಗೆ ಹೋಗಬೇಕಾಗಿಲ್ಲ ಸನ್ನಡತೆಯಲ್ಲಿ ಸಾಗುವುದನ್ನು ರೂಡಿಸಿಕೊಲ್ಲುವುದು ಮುಖ್ಯ ಆದರೆ ಇಷ್ಟರಿಂದಲೇ ಯಶಸ್ಸಿನ ತುದಿ ತಲುಪುತ್ತೇವೆ ಎಂದರ್ಥವಲ್ಲ ಅದು ಬೇಕೆನ್ನುವ ಹಂಬಲ ನಿಮ್ಮೊಳಗಿದ್ದರೆ ಒಳ್ಳೆತನದ ಜತೆ ಜಾಣತನವೂ ಇರಬೇಕು, ಈ ನಿಟ್ಟಿನಲ್ಲಿ ನಾವು ಸಾಗಬೇಕು ಕೇವಲ ಕಷ್ಟಪಟ್ಟು ಕೆಲಸ ಮಾಡುವುದರಿಂದ ಗೆಲ್ಲುತ್ತೇವೆ ಎಂದು ಜನ ಯೋಚಿಸಬಹುದು, ಇದು ಸುಳ್ಳು ನಂಬಿಕೆ, ಇದರ ಜತೆಗೆ ಚುರುಕಾಗಿ, ಚಾಕಚಕ್ಯತೆಯಿಂದ ನಾವು ಕೆಲಸ ಮಾಡಬೇಕು ಆಗ ಒಳ್ಳೆತನ ಎನ್ನುವುದು ಯಶಸ್ಸಿನ ಜೊತೆಗೆ ಅಧ್ಯಾತ್ಮಿಕ ಚೈತನ್ಯವನ್ನೂ ನೀಡುತ್ತದೆ.

ಒಂದು ವಿಷಯವನ್ನು ನೀವು ಗಮನಿಸಿರಬಹುದು ಭಾರತದ ಆರ್ಥಿಕತೆಯ ಗ್ರಾಫ್ ಏರುತ್ತ ಹೋದ ಬೆನ್ನಲ್ಲೇ ಆಧುನಿಕ ಅಧ್ಯಾತ್ಮಿಕ ಗುರುಗಳ ಜನಪ್ರಿಯತೆಯ ಗ್ರಾಫ್ ಕೂಡ ಏರತೊಡಗಿದೆ, ಆರ್ಥಿಕ ಪ್ರಗತಿ, ಅದರ ಬೆನ್ನು ಹತ್ತಿದ ದುಡಿಮೆ, ಅದರಿಂದ ಉಂಟಾಗುವ ಒತ್ತಡಗಳು, ಒತ್ತಡಗಳಿಂದ ಕಾಯಿಲೆ, ಸಹಜೀವಿಗಳಿಂದ ದೂರ ಉಳಿಯುವ ಸಂಕುಚಿತ ಮನಸ್ಥಿತಿ ಇತ್ಯಾದಿ ...... ಈ ಎಲ್ಲವನ್ನೂ ಮ್ಯಾನೇಜ್ ಮಾಡಲು ಸಿದ್ಧಪುರಾತನ ಅಧ್ಯಾತ್ಮ ಹೊಸಯುಗದ ಗುರುಗಳು ಆಕರ್ಷಣೆಯ, ಆಸರೆಯ ಕೇಂದ್ರಗಳಾಗತೊಡಗಿದ್ದು ಇದೇ ಕಾರಣದಿಂದ ಎಂದರೆ ತಪ್ಪಾಗಲಾರದು, ಇವತ್ತು ಇಡೀ ಜಗತ್ತು ಅಧ್ಯಾತ್ಮಿಕ ಆಸರೆಗಾಗಿ ಭಾರತದತ್ತ ಮುಖ ಮಾಡಿದೆ ಭಾರತದ ಚಿಂತನೆಗಳನ್ನು ಅನುಸರಿಸುವ, ಬೋಧಿಸುವ ಸ್ಥಳೀಯ ಗುರುಗಳಿಗೂ ವಿದೇಶಗಳಲ್ಲಿ ಮನ್ನಣೆ ಸಿಗುತ್ತಿದೆ ಈ ಅಗತ್ಯಕ್ಕೆ ತಕ್ಕ ಹಾಗೆ ನಮ್ಮ ಆಧುನಿಕ ಗುರುಗಳು ಸಂವಹನದ ಎಲ್ಲ ಸಾಧ್ಯತೆಗಳನ್ನೂ ತಮ್ಮದಾಗಿಸಿ ಕೊಳ್ಳುತ್ತಿದ್ದಾರೆ. ಇಂದಿನ ಅಧ್ಯಾತ್ಮಿಕ ಗುರುಗಳಲ್ಲಿ ಸನ್ಯಾಸಿಗಳು ಮಾತ್ರವಲ್ಲದೆ ಬ್ರಹ್ಮಚಾರಿಗಳೂ, ಸಂಸಾರಿಗಳೂ ಇದ್ದಾರೆ. ಕಾವಿ ಮಾತ್ರವಲ್ಲದೆ ಬಿಳಿ ಉಡುಪಿನಲ್ಲೂ ಇರುತ್ತಾರೆ ಅಷ್ಟೇ ಯಾಕೆ? ಸೂಟು-ಬೂಟುಧಾರಿಗಳೂ ತಮ್ಮ ವಿಚಾರ ಮತ್ತು ತಟ್ಟುವಿಕೆಗಳಿಂದಾಗಿ ಸಮರ್ಥ ಅಧ್ಯಾತ್ಮಿಕ ಗುರುಗಳೆಂದು ಗುರುತಿಸಲ್ಪಡುತ್ತಿದ್ದಾರೆ, ಈ ಪಟ್ಟಿಯಲ್ಲಿ ಹೆಂಗಸರೂ ಸೇರಿದ್ದಾರೆ ಆಧುನಿಕ ಪೋಷಾಕಿನ ಒಳಗೆಯೂ ಶುದ್ಧ ಅಧ್ಯಾತ್ಮದ ಚಿಂತನೆ ಮಾಡುತ್ತಾ, ಅದನ್ನೇ ಜನರೊಂದಿಗೆ ಹಂಚಿಕೊಳ್ಳುತ್ತಾ, ಅದನ್ನೊಂದು ಬದುಕಿನ ದಾರಿಯಾಗಿ ಮಾಡಿಕೊಂಡವರೂ ಇಲ್ಲದಿಲ್ಲ.

ಬಡವರು ಮಾತ್ರ ಅಧ್ಯಾತ್ಮದತ್ತ ಒಲವು ಹೊಂದಿರುತ್ತಾರೆ ಅಥವಾ ಅಂತಹ ಒಲವು ಇರುವವರು ಬಡವರಾಗಿರಬೇಕು ಅನ್ನುವುದು ತಪ್ಪು ಅಪೇಕ್ಷೆ, ಹಣ ಇದ್ದವರಲ್ಲಿ ಅಧ್ಯಾತ್ಮಿಕ ಮನೋಭಾವ ಬಂದರೆ, ಬಡವರ ಸಂಖ್ಯೆ ಕಡಿಮೆ ಮಾಡುವತ್ತ ಯೋಚಿಸುವರಲ್ಲವೇ? ಎಂದು ಪ್ರಶ್ನಿಸುವ ಪಂಡಿತ್ ರವಿಶಂಕರ್ ಗುರೂಜಿಯಂತವರು ತಮ್ಮ ಆಧ್ಯಾತ್ಮಿಕ ಬದುಕನ್ನು ಅನುಸರಿಸುವ ಬಗ್ಗೆ ಈವರೆಗಿನ ಎಲ್ಲಾ ಅದ್ಭುತಗಳನ್ನು ಮುರಿದಿದ್ದಾರೆ ಎಂದರೆ ತಪ್ಪಾಗಲಾರದು. ಇಂದಿನ ಯುಗಕ್ಕೆ ತಕ್ಕಂತೆ ಅಧ್ಯಾತ್ಮದ ಪರಿಭಾಷೆ ಬದಲಾಗಿದೆ ಅದು ಬ್ರಹ್ಮಜ್ಞಾನವನ್ನು ಪಡೆಯುವ ನಿಟ್ಟಿನ ದಾರಿಯಾಗಿ ಉಳಿದಿಲ್ಲ ದಿನದ ಬದುಕಿನ ಸ್ಪರ್ಧೆ ಮತ್ತು ಜಂಜಾಟದಲ್ಲಿ ಮನುಷ್ಯರಾಗಿ ಉಳಿಯುವುದು ಹೇಗೆ ಎನ್ನುವ ಸವಾಲಿಗೆ ಉತ್ತರವಾಗಿ ಬದಲಾಗಿದೆ, ಆದ್ದರಿಂದಲೇ, ಆಧುನಿಕ ಗುರುಗಳು ಧ್ಯಾನದ ಜತೆಜತೆಗೆ ಆರೋಗ್ಯ, ಶಿಕ್ಷಣ, ಪರಿಸರ ನಿರ್ವಹಣೆ, ಸಂವಹನದ ರೀತಿ ನೀತಿ, ಒತ್ತಡ ನಿರ್ವಹಣೆಗಳ ಬಗ್ಗೆಯೂ ಬೋಧನೆ ಮಾಡುತ್ತಾರೆ. ಇವೆಲ್ಲವನ್ನೂ ಪ್ರಾಚೀನ ಭಾರತೀಯ ಸಿದ್ಧಾಂತಗಳು ಮತ್ತು ಗ್ರಂಥಗಳ ಆಧಾರದ ಮೇಲೆಯೇ ಮಾಡುವುದರಿಂದ ಅವುಗಳಿಗೆ ಅಧಿಕೃತತೆ ಇರುತ್ತದೆ. ಏನೇ ಆದರೂ 'ಒಳ್ಳೆಯದು ಎಲ್ಲ ಕಡೆಗಳಿಂದಲೂ ಹರಿದು ಬರಲಿ' ಎನ್ನುವ ವೇದವಾಕ್ಯವನ್ನು ಅನುಸರಿಸೋಣ.

ಬದುಕೆಂಬುದು ಬಹಳ ಅಲ್ಪವಾದುದು. ನೀರ ಮೇಲಿನ ಗುಳ್ಳೆಯಿದ್ದಂತೆ. ಈ ಕ್ಷಣವಿದ್ದವರು, ಮರುಕ್ಷಣ ಇರದೆ ಹೋಗಬಹುದು. ಹಾಗೆಂದು, ಸಾವಿನ ಭಯ ಸದಾ ಇರಬೇಕು ಎಂದರ್ಥವಲ್ಲ. ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ತ್ವರಿತ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು.

ನೀವು ಯಾರಿಗಾದರೂ ಏನನ್ನಾದರೂ ದಾನ ಮಾಡುವಾಗ ಸುಮ್ಮನೆ ನೀಡುವಿರೋ, ಇಲ್ಲವೇ ಅದರ ಹಿಂದಿನ ಲಾಭ-ನಷ್ಟಗಳನ್ನು ಲೆಕ್ಕ ಹಾಕುವಿರೋ? ಪಾಪ ಭೀತಿಯಿಂದಲೋ ಅಥವಾ ಸ್ವಾರ್ಥದಿಂದಲೋ, ಅಂದರೆ ನಾನು ಮಾಡುವ ದಾನವನ್ನು ದೇವರು ಮೆಚ್ಚಲೆಂದು ನೀಡಿದರೂ ತೊಂದರೆಯೇನಿಲ್ಲ ಆತ್ಮತೃಪ್ತಿಗಾಗಿ ದಾನ ಪ್ರಕ್ರಿಯೆ ನಡೆದರೂ ಸರಿ ಆದರೆ, ಕೊಡುವ ದಾನವು ಉನ್ನತ ಮೌಲ್ಯವನ್ನು ಆಧರಿಸಿದ್ದರೆ ಒಳ್ಳೆಯದು.
ಕೋಟ್ಯಧಿಪತಿಗಳು ಸಮಾಜ ಕಲ್ಯಾಣಕ್ಕಾಗಿ ದಾನ ನೀಡುವ ಪ್ರಸಂಗಗಳನ್ನು ನಾವು ನೋಡುತ್ತಿರುತ್ತೇವೆ, ಇಂಥ ವ್ಯಕ್ತಿಗಳನ್ನು ಗುರ್ತಿಸುವ philanthropist ಎನ್ನುವ ಪದವನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸುತ್ತಿರುತ್ತೇವೆ ಲೋಕೋಪಕಾರಿ, ದಾನಿ ಅನ್ನುವುದು ಈ ಪದದ ಅರ್ಥ. ಇದು ಗ್ರೀಕ್‌ನ  'philas' ಮತ್ತು 'anthropos' ಎಂಬ ಎರಡು ಪದಗಳು ಸೇರಿ ರೂಪುಗೊಂಡಿದೆ. 'philas' ಎಂದರೆ ಪ್ರೀತಿಸುವುದು, 'anthropos' ಎಂದರೆ ಮನುಷ್ಯ ಎನ್ನುವ ಅರ್ಥವಿದೆ. ಅಂದರೆ, ಪ್ರೀತಿಯನ್ನು ಹೊಂದಿರುವ, ಇಲ್ಲವೇ ಪ್ರೇಮಮಯಿ ಎಂಬುದು ಇದರ ಒಟ್ಟು ತಾತ್ಪರ್ಯ, ನಾವೆಲ್ಲರೂ ದಾನಿಗಳಾಗಲು ಸಾಧ್ಯವಿಲ್ಲವೇ-ಏಕಾಗಬಾರದು? ಹೃದಯದ ತುಂಬಾ ಒಲವು ತುಂಬಿಕೊಂಡು ಅದನ್ನು ಹಂಚಲು ಮುಂದಾದರೆ ಖಂಡಿತ ದಾನಿಯಾಗಿ ರೂಪಾಂತರಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ದಾನ ಧರ್ಮ ಮಾಡುವಾಗ ಕೆಲವು ಅನುಮಾನಗಳು ಮೂಡುವುದುಂಟು, ಸದುದ್ದೇಶದಿಂದ ನಾವು ಸಂಪಾದಿಸಿದ ಹಣವನ್ನು ದಾನ ಮಾಡುತ್ತೇವೆ ನಿಜಕ್ಕೂ ಅದು ಅರ್ಹರಿಗೆ ಸಂದಾಯವಾಗಿದೆಯೇ? ನಮ್ಮ ಕಷ್ಟಾರ್ಜಿತವು ಯಾರೋ ಅಪಾತ್ರರಿಗೆ ಇಲ್ಲವೇ ಯಾರದೋ ಮೋಜಿಗೆ ವ್ಯಯ ಆಗುತ್ತಿದೆಯೇ ಎಂದು ಅನೇಕ ಸಲ ಅನುಮಾನ ಮೂಡುತ್ತದೆ ಎಚ್ಚರಿಕೆ ನಿಜಕ್ಕೂ ಅಗತ್ಯ ಆದರೆ ಇದನ್ನೇ ಮುಂದಿಟ್ಟುಕೊಂಡು ನಮ್ಮ ಕಲ್ಯಾಣ ಗುಣಗಳಿಗೆ ಪೂರ್ಣ ವಿರಾಮ ಹಾಕುವುದು ಸಲ್ಲದು. ದಾನ ಧರ್ಮಗಳಿಗೆ ಎಲ್ಲ ಧರ್ಮಗಳು ಪ್ರಾಧಾನ್ಯ ನೀಡಿವೆ ನಮ್ಮ ಆದಾಯದಲ್ಲಿ ಒಂದಿಷ್ಟು ಭಾಗವನ್ನು ದಾನ ಧರ್ಮಗಳಿಗೆ ತೆಗೆದಿರಿಸಬೇಕೆಂದು ಅಧ್ಯಾತ್ಮ ಪಥದಲ್ಲಿ ಸಾಗುವ ಮಂದಿಗೆ ಗುರುಗಳು ಹೇಳುತ್ತಾರೆ, ಜೀವನಶೈಲಿಯಲ್ಲಿ ದಾನವೆನ್ನುವುದು ಒಂದು ಭಾಗ ನೀವು ದುಡಿದ ಹಣದಲ್ಲಿ ಒಂದಿಷ್ಟು ಭಾಗವನ್ನು ತೆರಿಗೆ ರೂಪದಲ್ಲಿ ಸರಕಾರಕ್ಕೆ ಪಾವತಿಸಬೇಕು, ಸಾರ್ವಜನಿಕರ ಕುಂದು ಕೊರತೆ, ಆರೋಗ್ಯ, ಶಿಕ್ಷಣ ಮತ್ತಿತರ ಕಾರ್ಯಕ್ರಮಕ್ಕೆ ತೆರಿಗೆ ಹಣ ಬಳಕೆಯಾಗುತ್ತದೆ ಸಮಾಜಸೇವೆಗೆ ನಮ್ಮ ತೆರಿಗೆ ಹಣ ಬಳಕೆಯಾಗುತ್ತದೆ ಅನ್ನುವುದಾದರೆ, ಇನ್ನಷ್ಟು ದಾನ ಧರ್ಮ ಮಾಡುವ ಅಗತ್ಯವಾದರೂ ಏನಿದೆ ಎಂದು ನೀವು ಕೇಳಬಹುದು ಸರಕಾರದ ಕಾರ್ಯ ಚಟುವಟಿಕೆ, ಯೋಜನೆಗಳು ಫಲಾನುಭವಿಗಳನ್ನು ಮುಟ್ಟುವ ಬಗೆಯನ್ನು ಗಮನಿಸಿದರೆ ಪ್ರಶ್ನೆಗೆ ಉತ್ತರ ಸಿಕ್ಕಿದಂತೆ ಆಗುತ್ತದೆ.

ಸಮಾಜ ಸೇವೆಯಲ್ಲಿ ತೊಡಗಿರುವ ಎನ್‌ಜಿಒ ಒಂದಕ್ಕೆ 5,000 ರೂಪಾಯಿ ದಾನ ನೀಡುವಿರಿ ಎಂದುಕೊಳ್ಳೋಣ, ಆ ಎನ್‌ಜಿಒದ ಕರಪತ್ರದ ಮೇಲಿನ ಅಮಾಯಕ ಅನಾಥ ಮಗುವಿನ ಚಿತ್ರ ನಿಮ್ಮ ಕಣ್ಣಲ್ಲಿ ತುಂಬಿಕೊಳ್ಳುತ್ತದೆ ಕೊಟ್ಟ ಹಣ ಸಾರ್ಥಕವಾಯಿತು ಎಂಬ ಭಾವ ಮೂಡುತ್ತದೆ. ಆದರೆ, ಕೊಟ್ಟ ಹಣ ಸಮರ್ಪಕವಾಗಿ ಬಳಕೆಯಾಗುತ್ತಿದೆ ಎಂಬುದಕ್ಕೆ ಪುರಾವೆ ಏನಿದೆ? ತಾವು ಕೊಟ್ಟ ಹಣ ನೊಂದವರಿಗೆ-ದುರ್ಬಲರಿಗೆ ತಲುಪಬೇಕು ಕಷ್ಟದಲ್ಲಿರುವ ಜನರಿಗೆ ಒಂದಿಷ್ಟಾದರೂ ಅನುಕೂಲವಾಗಬೇಕು ಎಂದು ಪ್ರತಿಯೊಬ್ಬ ದಾನಿಯೂ ಬಯಸುತ್ತಾನೆ ಇಂಥ ಬಯಕೆ ಸಹಜವಾದುದು. ಆದರೆ, ನಮ್ಮಿಂದ ನೆರವು ಪಡೆದ ಜನ, ಎನ್‌ಜಿಒ ಅಥವಾ ಸರಕಾರ, ಅದರೊಳಗಿನ ಜನ ಪ್ರಾಮಾಣಿಕರು ಎನ್ನುವುದಕ್ಕೆ ಯಾವ ಪುರಾವೆಯೂ ಇಲ್ಲ ನಾವು ನೀಡಿದ ತೆರಿಗೆ ಅಥವಾ ದಾನ ರೂಪದ ಹಣವು ಫಲಾನುಭವಿಯನ್ನು ತಲುಪುವ ಹೊತ್ತಿಗೆ ಸವೆದು ಕರಗಿ ಹೋಗಿರುತ್ತದೆ ಒಂದು ನೂರು ಕೆ.ಜಿ ಆಹಾರ ಧಾನ್ಯವನ್ನು ಫಲಾನುಭವಿಗೆ ತಲುಪಿಸಲು ಹೊರಟರೆ, ಈ ನಡುವಿನ ವ್ಯವಸ್ಥೆಯೇ ಎಲ್ಲವನ್ನೂ ನುಂಗಿ ಕಡೆಗೆ ಕಟ್ಟಕಡೆಯ ಫಲಾನುಭವಿಗೆ ಖಾಲಿ ಗೋಣಿಚೀಲ ಮಾತ್ರ ಉಳಿಯುತ್ತದೆ. ಈ ಮಾತ್ರಕ್ಕೆ ದಾನ ಏಕೆ ಮಾಡಬೇಕು ಎಂದು ಕೇಳಿಕೊಂಡು ಸಿನಿಕರಾಗುವುದು ಬೇಕಿಲ್ಲ ಕೊಡುವ ಕೈ ನಮ್ಮದಾಗಲಿ. ಏಕೆಂದರೆ, ಕೊಡುವುದು ನಮ್ಮ ಜೀವಿತದ ಒಂದು ಭಾಗ ಮನುಷ್ಯ ಸಹಜ ವರ್ತನೆ. ದಿಟವಾಗಿಯೂ, ಸಮಾಜ ಸೇವೆ ಅನ್ನುವುದು ಮನೆಯಿಂದಲೇ ಆರಂಭಗೊಳ್ಳಬೇಕು ನಾವು, ಮನೆ ಮಕ್ಕಳು ಎಂದು ಯೋಚಿಸುವುದರ ಹೊರತಾಗಿ ನಮ್ಮ ಕೈಲಾಗುವ ಸೇವೆಯನ್ನು ಸಮಾಜ, ಸಮುದಾಯಕ್ಕೆ ವಿಸ್ತರಿಸಬೇಕು.

ನೀವು, ನಿಮ್ಮ ಸಮುದಾಯದಿಂದ ಇತರರ ತನಕ ಸೇವೆ ವಿಸ್ತರಣೆಗೊಳ್ಳಬೇಕ. ನಮ್ಮ ಈ ಜಗತ್ತು ಸ್ವಾರ್ಥರಹಿತ ಸೇವೆಯೆಂಬ ಕೊಂಡಿಯಿಂದಲೇ ಬೆಸೆದುಕೊಂಡಿದೆ ನಿಮಗೆ ಓದಲು ಬರುತ್ತದೆಯೇ? ಹೌದು ಅನ್ನುವುದಾದರೆ ಓದು ನಿಮಗಷ್ಟೆ ಸೀಮಿತವಾಗಬಾರದು. ಅದನ್ನು ಅಗತ್ಯ ಇರುವವರಿಗೆ ದಾಟಿಸಬೇಕು ಕುರುಡನೊಬ್ಬನ ಅಗತ್ಯಕ್ಕೆ ಬೇಕಾದದ್ದನ್ನು ಓದಿ ಹೇಳಬೇಕು ನಿಮಗೆ ಬರೆಯಲು ಬರುತ್ತದೆ ಅನ್ನುವುದಾದರೆ, ಯಾರೋ ಒಬ್ಬ ಅನಕ್ಷರಸ್ಥ ಬರೆಯಬೇಕಾದ ಪತ್ರಕ್ಕೆ, ಇಲ್ಲವೆ ತುಂಬಬೇಕಾದ ಅರ್ಜಿಗೆ ನೆರವಾಗಬೇಕು. ನಿಮಗೆ ಹಸಿವಿಲ್ಲ ಅನ್ನುವುದಾದರೆ ನಿಮ್ಮ ಆಹಾರವನ್ನು ಹಸಿದವನಿಗೆ ನೀಡಬಹುದು ನಿಮ್ಮಲ್ಲಿ ಸಂತೋಷವಿದ್ದರೆ, ಶಾಂತಿ ಕಂಡುಕೊಂಡಿದ್ದರೆ ಅದನ್ನು ದುರದೃಷ್ಟವಂತರಿಗೂ ತಲುಪಿಸಬಹುದು. ಒಟ್ಟಿನಲ್ಲಿ ನಿಮ್ಮ ಹಿತಾನುಭವ ಇತರರಿಗೂ ದಕ್ಕುವಂತೆ ನೋಡಿಕೊಳ್ಳಿ ನಮಗೆ ನಿಜಕ್ಕೂ ಏನನ್ನಾದರೂ ಕೊಡುವ ಶಕ್ತಿ ಇದ್ದೇ ಇದೆ ಅದನ್ನು ಬಳಸಿಕೊಳ್ಳಲು ಒಳಗಣ್ಣನ್ನು ತೆರೆಯಬೇಕಷ್ಟೆ ಜಗತ್ತನ್ನು ವಾಸಯೋಗ್ಯವಾಗಿ ಕಟ್ಟುವ ಜವಾಬ್ದಾರಿ ನಮ್ಮ ಮೇಲಿದೆ.

ಪ್ರತಿ ಜೀವಿ ಸಹ ತನ್ನ ಪ್ರಗತಿ ಪಥದಲ್ಲಿ ನಿಶ್ಚಯವಾಗಿ ತಪ್ಪುಗಳು ಮಾಡಬೇಕಾದ್ದೇ ಹೊಸ ಪಾಠಗಳನ್ನು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆ ಹಾಕುವುದು ತಪ್ಪಿದ್ದಲ್ಲ ಅಂತಹ ತಪ್ಪು ಹೆಜ್ಜೆಗಳು ಪಾಪಗಳು ಅಲ್ಲ ಅವು ತಪ್ಪುಗಳೂ ಅಲ್ಲ ಕ್ಷಮಿಸಲಾರದ ಅಪರಾಧಗಳೂ ಅಲ್ಲ. ತಪ್ಪದೇ ಹಾಕುವ ತಪ್ಪು ಹೆಜ್ಜೆಗಳನ್ನು ತಾವೇ ಕ್ಷಮಿಸಲಾರದ ಅಪರಾಧಗಳೆಂದು ಪರಿಗಣಿಸಿದರೆ ಹಾಗೂ ಇತರರು ತಪ್ಪದೇ ಹಾಕಬೇಕಾಗಿ ಬಂದ ತಪ್ಪು ಹೆಜ್ಜೆಗಳನ್ನು ಕ್ಷಮಿಸಲಾರದ ಅಪರಾಧಗಳೆಂದು ಭಾವಿಸಿದರೆ ಅವರಿಗೆ ಇತರರ ಸ್ಥಾನದಲ್ಲಿ ತಮ್ಮನ್ನು ಕಲ್ಪಿಸಿಕೊಂಡು ಅವರ ನೋವು-ನಲಿವು ಅರಿಯುವ ಪರಿಜ್ಞಾನ ಇಲ್ಲ ಎಂದರ್ಥ. ಆದ್ದರಿಂದ, ಕಲಿತುಕೊಳ್ಳುತ್ತಿರುವವರ ತಪ್ಪು ಹೆಜ್ಜೆಗಳನ್ನು ತಪ್ಪು ಹೆಜ್ಜೆಗಳು ಎಂದೇ ಸ್ವೀಕರಿಸಿ ಅವರ ತಪ್ಪು ಹೆಜ್ಜೆಗಳನ್ನು ತಪ್ಪುಗಳಾಗಿ ನೋಡದೆ ಅವು ಅವರವರ ವಿದ್ಯಾಭ್ಯಾಸಗಳಲ್ಲಿ ಕಲಿತುಕೊಳ್ಳಲಿಕ್ಕಾಗಿ ಮಾಡುವ ಚಿಕ್ಕಚಿಕ್ಕ ಲೋಪ ಗಳಿಂದ ಕೂಡಿದ ಪ್ರಯತ್ನಗಳೇ ಎಂದು ಅವುಗಳನ್ನು ಗುರುತಿಸುತ್ತಾ ಆ ರೀತಿಯಾಗಿ ಆ ಅರಿವಿನಲ್ಲಿರುವುದೇ ಪರಿಜ್ಞಾನ. ಅದರ ಹೊರತು, ಆ ಯಾವುದೇ ವಿದ್ಯೆಗಳು ಕಲಿತುಕೊಳ್ಳುತ್ತಿರುವಾಗ ಏನಾದರೂ ಅಪಸ್ವರವಾದರೆ ತಕ್ಷಣ ಅವರ ಮೇಲೆ ಬಿದ್ದು, ನೀನು ಅಪಸ್ವರ ನುಡಿದಿದ್ದೀಯ, ನೀನು ಕೆಲಸಕ್ಕೆ ಬಾರದವನು ಎಂದು ತಪಿತಸ್ಥನನ್ನಾಗಿ ನಿರ್ಣಯಿಸುವುದು ಪರಿಜ್ಞಾನ ಇಲ್ಲದವನ ಸ್ಥಿತಿ. ಒಂದು ವೇಳೆ ಅಪರಾಧ ಮಾಡಿದರೂ, ಅದನ್ನೇ ಸದಾ ನೆನೆಸಿಕೊಂಡಿರುವುದು ಎಂಬುವುದು ಜ್ಞಾನಿಯ ಸ್ಥಿತಿಯಲ್ಲ. ಮಾಡಿದ ಅಪರಾಧವನ್ನು ಆಗಿಂದಾಗ್ಗೆ ಮರೆಯಬೇಕು.\ ಪದೇ ಪದೆ ನೆನೆಸಿಕೊಳ್ಳುತ್ತಿದ್ದರೆ ಸಮಯ ವ್ಯರ್ಥ. ಆದ್ದರಿಂದ, ನಮ್ಮ ತಪ್ಪುಗಳನ್ನು, ನಮ್ಮ ಪಾಪಗಳನ್ನು ನೆನೆದು ಅಳುತ್ತಾ ನಿರಂತರ ಮತ್ತೆ ಮತ್ತೆ ಕೆದಕಿಕೊಳ್ಳುದಾಗಲೀ; ಇತರರ ತಪ್ಪುಗಳನ್ನು, ಇತರರ ಪಾಪಗಳನ್ನು ಸದಾ ನೆನೆಯುತ್ತಿರುವುದಾಗಲೀ, ಇದೆಲ್ಲಾ ಸ್ವಲ್ಪವೂ ಪರಿಜ್ಞಾನ ಅನಿಸಿಕೊಳ್ಳುವುದಿಲ್ಲ. ತಪ್ಪುಗಳನ್ನು ಮಾಡುವವರ ಹತ್ತಿರ ಅವರು ಯಾವ ರೀತಿ ತಪ್ಪುಗಳನ್ನು ಮಾಡಿದ್ದಾರೆಂದು ಪರೀಕ್ಷಿಸಿ ಆ ತಪ್ಪುಗಳನ್ನು ನಮ್ಮ ಜೀವನದಲ್ಲಿ ಮಾಡದೆ ಇರುವಂತೆ ಪಾಠ ಕಲಿತುಕೊಳ್ಳಲು ಸಾಧ್ಯವೇ ಎಂದು ಯೋಚಿಸುವುದು ಮತ್ತು ಆ ನಿಟ್ಟಿನಲ್ಲಿ ಮುಂದುವರಿಯುವುದೇ ಜ್ಞಾನಿಯ ಲಕ್ಷಣ. ಹಾಗೆಯೇ, ಒಳ್ಳೇ ಕೆಲಸ ಮಾಡುವವರನ್ನು ಪರೀಕ್ಷಿಸಿ, ಅವರು ಯಾವ ರೀತಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೋ ತಿಳಿದುಕೊಂಡು ಆ ರೀತಿಯಲ್ಲಿ ನಾವೂ ಒಳ್ಳೆಯವರಾಗಿರಬೇಕು ಎಂದು ನಿರ್ಣಯಿಸಬೇಕು ಅಂದರೆ, ಜ್ಞಾನಕ್ಕಾಗಿ ಹಂಬಲಿಸುವವನು ಎಲ್ಲರಿಂದ ಕಲಿತುಕೊಳ್ಳಬಲ್ಲ. ಪಾಪಗಳನ್ನು ಮಾಡಿದವ ರಿಂದ, ಪುಣ್ಯಗಳನ್ನು ಮಾಡಿದವರಿಂದ ಕಲಿತುಕೊಳ್ಳುತ್ತಲೇ ಇರಬಲ್ಲ. ಪಾಪ ಗಳನ್ನು ಮಾಡುವವರಿಂದ ಪಾಪಗಳು ಹೇಗೆ ಮಾಡಬಾರದೆಂದು ತಿಳಿದು ಕೊಳ್ಳುತ್ತಾನೆ. ಹಾಗೆಯೇ, ಪುಣ್ಯದ ಕೆಲಸಗಳನ್ನು ಮಾಡುವವರಿಂದ ಯಾವ ರೀತಿಯಲ್ಲಿ ಪುಣ್ಯ ಕಾರ್ಯಕ್ರಮಗಳನ್ನು ಕೈ ಹಿಡಿಯಬೇಕೆಂದು ತಿಳಿದು ಕೊಳ್ಳುತ್ತಾನೆ. ಈ ರೀತಿ, ಎಲ್ಲರ ಹತ್ತಿರದಿಂದ ಅದ್ಭುತವಾದ ಪಾಠಗಳನ್ನು ಅವಿಶ್ರಾಂತವಾಗಿ ಕಲಿತುಕೊಳ್ಳುತ್ತಾ ಇರುವವನೇ ಜ್ಞಾನಿಯಾಗುತ್ತಾನೆ. ಯಾರ ಹತ್ತಿರದಿಂದಲೂ ಏನೂ ಕಲಿತುಕೊಳ್ಳದೆ ಇರುವವನು ಕತ್ತಲೆಯ ಬದುಕು ಬದುಕುವವನು, ಸ್ವಲ್ಪವೂ ಪ್ರಕಾಶ ಇಲ್ಲದವನು, ಸ್ವಲ್ಪವೂ ಪರಿಜ್ಞಾನ ಇಲ್ಲದವನಾಗುತ್ತಾನೆ.

೨೦೧೪ ಮೇ ತಿಂಗಳ 19 ನೆ ತಾರೀಖು ನನ್ನ ಮದುವೆಯಾಗಿ ಇಂದಿಗೆ ಸರಿಯಾಗಿ ೮ ವರ್ಷಗಳು ತುಂಬಿದ ಸಂದರ್ಭದಲ್ಲಿ ನಮ್ಮ ವಿವಾಹ ವಾರ್ಷಿಕೋತ್ಸವವನ್ನು ಸಂತೋಷ, ಸಂಭ್ರಮ ಮತ್ತು ಪ್ರೀತಿಯೊಂದಿಗೆ ಸ್ವಾಗತಿಸಿದ್ದೇವೆ, ಆದರೆ ವಾರ್ಷಿಕೋತ್ಸವದ ಸಂದರ್ಬದಲ್ಲಿ ಮಾಡುವ ಸಂಕಲ್ಪಗಳ ಕತೆ ಏನು? ಇದು ಒಂದು ವರ್ಷದ ವಿಷಯವಲ್ಲ ಪ್ರತಿವರ್ಷವೂ ಇದ್ದದ್ದೇ ಹೊಸ ಬಾಳು ಹೊಸ ಜೀವನ ಹಾಗೇಹೀಗೆಂದು ನಾನಾ ಸಂಕಲ್ಪಗಳನ್ನು ಮಾಡುತ್ತೇವೆ ಮುರಿಯುತ್ತೇವೆ. ನನಗಂತೂ ಈ ಬಗ್ಗೆ ಅಷ್ಟಾಗಿ ಆಸಕ್ತಿಯಿಲ್ಲ ಆದರೆ ಈ ವರ್ಷ ನಾನೂ ಒಂದಷ್ಟು ಸಂಕಲ್ಪಗಳನ್ನು ಮಾಡಬೇಕೆಂದು ನನ್ನ ಪತ್ನಿ ಇಷ್ಟಪಟ್ಟಳು ಆ ಮೂಲಕ ನನ್ನಜೀವನ ಶೈಲಿ ಬದಲಿಸಬೇಕು ಎನ್ನುವುದು ಅವಳ ಇಚ್ಛೆಯಾಗಿತ್ತು ನನ್ನ ಅಭ್ಯುದಯ ಮತ್ತು ವಿಕಾಸಕ್ಕೆ ಪೂರಕವಾಗುವಂಥ ಕೆಲವು ಸಂಕಲ್ಪಗಳನ್ನು ಈ ಸಮಯದಲ್ಲಿ ನಾನು ಯೋಚಿಸಿದೆ ಅವುಗಳನ್ನು ಪಟ್ಟಿ ಸಹ ಮಾಡಿದೆ. ಏಕೆಂದರೆ, ಇವು ನನಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಹೊಂದುವಂಥವು ಮತ್ತು ವ್ಯಕ್ತಿ ವಿಕಾಸಕ್ಕೆ ಪೂರಕವಾಗಿರುವಂಥವು ಎಂಬುದು ನನ್ನ ಅಭಿಪ್ರಾಯ. ಸಂಕಲ್ಪಗಳು ಎಂದಿಗೂ ಉತ್ತಮ ನಡತೆಗೆ ಪೂರಕವಾಗಿರಬೇಕು ಇವು ನಮ್ಮ ವ್ಯಕ್ತಿತ್ವ, ನಡವಳಿಕೆ, ಹವ್ಯಾಸಗಳ ಮೇಲೆ ಪೋಕಸ್ ಆಗಬೇಕು. ನನ್ನ ಸಂಕಲ್ಪಗಳು ಹೀಗಿವೆ;

ಮುಂದೂಡಿಕೆ ನಿಲ್ಲಿಸಿ
ಇದು ಸಹಜವಾಗಿ ಎಲ್ಲರಲ್ಲೂ ಕಾಣುವಂಥದ್ದು, ಇದಕ್ಕೆ ನಾನೂ ಹೊರತಲ್ಲ ಈ ತನಕ ನನ್ನ ಸಂಕಲ್ಪಗಳನ್ನು ಮುಂದೂಡುತ್ತಲೇ ಬಂದಿದ್ದೇನೆ ಹೀಗೆ ಮಾಡುವುದರಿಂದ ಮಾಡುವ ಕೆಲಸಕ್ಕೆ ನ್ಯಾಯ ಕೊಡಲು ಸಾಧ್ಯವಾಗದು ಹೀಗಾಗಿ ಮುಂದೂಡುವ ಸ್ವಭಾವವನ್ನು ಬದಲಿಸಿಕೊಳ್ಳಬೇಕು.
ದೇಹದ ಮಾತು ಆಲಿಸಿ
ದೇಹವು ನಮ್ಮೊಂದಿಗೆ ಮಾತನಾಡುತ್ತದೆ ಅದಕ್ಕೆ ತೊಂದರೆಯಾದಾಗ ಸೂಚನೆಗಳನ್ನೂ ನೀಡುತ್ತದೆ ಅದರ ಮಾತಿಗೆ ನಾವು ಸ್ಪಂದಿಸಬೇಕು ಆರೋಗ್ಯವೇ ಭಾಗ್ಯವಾಗಿದ್ದು ನಮಗೆ ಚೈತನ್ಯಶೀಲ ದೇಹದ ಅಗತ್ಯವಿದೆ. ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕವಾಗಿ ದೃಢತೆ ಸಾಧಿಸಲು ಆರೋಗ್ಯವಂತ ದೇಹ ಅತ್ಯಗತ್ಯ. ಹಿರಿಯರಿಗೆ ಗೌರವ: ನಮಗೊಂದು ಅಸ್ತಿತ್ವ ನೀಡಿದ ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು ಆ ಭಾವವನ್ನು ಪ್ರದರ್ಶಿಸಿ ಹಿರಿಯ ಜೀವಿಗಳ ಮನಸ್ಸಿಗೆ ಮುದ ನೀಡಬೇಕು ನಾನಂತೂ ಈ ಕಾರ್ಯಕ್ಕೆ ಇಂದಿನಿಂದಲೇ ಚಾಲನೆ ನೀಡಬೇಕು ಎಂದು ನಿರ್ಧರಿಸಿದ್ದೇನೆ.
ಧನ್ಯವಾದ ಹೇಳಿ
ಉಪಕಾರ ಸ್ಮರಣೆ ಎನ್ನುವುದು ಸದ್ಗುಣಗಳಲ್ಲಿ ಒಂದು ನೀವು ಯಾರಿಂದ ಏನೇ ಪಡೆದರೂ ಧನ್ಯವಾದ ಹೇಳುವುದನ್ನು ಮರೆಯದಿರಿ ಹೀಗೆ ಮಾಡುವುದರಿಂದ ಸಕಾರಾತ್ಮಕ ಮನಸ್ಥಿತಿ ನಮ್ಮದಾಗಿ ಇತರರಿಗೂ ನಮ್ಮ ಬಗ್ಗೆ ಗೌರವ ಮೂಡುತ್ತದೆ ಎಲ್ಲರನ್ನೂ ಆಕರ್ಷಿಸುವ ಶಕ್ತಿ ಈ ಸದ್ಗುಣಕ್ಕಿದೆ ಇದರಿಂದ ಶಾಂತಿ, ಸಂತೋಷ, ಬಾಂಧವ್ಯಗಳು ವೃದ್ಧಿಸುತ್ತವೆ.
ಪ್ಲೀಸ್ ಮತ್ತು ಥ್ಯಾಂಕ್ ಯೂ
ಕಳೆದ ತಿಂಗಳು ನಾನು ನನ್ನ ಕುಟುಂಬ ಸಮೇತ ತಿರುಪತಿಗೆ ಪ್ರಯಾಣಿಸುತ್ತಿದ್ದೆ ಮಾರ್ಗ ಮಧ್ಯೆ ಕಾಪಿಗೆಂದು ಗಾಡಿ ನಿಲ್ಲಿಸಿದಾಗ ಮಕ್ಕಳು ಬಿಸ್ಕತ್ ಕೇಳಿದರು ನನ್ನ ಪತ್ನಿ ಕಾಪಿ ತೆಗೆದುಕೊಂಡು ಬರಲು ಹೇಳಿ ಎಲ್ಲರೂ ವಾಹನದ ಬಳಿಯೇ ಕುಳಿತಿದ್ದರು ನಾನು ಅಂಗಡಿ ಮುಂದೆ ನಿಂತು, ''ಎರಡು ಬಿಸ್ಕತ್ ಪಾಕೆಟ್ ಮತ್ತು ೪ ಕಪ್ ಕಾಫಿ'' ಎಂದೆ. ನನ್ನ ಕೋರಿಕೆ ಸ್ವಲ್ಪ ಒರಟಾಗಿತ್ತು. ಕೌಂಟರ್‌ನಲ್ಲಿ ಕೂತಿದ್ದವನು ಅಸಹನೆಯಿಂದ ನೋಡುತ್ತಾ, ''ಮಾಂತ್ರಿಕ ಪದವನ್ನು ಬಳಸಿ,'' ಎಂದ. ನನಗೆ ಒಗಟಿನಂತೆ ಎಲ್ಲವೂ ಕಾಣಿಸಿತು. ನನ್ನ ಗೊಂದಲಮಯ ಮುಖಭಾವ ನೋಡಿದ ಆತ, ''ಪ್ಲೀಸ್ ಅನ್ನುವುದೇ ಮಾಂತ್ರಿಕ ಪದ,'' ಎಂದುತ್ತರಿಸಿ ನಕ್ಕ. ಹೌದು, ಈ ಪದಗಳು ನಮ್ಮ ಮನೋಭಾವವನ್ನು ಬಿಂಬಿಸುತ್ತವೆ.
ಅಂದಹಾಗೇ, ಇವು ವಾರ್ಷಿಕೋತ್ಸವದ ಸಂಕಲ್ಪಗಳು ಮಾತ್ರವಲ್ಲ. ಉನ್ನತ ವ್ಯಕ್ತಿತ್ವ ಹೊಂದುವುದಕ್ಕೆ ಇವು ಬುನಾದಿ ಎಂಬುದು ನನ್ನ ಭಾವನೆ.

Thursday, April 24, 2014

ಗುರುವಿನ ಗುಲಾಮನಾಗುವತನಕ ------------------?



ಜ್ಞಾನೋದಯಕ್ಕೆ ಸಾವಿರಾರು ಮಾರ್ಗಗಳಿವೆ ಎಂದು ನಂಬುವವರು ನಾವು, ಹೌದು ಇದು ಸ್ವಲ್ಪ ಸಂಕೀರ್ಣವೇ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾದನೇ ಪ್ರತಿಯೊಬ್ಬರಿಗೂ ಅವರದ್ದೇ ಆದ ಶಕ್ತಿಯಿದೆ ಬುದ್ಧ ಅರಮನೆ ತೊರೆದದ್ದು ದೊಡ್ಡದಲ್ಲ ಆದರೆ ಜ್ಞಾನವನ್ನು ಸಾಕ್ಷಾತ್ಕರಿಸಿಕೊಂಡದ್ದು ಆತನ ದೊಡ್ಡತನ ಬಳಿಕ ಆತ ಅರಮನೆಗೆ ಮರಳಬಹುದಿತ್ತು, ಆದರೆ ಅರಮನೆಗೆ ಹೋಗದಿರಲು. ನಿರ್ಧರಿಸಿದ ಅರಿವಿನ ಹಾದಿಯಲ್ಲಿ ಮೂರು ಹಂತಗಳಿವೆ ಶ್ರವಣ, ಮನನ, ಮತ್ತು ಅನುಷ್ಠಾನ, ಒಂದು ಹಂತದಿಂದ ಮತ್ತೊಂದು ಹಂತಕ್ಕೇರುವ ಕ್ರಮದಲ್ಲಿ ವಯುಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ನಾವು ಸಾಗುವ ದಾರಿಯನ್ನು ಕಂಡುಕೊಳ್ಳಲು ಗುರುಗಳ ಸಹಾಯ, ಸಹಕಾರ, ಮತ್ತು ಪಾತ್ರ ಮಹತ್ತರವಾದದ್ದು.
ಮಹಾಜ್ಞಾನಿಗಳಾದ ಭಾರತದ ಋಷಿಮುನಿಗಳು (ಅಂದಿನ ವಿಜ್ಞಾನಿಗಳು) ಬಹಳ ಹಿಂದೆಯೇ ಶ್ರೇಷ್ಠತೆಯನ್ನು ಗಳಿಸುವ ಸೂತ್ರಗಳನ್ನು ಅನ್ವೇಷಿಸಿದ್ದರು ಕ್ರಿಯಾತ್ಮಕ ಮತ್ತು ಅಥವಾ ಬೌಗೋಳಿಕ ಲೋಕದಲ್ಲಿ ಜಯ ಪಡೆಯುವುದಸ್ಟೇ ಇದರ ಮುಖ್ಯ ಉದ್ದೇಶವಾಗಿರಲಿಲ್ಲ ಬದಲಿಗೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು ಗುರಿಯಾಗಿತ್ತು ಯೋಗ್ಯತಾಶಾಲಿಯಾಗಿ ಹೊರಹೊಮ್ಮುವುದಕ್ಕೆ ಇದು ಸಾರಥಿಯಾಗುತ್ತಿತ್ತು, ಈ ಶ್ರೇಷ್ಠತೆ ಎನ್ನುವುದು ಯಾರೋ ಕೆಲವರ ಏಕಸ್ವಾಮ್ಯತ್ವಕ್ಕೆ ಒಳ ಪಟ್ಟಿದ್ದಲ್ಲ ಅತ್ಯಂತ ಹೆಚ್ಚು ಬುದ್ಧಿವಂತರು ಮತ್ತು ಹುಟ್ಟು ಪ್ರತಿಭಾವಂತರಿಂದ ಹಿಡಿದು ಕನಿಷ್ಠ ಯೋಗ್ಯತೆ ಇರುವವರೆಲ್ಲರೂ ಈ ಶ್ರೇಷ್ಠತೆಯನ್ನು ಹೊಂದಬಲ್ಲವರಾಗಿದ್ದಾರೆ.
ಹಿಂದೆ, ಮುಂದಿನ ಹಂತಕ್ಕೆ ಹೋಗಲು ಅರ್ಹತಾ ಪರೀಕ್ಷೆಗಳು, ಅಂಕಗಳಿಂದ ಶ್ರೇಣಿ ನೀಡುವ ಪದ್ಧತಿ ಇರಲಿಲ್ಲ ಹೀಗಾಗಿ ಇಂದಿನಂತೆ ಅಯ್ಯೋ  ನನಗೆ ಕನಿಷ್ಠ ಅಂಕಗಳೂ ಬರಲಿಲ್ಲವಲ್ಲ ಎಂದು ಕೊರಗುವ ಸನ್ನಿವೇಶವಿರಲಿಲ್ಲ ಆದರೆ ಶ್ರೇಷ್ಠತೆಯನ್ನು ಗಳಿಸುವ ಮಾರ್ಗ ಬಹಳ ಸರಳವಾಗಿತ್ತು.
ನಮ್ಮಲ್ಲಿ ಬಹುತೇಕರು ಒಳ್ಳೆಯ ಗುರುವಿಗಾಗಿ ಹುಡುಕಾಡುತ್ತಾರೆ ಆದರೆ ಒಂದು ಕ್ಷಣವೂ ನಾನೊಬ್ಬ ಒಳ್ಳೆಯ ವಿದ್ಯಾರ್ಥಿಯೇ ಎನ್ನುವ ಪ್ರಶ್ನೆಯನ್ನು ಎಂದೂ ಕೇಳಿಕೊಳ್ಳುವುದಿಲ್ಲ ಯಾರು ಸರಿಯಾದ ವಿದ್ಯಾರ್ಥಿಯಲ್ಲವೋ ಅಂಥವರು ನಿಜಕ್ಕೂ ಸರಿಯಾದ ಗುರುವಿನಿಂದ ವಿದ್ಯೆ ಕಲಿಯಲು ಹೇಗೆ ಸಾಧ್ಯವಾದೀತು? ಹೀಗಾಗಿ ನಮ್ಮಲ್ಲಿ ನಾವು ಒಳ್ಳೆಯ ವಿದ್ಯಾರ್ಥಿಯನ್ನು ಕಂಡುಕೊಳ್ಳಬೇಕು ಮತ್ತು ರೂಪಿಸಿಕೊಳ್ಳಬೇಕು.
ಒಮ್ಮೆ ಗೊಂದಲ ಹೊಂದಿದ್ದ ವಿದ್ಯಾರ್ಥಿಯೊಬ್ಬ ಅಧ್ಯಾತ್ಮಿಕ ಅಭ್ಯಾಸಗಳಿಂದ ಆಗುವ ಉಪಯೋಗವಾದರೂ ಏನು? ಎಂದು ಗುರುವೊಬ್ಬರನ್ನು ಪ್ರಶ್ನಿಸಿದ. ಅಧ್ಯಾತ್ಮಿಕ ಸಾಧನೆಯಿಂದಾಗಿ ಯಾವಾಗ ಸೂರ್ಯೋದಯ ಮತ್ತು ಸೂರ್ಯಾಸ್ತವಾಗುತ್ತದೆ ಎಂಬ ಅರಿವು ನಿನ್ನಲ್ಲಿ ಮೂಡುತ್ತದೆ ಎಂದು ಗುರುಗಳು ಮಾರ್ಮಿಕವಾಗಿ ಉತ್ತರಿಸಿದರು.
 ಹೌದು, ಆಂತರಿಕ ಅರಿವು ಎನ್ನುವುದು ನಮ್ಮ ಬದುಕಿನ ಗುಣಮಟ್ಟವೇ ಆಗಿದೆ ಉತ್ತಮ ವಿದ್ಯಾರ್ಥಿಯಾಗುವುದು ಈ ನಿಟ್ಟಿನಲ್ಲಿ ಹೆಜ್ಜೆ ಹಾಕುವುದೆಂದರೆ ಬುದ್ಧಿವಂತರಾಗಲು ಅಥವಾ ಗುಣಮಟ್ಟದ ಜೀವನದ ಅನ್ವೇಷಣೆಯ ಶೋಧದ ಮೆಟ್ಟಿಲೇರುವುದೆಂದೆ ಅರ್ಥ.
ವಿದ್ಯೆಯನ್ನು ಕಲಿಯಲು ಯೋಗ್ಯ ಆಚಾರ್ಯರು ಅನಿವಾರ್ಯ ಎಂಬುದು ಸಾಮಾನ್ಯ ನಂಬಿಕೆ ಆದರೆ ಏಕಲವ್ಯನಿಗೆ ಇದು ದೊರೆಯಲಿಲ್ಲ ಧನುರ್ವಿದ್ಯೆಯಲ್ಲಿ ಮೇಧಾವಿಯಾದ ದ್ರೋಣಾಚಾರ್ಯರು ನಿಶಾದ ಜಾತಿಗೆ ಸೇರಿದ ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲಿಲ್ಲ ಆಗ ಅವನು ದ್ರೋಣರ ಪ್ರತಿಮೆಯನ್ನೇ ಗುರುವೆಂದು ಭಾವಿಸಿ ಒಬ್ಬನೇ ಅಭ್ಯಾಸ ಮಾಡಿ ಅರ್ಜುನನನ್ನೂ ಧನುರ್ವಿದ್ಯೆಯಲ್ಲಿ ಮೀರಿಸಿದ.
ದೇಹಬಲದ ದೃಷ್ಟಿಯಿಂದ ನೋಡಿದರೆ, ಎಂಟು ವಿಕಲತೆಗಳನ್ನು ಹೊಂದಿದ್ದ ಋಷಿ ಅಷ್ಟಾವಕ್ರರು ಪೂರ್ಣಜ್ಞಾನಿ. ಅವರ ತಂದೆಯನ್ನು ವಂದಿನ್ ಎಂಬ ಪಂಡಿತನು ಚರ್ಚೆಯಲ್ಲಿ ಸೋಲಿಸಿ ಸಾಗರದಲ್ಲಿ ಮುಳುಗಿಸಿದ್ದ. 12 ವರ್ಷಗಳಾದ ಅಷ್ಟಾವಕ್ರರಿಗೆ ವಿಷಯ ತಿಳಿದ ಕೂಡಲೆ ವಂದಿನ್‌ನನ್ನು ವಾಗ್ವಾದದಲ್ಲಿ ಸೋಲಿಸಿ ತಮ್ಮ ತಂದೆಯನ್ನು ವರುಣಲೋಕದಿಂದ ಹಿಂದಕ್ಕೆ ಕರೆತಂದರು ಇವರು ಜನಕ ಮಹಾರಾಜರಿಗೆ ಬೋಧಿಸಿದ ಅಷ್ಟಾವಕ್ರ ಗೀತೆಯು ಜಗಜ್ಜ್ಯೋತಿಯಾಗಿದೆ.
ಕೇರಳದ ಜನಪ್ರಿಯ ಭರತನಾಟ್ಯ ನರ್ತಕಿಯಾದ ಸುಧಾ ಚಂದ್ರನ್, 16 ವರ್ಷಗಳಾಗಿದ್ದಾಗ ಅಪಘಾತದಲ್ಲಿ ಒಂದು ಕಾಲನ್ನೇ ಕಳೆದುಕೊಂಡರು. ಎದೆಗುಂದದೆ, ಕೃತಕ ಕಾಲನ್ನು ಧರಿಸಿ ದೃಢ ನಿರ್ಧಾರದಿಂದ ತಮ್ಮ ನಾಟ್ಯದ ನೈಪುಣ್ಯತೆಯನ್ನು ಮರಳಿ ಪಡೆದರು. ಜತೆಗೆ ತಮ್ಮ ಜೀವನದ ಕಥೆಯನ್ನೇ ನಿರೂಪಿಸುತ್ತಿದ್ದ ಮಯೂರಿ ಎಂಬ ತೆಲುಗು ಚಲನಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು ದೂರದರ್ಶನದ ಸೀರಿಯಲ್ ಮತ್ತು ಚಲನಚಿತ್ರಗಳಲ್ಲಿ ಈಗಲೂ ನಟಿಸುತ್ತಿದ್ದಾರೆ.
ಬ್ರಿಟಿಶ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಖಗೋಳ ಭೌತಶಾಸ್ತ್ರದಲ್ಲಿ (ಆಸ್ಟ್ರೋ ಫಿಸಿಕ್ಸ್) ಅಪಾರ ಕೀರ್ತಿಯನ್ನು ಗಳಿಸಿದ್ದಾರೆ. ಅವರ 'ಎ ಬ್ರೀಫ್ ಹಿಸ್ಟರಿ ಆಫ್ ಟೈಮ್' ಎಂಬ ಪುಸ್ತಕ ಪ್ರಪಂಚಾದ್ಯಂತ ಹೆಸರುವಾಸಿಯಾಗಿದೆ. ಇವರಿಗೆ 21 ವರ್ಷಗಳಾಗಿದ್ದಾಗಲೇ ಎಎಲ್‌ಎಸ್ ಎಂಬ ವಾಸಿಯಾಗದ ನರರೋಗ ಬಂದಿತ್ತು 50 ವರ್ಷಗಳಿಂದ ಇವರು ವೀಲ್ ಚೇರಿನಲ್ಲೇ ಚಲಿಸುತ್ತಾ ಮಾತನಾಡುವುದಕ್ಕೂ ಒಂದು ಯಂತ್ರವನ್ನು ಬಳಸುತ್ತಾ ಇದ್ದರುಇಂಥ ಕಠಿಣ ಸಂದರ್ಭಗಳಲ್ಲೂ ಹಾಕಿಂಗ್ ವಿಜ್ಞಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಇಪ್ಪತ್ತನೆ ಶತಮಾನದಲ್ಲಿದ್ದ ಅಮೆರಿಕದ ಹೆಲೆನ್ ಕೆಲ್ಲರ್ ಅವರಿಗೆ ಕಣ್ಣೂ ಕಾಣುತ್ತಿರಲಿಲ್ಲ, ಕಿವಿಯೂ ಕೇಳುತ್ತಿರಲಿಲ್ಲ. ಹೀಗಿದ್ದಾಗ ಭಾಷೆಯನ್ನು ಅರಿತು ಮಾತನಾಡುವುದು ಹೇಗೆ? ಪ್ರತಿಭೆಯನ್ನು ವ್ಯಕ್ತಪಡಿಸುವುದು ಹೇಗೆ? ಇಷ್ಟೊಂದು ಇತಿಮಿತಿಗಳಿದ್ದರೂ ಹೆಲೆನ್ ಖ್ಯಾತ ಲೇಖಕಿ, ವಾಗ್ಮಿ, ರಾಜಕೀಯ ಕ್ರಾಂತಿಕಾರಿ ಮತ್ತು ಸಮಾಜ ಸೇವಕಿಯಾದರು.
ಹೀಗೆ ಎಲ್ಲ ಅಡೆತಡೆಗಳನ್ನೂ ಎದುರಿಸಿ ಜಗತ್ತಿಗೆ ತಮ್ಮ ಜ್ಞಾನ ಮತ್ತು ಕಲೆಯನ್ನು ಧಾರೆ ಎರೆದ ಮೇಧಾವಿಗಳ ಪಟ್ಟಿಗೆ ಕೊನೆಯೇ ಇಲ್ಲ. ಇವರ ಸವಾಲು ಮತ್ತು ಕ್ಷೇತ್ರಗಳು ಭಿನ್ನವಾದರೂ ಇವರಿಗೆ ಯಶಸ್ಸನ್ನು ತಂದ ಗುಣ ಒಂದೇ, ತೀವ್ರವಾದ ಇಚ್ಛಾಶಕ್ತಿ.
ಗೀತೆಯಲಿ ಶ್ರೀ ಕೃಷ್ಣ ಈ ಸಮಸ್ಯೆಯನ್ನು ಉದ್ದೇಶಿಸಿ ಹೀಗೆ ಹೇಳಿದ್ದಾನೆ: 'ಕರ್ಮಫಲವನ್ನು ಆಶ್ರಯಿಸದೆ, ಮಾಡಬೇಕಾದ ಕರ್ಮವನ್ನು ಯಾವನು ಮಾಡುತ್ತಾರೋ ಅವನೇ ಸನ್ಯಾಸಿ ಮತ್ತು ಯೋಗಿ. ಅಗ್ನಿಯಿಲ್ಲದವನು ಮಾತ್ರ ಸನ್ಯಾಸಿಯೆಂದೂ, ಕ್ರಿಯಾರಹಿತನಾಗಿರುವವನು ಮಾತ್ರ ಯೋಗಿಯೆಂದೂ ತಿಳಿಯಬಾರದು.' ಕ್ರಿಯೆಯು ನಮ್ಮ ನಿಯಂತ್ರಣದಲ್ಲಿ ಇರುತ್ತದೆ. ಪ್ರತಿಫಲ ಎನ್ನುವುದು ನಮ್ಮ ಪ್ರಭಾವವನ್ನೂ ಮೀರಿ ಹಲವು ಸಂಗತಿಗಳನ್ನು ಅವಲಂಬಿಸಿರುತ್ತದೆ. ಕರ್ಮಫಲವನ್ನು ಆಶ್ರಯಿಸುವುದು ನಮ್ಮನ್ನು ಈ ಪ್ರಪಂಚದಲ್ಲಿ ಗುಲಾಮರನ್ನಾಗಿಸುತ್ತದೆ. ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸುವುದು ಅಥವಾ ಒಲಂಪಿಕ್ಸನಲ್ಲಿ ಬಂಗಾರದ ಪದಕವನ್ನು ಪಡೆಯುವುದು ನಿಮ್ಮ ಹತೋಟಿಯಲ್ಲಿರುವುದಿಲ್ಲ. ಆದರೆ, ನಿಮ್ಮ ಜ್ಞಾನವನ್ನಾಗಲಿ, ನಿಮ್ಮಲ್ಲಿರುವ ಅದ್ಭುತ ಕ್ರೀಡಾ ಸಾಮರ್ಥ್ಯವನ್ನಾಗಲಿ ಯಾರೂ ಕಿತ್ತುಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ, ಇದರಲ್ಲಿ ತೃಪ್ತಿಯನ್ನು ಕಾಣಲು ಪ್ರಯತ್ನಿಸಿ. ಯಾವುದೇ ಕಾರ್ಯವನ್ನು ಮಾಡುವಾಗ ಆ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆ ಕಾರ್ಯವನ್ನು ಮಾಡುವುದರ ಕಡೆ ಗಮನ ಕೇಂದ್ರೀಕರಿಸಿ. ಆ ಕಾರ್ಯ ಮಾಡುವಾಗ ಸಿಗುವ ಸಂತೋಷವನ್ನು ಅನುಭವಿಸಿ ಅರ್ಹತೆಯನ್ನು ಗಳಿಸಿಕೊಳ್ಳಿ ಆಗ ನೋಡಿ ಪ್ರತಿಫಲವು ನಿಮ್ಮತ್ತ ಹೇಗೆ ಬರುತ್ತದೆಂದು.
ನಮ್ಮಲ್ಲಿ ಬಹುಮಂದಿ ಯಶಸ್ಸನ್ನು ಬಯಸುತ್ತೇವೆ, ಕೀರ್ತಿಯನ್ನು ಅರಸುತ್ತೇವೆ, ಮೆಚ್ಚುಗೆಯನ್ನು ಆಶಿಸುತ್ತೇವೆ. ಆದರೆ ಅದನ್ನು ಗಳಿಸಲು ಬೇಕಾದ ಇಚ್ಛಾಶಕ್ತಿ ಎಲ್ಲರಲ್ಲೂ ಇರುವುದಿಲ್ಲ. ಯಶಸ್ಸನ್ನು ಪಡೆಯಲು ದೈಹಿಕ ಶಕ್ತಿ, ಪ್ರತಿಭೆ ಮತ್ತು ಸೂಕ್ತ ಸಂದರ್ಭಗಳೂ ಬೇಡವೇ? ಕೇವಲ ಇಚ್ಛಾಶಕ್ತಿಗೇ ಇಷ್ಟೊಂದು ಪ್ರಾಮುಖ್ಯತೆಯನ್ನು ಏಕೆ ನೀಡಬೇಕು?
ನಿಜ ಹೇಳಬೇಕೆಂದರೆ, ನಾವೆಲ್ಲರೂ ಸಮಸ್ಯೆ ಮತ್ತು ಸವಾಲುಗಳಿಗೆ ಜಾದುವಿನಂಥ ಪರಿಹಾರಗಳನ್ನು ನಿರೀಕ್ಷಿಸುತ್ತೇವೆ. ಆತ್ಮೋನ್ನತಿಗೆ ಒಳಗಣ್ಣು ತೆರೆಯದೇ, ಹೊರ ಗಣ್ಣನ್ನಷ್ಟೇ ತೆರೆಯುತ್ತೇವೆ, ಬದುಕಿನಲ್ಲಿ ಘಟನೆಗಳು ಸದಾ ಸಂಭವಿಸುತ್ತಲೇ ಇರುತ್ತವೆ. ಅವುಗಳ ಪಾಡಿಗೆ ಅವು ಸೃಷ್ಟಿಯಾಗುತ್ತವೆ. ಇವೆಲ್ಲವನ್ನೂ ನಾವು ದಾಟಿಕೊಂಡು ಹೋಗಲೇ ಬೇಕು. ಒಂದು ಘಟನೆ ಅಥವಾ ಸಂಗತಿಯನ್ನು ಬಯಸಲಿ, ಅಥವಾ ಬಯಸದೇ ಹೋಗಲಿ, ಅವೆಲ್ಲವೂ ಆಗಿಯೇ ತೀರುತ್ತವೆ. ನಾವು ಆ ಕ್ಷಣದ ಅಥವಾ ಆ ಘಟನೆಯ ಗುಲಾಮರು ಅಷ್ಟೆ. ಸಂಭವಿಸುವ ಘಟನೆಗಳು ನಮಗೆ ಸಂದೇಶಗಳನ್ನು ನೀಡುತ್ತಲೇ ಹೋಗುತ್ತವೆ. ಹೀಗಾಗಿ ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡಬೇಕು. ಸುಮ್ಮನೇ ಎಲ್ಲವನ್ನೂ ಆನಂದಿಸಬೇಕು. ಆ ಕ್ಷಣವನ್ನು, ನಮ್ಮ ಕಣ್ಣೆದುರಿನ ಸಂದರ್ಭವನ್ನು ದೂಷಿಸದೇ, ಅದರೊಳಗೆ ನಾವು ಒಂದಾಗಬೇಕು. ಇಲ್ಲದೇ ಹೋದರೆ ಕಿರಿಕಿರಿ ತಪ್ಪಿದ್ದಲ್ಲ.
ಮನಸ್ಸನ್ನು ಟ್ಯೂನ್ ಮಾಡುವ ಮೂಲಕ ಎದುರಾಗುವ ಸಂದರ್ಭಗಳನ್ನು ನಿಭಾಯಿಸುವುದನ್ನು ಕಲಿಯಬೇಕಿದೆ. ಇಲ್ಲಿ ಮುಖ್ಯಾಂಶವೆಂದರೆ - ಜಾಗೃತಿ. ನಾವು ಬದುಕಿನಲ್ಲಿ ಎಚ್ಚರಿಕೆಯಿಂದ ಕ್ರಿಯಾಶೀಲರಾಗಿದ್ದರೆ ಎಂಥ ಪರಿಸ್ಥಿತಿಯನ್ನಾದರೂ ಎದುರಿಸಿ ಅದನ್ನು ಚನ್ನಾಗಿ ನಿಭಾಯಿಸಬಹುದು. ಈ ಅಂಶಗಳು ಮನಸ್ಸನ್ನು ತಾನೇ ತಾನಾಗಿ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಮಾಡುತ್ತವೆ. ಏನೇ ಆಗಲಿ, ಎಂಥದ್ದೇ ಸನ್ನಿವೇಶವೇ ಆಗಲಿ ಅದನ್ನು ಸ್ವಾಗತಿಸಬೇಕು ಅರ್ಥ ಮಾಡಿಕೊಳ್ಳಬೇಕು. ವಾಸ್ತವಗಳಿಗೆ ಎದುರಾಗದೇ ಹೋದರೆ ಉಳಿವಿಲ್ಲ.
ಹೂವು ಮೊಗ್ಗಾಗಿದ್ದ ಅವಧಿಯಲ್ಲಿ ನಮಗೆ ಅದರ ಸೌಂದರ್ಯ, ಪರಿಮಳ ಒಂದೂ ಅರಿವಿಗೆ ಬಾರದು. ಮೊಗ್ಗು ಸ್ವಾಭಾವಿಕವಾಗಿ ಹೂವಾಗುವ ತನಕ ತಾಳ್ಮೆಯಿಂದ ಕಾಯಲೇ ಬೇಕು. ಹೀಗೆ ಕಾಯ್ದರಷ್ಟೇ ಹೂವಿನ ಸುವಾಸನೆ, ಅದರ ಆನಂದವನ್ನು ತುಂಬಿಕೊಳ್ಳಲು ಸಾಧ್ಯ. ಇದೇ ರೀತಿ ಪ್ರತಿಯೊಂದು ಬಂಡೆಯಲ್ಲೂ ಒಂದು ಶಿಲ್ಪವಿದೆ ಅದು ಹೊರಬರುವ ತನಕ ಕಾಯಬೇಕು, ಹೊರತರಲು ತಾಳ್ಮೆಯಿಂದ ಶಿಲ್ಪಿಯಾದವನು ಬೆವರು ಹರಿಸಬೇಕು ಕಲ್ಲು ಬಂಡೆಯ ಅನಗತ್ಯ ಭಾಗಗಳನ್ನು ಕೆತ್ತಿ, ಕೊರೆದು ಮನದಲ್ಲಿನ ಚಿತ್ರವನ್ನು ಕಲ್ಲಲ್ಲಿ ಅರಳಿಸುತ್ತಾನೆ ಕಲ್ಲರಳಿ ಕಲೆಯಾಗುವ ಈ ಪ್ರಕ್ರಿಯೆ ಹಿಂದೆ ಅದೆಷ್ಟು ತಾಳ್ಮೆಯಿದೆಯೋ ಊಹಿಸಿಕೊಳ್ಳಿ ತಾನು ಶಿಲ್ಪವಾಗುವ ನಿಟ್ಟಿನಲ್ಲಿ ಕಲ್ಲು ಬಂಡೆಯು ಅದೆಷ್ಟು ಗಂಟೆ ಅಥವಾ ಅದೆಷ್ಟು ದಿನ ಶಿಲ್ಪಿಯ ಮುಂದೆ ಅವನ ಚಾಣ ಮತ್ತು ಸುತ್ತಿಗೆಯ ಏಟು ತಿನ್ನುತ್ತಾ, ನೋವು ಸಹಿಸಿಕೊಳ್ಳುತ್ತಾ ಕೂತಿತ್ತೋ ಅಲ್ಲವೇ?!
ಮೆದುಳಿನ ವಿಜ್ಞಾನಿಗಳು ನಡೆಸಿರುವ ಪ್ರಯೋಗಗಳ ಪ್ರಕಾರ ಡೋಪ್‌ಮೀನ್ ಎಂಬ ರಾಸಾಯನಿಕ ಪದಾರ್ಥ ಪ್ರತಿಕ್ಷಣವು ನಮ್ಮ ಇಚ್ಛಾಶಕ್ತಿಯ ಮಟ್ಟವನ್ನು ಪ್ರಿತಿಬಿಂಬಿಸುತ್ತದೆ. ಇಚ್ಛಾಶಕ್ತಿಗೆ ಸಂಬಂಧಿಸಿದಂತೆ ನಮ್ಮ ಮೆದುಳಿನಲ್ಲಿ ಮೂರು ಕೇಂದ್ರಗಳಿವೆ - ಪ್ರೇರಣೆಯ ಕೇಂದ್ರ, ಫಲಾಪೇಕ್ಷೆಯ ಕೇಂದ್ರ, ಮತ್ತು ನಷ್ಟ ವಿಶ್ಲೇಷಣೆಯ ಕೇಂದ್ರ. ಪ್ರೇರಣೆ ಮತ್ತು ಫಲಾಪೇಕ್ಷೆಯ ಕೇಂದ್ರಗಳಲ್ಲಿ ಹೆಚ್ಚಿನ ಮಟ್ಟದ ಡೋಪ್‌ಮೀನ್ ಇದ್ದಾಗ ನಾವು ಶ್ರದ್ಧೆಯಿಂದ ಶ್ರಮಿಸಿ, ಗುರಿಯನ್ನು ಸಾಧಿಸುತ್ತೇವೆ. ಬದಲಾಗಿ, ಪ್ರೇರಣೆ ಮತ್ತು ನಷ್ಟ ವಿಶ್ಲೇಷಣೆಯ ಕೇಂದ್ರಗಳಲ್ಲಿ ಡೋಪ್‌ಮೀನ್ ಹೆಚ್ಚಾದರೆ, ಅಲ್ಪತೃಪ್ತರಾಗಿ ಆಲಸ್ಯಕ್ಕೆ ಒಳಗಾಗುತ್ತೇವೆ. ಸ್ಕಿಜೋಫ್ರೀನಿಯ, ಎಡಿಡಿ ಮತ್ತು ಡಿಪ್ರೆಶನ್ ಇರುವವರ ಪ್ರೇರಣಾಶಕ್ತಿಯ ಕೊರತೆಗೆ ಡೋಪ್‌ಮೀನ್ ಒಂದು ಮುಖ್ಯ ಕಾರಣ.
ನಮ್ಮ ಇಚ್ಛಾಶಕ್ತಿಯ ಮಟ್ಟವನ್ನು ಅಳಿಯುವುದು ಹೇಗೆ? ನಮಗೆ ಗುರಿಯ ಮೇಲೆ ಸಂಪೂರ್ಣ ಲಕ್ಷ್ಯವಿರಬೇಕು. ಅದನ್ನು ಸಾಧಿಸುವ ತವಕವಿರಬೇಕು. ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಇರಬೇಕು. ವಿಘ್ನಗಳು ಮತ್ತು ಅನಾನುಕೂಲಗಳನ್ನು ಲೆಕ್ಕಿಸದ ಛಲವಿರಬೇಕು. ಋಣಾತ್ಮಕ ಚಿಂತೆಯನ್ನು ತ್ಯಜಿಸುವ ಬಲವಿರಬೇಕು. ಇತರರ ನಕಾರಾತ್ಮಕ ಅಭಿಪ್ರಾಯಗಳನ್ನು ಕಡೆಗಣಿಸುವ ಸಾಮರ್ಥ್ಯವಿರಬೇಕು. ಗುರಿ ಮುಟ್ಟುವವರೆಗೂ ತಾಳ್ಮೆಯಿಂದ ಶ್ರಮಿಸಬೇಕು. ಇಂಥ ದೃಢತೆ ಇದ್ದರೆ, ಬೇರಾವ ಕೊರತೆಯಿದ್ದರೂ ನಮಗೆ ಯಶಸ್ಸು ಖಚಿತ. ಆಗ ನಡುದಾರಿಯಲ್ಲಿ ಸೋಲು ಬಂದರೂ ಅದನ್ನೇ ಮೆಟ್ಟಿಲಾಗಿ ಬಳಸಿ ಮೇಲೇರುತ್ತೇವೆ.
ಎಡಿಸನ್ ಎಲೆಕ್ಟ್ರಿಕ್ ಬಲ್ಬಿನ ಒಳತಂತಿಗೆ ಸೂಕ್ತ ಮೂಲ ದ್ರವ್ಯವನ್ನು ಹುಡುಕುತ್ತಿದ್ದಾಗ, 10,000ಕ್ಕೂ ಹೆಚ್ಚು ಪದಾರ್ಥಗಳನ್ನು ಪರೀಕ್ಷಿಸಿ ತಿರಸ್ಕರಿಸಿದರು. 10,000 ಬಾರಿ ನೀವು ವಿಫಲರಾಗಿದ್ದೀರಿ ಎಂದ ಸ್ನೇಹಿತನಿಗೆ ಇಲ್ಲಾ ನಾನು 10,000 ಪದಾರ್ಥಗಳ ಬಗ್ಗೆ ಜ್ಞಾನವನ್ನು ಪಡೆದಿದ್ದೇನೆ ಎಂದರು ಇದೇ ಇಚ್ಛಾಶಕ್ತಿಯು ನೀಡುವ ಸಕಾರಾತ್ಮಕ ದೃಷ್ಟಿಕೋನ.
ಇಚ್ಛಾಶಕ್ತಿ ಒಂದು ಮಾನಸಿಕ ಸ್ನಾಯು. ಬಳಸಿದಷ್ಟೂ ಬಲವಾಗುತ್ತದೆ. ಬಲಗೊಳಿಸುವುದು ಬಾಲ್ಯದಲ್ಲಿ ಸುಲಭವಾದರೂ, ನಾವು ಯಾವ ವಯಸ್ಸಿನಲ್ಲಾದರೂ ಆರಂಭಿಸಬಹುದು. ಒಬ್ಬ ಕಳ್ಳ ದರೋಡೆಕೊರನಾಗಿದ್ದ ವ್ಯಕ್ತಿಗೆ ಜ್ಞಾನೋದಯವಾಗಿ ರಾಮಾಯಣದಂತಹ ಪವಿತ್ರ ಗ್ರಂಥವನ್ನು ರಚಿಸಿದಂತಹ ವಾಲ್ಮೀಕಿ ಮಹರ್ಷಿಗಳು  ಮತ್ತು ಅಂಗುಲಿಮಾಲರಂತಹವರೆ ಇದಕ್ಕೆ  ಸಾಕ್ಷಿ.
ಇಚ್ಛಾಶಕ್ತಿಯನ್ನು ವರ್ಧಿಸಲು ಮನೋಜ್ಞಾನಿಗಳು ನಮಗೆ ಆರು ಸೂತ್ರಗಳನ್ನು ನೀಡುತ್ತಾರೆ.
1. ನಮ್ಮ ಮುಖ್ಯ ಗುರಿಗಳನ್ನು ಬರೆದು ಸಾದಾ ಕಾಣುವಂತೆ ಹಾಕುವುದು. ಇದರಿಂದ ಸುಪ್ತ ಮನಸ್ಸು ಪ್ರೇರಿತವಾಗುತ್ತದೆ.
2. ಇಷ್ಟವಿಲ್ಲದ ಕಾರ್ಯಗಳನ್ನು ಮೊದಲು ಪೂರೈಸಿ, ಬಹುಮಾನದಂತೆ ಇಷ್ಟವಿರುವ ಚಟುವಟಿಕೆಗಳನ್ನು ನಂತರ ಮಾಡುವುದು.
3. ಚಟಗಳ ಪೂರೈಕೆಯನ್ನು ಆದಷ್ಟು ಮುಂದೂಡುವುದು.
4. ಚಟಕ್ಕೆ ಬದಲಾಗಿ ಹಿತಕರ ಚಟುವಟಿಕೆಯಲ್ಲಿ ತೊಡಗುವುದು. ಉ. ದೂರದರ್ಶನಕ್ಕೆ ಬದಲಾಗಿ ಪುಸ್ತಕವನ್ನು ಓದುವುದು.
5. ದೈಹಿಕ ವ್ಯಾಯಾಮದಿಂದ ಇಚ್ಛಾಶಕ್ತಿಯನ್ನು ವೃದ್ಧಿಗೊಳಿಸುವ ರಾಸಾಯನಿಕ ಪದಾರ್ಥಗಳನ್ನು ಉತ್ಪತ್ತಿ ಮಾಡುವುದು.
6. ಪ್ರತಿದಿನವೂ ಧ್ಯಾನಿಸುವುದು.
ನಾವು ನಮ್ಮ ಜೀವನದ ಹಾದಿಯಲ್ಲಿ ವಿಜಯವನ್ನು ಸಾಧಿಸಿದ್ದೇವೆಂದರೆ ಅದಕ್ಕೆ ಕಾರಣ ನಮ್ಮ ಸಂಕಲ್ಪ ಬಲ. ನಾವು ಅಲ್ಲಿ ಅಪಜಯಕ್ಕೆ ಒಳಗಾಗಿದ್ದೇವೆಂದರೆ, ಅದಕ್ಕೂ ನಮ್ಮ ಸಂಕಲ್ಪ ಬಲಹೀನತೆಯೇ ಕಾರಣ ಎನ್ನುವುದು ಪರಮಸತ್ಯ. ಮನುಷ್ಯ ಚಂದ್ರಮಂಡಲದ ಮೇಲೆ ಪಾದವಿಡುತ್ತಾನೆಂದು ಊಹಿಸಿದ್ದೆವೇನು? ಮನುಷ್ಯ ಎವರೆಸ್ಟ್ ಶಿಖರವನ್ನು ಏರುತ್ತಾನೆಂದು ಕನಸು ಕಂಡಿದ್ದೆವೇನು? ಮನುಷ್ಯ ಒಂದು ಚಿಕ್ಕ ಮರದ ಹಡಗಿನಲ್ಲಿ ಅಟ್ಲಾಂಟಿಕ್ ಮಹಾಸಮುದ್ರದ ಮೇಲೆ ಈ ಮೂಲೆಯಿಂದ ಆ ಮೂಲಕ್ಕೆ ಪ್ರಯಾಣಿಸುತ್ತಾನೆ ಎಂದುಕೊಂಡಿದ್ದೇವೇನು? ಆದರೆ, ಈ ಊಹೆಗಳೆಲ್ಲ ಈ ದಿನ ನಿಜವಾಗಿವೆ ಎಂದರೆ, ಅದಕ್ಕೆ ಕಾರಣ, ಆ ಕೆಲಸವನ್ನು ನಿಜವಾಗಿಸಿದವರ ಮಹಾಸಂಕಲ್ಪ ಬಲವೇ. ಅವರ ಆಲೋಚನೆಗಳ ಸ್ಪಷ್ಟತೆ ಮತ್ತು ಅವರ ಆಲೋಚನೆಗಳ ಮೇಲೆ ಅವರಿಗಿರುವ ಛಲ. ಆ ಛಲವೇ ಅವರಲ್ಲಿ ಸಂಕಲ್ಪಬಲವನ್ನು ವೃದ್ಧಿಗೊಳಿಸಿ, ಅವರು ನೆನೆದ ಕೆಲಸವನ್ನು ಪೂರ್ಣಗೊಳಿಸುವ ಹಾಗೆ ಅವರಿಗೆ ಬೇಕಾದ ಶಕ್ತಿಯನ್ನು ನೀಡಿದೆ. ಆದ್ದರಿಂದ, ನಮ್ಮ ಸಂಕಲ್ಪಶಕ್ತಿಯಿಂದ ಆಯ್ಕೆ ಮಾಡಿಕೊಂಡ ನಮ್ಮ ಜೀವನವನ್ನು ಸಫಲಗೊಳಿಸಬೇಕಾದರೆ ನಮ್ಮಲ್ಲಿ ಇರಬೇಕಾದ್ದು ತುಂಬಾ ದೊಡ್ಡದಾದ ಸಂಕಲ್ಪಶುದ್ಧಿ. ಇದು ಇದ್ದರೆ ಮಾತ್ರವೇ ಸಂಕಲ್ಪಶಕ್ತಿ ಬರುತ್ತದೆ; ಸಂಕಲ್ಪಶಕ್ತಿ ಇದ್ದರೆ ಮಾತ್ರವೇ ಸಂಕಲ್ಪಸಿದ್ಧಿ ನಮಗೆ ಉಂಟಾಗುತ್ತದೆ
ಪ್ರತಿ ಜೀವಿ ಸಹ ತನ್ನ ಪ್ರಗತಿ ಪಥದಲ್ಲಿ ನಿಶ್ಚಯವಾಗಿ ತಪ್ಪುಗಳು ಮಾಡಬೇಕಾದ್ದೇ. ಹೊಸ ಪಾಠಗಳನ್ನು ಕಲಿತುಕೊಳ್ಳುವಾಗ ತಪ್ಪು ಹೆಜ್ಜೆ ಹಾಕುವುದು ತಪ್ಪಿದ್ದಲ್ಲವಲ್ಲ? ಅಂತಹ ತಪ್ಪುಹೆಜ್ಜೆಗಳು ಪಾಪಗಳೂ ಅಲ್ಲ. ಅವು ತಪ್ಪುಗಳೂ ಅಲ್ಲ. ಕ್ಷಮಿಸಲಾರದ ಅಪರಾಧಗಳಂತೂ ಅಲ್ಲವೇ ಅಲ್ಲ. ಹಾಕುವ ತಪ್ಪುಹೆಜ್ಜೆಗಳನ್ನು ತಾವೇ ಕ್ಷಮಿಸಲಾರದ ಅಪರಾಧಗಳೆಂದು ಪರಿಗಣಿಸಿದರೆ ಅಂಥವರಿಗೆ ಅರಿವಿಲ್ಲವೆಂದರ್ಥ. ಹಾಗೆಯೇ, ಇತರರು ತಪ್ಪು ಹೆಜ್ಜೆಗಳನ್ನು ಕ್ಷಮಿಸಲಾರದ ಅಪರಾಧಗಳೆಂದು ಭಾವಿಸಬಾರದು. ಇಂಥ ತಪ್ಪುಗಳನ್ನು ತಪ್ಪುಗಳಾಗಿ ನೋಡದೆ, ಅವು ಅವರವರ ವಿದ್ಯಾಭ್ಯಾಸಗಳಲ್ಲಿ ಕಲಿತುಕೊಳ್ಳಲಿಕ್ಕಾಗಿ ಮಾಡುವ ಚಿಕ್ಕ ಚಿಕ್ಕ ಲೋಪಗಳಿಂದ ಕೂಡಿದ ಪ್ರಯತ್ನಗಳೇ ಎಂದು ಭಾವಿಸಬೇಕು. ಆ ನಿಟ್ಟಿನಲ್ಲಿಯೇ ಅವುಗಳನ್ನು ಗುರುತಿಸಬೇಕು. ಇಂಥ ಅರಿವಿನಲ್ಲಿರುವುದೇ ನಿಜವಾದ ಎನ್‌ಲೈಟೆನ್ಡ್. ಯಾವುದೇ ವಿದ್ಯೆಗಳನ್ನು ಕಲಿತು ಕೊಳ್ಳುತ್ತಿರುವಾಗ ಏನಾದರೂ ಅಪಸ್ವರವಾದರೆ, ತಕ್ಷಣ ಅವರ ಮೇಲೆ ಬಿದ್ದು, ಆಕಾಶ ಕೆಳಗೆ ಬಿದ್ದಂತೆ ಕಿರುಚಬಾರದು. ನೀನು ತಪ್ಪು ಮಾಡಿದ್ದೀಯಾ ಕೆಲಸಕ್ಕೆ ಬಾರದವನು ಎನ್ನುತ್ತಾ ವ್ಯಕ್ತಿಯನ್ನು ತಪ್ಪಿತಸ್ಥನನ್ನಾಗಿ ನಿರ್ಣಯಿಸುವುದು ಮಹಾಪರಾಧ ಇದು ಅಜ್ಞಾನಿಯೊಬ್ಬನ ಸ್ಥಿತಿ.

ಒಂದು ವೇಳೆ ಅಪರಾಧ ಮಾಡಿದರೂ ಅದನ್ನೇ ಸದಾ ನೆನೆಸಿಕೊಂಡಿರುವುದು ಸಹ ದೋಷವೇ ಆಗಿದೆ. ಮಾಡಿದ ಅಪರಾಧವನ್ನು ತಿದ್ದಿಕೊಂಡು ಸರಿದಾರಿಯಲ್ಲಿ ನಡೆಯಬೇಕೇ ಹೊರತು, ಆಗಿಂದಾಗ್ಗೆ ಅದನ್ನು ನೆನೆದು ಕೊರಗುವುದರಿಂದ ಮನಃಶಾಂತಿ ಹಾಳು. ಅಲ್ಲದೆ, ಸಮಯವೂ ವ್ಯರ್ಥ. ಬದಲಿಗೆ, ನೂತನ ಸೃಜನಾತ್ಮಕವಾದ ಕಾರ್ಯಕಲಾಪಗಳಲ್ಲಿ ಹೊಸದಾಗಿ ಲೀನವಾಗುವುದೇ ಎನ್‌ಲೈಟೆನ್‌ಮೆಂಟ್. ಸದಾ 'ನಾನು ಪಾಪಿ; ನಾನು ಪಾಪಿ' ಎಂದುಕೊಳ್ಳುವುದಾಗಲೀ, ಅದೇ ರೀತಿಯಲ್ಲಿ ಸದಾ 'ನೀನು ಪಾಪಿ; ನೀನು ಪಾಪಿ' ಎಂದು ಜನ್ಮಾಂತ್ಯದವರೆಗೂ ಇತರರನ್ನು ಪೀಡಿಸುವುದಾಗಲೀ, ಎನ್‌ಲೈಟೆನ್‌ಮೆಂಟ್ ಅನಿಸಿಕೊಳ್ಳುವುದಿಲ್ಲ.
ಇತರರ ತಪ್ಪುಗಳನ್ನು ಗಮನಿಸಿ, ಅಂಥ ತಪ್ಪುಗಳು ನಮ್ಮ ಜೀವನದಲ್ಲಿ ಆಗದಂತೆ ಎಚ್ಚರ ವಹಿಸಬೇಕು. ಒಳ್ಳೆ ಕೆಲಸ ಮಾಡುವವರನ್ನು ಗಮನಿಸಿ, ಅವರನ್ನು ಅನುಕರಿಸಬೇಕು. ಇಂಥ ಮನಸ್ಥಿತಿಯೇ ಜ್ಞಾನೋದಯ. ಅಂದರೆ, ಒಬ್ಬ ಎನ್‌ಲೈಟೆನ್ಡ್ ಮಾಸ್ಟರ್ ಎಲ್ಲರಿಂದ ಕಲಿತುಕೊಳ್ಳಬಲ್ಲ. ಪಾಪಗಳು ಮಾಡಿದವರಿಂದ, ಪುಣ್ಯಗಳು ಮಾಡಿದವರಿಂದ ಕಲಿತುಕೊಳ್ಳುತ್ತಲೇ ಇರುತ್ತಾನೆ. ಈ ರೀತಿಯಲ್ಲಿ ಎಲ್ಲರ ಹತ್ತಿರದಿಂದ ಅದ್ಭುತವಾದ ಪಾಠಗಳನ್ನು ಅವಿಶ್ರಾಂತವಾಗಿ ಕಲಿತುಕೊಳ್ಳುತ್ತಾ ಇರುವವನೇ ಎನ್‌ಲೈಟೆನ್ಡ್ ಮಾಸ್ಟರ್. ಯಾರ ಹತ್ತಿರದಿಂದಲೂ ಏನೂ ಕಲಿತುಕೊಳ್ಳದೆ ಇರುವವನು ಕತ್ತಲೆಯಲ್ಲಿ ಬದುಕುವವನು ಸ್ವಲ್ಪವೂ ಪ್ರಕಾಶ ಇಲ್ಲದವನು.
ಭ್ರಮೆಗಳ ಸುತ್ತಲೇ ಬದುಕುತ್ತಿರುವ ನಾವು ಎದುರಿನ ವಾಸ್ತವಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ನಮ್ಮ ತೀರ್ಮಾನಗಳು ಬೇರೆಯವರ ವಿಚಾರಗಳನ್ನು ಆಧರಿಸಿಯೇ ಇರುತ್ತದೆ. ವಾಸ್ತವ ಮತ್ತು ನಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯೋಚಿಸುವುದೇ ಇಲ್ಲ. ಈ ವಿಷಯವನ್ನು ಅನೇಕ ಅಧ್ಯಯನಗಳೂ ದೃಢಪಡಿಸಿವೆ. ವಾಸ್ತವ ಮತ್ತು ನಮ್ಮ ಮುಂದಿನ ಪರಿಸ್ಥಿತಿಯನ್ನು ಪರಾಮರ್ಶಿಸುವುದಕ್ಕಿಂತಲೂ ಇನ್ಯಾರದೋ ಆಲೋಚನೆಯನ್ನು ಅನುಸರಿಸಿ ಬಿಡುತ್ತೇವೆ. ನಮ್ಮ ಜೀವಿತಾವಧಿ ಸುಮಾರು 70ರಿಂದ 80 ವರ್ಷ. ಆದರೆ ಸಾವು ಎನ್ನುವುದು ಯಾವಾಗ ಬೇಕಾದರೂ ಇಣುಕಬಹುದು. ಅದು ಈಗಲೇ ಬರುತ್ತದೆ, ನಾಳೆ ಬರುತ್ತದೆ ಎಂದು ಹೇಳಲಾಗದು. ಇರುವ ಅಲ್ಪ ಕಾಲದಲ್ಲಿ ನಾವು ನಾವುಗಳಾಗಿ ಬದುಕುವುದನ್ನು ಕಲಿಯಬೇಕಿದೆ.
ಕೆಲವು ಸಲ ನಾವು ಯಾವ ಆಲೋಚನೆ ಮಾಡುತ್ತೇವೋ ಅದಕ್ಕೆ ಪರಸ್ಪರ ವಿರುದ್ಧವಾದ ಅನೇಕಾನೇಕ ವಿಕಲ್ಪಗಳು ಕೂಡ ಹುಟ್ಟಿಕೊಳ್ಳುತ್ತವೆ. ಇವು, ನಾವು ಮುಂಚಿತವಾಗಿ ಮಾಡಿದ ಆಲೋಚನೆಗಳನ್ನು ನಿಷ್ಫಲಗೊಳಿಸುತ್ತಿರುತ್ತವೆ. ಇದರಿಂದ ಮನಸ್ಸು ಅಲ್ಲೋಲಕಲ್ಲೋಲಕ್ಕೆ ಗುರಿಯಾಗಿ ನಮ್ಮನ್ನು ಅಯೋಮಯಕ್ಕೆ, ಅಶಾಂತಿಗೆ ಗುರಿ ಮಾಡುತ್ತದೆ. ಇದನ್ನೇ ನಾವು ನಕಾರಾತ್ಮಕ ಆಲೋಚನಾ ವಿಧಾನ ಎನ್ನುತ್ತೇವೆ.
ಇಂತಹ ಅಶಾಂತಿಮಯವಾದ ಆಲೋಚನಾ ವಿಧಾನದಿಂದ ನಾವು ಹೊರಬರಬೇಕಾದರೆ ಆಲೋಚನೆಗಳನ್ನು ಕುರಿತು ವಿಶೇಷ ಸ್ಪಷ್ಟತೆ ಹೊಂದಿರಬೇಕು. ಅಪ್ರಯೋಜಕವಾದ ಆಲೋಚನೆಗಳ ಬಗ್ಗೆ ನಿರ್ಲಕ್ಷ್ಯ, ಉಪೇಕ್ಷೆ ಹೊಂದಿದವರಾಗಬೇಕು. ನಮ್ಮ ಹೃದಯವು ಸಂಪೂರ್ಣವಾಗಿ ಅನುಮೋದಿಸಿದ ಆಲೋಚನೆಯನ್ನೇ ನಮ್ಮ ಮನಸ್ಸಿನಲ್ಲಿ ಧಾರಣೆ ಮಾಡಬಲ್ಲವರಾಗಬೇಕು. ವಿಕಲ್ಪಗಳಿಂದ ಕೂಡಿದ ಸಂಕಲ್ಪಗಳು ಎಂದಿಗೂ ನೆರವೇರುವುದಿಲ್ಲ ಮತ್ತು ಅವು ನಮ್ಮ ಶಕ್ತಿಯನ್ನು ಕ್ಷೀಣಿಸುವ ಹಾಗೆ ಮಾಡಿ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತಾ ಸಾಗುತ್ತವೆ. ನಮ್ಮ ಜೀವನ ನಮ್ಮ ಕೈಯಲ್ಲಿ ಇರದಿರುವ ಹಾಗೆ ಸಹ ಮಾಡುತ್ತವೆ. ಆದ್ದರಿಂದ, ಒಂದು ಹೆಜ್ಜೆ ಮುಂದಕ್ಕೆ ಮತ್ತು ನಾಲ್ಕು ಹೆಜ್ಜೆಗಳು ಹಿಂದಕ್ಕೂ ಹಾಕುವ ವಿಕಲ್ಪಗಳಿಂದ ಕೂಡಿದ ಆಲೋಚನಾ ವಿಧಾನದಿಂದ ಪ್ರಯೋಜನವಿಲ್ಲ ಎನ್ನುವ ಸಂಗತಿಯನ್ನು ನಾವು ತಿಳಿದುಕೊಳ್ಳಬೇಕು.
ಇತರರ ಕಣ್ಣುಗಳಿಂದ, ದೃಷ್ಟಿಕೋನಗಳಿಂದ ಪ್ರಪಂಚವನ್ನು ನೋಡುವುದರಿಂದ ಬೇರೆಯವರನ್ನು ಅರ್ಥ ಮಾಡಿಕೊಳ್ಳಲು, ಅವರೊಂದಿಗೆ ಸಂಬಂಧ ಬೆಳೆಸಿಕೊಳ್ಳಲು, ಅವರ ಸಮಸ್ಯೆಯನ್ನು ಅರಿತು ಬಗೆಹರಿಸಲು ಮತ್ತು ಅದೇ ಅನುಪಾತದಲ್ಲಿ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುದು ಸುಲಭವಾಗುತ್ತದೆ.
ಬೇರೆಯವರ ದೃಷ್ಟಿಕೋನದಿಂದ ನೋಡಿ ಅವರ ನಿರೀಕ್ಷೆಯನ್ನು ಅರ್ಥ ಮಾಡಿಕೊಳ್ಳುವುದು ಮಹತ್ತರವಾದ ಮೌಲ್ಯವುಳ್ಳದ್ದಾಗಿದೆ; ಇದರ ಮೂಲಕ ನಾವು ಸಂಬಂಧ ಮತ್ತು ಪರಿವರ್ತನೆಯ ಪ್ರಕ್ರಿಯೆಯನ್ನು ಯಾರೊಂದಿಗೆ ಬೇಕಾದರೂ ಪ್ರಾರಂಭಿಸಬಹುದಾಗಿದೆ. ಒಮ್ಮೆ ತಾಧ್ಯಾತ್ಮ್ಯಾನುಭೂತಿಯನ್ನು ತಂದುಕೊಂಡರೆ, ಆ ವ್ಯಕ್ತಿ ಸಬಲನಾಗುತ್ತಾನೆ ಮತ್ತು ವಿಶ್ವಾಸ ಬೆಳೆಯುತ್ತದೆ. ಇದು ಅವನಿಗೆ ತನ್ನ ಆಂತರ್ಯದಲ್ಲಿ ಪಯಣಿಸಲು ಮತ್ತು ಮರಳಿ ಸಚೇತನವನ್ನು ಪಡೆಯಲು ಸಹಾಯ ಮಾಡುತ್ತದೆ. ಬೇರೆಯವರ ದೃಷ್ಟಿಯ ಮೂಲಕ ನೋಡುವುದು ಎಂದರೆ ಹೇಗೆ? ಇದಕ್ಕೆ ದಾರಿ ಯಾವುದು?
ಇದಕ್ಕಾಗಿ ಕೆಲವು ಸರಳ ಸೂತ್ರಗಳಿವೆ, ಮೊದಲಿಗೆ ಆತ್ಮರತಿಯನ್ನು ಬಿಟ್ಟುಬಿಡಬೇಕು. ಎಲ್ಲಿಯವರೆಗೆ ಸ್ವಪ್ರಶಂಸೆಯ ಗುಣ ಮತ್ತು ಡಾಂಭಿಕತೆ ಇರುತ್ತದೋ ಅಲ್ಲಿಯವರೆಗೆ ಬೇರೆಯವರ ನಿರೀಕ್ಷೆಗಳು ಚಿಕ್ಕದಾಗಿ ಗೋಚರಿಸುವುದು ಮಾತ್ರವಲ್ಲ, ಅವರಿಗೆ ನಿರೀಕ್ಷೆಗಳು ಇವೆ ಎಂಬುದು ಕೂಡ ಗೊತ್ತಾಗದೆ ಹೋಗಬಹುದು. ಇತರರು ಯಾವುದನ್ನು ಸಾಧನೆ ಎಂದು ಭಾವಿಸುತ್ತಾರೋ ಅದು ಏನೇ ಆಗಿದ್ದರೂ ಸಂತಸಪಡಿ. ಇತರರ ಕಣ್ಣುಗಳಿಂದ ನೋಡುವ ಅಭ್ಯಾಸ ನಿಜಕ್ಕೂ ಪಾಲಕರು ಮಾಡಬೇಕು. ಏಕೆಂದರೆ ಸಣ್ಣ ಪುಟ್ಟ ಮಕ್ಕಳ ಮನೋ ಜಗತ್ತನ್ನು ಅರ್ಥಮಾಡಿಕೊಳ್ಳದೆ ತಮ್ಮ ಪಡಿಯುಚ್ಚುಗಳಾಗಬೇಕು ಎಂದು ಭಾವಿಸುತ್ತಾರೆ. ಉದಾಹರಣೆಗೆ ಪಾಲಕರು ದೈವಭಕ್ತರಾಗಿದ್ದರೆ ಮಕ್ಕಳೂ ಕೂಡ ವಯೋ ಸಹಜ ತುಂಟಾಟಗಳನ್ನು ಬಿಟ್ಟು ಸದಾಕಾಲ ಧ್ಯಾನ ನಿರತರಾಗಬೇಕು ಎಂದು ಬಯಸುತ್ತಾರೆ. ಇದು ಶುದ್ಧಾಂಗ ತಪ್ಪು. ಮಕ್ಕಳನ್ನು ಮಕ್ಕಳಂತೆ ನೋಡಿದಾಗ ನಮಗೆ ವಾಸ್ತವ ಅರಿವಾಗುತ್ತದೆ. ನಮ್ಮ ಪಡಿಯುಚ್ಚುಗಳು ಅವರಲ್ಲ ಎಂಬುದು ಗೊತ್ತಾಗುತ್ತದೆ.
ಮತ್ತೊಬ್ಬರ ಒಳ್ಳೆಯ ಕೆಲಸಗಳನ್ನು ಹೊಗಳುವಾಗಲೂ ನಾವು ಕೃಪಣರಾಗುತ್ತೇವೆ. ನಮ್ಮದೇ ತೀರ್ಮಾನಗಳ ಲೋಕದಲ್ಲಿ ವಿಹರಿಸುತ್ತೇವೆ. ಯಾರೇ ಆಗಲಿ 'ನಾನು ಒಳ್ಳೆಯ ಕೆಲಸ ಮಾಡಿದ್ದೇನೆ' ಎಂದು ಭಾವಿಸಿದರೆ, ನಾವೂ ಅದನ್ನು ಶ್ಲಾಘಿಸಬೇಕು. ಯಾವಾಗ ಜನರು ತನ್ನ ಸಾಧನೆಯನ್ನು ಗುರುತಿಸಿದ್ದಾರೆ ಎಂದು ಅವನಿಗೆ ಅನ್ನಿಸುತ್ತದೋ ಆಗ ಅವನಲ್ಲಿರುವ ಪ್ರತಿಭೆ ಇನ್ನಷ್ಟು ಅರಳುತ್ತದೆ. ಪ್ರೋತ್ಸಾಹ ಕೊಡುವುದು, ಪ್ರತಿಭೆಯನ್ನು ಪೊರೆಯುವುದು ಅಂದರೆ ಹೀಗೆ. ಬೇರೆಯವರು ಬಯಸುವ ಭಾವನಾತ್ಮಕ ಬೆಂಬಲವನ್ನು ನೀಡುವುದು ಮಹತ್ವದ್ದು. ಇತರರಿಗೆ ಸಹಾಯ ಮಾಡಬೇಕೆನ್ನುವ ಒಳ್ಳೆಯ ಉದ್ದೇಶ ನಮ್ಮದಾಗಿರಬಹುದು, ಆದರೆ, ಯಾವ ನಿರ್ದಿಷ್ಟ ಸಮಯದಲ್ಲಿ ಅವರಿಗೆ ಅಗತ್ಯವಿರುವ ಸಹಾಯವನ್ನು ನೀಡಬೇಕೆನ್ನುವುದನ್ನು ಅರಿತುಕೊಳ್ಳಬೇಕು.
ಒಮ್ಮೆ ಒಬ್ಬ ಮಹಿಳೆ ತನ್ನ ಪತಿಯ ಕುಡಿತದ ಚಟದಿಂದ ಬೇಸತ್ತು ನನ್ನಲ್ಲಿ ಸಹಾಯ ಕೇಳಲು ನನ್ನ ಬಳಿಗೆ ಬಂದಳು. ಆದರೆ, ಆಕೆ ನನಗೆ ಮಾತನಾಡಲು ಅವಕಾಶವನ್ನೇ ನೀಡಲಿಲ್ಲ. ನಿರಾಶೆಗೊಂಡ ನಾನು, ಬಹುಶಃ ಆಕೆ ನನ್ನ ಸಹಾಯ ಬಯಸುತ್ತಿಲ್ಲವೇನೋ ಅದಕ್ಕೆ ನನಗೆ ಮಾತನಾಡಲು ಬಿಡುತ್ತಿಲ್ಲವೇನೋ ಎಂದು ಯೋಚಿಸಿದೆ. ಆದರೆ, ಸ್ವಲ್ಪ ಸಮಯದ ನಂತರ ನನಗೆ ಇದು ಹಾಗಲ್ಲ, ಬೇರೆಯೇ ಎಂಬುದು ಅರ್ಥವಾಯಿತು. ನನ್ನೊಳಗಿದ್ದ ಮನಶ್ಶಾಸ್ತ್ರಜ್ಞ ಇತರರಿಗೆ ನೆರವಾಗುವ ಉದ್ದೇಶವನ್ನು ಬಿಟ್ಟುಬಿಡಲು ಒಪ್ಪುತ್ತಿರಲಿಲ್ಲ. ಆದರೆ ಆಕೆಗೋ ನಾನು ಕೇವಲ ಶ್ರೋತೃವಾಗಬೇಕಿತ್ತು. ಇದು ನನಗೆ ಅರಿವಾಯಿತು. ಸುಮಾರು ಒಂದು ಘಂಟೆಯ ಕಾಲ ತನ್ನ ಅಳಲನ್ನು ತೋಡಿಕೊಂಡು ಅತ್ತು ಕರೆದು ಗೊಳಿಟ್ಟುಕೊಂಡ ಆಕೆಗೆ ನಾನು ನಿಮ್ಮ ಪತಿಯೊಂದಿಗೆ ಒಮ್ಮೆ ಮಾತಾಡುತ್ತೇನೆ ಯೋಚಿಸಬೇಡಿ ಎಂದಷ್ಟೇ ಹೇಳಿದೆ ಅಂದಿನಿಂದ ಆಕೆಯಲ್ಲಿ ಬದಲಾವಣೆಯ ಚಹರೆಗಳು ಕಾಣಿಸತೊಡಗಿದವು. ಕೆಲವು ದಿನಗಳ ನಂತರ ಆಕೆಯ ಪತಿಯನ್ನು ಮದ್ಯಪಾನ ವಿಮುಕ್ತಿ ಕೇಂದ್ರಕ್ಕೆ ಸೇರಿಸಿದೆ ಈಗ ಅವರು ಮೊದಲಿಗಿಂತಲೂ ಅನ್ಯೋನ್ಯತೆಯಿಂದ ಇದ್ದಾರೆ ಇಲ್ಲಿ ಗಮನಿಸಬೇಕಾದದ್ದು ಆಕೆ ತನ್ನ ಮನಸ್ಸಿನ ತುಮುಲವನ್ನು ಯಾರೊಂದಿಗೂ ಹಂಚಿಕೊಳ್ಳದೆ ಇದ್ದಿದ್ದರಿಂದ ತಾಳ್ಮೆ ಕಳೆದುಕೊಂಡಿದ್ದಳು ದುಃಖವನ್ನು ಇತರರೊಂದಿಗೆ ಹಂಚಿಕೊಂಡಾಗ ಮನಸ್ಸು ಹಗುರವಾಗಿ ಮನಸ್ಸಿನಲ್ಲಿ ತಾಳ್ಮೆ ನೆಲೆಸುತ್ತದೆ ತಾಳ್ಮೆಯಿಂದ ಉನ್ನತವಾದ ಚಿಂತನೆಗಳು ಮೂಡಿ ದುಃಖ ದೂರವಾಗಿ ಜೀವನ ಸುಖಮಯವಾಗುತ್ತೆ ನಾವು ಇತರರ ಕಣ್ಣುಗಳಿಂದ ನೋಡಿದಾಗ ಪ್ರಪಂಚ ಬೇರೆಯ ರೀತಿಯಲ್ಲಿಯೇ ಕಾಣುತ್ತದೆ.
ಸುಖವೆಂದರೆ ಹಣ ಎಂದು ಕಷ್ಟದಲ್ಲಿರುವವರು, ಗುಣ, ತೃಪ್ತಿ ಎಂದು ಇನ್ನೂ ಕೆಲವರು ಹೇಳುತ್ತಾರೆ. ಪ್ರೀತಿ ಎಂದು ಕಾಸಿಲ್ಲದವರು ಹೇಳುತ್ತಾರೆ. ಆದರೆ ನಿಜಕ್ಕೂ ಸುಖದ ಪರಿಕಲ್ಪನೆ ಯಾರಿಗೂ ಇಲ್ಲ. ಅದು ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಅನ್ನಬಹುದು. ಕೆಸರಲ್ಲಿ ಮಲಗಿದ ಎಮ್ಮೆಗೆ ಅದೇ ಸ್ವರ್ಗ. ಬೀದಿಯಲ್ಲಿ ಒಣಗಿದ ಮೂಳೆ ಸಿಕ್ಕರೆ ನಾಯಿಗಂತೂ ರಾಜಭೋಜನದ ಭಾವ. ಹಣ, ಪ್ರೀತಿ, ತೃಪ್ತಿಯನ್ನೇ ಸುಖ ಎನ್ನುವಹಾಗಿದ್ದಿದ್ದರೇ, ಇಂದು ಈ ಮಟ್ಟದ ಅಸಹನೆ, ಆತ್ಮಹತ್ಯೆಗಳು ಇರುತ್ತಿರಲಿಲ್ಲ. ಸುಖವೋ, ದುಃಖವೋ ಬದುಕೋದು ಮುಖ್ಯ, ಎನ್ನುವುದು ದೊಡ್ಡವರು ಹೇಳುವ ಒಂದು ಸಾಲಿನ ಸಿದ್ಧಾಂತ. ಯಾಕೆ ಬದುಕಬೇಕು ಎಂದರೆ, ''ಹುಟ್ಟು ಹೇಗೆ ನಮ್ಮ ಕೈಯಲ್ಲಿಲ್ಲವೋ, ಸಾವು ಅದೇ ರೀತಿ. ಬದುಕಲಾರದೇ ಸಾಯೋದು, ಕೈಲಾಗದ ಪ್ರವೃತ್ತಿ,'' ಅನ್ನೋದು ಅವರ ವಿವರಣೆ. ಸಾಯಲು ಸಾವಿರ ಕಾರಣ ಸಿಕ್ಕೋದಾದರೆ, ಬದುಕಲು ಒಂದು ಕಾರಣವಾದರೂ ಇರುತ್ತೆ' ಅನ್ನೋ ನುಡಿಮುತ್ತು ಎಲ್ಲರಿಗೂ ಗೊತ್ತಿದೆ.
ಸಾವಿಗಿಂತಲೂ ಬದುಕು ದೊಡ್ಡದು' ಎಂದು ಸಹ ಹೇಳಲಾಗುತ್ತದೆ. ಬದುಕೋದು ಮುಖ್ಯವಲ್ಲ, ಚೆನ್ನಾಗಿ ಬದುಕಬೇಕು, ಅನ್ನೋದು ಈಗಿನ ಜಮಾನದವರ ತಿದ್ದುಪಡಿ. ಚೆನ್ನಾಗಿ ಬದುಕೋದಕ್ಕೆ ಓದಬೇಕು, ಒಳ್ಳೆ ಕೆಲಸ ಸಂಪಾದಿಸಬೇಕು, ಕಾರು-ಬಂಗಲೆ, ಹೆಂಡತಿ-ಮಕ್ಕಳು ಕಟ್ಟಿಕೊಳ್ಳುವುದು ಅವನ ಸುಖದ ಪರಿಕಲ್ಪನೆ. ನಾಳೆಯ ಯಶಸ್ಸಿಗೆ ಇಂದೇ ಪ್ರಯತ್ನ ನಡೆಯಬೇಕು ಎನ್ನುವ ಮಾತಿನಲ್ಲಿ ತಪ್ಪಿಲ್ಲ. ನಾಳೆ ಮಾಡುವುದನ್ನು ಇಂದೇ ಮಾಡು, ಈಗಲೇ ಮಾಡು ಎನ್ನುವುದನ್ನೂ ಒಪ್ಪೋಣ.
ಆದರೆ, ನಿಜಕ್ಕೂ 'ಇದೆ' ಮತ್ತು 'ಇಲ್ಲ' ಎನ್ನುವುದು ಕೇವಲ ನಮ್ಮ ಭಾವನೆಗಳಷ್ಟೆ. ವಾಸ್ತವವಾಗಿ ಎರಡೂ ಸುಳ್ಳು. ನೆಪಗಳ ಹುಡುಕಿ ಕೊರಗುವುದರಲ್ಲಿ ನಮ್ಮ ಜನರಿಗೆ ಏನೋ ಒಂದು ರೀತಿಯ ಆನಂದ. ಆನಂದದ ಇನ್ನೊಂದು ಹೆಸರೇ ಸುಖ. ಅಪ್ಪ ಸತ್ತಾಗ ಮಗ ಬಿಕ್ಕಿಬಿಕ್ಕಿ ಅಳುತ್ತಾನೆ. ಅಳುವ ಮೂಲಕ ಅಪ್ಪನಿಗೆ ಆತ ಗೌರವ ಸಲ್ಲಿಸುತ್ತಾನೋ, ತನ್ನ ಪ್ರೀತಿಯನ್ನು ಆಪ್ತರ ಮುಂದೆ ಅಭಿವ್ಯಕ್ತಗೊಳಿಸುತ್ತಾನೋ ಗೊತ್ತಿಲ್ಲ. ಆದರೆ ಅಳುವ ಮೂಲಕ ಆತ ಕಷ್ಟವನ್ನು ಕರಗಿಸುತ್ತಾನೆ. ಕಷ್ಟ ಕರಗಿಸುವುದು ಎಂದರೆ ಸುಖ ಹುಡುಕುವುದೇ ತಾನೇ?
ಸಂಕಟಕ್ಕಿಂತಲೂ ಆ ಭಾವವೇ ಮೇಲುಗೈ ಸಾಧಿಸುವುದರಿಂದ, ದುಃಖ ಹೆಪ್ಪುಗಟ್ಟುತ್ತದೆ. ಅದೆಲ್ಲವನ್ನೂ ಆತ್ಮೀಯರ ಬಳಿ ಹೇಳಿಕೊಳ್ಳುವದರಿಂದ ಅದು ತಿಳಿಯಾಗುತ್ತದೆ. ಹೀಗಾಗಿಯೇ ಕಷ್ಟ ತೀರಿಸುವುದಕ್ಕಿಂತಲೂ, ತಾಳ್ಮೆಯಿಂದ ಕಿವಿಕೊಟ್ಟರೆ ಸಾಕು, ಅರ್ಧ ಬಗೆಹರಿಯುತ್ತದೆ. ಕಷ್ಟ ಕಡಿಮೆಯಾಯಿತು ಎಂದರೆ, ಸುಖ ಹತ್ತಿರವಾಯಿತು ಎಂದರ್ಥ. ಸುಖಕ್ಕೆ ನಕಾರಾತ್ಮಕ ಆಲೋಚನೆಗಳೇ ತಡೆಗೋಡೆಗಳು ಎನ್ನುತ್ತೇವೆ. ಹೀಗಾಗಿ ನಿಮ್ಮ ಆಲೋಚನೆಗಳು ಸಕಾರಾತ್ಮಕವಾಗಿರಲಿ. ಬಿಸಿಯಲ್ಲಿ ಬೆಂದರೇನೆ ಬಂಗಾರ ಆಭರಣವಾಗುತ್ತದೆ. ಹೊಡೆತ ತಿಂದರೇನೆ ತಾಮ್ರ ತಂತಿಯಾಗುತ್ತದೆ. ಹೊಡೆತಗಳಿಂದಲೇ ಕಲ್ಲು ಶಿಲೆಯಾಗುತ್ತದೆ. ಸಾಕಷ್ಟು ನೋವು ಎದುರಿಸಿದರೆ ಬದುಕು ಮೌಲ್ಯವುಳ್ಳದಾಗುತ್ತದೆ,'' ಎನ್ನುವಂಥ ಮಾತುಗಳು ಸೋಲಿನ ದಡದಲ್ಲಿದ್ದಾಗ ನಮಗೆ ಊರುಗೋಲಾಗುತ್ತವೆ. ಚಿಂತನೆ ಕಾರ್ಯರೂಪಕ್ಕೆ ಬರಲಿ. ಕಾರ್ಯರೂಪಕ್ಕೆ ತರುವ ಮುನ್ನ ಮತ್ತೆಮತ್ತೆ ಚಿಂತಿಸಿ. ಇದರಿಂದ ಕೆಲಸಗಳು ವಿಫಲವಾಗವು. ಸೋಲು ಹತ್ತಿರ ಬಾರದು. ಪದೇಪದೆ ಮಾಡುವ ಕೆಲಸದ ಬಗ್ಗೆ ಮನನಮಾಡುವುದರಿಂದ, ಭಯದ ಭಾವನೆ ದೂರವಾಗುತ್ತದೆ. ನಿಮ್ಮ ಭಯಕ್ಕೆ ತಳಪಾಯವೇ ಇಲ್ಲದಿದ್ದರೆ, ಯಶಸ್ಸು ಕಾಲಬುಡವಾಗುವಲ್ಲಿ ಅನುಮಾನವೇ ಇಲ್ಲ. ಯಶಸ್ಸಿಗಿಂತ ದೊಡ್ಡ ಸುಖ ಇನ್ನಾವುದಿದೆ?
ತಾಳ್ಮೆ ಮತ್ತು ಆತುರಕ್ಕೆ ಒಂದು ಸೂಕ್ತ ಉದಾಹರಣೆ ಇಲ್ಲಿದೆ ನೋಡಿ ; ಪ್ರಖ್ಯಾತ ದೇಗುಲವೊಂದರ ರಸ್ತೆಯಲ್ಲಿ ಕಲ್ಲಿನ ಗುಂಡೊಂದು ಇತ್ತು. ಅದನ್ನು ತುಳಿದೇ ಜನರು ದೇಗುಲದತ್ತ ಸಾಗುತ್ತಿದ್ದರು. ''ನಾನೂ ಕಲ್ಲು, ಗುಡಿಯಲ್ಲಿನ ದೇವರ ವಿಗ್ರಹವೂ ಕಲ್ಲು” ಆದರೆ ನನ್ನನ್ನು ತಾತ್ಸಾರದಿಂದ ತುಳಿಯುವ ಜನ, ದೇಗುಲದ ಕಲ್ಲನ್ನು ಭಕ್ತಿ, ಶ್ರದ್ಧೆಯಿಂದ ಪೂಜಿಸುತ್ತಾರೆ ಇದ್ಯಾವ ನ್ಯಾಯ?'' ಎಂದು ಆ ಕಲ್ಲು ಕೊರಗುತ್ತಿತ್ತು. ಈ ಗೋಳಾಟ ದೇಗುಲದಲ್ಲಿನ ದೇವರ ಶಿಲೆಗೂ ಕೇಳಿಸಿತು. ಆಗ ಅದು, ''ನೋಡಯ್ಯಾ ಗೆಳೆಯಾ, ನಾವಿಬ್ಬರೂ ಒಂದೇ ಜಾತಿಯ ಕಲ್ಲುಬಂಡೆಗಳು ಎಂಬುದು ನಿಜ. ಆದರೆ ನಾವಿರುವ ಸದ್ಯದ ಸ್ವರೂಪ ಮತ್ತು ಜಾಗದನುಸಾರ ಗೌರವಗಳು ಸಲ್ಲುತ್ತಿವೆ. ನನಗೆ ಜನರು ಹೆಚ್ಚಿನ ಗೌರವ ನೀಡುತ್ತಾರೆ ಎಂದು ನೀನು ಭಾವಿಸುವೆ. ನಿಜ. ಆದರೆ ಹಿಂದಿನ ಕತೆ ನಿನಗೆ ಬಹುಶಃ ಗೊತ್ತಿಲ್ಲ. ಜನರು ನನ್ನನ್ನು ಪೂಜಿಸುವುದಷ್ಟೇ ನೋಡಿರುವೆ ಅಷ್ಟೆ. ಶಿಲೆಯಾಗಿದ್ದ ನಾನು ದೇವರ ಶಿಲ್ಪವಾಗುವ ಹಂತದಲ್ಲಿ ಸಾವಿರಾರು ಉಳಿಯೇಟುಗಳನ್ನು ತಿಂದಿದ್ದೇನೆ. ಎಲ್ಲ ನೋವನ್ನು ಮನದಲ್ಲೇ ಒತ್ತಿ ಹಿಡಿದಿದ್ದೇನೆ. ಅಂದು ನಾನು ಎಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡದ್ದರಿಂದಲೇ ಎಲ್ಲರ ಗೌರವ ಮತ್ತು ಭಕ್ತಿ-ಪೂಜೆಗಳಿಗೆ ಇಂದು ಅರ್ಹನಾಗಿದ್ದೇನೆ. ಯಾವುದಕ್ಕೂ ತಾಳ್ಮೆ ಇರಬೇಕು. ಎಲ್ಲರಿಗೂ ಕಾಲ ಅನ್ನುವುದು ಬಂದೇ ತೀರುತ್ತದೆ. ಆ ತನಕ ಕಾಯಬೇಕು,'' ಎಂದು ಸಮಾಧಾನ ಹೇಳಿತು.

ಶಿಲೆಯಲ್ಲಿನ ಈ ತಾಳ್ಮೆಯಿಂದಾಗಿಯೇ ಅದು ಕಲೆಯಾಗಿ ರೂಪಾಂತರ ಹೊಂದಲು ಸಹಾಯವಾಯಿತು. ಜೀವನದ ಜಂಜಾಟವೆಂಬ ಪಯಣದಲ್ಲಿ ಪ್ರಗತಿ ಸಾಧಿಸಲು ನಿಮ್ಮಲ್ಲಿರಬೇಕಾದ ದೊಡ್ಡ ಮತ್ತು ಮಹತ್ವದ ಗುಣವೇ ತಾಳ್ಮೆ. ಪ್ರತಿಯೊಬ್ಬರಿಗೂ ಕುಂತಿ ಮತ್ತು ಗಾಂಧಾರಿಯ ಕತೆ ಗೊತ್ತಿದೆ. ಇದು ತಾಳ್ಮೆ ಮತ್ತು ಆತುರಕ್ಕೆ ಸೂಕ್ತ ಉದಾಹರಣೆ. ಕುಂತಿಗಿಂತ ಮೊದಲು ತಾನು ಮಕ್ಕಳನ್ನು ಪಡೆಯಬೇಕು, ತನ್ನ ಮಕ್ಕಳೇ ಮುಂದಿನ ರಾಜನಾಗಬೇಕು ಎಂಬುದು ಗಾಂಧಾರಿ ಬಯಕೆಯಾಗಿತ್ತು. ಗರ್ಭಿಣಿಯಾಗಿದ್ದ ಆಕೆಗೆ ತಾಳ್ಮೆ ಇರಲಿಲ್ಲ. ಕುಂತಿಗಿಂತ ಬೇಗ ಮಗುವನ್ನು ಪಡೆಯಬೇಕು ಎಂದು ಹೊಟ್ಟೆಯನ್ನು ಬಲವಾಗಿ ಅದುಮಿಕೊಂಡಳು. ಭ್ರೂಣವು ನೂರು ತುಂಡುಗಳಾಗಿದ್ದು, ಅವುಗಳನ್ನು ನೂರು ಮಡಿಕೆಯಲ್ಲಿ ಇಟ್ಟದ್ದು, ಆ ಮಕ್ಕಳು ದುಷ್ಟರಾಗಿ ಬೆಳೆದದ್ದು... ಇವೆಲ್ಲವೂ ಕತೆಯ ಮುಂದಿನ ಭಾಗ. ಆದರೆ ಒಂದು ಕ್ಷಣ ಗಾಂಧಾರಿಯು ತನ್ನ ತಾಳ್ಮೆ ಕಳೆದುಕೊಂಡದ್ದು ಕುರುಕ್ಷೇತ್ರದಂತಹ ಘಟನೆಗೆ ನಾಂದಿಯಾಯಿತು.
ನಿಮ್ಮನ್ನು ನೀವು ಎಂದಾದರೂ, ಕೋಪ ಏಕೆ ಬರುತ್ತದೆ ಎಂದು ಕೇಳಿಕೊಂಡಿರುವಿರಾ? ಕೋಪ ಅನ್ನುವುದು ನಾನಾ ಸಂದರ್ಭಗಳಲ್ಲಿ ನಮ್ಮ ಅರಿವಿಗೆ ಬಾರದೆ ಸ್ಫೋಟಗೊಳ್ಳುತ್ತದೆ. ಅದು ಬದುಕಿನ ಒಂದು ಭಾಗವೇ ಆಗಿ ಹೋಗಿದೆ. ನಮ್ಮ ಕೋಪಕ್ಕೆ ನಮ್ಮದೇ ಆದ ನಾನಾ ಸಮರ್ಥನೆಗಳನ್ನು ನೀಡಿಕೊಳ್ಳುತ್ತೇವೆ. ಆದರೆ, ಕೆಲವು ಸಲ ಮಾತ್ರ ಕೋಪದ ನಿಜ ಕಾರಣಗಳನ್ನು ವಿಶ್ಲೇಷಿಸುತ್ತೇವೆ. ಇಷ್ಟಕ್ಕೂ ಕೋಪ ಏಕೆ ಬರುತ್ತದೆ, ಅದು ಕೆರಳಲು ಪೂರಕವಾದ ಅಂಶಗಳೇನು ಎಂಬುದು ಎಲ್ಲರಿಗೂ ಗೊತ್ತು. ಬದುಕು ನಮ್ಮ ಲೆಕ್ಕಾಚಾರದಂತೆ ಸಾಗುತ್ತಿಲ್ಲ ಎಂದಾಗ, ನಮ್ಮ ಇಷ್ಟ-ಕಷ್ಟಗಳನುಸಾರ ಪರಿಸ್ಥಿತಿಗಳು ಬಾರದೆ ಹೋದರೆ ಕೋಪದ್ದೇ ರಾಜ್ಯಭಾರ. ಎಲ್ಲವೂ ನಾವು ಅಂದುಕೊಂಡಂತೆಯೇ ಆದರೆ, ಅಲ್ಲಿ ಕೋಪಕ್ಕೆ ಜಾಗ ಇಲ್ಲವೇ ಇಲ್ಲ. ಬದುಕಲ್ಲಿ ಏನೋ ಒಂದು ಸಂಭವಿಸಲಿ ಎಂದು ಬಯಸುತ್ತೇವೆ, ಅದು ಆಗುವುದಿಲ್ಲ. ಆದರೆ, ಏನು ಆಗಬಾರದು ಅಂದುಕೊಳ್ಳುತ್ತೇವೆಯೋ, ಅದು ಗತಿಸಿದರೆ ಮನಸ್ಸು ತಳಮಳಗೊಳ್ಳುತ್ತದೆ. ಸಿಟ್ಟು ಮೂಗಿನ ಮೇಲೆ ಪ್ರತ್ಯಕ್ಷ.
ಟೀಕೆಗಳು, ತೀವ್ರ ಒತ್ತಡ, ಅಹನೀಯ ಪರಿಸ್ಥಿತಿಗಳು ಬಂದಾಗ ಸಾಮಾನ್ಯವಾಗಿ ಕೋಪ ಗೊಳ್ಳುತ್ತೇವೆ. ಇದೆಲ್ಲವೂ ಮನುಷ್ಯನ ಸಹಜ ಸ್ವಭಾವ. ಬದುಕು ಸರಳರೇಖೆ ಯಂತೆ ಸಾಗದು. ಏನಾದರೂ ಕಿರಿಕಿರಿಯಾದಾಗ ಒಳಗಿನ ತಾಕಲಾಟಗಳು ಕೋಪದ ರೂಪದಲ್ಲಿ ಸ್ಫೋಟಿಸುತ್ತದೆ. ಕೋಪವನ್ನು ನಿಭಾಯಿಸಲು ಸಾಧ್ಯವಾಗದೇ ಹೋದಾಗ, ಹೃದಯ ಬಡಿತ ಮತ್ತು ರಕ್ತದೊತ್ತಡ ಏರುತ್ತದೆ. ಆಗ ನಾವು ಆಕ್ರಮಣಕಾರಿ ಮನಸ್ಥಿತಿಯನ್ನು ಪ್ರದರ್ಶಿಸುತ್ತೇವೆ. ತಮ್ಮ ವಾದ ತಪ್ಪೆಂದು ಗೊತ್ತಿದ್ದರೂ, ಮೊಂಡು ವಾದಕ್ಕೆ ನಿಂತು ಕೆರಳಿ ಕೆಂಡವಾಗುತ್ತೇವೆ.

ಸಾಧನೆಯ ಹಾದಿಯಲ್ಲಿ ಹೊರಡುವ ಶಿಷ್ಯಂದಿರಿಂದ ಗುರುಗಳ ತನಕ, ಇವರಷ್ಟೇ ಅಲ್ಲ ಪ್ರತಿಯೊಬ್ಬರೂ ಒಂದಲ್ಲ ಒಂದು ಸಲ ಸಿಟ್ಟಿನ ಕೈಗೆ ಮನಸ್ಸು ಕೊಟ್ಟೇ ಇರುತ್ತಾರೆ. ಕೋಪದ ಶಕ್ತಿಯನ್ನು ಹೇಗೆ ಒಳ್ಳೆಯ ಕೆಲಸಕ್ಕೆ ರೂಪಾಂತರಿಸಬಹುದು ಎಂಬುದು ನಿಜವಾದ ಸಾಧಕರಿಗೆ ಅಥವಾ ಮಾಸ್ಟರ್‌ಗಳಿಗೆ ಗೊತ್ತಿರುತ್ತದೆ. ಸಾಮಾನ್ಯರು ಮಾತ್ರ ಈ ಕೋಪತಾಪಕ್ಕೆ ಬಲಿಪಶುಗಳಾಗುತ್ತಾರೆ.

ಸಿಟ್ಟನ್ನು ನಿಯಂತ್ರಿಸಿಕೊಳ್ಳುವ ನಿಟ್ಟಿನಲ್ಲಿ ಪವಿತ್ರ ಗ್ರಂಥಗಳು ಮಾರ್ಗದರ್ಶನ ಮಾಡುತ್ತವೆ. ಸಾಧಕನಾದವನು ಎಲ್ಲ ಇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು, ಚಿತ್ತವನ್ನು ಸ್ಥಿರಗೊಳಿಸಬೇಕು ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ವಿಷಯಗಳನ್ನು ಚಿಂತಿಸುವ ಪುರುಷನಿಗೆ ಆ ವಿಷಯದಲ್ಲಿ ಆಸಕ್ತಿ ಉಂಟಾಗುತ್ತದೆ. ಆಸಕ್ತಿ ಯಿಂದಾಗಿ ಆ ವಿಷಯಗಳ ಕಾಮನೆಯುಂಟಾಗುತ್ತದೆ. ಕಾಮನೆಗಳು ಪೂರ್ಣವಾಗದಿದ್ದಾಗ ಸಿಟ್ಟು ಬರುತ್ತದೆ' (ಗೀತೆಯ 2ನೇ ಅಧ್ಯಾಯ, 63ನೇ ಶ್ಲೋಕ). ಮುಂದಿನ ಶ್ಲೋಕದಲ್ಲಿ - 'ಸಿಟ್ಟಿನಿಂದಾಗಿ ಅತ್ಯಂತ ಮೂಢತೆ ಅಂದರೆ ಅವಿಚಾರ ಉಂಟಾಗುತ್ತದೆ. ಮೂಢತೆಯಿಂದ ಸ್ಮರಣಶಕ್ತಿ ಭ್ರಷ್ಟವಾಗುತ್ತದೆ. ಸ್ಮೃತಿಯಲ್ಲಿ ಭ್ರಮೆಯುಂಟಾದಾಗ ಬುದ್ಧಿ ಅಂದರೆ ಜ್ಞಾನಶಕ್ತಿ ನಾಶವಾಗುತ್ತದೆ. ಬುದ್ಧಿ ನಾಶವಾಗುವುದರಿಂದ ಮನುಷ್ಯನ ಪತನವಾಗುತ್ತದೆ' ಎನ್ನಲಾಗಿದೆ. ಇಷ್ಟು ಮಾತ್ರವಲ್ಲ 'ಮನುಷ್ಯನಿಗೆ ಕೋಪವೇ ದೊಡ್ಡ ಶತ್ರು' ಎಂಬುದನ್ನು ವೇದಗಳು ಅಂದೇ ಹೇಳಿಬಿಟ್ಟಿವೆ.

ಸಾಧನೆಗೆ ಕೋಪವು ದೊಡ್ಡ ಅಡ್ಡಿ. ಕೋಪವನ್ನು ಗೆಲ್ಲಲೇಬೇಕು. ಇದಕ್ಕಾಗಿ ತಾಳ್ಮೆಯನ್ನು ಅಭ್ಯಾಸಮಾಡುವಂತೆ ಜ್ಞಾನಿಗಳು ಶಿಫಾರಸು ಮಾಡುತ್ತಾರೆ. ಕೋಪದ ಪರಿಣಾಮ ವಿವರಿಸುವ ಕತೆಯನ್ನು ಅನೇಕರು ಅನೇಕ ರೀತಿಯಲ್ಲಿ ಹೇಳಿದ್ದಾರೆ. ಒಂದು ಸಲ ಅಪ್ಪನ ಬಳಿಗೆ ಬಂದ ಮಗ, ಸಿಟ್ಟನ್ನು ನಿಯಂತ್ರಿಸುವ ದಾರಿ ತೋರುವಂತೆ ಕೇಳಿದ. ''ಕೋಪವನ್ನು ಗೆಲ್ಲುವುದು ಕಷ್ಟವೇನಲ್ಲ. ನಿನಗೆ ಕೋಪ ಬಂದಾಗ ಒಂದು ಮೊಳೆಯನ್ನು ಈ ಗೋಡೆಗೆ ಹೊಡೆದು ಬಿಡು,'' ಎನ್ನುವ ಅಪ್ಪನ ಉಪಾಯ ಮಗನಿಗೆ ಇಷ್ಟವಾಯಿತು.

ಯಾವುದಾದರೂ ವಿಷಯಕ್ಕೆ ಕೋಪ ಬಂದರೆ, ಅದನ್ನು ಹೊರ ಹಾಕದೇ, ಹೇಗೋ ನಿಭಾಯಿಸಿಕೊಂಡು ಗೋಡೆಗೆ ಮೊಳೆ ಹೊಡೆದು ಬಿಡುತ್ತಿದ್ದ. ಈ ಪ್ರಕ್ರಿಯೆ ಮಧ್ಯೆ ಕೋಪ ಕರಗುತ್ತಿತ್ತು. ಗೋಡೆ ಮೇಲೆ ಮೊಳೆಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮೊಳೆಗಳಿಂದಲೇ ಗೋಡೆ ತುಂಬಿ ಹೋಯಿತು. ಹೀಗೆಯೇ ಒಂದು ದಿನ ಆತನಲ್ಲಿ ಕೋಪ ಹೊರಟೇ ಹೋಯಿತು. ಇದನ್ನು ಅಪ್ಪನಿಗೆ ಖುಷಿಯಿಂದ ಹೇಳುತ್ತಾ, ಆತ ಮೊಳೆಗಳನ್ನು ಗೋಡೆಯಿಂದ ಹೊರತೆಗೆದ. ಮೊಳೆಗಳನ್ನು ತೆಗೆದರೂ ಗೋಡೆಯಲ್ಲಿ ರಂಧ್ರಗಳು ಉಳಿದಿದ್ದವು. ಅದನ್ನು ತೋರಿಸಿದ ತಂದೆ, ''ಕೋಪದ ಪರಿಣಾಮ ದೊಡ್ಡದು. ನೀನು ಮೊಳೆಗಳನ್ನು ತೆಗೆದರೂ ಅದರ ರಂಧ್ರಗಳು ಗೋಡೆಯಲ್ಲಿ ಉಳಿದಂತೆ, ನಿನ್ನ ಕೋಪದಿಂದ ಇತರರಿಗೆ ಆದ ನೋವು, ಸಂಕಟಗಳು ಹಾಗೆಯೇ ಉಳಿದಿರುತ್ತವೆ. ಹೀಗಾಗಿ ಕೋಪ ಕೆಟ್ಟದ್ದು,'' ಎಂದು ತಿಳಿ ಹೇಳಿದ.
ಹಾಗೆಂದು ಎಲ್ಲ ಬಗೆಯ ಕೋಪವನ್ನೂ ಕೆಟ್ಟದ್ದು ಎನ್ನಲಾಗದು. ಇಷ್ಟಕ್ಕೂ ಮನುಷ್ಯನ ಭಾವನೆಗಳನ್ನು ಒಟ್ಟಾಗಿ ಕೆಟ್ಟದ್ದು, ಒಳ್ಳೆಯದು ಎಂದು ವಿಂಗಡಿಸಲಾಗದು. ನಾವು ಭಾವನೆಗಳನ್ನು ಹೇಗೆ ನಿಭಾಯಿಸುತ್ತೇವೆ ಅನ್ನುವುದರ ಮೇಲೆ ಬದುಕಿನಲ್ಲಿ ಪರಿಸ್ಥಿತಿಗಳು ನಿರ್ಮಾಣವಾಗುತ್ತವೆ, ಅಂತಿಮ ಫಲಿತ ಹೊರಬೀಳುತ್ತದೆ. ಕೋಪದ ಬಗ್ಗೆ ಅನೇಕರು ಭಯ ಬೀಳುತ್ತಾರೆ. ಸಿಟ್ಟಿನಿಂದ ಆದ ಅನಾಹುತಗಳನ್ನು ಪಟ್ಟಿ ಮಾಡಿ ಬೆದರಿಸುತ್ತಾರೆ. ಆದರೆ, ಇದು ಒಂದು ಭಾಗವಷ್ಟೆ. ಇದರ ಹಿಂದೆ ಇನ್ನೊಂದು ಭಾಗವೂ ಇದೆ ಎಂಬುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಈ ಜಗತ್ತಿನಲ್ಲಿ ಕ್ರಾಂತಿಗಳು, ಬಂಡಾಯಗಳು, ಸ್ವಾತಂತ್ರ್ಯ ಹೋರಾಟಗಳೆಲ್ಲವೂ ಆರಂಭಗೊಂಡಿದ್ದು ಹೇಗೆ? ವ್ಯತಿರಿಕ್ತ ಪರಿಸ್ಥಿತಿಯಿಂದ ಬೇಸತ್ತು, ಜಿಗುಪ್ಸೆಗೊಂಡು, ವ್ಯವಸ್ಥೆ ವಿರುದ್ಧ ನಿಂತವನ ಅತಿಯಾದ ಕೋಪವೇ ಬದಲಾವಣೆಗೆ ನಾಂದಿಯಾಗಿದ್ದನ್ನು ಇತಿಹಾಸದಲ್ಲಿ ಕಾಣಬಹುದು. ಅನ್ಯಾಯ, ಭ್ರಷ್ಟಾಚಾರ, ಅಕ್ರಮ, ಹಿಂಸೆಯನ್ನು ವಿರೋಧಿಸುವಂಥ ಕೋಪ ನಿಜಕ್ಕೂ ಒಳ್ಳೆಯದು. ಇಂಥ ಹೊತ್ತಿನಲ್ಲಿ ಕೋಪವೇ ಒಂದು ಸಾಧನ. ಇದು ಸಮಷ್ಟಿಯ ಹಿತಕ್ಕಾಗಿ ಹುಟ್ಟುವ ಕೋಪ ಕುರಿತ ವಿಚಾರ.
ಇನ್ನು ವೈಯಕ್ತಿಕವಾಗಿ ಹೇಳುವುದಾದರೆ, ಅನೇಕ ಸಲ ಕೋಪವು ನಮ್ಮ ಅಹಂನ ಹೊರಸೂಸುವಿಕೆಯ ರೂಪದಲ್ಲಿ ಹೊರಬೀಳುತ್ತದೆ. ನಮ್ಮ ನಡುವಿನ ಹುಸಿ ಭ್ರಮೆಗಳು, 'ನಾನು' ಎಂಬ ಭಾವ ಕೋಪಕ್ಕೆ ಮೂಲವಾಗಬಹುದು. ಯಾರೋ ಒಬ್ಬರು ಅವಮಾನ ಮಾಡಿದರು, ಇನ್ಯಾರೋ ನಮ್ಮ ಮಾತು ಕೇಳುತ್ತಿಲ್ಲ, ಮತ್ತಾರೋ ನಮ್ಮನ್ನು ನಿರ್ಲಕ್ಷ್ಯ ಮಾಡಿ ತಮ್ಮದೇ ತೀರ್ಮಾನ ಕೈಗೊಂಡರು ಎಂಬಂಥ ಹೊತ್ತಿನಲ್ಲಿ ಮನುಷ್ಯ ಕೆರಳಿ ಕೆಂಡವಾಗುತ್ತಾನೆ. ನನ್ನನ್ನು ಒಪ್ಪಿಕೊಂಡರೆ ಮಾತ್ರ ಸಂತೋಷ. ತಿರಸ್ಕರಿಸಿದರೆ ಕೋಪ ಬರುತ್ತದೆ ಎನ್ನುವಂಥ ಮನಸ್ಥಿತಿಯನ್ನು ನಾವು ಹೊಂದಿದ್ದೇವೆ. ನಿಜಕ್ಕೂ ನಮಗೆ ನಾವೇ ಮಾಸ್ಟರ್‌ಗಳಲ್ಲ. ದಾರಿ ತೋರಿ ಎಂದು ಇನ್ಯಾರತ್ತಲೋ ಧೈನ್ಯದಿಂದ ನೋಡುತ್ತೇವೆ. ಆದರೆ ವಿಚಿತ್ರವೆಂದರೆ, ಬೇರೆಯವರ ಪಾಲಿಗೆ ಮಾಸ್ಟರ್‌ಗಳಾಗಲು ಹೊರಟುಬಿಡುತ್ತೇವೆ!
ಅಹಂ ಅನ್ನು 'ಸ್ವಯಂ ಪ್ರಾಮುಖ್ಯದ ವಿಪರೀತ ಭಾವನೆ' ಎಂದು ವ್ಯಾಖ್ಯಾನಿಸಲಾಗುತ್ತದೆ. ಬೌದ್ಧ ಧರ್ಮವು ಅಹಂ ಅನ್ನು 'ಅಜ್ಞಾನದಿಂದ ನಾವು ಗುರುತಿಸಿಕೊಳ್ಳುವ ಭ್ರಮೆಯ ಮಾನಸಿಕ ಸ್ಥಿತಿ' ಎನ್ನುತ್ತದೆ. ಅದು 'ಎಲ್ಲವೂ ನನ್ನಿಂದ ಮತ್ತು ನನಗಾಗಿ' ಎಂಬ ಸ್ವಾರ್ಥ ಮನಸ್ಥಿತಿ. ಇದರಿಂದ ಔನ್ನತ್ಯದ ಹುಸಿ ಮನೋಭಾವ ಉಂಟಾಗುತ್ತದೆ ಮತ್ತು ಅವಾಸ್ತವಿಕ ಆಸೆಗಳನ್ನು ಪೂರೈಸಿಕೊಳ್ಳಲು ಬಲವಂತಪಡಿಸುತ್ತದೆ. ಈ ಅವಾಸ್ತವಿಕ ಬಯಕೆಗಳು ಮುಖ್ಯವಾಗಿ ತನ್ನ ಕುರಿತಾಗಿರುತ್ತದೆ. ಸದಾ ತಾನು ಎಲ್ಲರ ಗಮನದ ಕೇಂದ್ರಬಿಂದುವಾಗಿರಬೇಕು; ಪ್ರತಿಯೊಬ್ಬರೂ ತನ್ನನ್ನು ಒಪ್ಪಿಕೊಳ್ಳಬೇಕು ಇತ್ಯಾದಿ ಭಾವನೆಗಳಿಂದ ತಮ್ಮ ಬಗ್ಗೆ ಮೂಡಿಸಿಕೊಂಡ ಚಿತ್ರವಾಗಿರುತ್ತದೆ. ಎಲ್ಲದಕ್ಕೂ ತನಗೇ ಪ್ರಶಂಸೆ ಸಲ್ಲಬೇಕು, ತಾನು ಎಂದಿಗೂ ತಪ್ಪೇ ಮಾಡುವುದಿಲ್ಲ ಮುಂತಾದ ಭಾವನೆ ಸಹ ಈ ಸ್ವಕಲ್ಪಿತ ಚಿತ್ರದಲ್ಲಿರುತ್ತವೆ. ಈ ಹಂಬಲ ಮತ್ತು ಬಯಕೆಗಳು ಹೆಚ್ಚಾದಾಗ ಅವು ದುರಾಸೆ, ಅಸೂಯೆ, ದ್ವೇಷ ಮತ್ತು ಅಭದ್ರತಾ ಭಾವನೆಯನ್ನು ಮೂಡಿಸುತ್ತದೆ.
ಉದಾಹರಣೆಗೆ ; ಒಬ್ಬ ವ್ಯಕ್ತಿ ಕುರಿತಾಗಿ ನಿಮ್ಮಲ್ಲಿ ಯಾವಾಗ ಲೈಂಗಿಕ ಭಾವನೆಗಳು ಹುಟ್ಟುತ್ತವೆ, ಲೈಂಗಿಕ ಸಂಪರ್ಕ ಸಾಧ್ಯವಾಗುತ್ತದೆ, ಲೈಂಗಿಕವಾಗಿ ಆಕರ್ಷಿತವಾಗುವಿರಿ... ಈ ಸಂದರ್ಭದಲ್ಲಿ ನಿಮ್ಮೊಳಗೆ ಅಸೂಯೆ ಪ್ರವೇಶಿಸುತ್ತದೆ. ಏಕೆಂದರೆ ನಿಮ್ಮ ಆ ನಡವಳಿಕೆಗಳು ನಿಜಕ್ಕೂ ಪ್ರೀತಿ ಆಗಿಲ್ಲದೇ ಇರುವುದೇ ಕಾರಣ. ಪ್ರೀತಿಯಲ್ಲಿ ಮುಳುಗಿದ್ದೇ ಆಗಿದ್ದರೆ, ಅಲ್ಲಿ ಅಸೂಯೆಗೆ ಜಾಗವಿಲ್ಲ. ನೀವು ಯಾವಾಗ ಲೈಂಗಿಕತೆಯಲ್ಲಿ ನಂಟು ಹೊಂದಿರುವಿರೋ ಅಲ್ಲೆಲ್ಲ ಭಯ ಇರುತ್ತದೆ. ಏಕೆಂದರೆ ಲೈಂಗಿಕತೆಯು ಸಂಬಂಧವಲ್ಲ. ಅದು ನಮ್ಮ ಸ್ವಾರ್ಥಕ್ಕೆ ಇನ್ನೊಬ್ಬರ ಬಳಸಿಕೊಳ್ಳುವ ಪ್ರಕ್ರಿಯೆ ಮಾತ್ರ. ಅಂದರೆ ಶೋಷಣೆ ಎಂದು ಬೇಕಾದರೂ ಹೇಳಬಹುದು.
ನೀವು ಒಬ್ಬ ಮಹಿಳೆ ಅಥವಾ ಪುರುಷರ ಜತೆ ನಂಟು ಹೊಂದಿರುವಿರಿ ಎಂದು ಭಾವಿಸಿ. ಅವರು ಇನ್ನೊಬ್ಬರ ಜತೆ ಇಂಥದ್ದೇ ನಂಟು ಹೊಂದಬಹುದು ಎನ್ನುವ ಭಯ, ಕಳವಳ ಸದಾ ಇರುತ್ತದೆ. ಇದು ನಿಜಕ್ಕೂ ಸಂಬಂಧವಲ್ಲ. ಇದು ಕೇವಲ ಪರಸ್ಪರ ಒಪ್ಪಿತ ಶೋಷಣೆ. ಒಬ್ಬರಿಗೊಬ್ಬರು ಶೋಷಿಸಿಕೊಳ್ಳುತ್ತಲೇ ಪ್ರೀತಿಯಿಲ್ಲದೆಯೇ ಬದುಕುತ್ತಾರೆ. ತಮ್ಮ ನಡುವಿನ ಬಂಧ ಎಂಥದ್ದು ಎಂದು ಗೊತ್ತಿರುವುದರಿಂದಲೇ ಅವರಲ್ಲಿ ಭಯ ಜಾಗತವಾಗಿರುತ್ತದೆ. ಇಂಥ ಭಯ ಹುಟ್ಟಿದಾಗ ಅಸೂಯೆ ಅದರೊಟ್ಟಿಗೆ ಕಾಲಿಡುತ್ತದೆ. ಹೀಗಾಗಿಯೇ ಮಹಿಳೆಯಾದವರು ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ. ನಿಮ್ಮ ಸಂಗಾತಿ ಮೇಲೆ ನಿಗಾ ಇಡುವಿರಿ. ಪುರುಷನೊಬ್ಬ ಮತ್ತೊಂದು ಹೆಣ್ಣನ್ನು ನೋಡದಂತೆ ಮಾಡುತ್ತಾರೆ. ಒಂದು ವೇಳೆ ಇನ್ನೊಂದು ಹೆಣ್ಣನ್ನು ನೋಡಿದರೆ, ಅದು ಅಪಾಯ. ಅವಳೊಟ್ಟಿಗೆ ಆತ ಹೋಗಿಬಿಟ್ಟರೆ ಹೇಗೆ ಎನ್ನುವ ಭಯ ಸಂಗಾತಿಗೆ ಹುಟ್ಟುತ್ತದೆ. ಇನ್ನೊಬ್ಬ ಮಹಿಳೆಯ ಜತೆ ಪುರುಷ ಸೇರುವ, ಅಥವಾ ಪುರುಷನ ಜತೆ ಮಹಿಳೆ ಸೇರುವ, ಭೇಟಿ ಮಾಡುವ ಎಲ್ಲ ದಾರಿಗಳನ್ನು ಮುಚ್ಚಲಾಗುತ್ತದೆ.
ಲೈಂಗಿಕತೆ ಎನ್ನುವುದು ಅಸೂಯೆಯನ್ನು ಸಷ್ಟಿಸಬಹುದು. ಆದರೆ ಇದು ಅಷ್ಟು ಮುಖ್ಯವಲ್ಲ. ಅಸೂಯೆಯನ್ನು ಕಳೆದುಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಯೂ ಅಷ್ಟೇನೂ ಮುಖ್ಯವಲ್ಲ. ಏಕೆಂದರೆ ಲೈಂಗಿಕತೆಯನ್ನು ಬಿಡಲಾಗದು, ಹೀಗಾಗಿ ಅಸೂಯೆಯನ್ನು ಕಳಚಲಾಗದು. ಇಲ್ಲಿ ನಿಜಕ್ಕೂ ಪ್ರಶ್ನೆಯೆಂದರೆ ಲೈಂಗಿಕತೆಯನ್ನು ಪ್ರೀತಿಯಾಗಿ ರೂಪಾಂತರಿಸುವುದು ಹೇಗೆ? ಇದರಿಂದಷ್ಟೇ ಅಸೂಯೆ ತೊಲಗಲು ಸಾಧ್ಯ. ನೀವು ಬಹಳ ನಂಬಿಕೆಯಿಟ್ಟು ಒಬ್ಬರನ್ನು ಪ್ರೀತಿಸುವಿರಿ ಎಂದಿಟ್ಟುಕೊಳ್ಳಿ. ಆಕೆ ನನ್ನನ್ನು ಬಿಟ್ಟು ಇನ್ನೊಬ್ಬರಲ್ಲಿಗೆ ಹೋಗಲಾರಳು-
 ಎನ್ನುವ ನಂಬಿಕೆ ನಿಮ್ಮದಾಗಿರುತ್ತದೆ. ಒಂದು ವೇಳೆ ಆಕೆ ಹೋದರೆ ಏನು ಮಾಡಲು ಸಾಧ್ಯ? ದೈಹಿಕವಾಗಷ್ಟೇ ದೇಹಗಳ ಮಿಲನವಾದರೆ, ಇಲ್ಲಿ ಅಂತರಂಗವನ್ನು ಮುಟ್ಟಲು ಸಾಧ್ಯವೇ ಆಗುವುದಿಲ್ಲ. ಆಗ ನೀವು ಮತ್ತೆ ಉನ್ನತವಾದುದನ್ನು ಕಳೆದುಕೊಳ್ಳುವಿರಿ. ಗಾಢವಾದ ಸಂಬಂಧ ಇಬ್ಬರ ನಡುವೆ ಸಾಧ್ಯವಾದರೆ ಮಾತ್ರ ಪ್ರೇಮದ ಸದ್ದು ನಿಮ್ಮೊಳಗೆ ಮಾರ್ದನಿಸುತ್ತದೆ. ಈ ಪ್ರೇಮದ ಮೂಲಕವೇ ಕೆಲವರು ನಿಮ್ಮ ಅಂತರಂಗವನ್ನು ಮುಟ್ಟುತ್ತಾರೆ ಮತ್ತು ಕಂಡುಕೊಳ್ಳುತ್ತಾರೆ. ಅಂತರಂಗ ಶೋಧಕ್ಕೆ ಎರಡು ಮಾರ್ಗಗಳಿವೆ. ಒಂದು ಧ್ಯಾನ. ಇನ್ನೊಂದು ಪ್ರೀತಿ. ಇವುಗಳ ಮೂಲಕ ನೀವು ಮತ್ತು ಇನ್ನೊಬ್ಬರೂ ಅಂತರಂಗವನ್ನು ಮುಟ್ಟಬಹುದು. ಪ್ರೀತಿ ಅನ್ನುವುದು ಅಸೂಯೆಯಲ್ಲ. ಪ್ರೀತಿ ಇದ್ದ ಕಡೆ ಅಸೂಯೆ ಇರಲು ಅಸಾಧ್ಯ. ಪ್ರೀತಿ ಎನ್ನುವುದು ಸದಾ ವಿಶ್ವಾಸವನ್ನು ನೀಡುವಂಥದ್ದು. ಒಂದು ವೇಳೆ ವಿಶ್ವಾಸವನ್ನು ಯಾರಾದರೂ ಮುರಿದರೂ, ಅದನ್ನು ಪ್ರೀತಿ ಇದ್ದದ್ದೇ ಆದರೆ ಅಂಗೀಕರಿಸಿಬಿಡುತ್ತೇವೆ.
ಸಾಮಾನ್ಯವಾಗಿ ನಾವು ನಮ್ಮ ಹತ್ತಿರದ ಬಂಧುಮಿತ್ರರನ್ನು ಮಾತ್ರ ಪ್ರೀತಿಸುತ್ತೇವೆ. ಅದರಲ್ಲಿ ಕೆಲವರನ್ನು ಸ್ವಲ್ಪ ಹೆಚ್ಚು ಪ್ರೀತಿಸುತ್ತೇವೆ. ಅವರ ಕೆಲವು ಗುಣಗಳು ನಮ್ಮ ಪ್ರೀತಿಗೆ ಕಾರಣವಾಗಿದ್ದರೆ ಅದು ನಿಜವಾದ ಪ್ರೀತಿಯಲ್ಲ; ನಿಜವಾದ ಪ್ರೀತಿಯಲ್ಲಿ ವಿಮರ್ಶೆ ಇರುವುದಿಲ್ಲ. ವಿಮರ್ಶೆಯಿದ್ದಲ್ಲಿ ಅನಿರ್ಬಂಧಿತ ಪ್ರೀತಿಯಿರಲು ಸಾಧ್ಯವಿಲ್ಲ. ಆದ್ದರಿಂದ ಪ್ರೀತಿಯನ್ನು ಅನುಭವಿಸಿ ಹರಡಬೇಕಾದರೆ ಮೊದಲನೆಯದಾಗಿ ಇತರರ ಟೀಕೆ ಸಲ್ಲದು. ಇತರರು ನಮ್ಮಿಷ್ಟದಂತೆ ವರ್ತಿಸಬೇಕು ಎಂಬ ಛಲವಿರಬಾರದು. ಇದ್ದರೆ ನಾವು ಸಹನೆ ಕಳೆದುಕೊಳ್ಳುತ್ತೇವೆ. ಯಾವುದೇ ವಿಷಯದಲ್ಲಿ ಬಲವಾದ ಅಭಿಪ್ರಾಯಗಳಿರಬಾರದು. ಇತರರನ್ನು ನಿಯಂತ್ರಿಸುವುದನ್ನು ಬಿಡಬೇಕು. ಮತ್ತು ನಮ್ಮನ್ನು ನಾವು ತಪ್ಪಿತಸ್ಥರೆಂದು ತೀರ್ಮಾನಿಸಿಕೊಳ್ಳಬಾರದು. ಹೀಗೆ ನಮ್ಮನ್ನು ನಾವು ತೀರ್ಮಾನಿಸಿಕೊಂಡರೆ, ಖಂಡಿಸಿಕೊಂಡರೆ ನಮ್ಮಲ್ಲಿ ತಪ್ಪಿತಸ್ಥ ಭಾವನೆ ಮೂಡುತ್ತದೆ. ತಪ್ಪಿತಸ್ಥ ಭಾವನೆ ಅಥವಾ ಆತ್ಮನಿಂದನೆ ಇದ್ದಾಗ, ನಮ್ಮನ್ನು ನಾವು ಪ್ರೀತಿಸಲು ಆಗುವುದಿಲ್ಲ. ನಮ್ಮನ್ನು ನಾವು ಕ್ಷಮಿಸಬೇಕು ಮತ್ತು ತಪ್ಪಿತಸ್ಥ ಭಾವನೆಯಿಂದ ಹೊರಬರಬೇಕು. ನಮ್ಮನ್ನು ನಾವು ಪ್ರಾಮಾಣಿಕವಾಗಿ ಪ್ರೀತಿಸಿದಾಗ ಮಾತ್ರ, ನಾವು ಇತರರನ್ನು ಪ್ರೀತಿಸಲು ಸಾಧ್ಯ. ಈ ಸ್ವ-ಪ್ರೀತಿಯನ್ನು ಸ್ವ-ವ್ಯಾಮೋಹ ಎಂದು ತಪ್ಪಾಗಿ ತಿಳಿಯಬಾರದು. ಎಲ್ಲರನ್ನೂ ಅನಿರ್ಬಂಧಿತವಾಗಿ ಪ್ರೀತಿಸಬೇಕಾದರೆ ಮೊದಲು ಎಲ್ಲರನ್ನೂ ಕ್ಷಮಿಸಬೇಕು. ಇದಕ್ಕೆ ಅವರ ಬಗೆಗಿನ ಯೋಚನೆಗಳು ಅಡ್ಡಿಯಾಗಬಾರದು. ಕ್ಷಮೆಯೆಂದರೆ ದಯೆಯಲ್ಲ; ಕ್ಷಮೆಯೆಂದರೆ ಸ್ವೀಕೃತಿ ಮತ್ತು ಶರಣಾಗತಿ. ಕ್ಷಮೆಯಿದ್ದರೆ ನಮಗೆ ಅಸಮಾಧಾನ ಮತ್ತು ವೈಮನಸ್ಯಗಳ ಬಂಧನಗಳಿಂದ ಮುಕ್ತಿ ಸಿಗುತ್ತದೆ.
ಬಹಳಷ್ಟು ಮಂದಿಗೆ ತಮ್ಮಲ್ಲಿರುವ ಅಹಂ ಕುರಿತು ಗೊತ್ತಿರುವುದೇ ಇಲ್ಲ. ಅಲ್ಲದೆ, ಆತ್ಮಗೌರವ ಮತ್ತು ಅಹಂ ನಡುವಿನ ವ್ಯತ್ಯಾಸವೂ ಗೊತ್ತಿರುವುದಿಲ್ಲ. ಖ್ಯಾತ ಲೇಖಕ ವೇನ್ ಡೈಯರ್, ''ಅಹಂ ಎನ್ನುವುದು ನೀವು ಯಾರೆಂದು ನಿಮ್ಮನ್ನು ನೀವು ಸುತ್ತುವರೆದುಕೊಂಡಿರುವ ಆಲೋಚನೆ,'' ಎನ್ನುತ್ತಾನೆ. ಅದು ಒಬ್ಬರು ತನ್ನ ಮನಸ್ಸಿನಲ್ಲಿ ಸೃಷ್ಟಿಸಿಕೊಂಡಿರುವ ಚಿತ್ರವಾಗಿರಬಹುದು. ಆ ಚಿತ್ರ ನಿಜ ಅಥವಾ ಸುಳ್ಳಾಗಿರಬಹುದು. ಆದರೆ, ಆ ಚಿತ್ರವನ್ನು ಉಳಿಸಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಾರೆ.
ಒಬ್ಬ ವ್ಯಕ್ತಿ ಅಹಂ ಭಾವನೆಯಿಂದ ಸಂಭಾಷಣೆಯಲ್ಲಿ ತೊಡಗಿರುತ್ತಾನೆ ಎಂದುಕೊಳ್ಳೋಣ. ಆತ ಎದುರಿದ್ದವರ ಮಾತುಗಳನ್ನು ಕೇಳಿಸಿಕೊಳ್ಳುವುದಿಲ್ಲ. ಬದಲಾಗಿ, ತಾನೇ ಎಲ್ಲರ ಗಮನದ ಕೇಂದ್ರವಾಗಬೇಕು ಎಂದು ಬಯಸುತ್ತಾನೆ. ತನಗೆ ಎಲ್ಲವೂ ಗೊತ್ತಿದೆ ಎಂದು ಭಾವಿಸುತ್ತಾನೆ. ಇತರರ ಅಭಿಪ್ರಾಯಕ್ಕೆ ಆತ ಬೆಲೆ ಕೊಡಲಾರ. ಅಷ್ಟೇ ಅಲ್ಲ, ಅವರ ಬಗ್ಗೆ ಅನುಕಂಪವನ್ನೂ ಹೊಂದಿರಲಾರ.
ನಮ್ಮ ಪ್ರತಿದಿನದ ವರ್ತನೆಯಲ್ಲಿ ನಾವು ಎಲ್ಲಿ ಅಹಂಕಾರದಿಂದ ವರ್ತಿಸುತ್ತೇವೆ ಮತ್ತು ಎಲ್ಲಿ ಆರೋಗ್ಯಕರ ಆತ್ಮಗೌರವ ಕಾಪಾಡಿಕೊಂದು ಕಾರ್ಯನಿರ್ವಹಿಸುತ್ತೇವೆ ಎಂದು ಅರ್ಥ ಮಾಡಿಕೊಳ್ಳಬೇಕು.
ಪ್ಯಾಸ್ಟರ್ ನಥಾನಿಯಲ್ ಬೊರಾನರ್ ಜೂನಿಯರ್, ''ಅಹಂಗೆ ಬಹಳ ಹೊಟ್ಟೆಬಾಕತನವಿದೆ. ಎಷ್ಟು ಸೇವಿಸುತ್ತೀರೋ ಅಷ್ಟೂ ಹಸಿವಾಗುತ್ತದೆ,'' ಎನ್ನುತ್ತಾನೆ. ಆದ್ದರಿಂದ ನಿತ್ಯ ಜೀವನದಲ್ಲಿ ಅಹಂ ಮತ್ತು ಆತ್ಮಗೌರವದ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ದೈನಂದಿನ ಜೀವನದಲ್ಲಿ ಅಹಂನಿಂದ ವರ್ತಿಸುವವರು ಇತರರೊಂದಿಗೆ ಅವಿನಯದಿಂದ ವರ್ತಿಸುತ್ತಾರೆ. ತಮಗಿಂತ ಕೆಳಗಿನವರು ಅಥವಾ ಅಮುಖ್ಯರು ಎಂದು ಭಾವಿಸುವವರ ಜತೆ ಒರಟಾಗಿಯೂ ವರ್ತಿಸಬಹುದು. ಆರೋಗ್ಯಕರವಾದ ಆತ್ಮಗೌರವ ಉಳ್ಳವರು ಎಲ್ಲರನ್ನೂ ಗೌರವದಿಂದ ಕಾಣುತ್ತಾರೆ.
ರಾಮಾಯಣದಲ್ಲಿ ಬರುವ ರಾಮ ನಿಜಕ್ಕೂ ಸ್ಥಿತಪ್ರಜ್ಞ. ಅಯೋಧ್ಯೆಯಲ್ಲಿ ಅವನ ಪಟ್ಟಾಭಿಷೇಕಕ್ಕೆ ಸಕಲ ಸಿದ್ಧತೆಗಳೂ ನಡೆದಿರುತ್ತವೆ. ಅಂದು ಬೆಳಗ್ಗೆ ಸ್ನಾನ ಮಾಡಿ, ಪರಿಶುಭ್ರನಾಗಿ ರೇಷ್ಮೆ ವಸ್ತ್ರ ಮತ್ತು ವಜ್ರಾಭರಣಗಳನ್ನು ಧರಿಸಿ ಪಟ್ಟಾಭಿಷೇಕಕ್ಕೆ ಸಜ್ಜಾಗುತ್ತಿರುತ್ತಾನೆ. ಊರಿಗೆ ಊರೇ ಆ ಸಂಭ್ರಮದಲ್ಲಿ ಭಾಗಿಯಾಗಿರುತ್ತದೆ. ಅಷ್ಟರಲ್ಲಿ ತನ್ನನ್ನು ನೋಡಲು ಬರುವಂತೆ ದಶರಥನಿಂದ ರಾಮನಿಗೆ ಕರೆ ಬರುತ್ತದೆ. ತಂದೆ ದಶರಥನ ಮಾತಿಗೆ ಬೆಲೆ ಕೊಟ್ಟು 14 ವರ್ಷಗಳ ಅರಣ್ಯವಾಸಕ್ಕೆ ರಾಮ ಹೊರಡುತ್ತಾನೆ. ಪಟ್ಟದ ಸಿಂಹಾಸನ ಏರುವ ಸಂದರ್ಭ ಬದಲಾಗಿ, ಕಾಡಿನ ಹಾದಿ ಕಂಡಾಗ ರಾಮ ಕಂಗೆಡಲಿಲ್ಲ. ಎಲ್ಲ ಪರಿಸ್ಥಿತಿಯನ್ನೂ ಆತ ಸಮಚಿತ್ತದಿಂದ ಸ್ವೀಕರಿಸಿ ಮಹಾನ್ ವ್ಯಕ್ತಿಯಾದ. ಆತನ ಸ್ಥಿತಪ್ರಜ್ಞತೆ ಮಾದರಿಯಾಗುವಂಥದ್ದು.

ಸುಮ್ಮನೆ ಯೋಚಿಸಿ ನೋಡಿ... ನೀವು ಕಾಲೇಜಿಗೆ ಹೊರಟಿರುವಿರಿ. ಇದೇ ವೇಳೆ ನಿಮ್ಮ ಸಹೋದರ ಬೈಕ್ ಎತ್ತಿಕೊಂಡು ಹೋಗುವಂತಾಗಿ, ನೀವು ಬಸ್‌ನಲ್ಲಿ ಹೋಗುವಂಥ ಪರಿಸ್ಥಿತಿ ಬಂದರೆ ಹೇಗೆ ಪ್ರತಿಕ್ರಿಯಿಸುವಿರಿ? ಗೆಳೆಯರ ಜತೆ ಎಲ್ಲೋ ಹೊರಗೆ ಸುತ್ತಾಡಲು ಸಜ್ಜಾದ ಸಮಯದಲ್ಲಿ, ನಿಮ್ಮ ಅಜ್ಜಿಯನ್ನು ವೈದ್ಯರಲ್ಲಿಗೆ ಕರೆದೊಯ್ಯುವಂತೆ ತಾಯಿ ಹೇಳಿದರೆ ಹೇಗೆ ವರ್ತಿಸುವಿರಿ? ಭಾನುವಾರದ ರಜಾದಿನ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುವುದಾಗಿ ಪ್ರೊಫೆಸರ್ ಹೇಳಿದರೆ ಏನನಿಸುತ್ತದೆ? ಒನ್ ಡೇ ಕ್ರಿಕೆಟ್ ಪಂದ್ಯವನ್ನು ಟಿ.ವಿ.ಯಲ್ಲಿ ನೋಡುವಾಗ ಕರೆಂಟ್ ಹೋದರೆ ಹೇಗನ್ನಿಸುತ್ತದೆ?-ಇಂಥ ಪರಿಸ್ಥಿತಿಗಳಲ್ಲಿ ನಿಮ್ಮ ವರ್ತನೆ ಹೇಗಿರುತ್ತದೆ? ಇವೆಲ್ಲವೂ ತೀರಾ ಮುಖ್ಯ ಸಂಗತಿಗಳೇನಲ್ಲ. ಆದರೂ ನಿಮ್ಮ ಅಸಹನೆ, ಅತೃಪ್ತಿಗಳು ಹೊರಬೀಳುತ್ತವೆ.

ಆದರೆ, ಪುರಾಣಪುರುಷ ರಾಮ ನಮ್ಮ ನಿಮ್ಮಂತೆ ವರ್ತಿಸಲಿಲ್ಲ. ವ್ಯತಿರಿಕ್ತ ಸಂದರ್ಭದಲ್ಲೂ ಸ್ಥಿತಪ್ರಜ್ಞೆಯನ್ನು ಕಾಯ್ದುಕೊಂಡು ನಮ್ಮೆಲ್ಲರಿಗೂ ಮಾದರಿಯಾಗಿದ್ದಾನೆ. ಪಟ್ಟಾಭಿಷೇಕ ತಪ್ಪಿ, ಕಾಡಿಗೆ ಹೋಗುವ ಸಂದರ್ಭ ಬಂದಾಗ ರಾಮ ಒಂದಿಷ್ಟೂ ಕುಗ್ಗಲಿಲ್ಲ. ಅರಸೊತ್ತಿಗೆ ತಪ್ಪಿ ಕಾಡು ಪಾಲಾದೆನಲ್ಲ ಎಂದು ಕೊರಗಲಿಲ್ಲ. ಅದು ಕಿರಿಕಿರಿ ಎಂದೂ ಅನಿಸಲಿಲ್ಲ. ಯಾವ ಪ್ರತಿರೋಧವನ್ನೂ ತೋರದೆ, ತಣ್ಣಗೆ ಅಪ್ಪನ ಅಣತಿಯಂತೆ ಕಾಡಿನತ್ತ ಮುಖ ಮಾಡಿದ. ಇಂಥ ಮನಸ್ಥಿತಿ ನಮ್ಮದಾಗುವುದು ಏಕೆ ಸಾಧ್ಯವಿಲ್ಲ?
ಇಲ್ಲೊಂದು ಸ್ವಾರಸ್ಯಕರ ಕತೆ ಇದೆ. ಇದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರೋ ಗೊತ್ತಿಲ್ಲ. ಒಂದೂರಲ್ಲಿ ಒಬ್ಬ ರೈತನಿದ್ದ. ಅವನ ಮನೆಯಲ್ಲಿದ್ದ ದೊಡ್ಡ ಇಲಿಯೊಂದು ತುಂಬಾ ಕಾಟ ಕೊಡುತ್ತಿತ್ತು. ಅದನ್ನು ಕೊಲ್ಲುವುದಕ್ಕಾಗಿ ರೈತನು ಹೆಣ್ಣು ಬೆಕ್ಕೊಂದನ್ನು ತಂದ. ಇನ್ನು ತನ್ನ ಸಮಸ್ಯೆ ತೀರಿತು ಎಂದು ಭಾಸಿದ. ಆದರೆ ಆ ಬೆಕ್ಕನ್ನು ಇಲಿ ಮಣ್ಣು ಮುಕ್ಕಿಸಿತು. ಪ್ರಾಣ ಭಯದಿಂದ ಅದು ಓಡಿ ಹೋಯಿತು. ಪಟ್ಟು ಬಿಡದ ರೈತ ಈ ಸಲ ಗಂಡು ಬೆಕ್ಕೊಂದನ್ನು ತಂದ. ಹಿಂದೆ ಆದಂತೆಯೇ ಈ ಬೆಕ್ಕನ್ನೂ ಇಲಿ ಬೆದರಿಸಿ, ನಾಲ್ಕೇಟು ಬಿಗಿಯಿತು. ರೈತನ ಪಾಲಿಗೆ ನಿಜಕ್ಕೂ ಇದೊಂದು ಒಗಟಾಯಿತು. ಬೆಕ್ಕುಗಳಿಗೂ ಇದು ಅವಮಾನದ ವಿಷಯವಾಯಿತು.
ಎಲ್ಲ ಬೆಕ್ಕುಗಳೂ ಸಭೆ ನಡೆಸಿ, ತಮ್ಮ ಮುಂದಿರುವ ಸವಾಲು ಕುರಿತು ಚರ್ಚಿಸಿದವು. ಆ ಇಲಿಯನ್ನು ಎದುರಿಸುವುದು ಹೇಗೆ ಎಂದು ತಲೆ ಕೆಡಿಸಿಕೊಂಡವು. ಕೊನೆಗೆ ಒಂದು ಮುದಿ ಬೆಕ್ಕು, ''ನಾನು ಆ ಇಲಿಗೆ ತಕ್ಕ ಪಾಠ ಕಲಿಸುತ್ತೇನೆ,'' ಎಂದು ಮುಂದೆ ಬಂದಿತು. ಎಲ್ಲ ಬೆಕ್ಕುಗಳಿಗೂ ಅಚ್ಚರಿ, ಯಾರಿಗೂ ಸಾಧ್ಯವಾಗದ್ದು ಮುದಿ ಬೆಕ್ಕಿನಿಂದ ಆಗುತ್ತಾ ಎಂದುಕೊಂಡವು. ರೈತನೂ ಇದನ್ನೆಲ್ಲ ನೋಡುತ್ತಿದ್ದ.
ನಿಗದಿಯಾದಂತೆಯೇ ಒಂದು ದಿನ ಮುದಿ ಬೆಕ್ಕು ರೈತನ ಮನೆಗೆ ಬಂದು, ಆ ಇಲಿಯನ್ನು ಮುಖಾಮುಖಿಯಾಯಿತು. ಎರಡೂ ಕಣ್ಣಲ್ಲಿ ಕಣ್ಣಿಟ್ಟು ನೋಡಿದವು. ನೋಡ ನೋಡುತ್ತಲೇ ಇಲಿಯನ್ನು ಬಾಯಲ್ಲಿ ಕಚ್ಚಿಕೊಂಡ ಬೆಕ್ಕು ಮನೆಯಿಂದ ಹೊರ ನಡೆಯಿತು. ಮುದಿ ಬೆಕ್ಕಿನ ಯಶಸ್ಸಿನ ಗುಟ್ಟು ತಿಳಿಯಲು ಇತರೆ ಬೆಕ್ಕುಗಳು ಮತ್ತು ರೈತನಿಗೆ ಕಾತುರ. ನೋಡಿ, ಇದರಲ್ಲಿ ಗುಟ್ಟೇನಿಲ್ಲ. ಆ ಇಲಿಗೆ ಬೆಕ್ಕುಗಳ ಸಮರ ಪಟ್ಟುಗಳು ಕರತಲಾಮಲಕವಾಗಿತ್ತು. ಎದುರಿಗೆ ನಿಂತ ಬೆಕ್ಕಿನ ಕಣ್ಣಲ್ಲಿ ಕಣ್ಣಿಟ್ಟು ಅದರ ಪಟ್ಟುಗಳನ್ನು ಗ್ರಹಿಸಿ, ಮರು ಪಟ್ಟು ಹಾಕುತ್ತಿತ್ತು. ಆದರೆ ನಾನು ಮನಸ್ಸನ್ನು ಖಾಲಿಯಿಟ್ಟುಕೊಂಡು ಆ ಇಲಿಯನ್ನು ಮುಖಾಮುಖಿಯಾದೆ. ನನ್ನ ಕಣ್ಣಲ್ಲಿನ ಖಾಲಿತನ ಕಂಡು ಇಲಿಗೆ ನಾನು ಏನು ಮಾಡಬಹುದು ಎಂಬುದೇ ಗೊತ್ತಾಗಲಿಲ್ಲ. ಅದು ನನ್ನ ಪಟ್ಟನ್ನು ಅರಿಯದೇ ಗೊಂದಲದಲ್ಲಿತ್ತು. ಆ ಸಮಯ ಸಾಧಿಸಿ ಅದರ ಮೇಲೆ ಗೆಲುವು ಸಾಧಿಸಿದೆ,'' ಎಂದು ಮುದಿ ಬೆಕ್ಕು ವಿವರಿಸಿತು.

ಹೌದು, 'ನಾನು' ಎನ್ನುವ ಕಸ ನಮ್ಮ ಕಣ್ಣಲ್ಲಿ ಕುಳಿತು ಬಿಡುತ್ತದೆ. 'ನಾನು' ಎಂದರೆ ಅಹಂ ಎಂದರ್ಥ. ಕಣ್ಣಲ್ಲಿನ ಈ 'ನಾನು' ಎಂಬ ಕಸವು ನಮ್ಮ ಅರಿವನ್ನು ಮಸುಕಾಗಿಸುತ್ತದೆ. ಸದಾ ಖಾಲಿ ಇರಿ, ದೈಹಿಕ ಜ್ಞಾನ ಅಲ್ಲಿಗೆ ಅರಿದು ಬರಲು ಜಾಗ ಮಾಡಿಕೊಳ್ಳಿ. ಮುದಿ ಬೆಕ್ಕು ತನ್ನ ಮನಸ್ಸಿನಲ್ಲಿ ಸೋಲು, ಗೆಲುವು, ಶಕ್ತಿ , ಸಾಮರ್ಥ್ಯ ಎಂಬ ಯಾವ ಭಾವವನ್ನೂ ತುಂಬಿಕೊಳ್ಳದೇ ಖಾಲಿತನ ಕಾಯ್ದುಕೊಂಡಿತ್ತು. ಹಾಗಾಗಿ ಅಲ್ಲಿಗೆ ದೈಹಿಕ ಜ್ಞಾನ ಹರಿದು ಬಂದು, ಯಶಸ್ಸು ದೊರೆಯಿತು. ಒಂದು ವೇಳೆ ಅಲ್ಲಿ ಬೇಡದ್ದನ್ನೆಲ್ಲ ತುಂಬಿಕೊಂಡಿದ್ದರೆ, ದೈಹಿಕ ಜ್ಞಾನಕ್ಕೆ ಜಾಗವೇ ಇರುತ್ತಿರಲಿಲ್ಲ.

ಇಷ್ಟೆಲ್ಲದರ ಜತೆಗೆ ಕತೆಯಲ್ಲಿ ಬರುವ ರೈತ ಎಂದಿಗೂ ಆಶಾವಾದವನ್ನು ಬಿಡಲಿಲ್ಲ ಎನ್ನುವುದನ್ನೂ ಗಮನಿಸಬೇಕು. ಕಾಟ ಕೊಡುವ ಆ ಇಲಿಗೆ ಕೊನೆಗೂ ಒಂದು ಗತಿ ಕಾಣಿಸಿದ. ನಾವೂ ಅಷ್ಟೆ ಪರ್ಯಾಯ ಮಾರ್ಗಗಳ ಮೂಲಕ ಯಶಸ್ಸಿನತ್ತ ಹೆಜ್ಜೆ ಹಾಕಬೇಕು. ಆರೋಗ್ಯಕರ ಧೋರಣೆ ಹೊಂದುವ ನಿಟ್ಟಿನಲ್ಲಿ ನಮ್ಮ ಮನಸ್ಸು ಬದಲಾಗಬೇಕು. ಉತ್ತಮ ವಿಚಾರಗಳನ್ನು ನಮ್ಮೊಳಗೆ ತುಂಬಿಕೊಳ್ಳಬೇಕು. ಸಕಾರಾತ್ಮಕ ವಿಚಾರಗಳು ದೊಡ್ಡ ಆಸ್ತಿ ಎಂಬುದನ್ನು ಮರೆಯುವಂತಿಲ್ಲ. ಆಶಾವಾದಿಯಾದವನು ತನಗೆ ಮುಖಾಮುಖಿಯಾಗುವ ಕಷ್ಟಗಳನ್ನು ಅವಕಾಶಗಳೆಂದು ಪರಿಗಣಿಸುತ್ತಾನೆ.
ಸಾಮಾನ್ಯವಾಗಿ 'ಅಹಂ' ಎಂದರೆ ಒಬ್ಬ ವ್ಯಕ್ತಿಯ ದುರ್ಗುಣಗಳ ಸಾರ. ದ್ವೇಷ, ಅಸೂಯೆ ಮುಂತಾದ ಗುಣಗಳು ಕೊಬ್ಬಿದ ಅಹಂನ ಕುರುಹುಗಳು. ಇಂತಹ ಅಹಂ ಇದ್ದರೆ ನಾವು ಯಾವುದೇ ಒಳ್ಳೆಯ ಗುಣಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಈಗ ನಮ್ಮ ಪ್ರಪಂಚ ಎದುರಿಸುತ್ತಿರುವ ಸಮಸ್ಯೆಗಳಾದ ಯುದ್ಧಗಳು, ಭಯೋತ್ಪಾದನೆ, ಧರ್ಮಾಂಧತೆ, ವರ್ಣ ಭೇದ, ವರ್ಗ ಭೇದ, ಅಸಹಿಷ್ಣುತೆ ಮುಂತಾದವುಗಳಿಗೆ ಕಾರಣ ಮನುಷ್ಯನ ಅಹಂ.
ಪರಿವರ್ತನೆಗೆ ಅತಿ ದೊಡ್ಡ ಅಡ್ಡಿ ಅಹಂ. ಕೆಲವೊಮ್ಮೆ ಅದು ಅತಿ ಸೂಕ್ಷ್ಮವಾಗಿದ್ದು ನಮ್ಮ ಗಮನಕ್ಕೆ ಬರದಿರಬಹುದು. ಅದು ಮೇಲರಿಮೆಗೂ ಕೀಳರಿಮೆಗೂ ಕಾರಣವಾಗುತ್ತದೆ. ಅಸೂಯೆ, ಗರ್ವ ಮುಂತಾದವುಗಳು ಅಹಂನಿಂದ ಹುಟ್ಟುತ್ತವೆ. ಇದು ಜನರಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡಿ ಸಂಬಂಧಗಳನ್ನು ಹಾಳುಗೆಡವುತ್ತದೆ.
ಅಹಂ ಅನ್ನು ಮೆಟ್ಟಿನಿಲ್ಲುವ ವಿಧಾನವೆಂದರೆ ಪ್ರಜ್ಞಾಪೂರ್ವಕ ಪ್ರಯತ್ನ ಹಾಗೂ ಕ್ರಮಬದ್ಧವಾದ ಆತ್ಮಾವಲೋಕನ. ಇದರಿಂದ ನಮ್ಮ ಸ್ವಪ್ರಜ್ಞೆ ಹೆಚ್ಚುತ್ತದೆ. ಪ್ರತಿ ಬಾರಿ ಅಹಂ ತಲೆ ಎತ್ತಿದಾಗಲೂ ಅದನ್ನು ಗುರುತಿಸುವುದೇ ನಾವಿಡಬಹುದಾದ ಮೊದಲ ಹೆಜ್ಜೆ. ನಿರಂತರ ಸ್ವಪ್ರಜ್ಞೆಯಿಂದ ಅಹಂ ಅನ್ನು ಕಡಿವಾಣದಲ್ಲಿಡಬಹುದು. ದೀರ್ಘ ಮತ್ತು ಆಳವಾದ ಧ್ಯಾನವೂ ಇದಕ್ಕೆ ಸಹಾಯಕ.
ವಿನಮ್ರತೆಯು ಅಹಂನ ಅನುಪಸ್ಥಿತಿಯನ್ನು ಸೂಚಿಸುತ್ತದೆ. ವಿನಮ್ರತೆ ಎಂದರೆ ವಿಧೇಯತೆ, ಸಾಧು ಸ್ವಭಾವ ಎಂದರ್ಥ. ಸಂಕೋಚ ಅಥವಾ ಕೀಳರಿಮೆಯನ್ನು ವಿನಮ್ರತೆ ಎನ್ನಲಾಗದು. ವಿನಮ್ರತೆಯಲ್ಲಿ ಬಲವಿದೆ. ನಾವು ವಿನಮ್ರತೆ ಪ್ರದರ್ಶಿಸುವುದು ಎಂದರೆ, ಸೃಷ್ಟಿಯ ಮತ್ತು ಸೃಷ್ಟಿಕರ್ತನ ವೈಶಾಲ್ಯತೆ ಮತ್ತು ಹಿರಿಮೆಗೆ ಕೊಡುವ ಮನ್ನಣೆ.
ಕೆಲವರು ಸದಾ ಕೊರಗುತ್ತಿರುತ್ತಾರೆ. ''ಇದೆಲ್ಲ ನನ್ನ ಬದುಕಿನಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ?'' ಎಂದು ಒದ್ದಾಡುತ್ತಾರೆ ಎಲ್ಲರ ಅಂತರಂಗದಲ್ಲೂ ಇಂಥದ್ದೇ ಭಾವ. ಈ ಜಗತ್ತಿನಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸಂಕಟ ಇದ್ದಿದ್ದೇ ಆಗಿದೆ ಬದುಕು ಎನ್ನುವುದೊಂದು ಸಂಘರ್ಷ. ನಾನಾ ಘಟನೆಗಳನ್ನು ಹಾದು ಹೋಗಲೇಬೇಕು. ಹೀಗಾಗಿ ಬದುಕಿನಲ್ಲಿ ಏನು ಸಂಭವಿಸಿದರೂ ಕುಗ್ಗಬಾರದು. ಆಗುವುದೆಲ್ಲವೂ ಒಳ್ಳೆಯದಕ್ಕೆ ಎಂಬ ಭಾವವು ಮನಸ್ಸಿಗೆ ಶಕ್ತಿ ನೀಡುತ್ತದೆ. ಬದುಕಿನಲ್ಲಿನ ಪ್ರತಿ ಘಟನೆಯೂ ನಮ್ಮ ವಿಕಾಸಕ್ಕೆ, ಪಾಠ ಕಲಿಯುವುದಕ್ಕೆ, ನಾವು ಪರಿಪಕ್ವರಾಗುವುದಕ್ಕೆ ಅವಕಾಶಗಳೆಂದೇ ಪರಿಭಾವಿಸಬೇಕು.
ಬದುಕು ನಾವು ಅಂದುಕೊಂಡಷ್ಟು ಕಠೋರವೇನಲ್ಲ. ಎಲ್ಲೆಡೆ ಕತ್ತಲು ತುಂಬಿಕೊಂಡಿದೆ ಅನ್ನುವಾಗಲೇ ಮೂಡುತ್ತದೆ ಬೆಳಕು. ಒಂದು ಬಾಗಿಲು ಮುಚ್ಚಿಕೊಂಡರೆ ಇನ್ನೊಂದು ಬಾಗಿಲು ತೆರೆದುಕೊಳ್ಳುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಬದುಕಿನಲ್ಲಿ ವಿಶ್ವಾಸವಿಡಬೇಕು. ಅಭದ್ರತೆಯ ಭಾವವು ನಿಮ್ಮನ್ನು ಎಚ್ಚರದಲ್ಲಿಡಲು ಕಾರಣವಾಗಬೇಕೇ ಹೊರತು, ಇನ್ನಷ್ಟು ಸಂಕಟ ಸೃಷ್ಟಿಗೆ ಮೂಲವಾಗಬಾರದು. ನಾಳೆ ಹೇಗೋ ಎನ್ನುವ ಅಭದ್ರತಾ ಭಾವವನ್ನು ಕೊರತೆಯಾಗಿ ಭಾವಿಸದೇ, ಕ್ರಿಯಾತ್ಮಕವಾಗಿ ಮುನ್ನಡೆಯಲು ಪ್ರೇರಣೆ ಎಂದುಕೊಳ್ಳಬೇಕು. ಬದುಕಿನಲ್ಲಿ ತೇಲುವುದನ್ನು ಕಲಿಯಬೇಕೇ ಹೊರತು, ಅದರ ಜತೆ ಸೆಣಸುವುದನ್ನಲ್ಲ. ಅಂದರೆ ನದಿಗೆ ಬಿದ್ದಾಗ ನೀರಿನ ಅಲೆಗಳ ಜತೆ ತೇಲುವುದನ್ನು ಕಲಿಯದೇ, ಸೆಣಸಾಡಿದರೆ ಪ್ರಯೋಜನವಿಲ್ಲ.
ನಮ್ಮ ಸಂಬಂಧಗಳು ನಮ್ಮ ಅಹಂಕಾರದಿಂದ ನಿಯಂತ್ರಿಸಲ್ಪಡುತ್ತವೆ. ನಿಮ್ಮ ಕ್ರಿಯೆಗಳು ಅಹಂಕಾರದ ಹಿಡಿತಕ್ಕೆ ಸಿಲುಕಿಕೊಳ್ಳುವ ಮೊದಲೇ ನಿಮ್ಮ ಅಹಂಕಾರವನ್ನು ನಿಯಂತ್ರಿಸಿಕೊಳ್ಳಿ. ಅಹಂಕಾರವು ಒಂದು ಸಾಧನವಿದ್ದಂತೆ. ಅದನ್ನು ಹೇಗೆ ಬಳಸಿಕೊಳ್ಳ ಬೇಕೆಂಬುದನ್ನು ಅರಿತುಕೊಂಡಿರಬೇಕು. ಅದನ್ನು ಬಳಸಿ ನೀವು ಬಹಳಷ್ಟು ಅದ್ಭುತ ಕಾರ್ಯಗಳನ್ನು ಮಾಡಬಹುದು. ಅಹಂಕಾರವು ಯಾವುದೇ ಬಗೆಯ ವಸ್ತುವಿನಿಂದ ಮಾಡಲ್ಪಟ್ಟಿರುವಂಥದ್ದಲ್ಲ. ನೀವು ಯಾರನ್ನಾದರೂ ನಿಜವಾಗಿ ದ್ವೇಷಿಸುತ್ತಿದ್ದರೆ, ನೀವು ನಿಜಕ್ಕೂ ಅವರ ಬಗ್ಗೆ ಬಲವಾಗಿ ಯೋಚಿಸುತ್ತಿದ್ದೀರಿ ಎಂದರ್ಥ. ಅತಿಯಾದ ದ್ವೇಷ ವನ್ನು ಅತಿಯಾದ ಪ್ರೀತಿಯನ್ನಾಗಿ ವ್ಯಾಖ್ಯಾನಿಸ ಬಹುದು. ನೀವು ಯಾರನ್ನಾದರೂ ಅರಿತುಕೊಳ್ಳದೆಯೆ ದ್ವೇಷಿಸಲು ಸಾಧ್ಯವಿಲ್ಲ. ಆದರೂ, ನಾವು ಅದನ್ನು ದ್ವೇಷ ಎಂದು ಕರೆಯುತ್ತೇವೆ. ಆದರೆ, ಅದರಲ್ಲಿ ಪ್ರೀತಿಯ ಸತ್ವ ಇರುತ್ತದೆ. ನೀವು ನಿಜವಾಗಿಯೂ ಯಾರೊಂದಿಗಾದರೂ ಮಾನಸಿಕವಾಗಿ ಹತ್ತಿರವಿದ್ದಾಗ ಮಾತ್ರ ಇದು ಸಾಧ್ಯವಾಗುತ್ತದೆ.
ಆಲೋಚನೆಗಳು ನೂರು. ಮೂಲಭೂತವಾಗಿ ಅವುಗಳನ್ನು ಸಕಾರಾತ್ಮಕ ಮತ್ತು ನಕಾರಾತ್ಮಕ ಎಂದು ಎರಡು ಭಾಗವಾಗಿ ವಿಂಗಡಿಸಬಹುದು. ಇದರಲ್ಲಿ ನಕಾತಾತ್ಮಕ ಚಿಂತನೆಗಳೆಂದರೆ ಎಲ್ಲರಿಗೂ ಭಯ. ಇಂಥ ನಕಾರಾತ್ಮಕ ಚಿಂತನೆಗಳು ಬಾರದಂತೆ ತಡೆಯುವ ತಂತ್ರಗಳು ಯಾವುದಾದರೂ ಇದೆಯೇ?, ಎಂದು ನನ್ನ ಮಿತ್ರನೊಬ್ಬ ಒಂದು ಸಲ ಕೇಳಿದ. ನನಗೆ ಅಚ್ಚರಿ. ನಕಾರಾತ್ಮಕ ಚಿಂತನೆ ಅಥವಾ ಆಲೋಚನೆಗಳನ್ನು ತಡೆಯುವ ಅಗತ್ಯವಾದರೂ ಇದೆಯೇ? ಎಂದು ನನಗೆ ಆಗ ಅನ್ನಿಸಿತು. ಕೂಡಲೇ, ''ಕೋಪ ಬಾರದಂತೆ ತಡೆಯುವ ಯಾವುದಾದರೂ ತಂತ್ರವನ್ನು ನೀನು ಅನುಸರಿಸುತ್ತಿರುವೆಯಾ? ಇತರರಿಗೆ ನೋವಾಗದಂತೆ ವರ್ತಿಸಲು ಏನಾದರೂ ಸೂತ್ರವನ್ನು ಪಾಲಿಸುತ್ತಿರುವೆಯಾ? ಇಲ್ಲವೇ, ಅಪ್ರಾಮಾಣಿಕತೆ ನಿನ್ನೊಳಗೆ ನುಸುಳದಂತೆ ಯಾವ ಪ್ರಯತ್ನವನ್ನಾದರೂ ಮಾಡಿರುವೆಯಾ?'' ಎನ್ನುವ ಪ್ರಶ್ನೆಗಳನ್ನು ಅವನ ಮುಂದಿಟ್ಟೆ.

ಈ ಎಲ್ಲ ಪ್ರಶ್ನೆಗಳಿಗೂ ಅವನಲ್ಲಿ ಉತ್ತರವಿರಲಿಲ್ಲ. 'ಇಲ್ಲ' ಅನ್ನುವುದು ಬಹುತೇಕ ಎಲ್ಲರ ಉತ್ತರ. ಇದೆಲ್ಲವೂ ಸಹಜವೇ ಬಿಡಿ. ಇದೇ ರೀತಿ, ನಕರಾತ್ಮಕ ಆಲೋಚನೆಗಳನ್ನು ತಿರಸ್ಕರಿಸಬೇಕು ಅಥವಾ ತಡೆಯಬೇಕು ಎಂದು ಅನ್ನಿಸಿದರೆ, ತಡೆಯಿರಿ ಅಷ್ಟೆ! ಅದನ್ನು ಬಿಟ್ಟು, '' ನಕಾರಾತ್ಮಕ ಆಲೋಚನೆಗಳನ್ನು ತಿರಸ್ಕರಿಸಲು ಯಾವುದೇ ತಂತ್ರಗಾರಿಕೆಯೂ ನನಗೆ ಗೊತ್ತಿಲ್ಲಾ ... ಹೀಗಾಗಿ ನಕಾರಾತ್ಮಕ ಆಲೋಚನೆಗಳನ್ನು ತಿರಸ್ಕರಿಸಲು ಸಾಧ್ಯವಾಗುತ್ತಿಲ್ಲ,'' ಎಂದು ಮಾತ್ರ ಹೇಳಬೇಡಿ. ಈ ಬಗ್ಗೆ ನೀವು ತಂತ್ರಗಳನ್ನು ಯಾಚಿಸುವಿರಿ ಎಂದಾದರೆ, ನೀವು ನಕಾರಾತ್ಮಕ ಚಿಂತನೆಗಳನ್ನು ಕಟಾಚಾರಕ್ಕಷ್ಟೆ ತಡೆಯುತ್ತೀರಿ ಎಂದರ್ಥ. ಈ ನಿಟ್ಟಿನಲ್ಲಿ ನೀವು ಮನಸಾರೆ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ ಎಂದೇ ಭಾವಿಸಬೇಕಾಗುತ್ತದೆ. ಇಂಥ ನೀವು, ನಿಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಯಾವುದೇ ತಂತ್ರ ಗೊತ್ತಿಲ್ಲ ಅಥವಾ ಯಾರು ಹೇಳಿಕೊಡುತ್ತಿಲ್ಲ ಎಂಬ ದೂಷಣೆಗೆ ಸಹ ಮೊರೆ ಹೋಗುತ್ತೀರಿ.
ಎಲ್ಲ ಸಮಯದಲ್ಲೂ ಸಕಾರಾತ್ಮಕವಾಗಿರುವುದು ಪ್ರಾಯಶಃ ದೈನಂದಿನ ಧ್ಯಾನದಷ್ಟೇ ಮುಖ್ಯ. ಸಕಾರಾತ್ಮಕವಾಗಿರುವುದೆಂದರೆ ಯೋಚನೆಗಳು ಮತ್ತು ಭಾವನೆಗಳೂ ಸಕಾರಾತ್ಮಕವಾಗಿರಬೇಕು. ಇವು ಚೈತನ್ಯದಿಂದ ಉಂಟಾಗಿವೆ. ನಮ್ಮಲ್ಲಿ ಒಂದು ಇಂಗಿತವಿದ್ದಾಗ ಅದು ಮೊದಲು ಯೋಚನೆಯಾಗಿ ಪ್ರಕಟವಾಗುತ್ತದೆ. ಯೋಚನೆಗೆ ನಮ್ಮ ಭೌತ ಅಸ್ತಿತ್ವದ ಮೇಲೆ ಪರಿಣಾಮವನ್ನುಂಟುಮಾಡುವ ಶಕ್ತಿಯಿದೆ. ಯಾವಾಗಲೂ ನಕಾರಾತ್ಮಕವಾಗಿರುವುದರಿಂದ ನಾವು ಅಪಘಾತಕ್ಕೀಡಾಗಬಹುದು ಅಥವಾ ರೋಗಪೀಡಿತರಾಗಬಹುದು. ಇಲ್ಲವೇ ಇನ್ನಾವುದೇ ತೊಂದರೆಗೆ ಸಿಲುಕಬಹುದು. ಎಲ್ಲ ದುಶ್ಚಟಗಳಿಗಿಂತ ನಿರಂತರ ನಕಾರಾತ್ಮಕ ಯೋಚನೆ ಅತಿ ಅಪಾಯಕಾರಿ. ಆದರೆ ಎಲ್ಲ ಕಾಲಕ್ಕೂ ಸಕಾರಾತ್ಮಕವಾಗಿ ಯೋಚಿಸುವುದನ್ನು ಆಯ್ಕೆ ಮಾಡುವ ಶಕ್ತಿ ನಮಗಿದೆ. ನಮ್ಮ ನಕಾರಾತ್ಮಕ ಯೋಚನೆಗಳನ್ನು ಗುರುತಿಸಿ ಅದನ್ನು ತಡೆಗಟ್ಟಲು ನಿರ್ಧರಿಸುವುದೆ ಈ ದಿಶೆಯಲ್ಲಿ ನಾವಿಡಬಹುದಾದ ಮೊದಲ ಹೆಜ್ಜೆ. ಇಲ್ಲದಿದ್ದಲ್ಲಿ ನಮ್ಮ ನಕಾರಾತ್ಮಕ ಯೋಚನೆಗಳ ಪ್ರವಾಹದಲ್ಲಿ ಮುಳುಗಿ ಹೋಗುತ್ತೇವೆ. ನಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತೇವೆ.
ಮಾನಸಿಕ ಒತ್ತಡದಿಂದಾಗಿ ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಎಲ್ಲ ತರಹದ ರೋಗಗಳಿಗೆ ಈಡಾಗುವ ಸಾಧ್ಯತೆ ಇರುತ್ತದೆ ಎಂಬುದು ರುಜುವಾತಾದ ವಿಷಯ. ಇದರಿಂದ ನಮ್ಮ ಯೋಚನೆಗಳು ಮತ್ತು ಭಾವನೆಗಳಿಗೆ ನಮ್ಮ ದೇಹದ ಮೇಲೆ ಪರಿಣಾಮವನ್ನುಂಟು ಮಾಡುವ ಶಕ್ತಿಯಿದೆ ಎಂದು ತಿಳಿದುಬರುತ್ತದೆ.
ಯೋಚನೆಗಳಿಗೆ ಭೌತ ಅಸ್ತಿತ್ವದ ಮೇಲೆ ಪರಿಣಾಮವನ್ನುಂಟು ಮಾಡುವ ಸಾಮರ್ಥ್ಯವಿದೆ. ಒಬ್ಬ ವ್ಯಕ್ತಿಯ ನಕಾರಾತ್ಮಕ ವಿಚಾರಗಳು ಆತನಲ್ಲಿ/ಆಕೆ ಯಲ್ಲಿ ರೋಗವನ್ನುಂಟು ಮಾಡುವುದು ಸಾಧ್ಯವಾದರೆ ಸುತ್ತಲಿನ ಪರಿಸರದ ಮೇಲೆ ಅದರ ಪರಿಣಾಮವೇನಿರಬಹುದು? ಹಾಗೂ ಒಬ್ಬ ವ್ಯಕ್ತಿಯ ನಕಾರಾತ್ಮಕ ಯೋಚನೆಗಳು ಕ್ಯಾನ್ಸರ್‌ಗೂ ಕಾರಣವಾಗಬಹುದಾದರೆ, ಅತ್ಯಧಿಕ ಜನರ ಸಾಮೂಹಿಕ ನಕಾರಾತ್ಮಕ ಚಿಂತನೆಯಿಂದ ಆಗುವ ಪರಿಣಾಮಗಳೇನಿರಬಹುದು? ಅಂತಹ ದೊಡ್ಡ ಪ್ರಮಾಣದ ನಕಾರಾತ್ಮಕ ಆಲೋಚನೆಯಿಂದ ಸ್ವಾಭಾವಿಕವಾಗಿ ಜಾಗತಿಕ ಮಟ್ಟದ ಪ್ರಕೋಪಗಳು ಸಂಭವಿಸುತ್ತವೆ. ಅಧಿಕ ಜನರ ಒಟ್ಟು ಮೊತ್ತದ ಯೋಚನೆಗಳು ಪ್ರಕತಿಯ ಮೇಲೂ ಪರಿಣಾಮವನ್ನುಂಟು ಮಾಡುತ್ತವೆ. ಅವು ಒಂದು ನಗರದ ಅಥವಾ ಒಂದು ದೇಶದ ಪರಿಸ್ಥಿತಿಯನ್ನು ಬದಲಿಸಬಲ್ಲವು.
ಈ ಕುರಿತಾದ ಒಂದು ಪ್ರಯೋಗ ಹೆಚ್ಚಿನ ಮಹತ್ವ ಪಡೆದಿದೆ. ಸಾವಿರ ಜನರ ಗುಂಪನ್ನು ಜೆರೂಸಲೆಮ್‌ನಲ್ಲಿ ಪ್ರಯೋಗಕ್ಕೆ ಗುರಿಯಾಗಿಟ್ಟುಕೊಳ್ಳಲಾಗಿತ್ತು. 1980ನೇ ಇಸವಿಯಲ್ಲಿ ಲೆಬನಾನ್ ಯುದ್ಧದ ಸಮಯದಲ್ಲಿ ಹಲವಾರು ತಿಂಗಳವರೆಗೆ ವ್ಯವಸ್ಥಿತವಾಗಿ ಈ ಗುಂಪು ಧ್ಯಾನ ಮಾಡಿತು. ಧ್ಯಾನಿಗಳ ಸಂಖ್ಯೆ ದಿನವೂ ಒಂದೇ ಇರುತ್ತಿರಲಿಲ್ಲ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಧ್ಯಾನ ಮಾಡಿದ ದಿನ ಯುದ್ಧದಲ್ಲಿ ಸಾವುಗಳು ಕಡಿಮೆಯಾದುದು ಕಂಡುಬಂತು. ಧ್ಯಾನಿಗಳ ಸಂಖ್ಯೆ ಹೆಚ್ಚಿದ್ದಾಗ ಅದಕ್ಕೆ ಅನುಗುಣವಾಗಿ ಸಾವಿನ ಸಂಖ್ಯೆ ಕಡಿಮೆಯಾಗುವುದು ಸ್ಪಷ್ಟವಾಗಿ ನಿರೂಪಿತವಾಯಿತು. ಅದರೊಂದಿಗೆ ನೋವು ಹಾಗೂ ಹಿಂಸಾಚಾರಗಳೂ ಕಡಿಮೆಯಾದವು.
ಅಂದರೆ ಜನರು ಧ್ಯಾನದ ವೇಳೆಯಲ್ಲಿ ಶಾಂತಿಯನ್ನನುಭವಿಸಿದಾಗ ಆ ಶಾಂತಿ ಸುತ್ತಲೂ ಹರಡಿ ಪರಿಸರದ ಮೇಲೆ ಪರಿಣಾಮವನ್ನುಂಟು ಮಾಡುತ್ತಿದ್ದದ್ದು ಕಂಡುಬಂತು. ಹೆಚ್ಚು ಜನರು ಶಾಂತಿಯನ್ನನುಭವಿಸಿದಾಗ, ಅದು ಯುದ್ಧದ ಮೇಲೂ ಪರಿಣಾಮ ಉಂಟು ಮಾಡಬಲ್ಲದು. ಈ ಪ್ರಯೋಗದಲ್ಲಿ ಸಾವಿರ ಧ್ಯಾನಿಗಳು ಹತ್ತು ಲಕ್ಷ ಜನರ ಮೇಲೆ ಪರಿಣಾಮವನ್ನುಂಟು ಮಾಡಲು ಸಾಧ್ಯವಾಯಿತು. ಮಹರ್ಷಿ ಮ್ಯಾನೇಜ್‌ಮೆಂಟ್ ವಿಶ್ವವಿದ್ಯಾಲಯವು ಈ ಸಂಶೋಧನೆಯನ್ನು ನಡೆಸಿತು. ಅದರ ಫಲಿತಾಂಶವನ್ನು ಯೇಲ್ ವಿಶ್ವವಿದ್ಯಾಲಯದ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಪ್ರಯೋಗವನ್ನು ಬೇರೆ ವಿಜ್ಞಾನಿಗಳು ಮತ್ತೆ ಏಳು ಸಲ ಪುನರಾರ್ತಿಸಿದರು. ಪ್ರತಿ ಸಾರಿಯೂ ಯುದ್ಧದ ಸಾವು-ನೋವುಗಳು ಹಾಗೂ ಹಿಂಸಾಚಾರಗಳು ಶೇ.80 ರಷ್ಟು ಕಡಿಮೆಯಾದದ್ದು ಕಂಡುಬಂತು. ಈ ಪ್ರಯೋಗಗಳಿಂದ, ಸಣ್ಣ ಗುಂಪೊಂದು ಶಾಂತಿಯನ್ನನುಭವಿಸಿದರೆ ಅದು ಹಲವಾರು ಪಟ್ಟು ಹೆಚ್ಚಿನ ಜನರ ಮೇಲೆ ಹಾಗೂ ಪರಿಸರದ ಮೇಲೆ ಪ್ರಭಾವ ಬೀರಬಲ್ಲದು ಎಂದು ವೈಜ್ಞಾನಿಕವಾಗಿ ರುಜುವಾತಾದಂತಾಯಿತು. ಕಳೆದ ನೂರಾರು ವರ್ಷಗಳಲ್ಲಿ ಮಾನವನು ಯುದ್ಧಗಳು, ರೋಗಗಳು, ದಬ್ಬಾಳಿಕೆ ಹಾಗೂ ಕ್ಷಾಮಗಳಿಂದ ಸಾಕಷ್ಟು ಸಂಕಷ್ಟಗಳನ್ನು ಅನುಭವಿಸಿದ್ದಾನೆ. ಈ ಸಂಕಷ್ಟಗಳು ಹೆಚ್ಚಿನ ಪ್ರಮಾಣದ ನಕಾರಾತ್ಮಕ ಯೋಚನೆ ಹಾಗೂ ಭಾವನೆಗಳನ್ನು ಉಂಟು ಮಾಡುತ್ತವೆ; ಇದರಿಂದ ಸಂಕಷ್ಟಗಳು ಇನ್ನೂ ಹೆಚ್ಚಾಗುತ್ತವೆ.
ಇದುವರೆಗೂ ನಮಗೆ ತಿಳಿಯದೆ ಇರುವುದನ್ನು ಶ್ರದ್ಧೆಯಿಂದ, ಗುರಿಯಿಂದ ತಿಳಿದುಕೊಂಡ ನಂತರ ಸುಮ್ಮನಾಗಬಹುದು. ಅದನ್ನು ಅಚರಣೆಯಿಂದ ಸಾಣೆ ಹಿಡಿಯುತ್ತಾ ಅಭ್ಯಾಸ ಮಾಡಬೇಕು. ಅದಕ್ಕೆ ಇರುವ ಏಕೈಕ ಮಾರ್ಗವೇ ಶ್ವಾಸದ ಮೇಲೆ ಗಮನ. ಅದೇ ಧ್ಯಾನ. ಅನೇಕ ವಿಧಗಳಲ್ಲಿ ಓಡುವ ಈ ಮನಸ್ಸನ್ನು ಧ್ಯಾನದ ಮೂಲಕ ಶ್ವಾಸದ ಮೇಲೆ ಇರಿಸಿ, ಏಕಾಗ್ರತೆಗೊಳಿಸಬೇಕು. ಅನಂತರ ಒಂದೊಂದೇ ಮೆಟ್ಟಿಲನ್ನು ಹತ್ತುತ್ತಾ, ಉನ್ನತಿಯ ಪಥದಲ್ಲಿ ಪ್ರಯಾಣ ಬೆಳಸಬೇಕು.
ಯಾರಿಗೆ ಗುರಿ ಇರುವುದಿಲ್ಲವೋ ಅವರಿಗೆ ಅದೇ ಶತ್ರು. ಯಾರಿಗೆ ಗುರಿ ಇರುತ್ತದೆಯೋ ಅವರಿಗೆ ಅದೇ ಮಿತ್ರ. ನಾನು ಸಹ ನನಗೆ ತಿಳಿದಿರುವ ವಿಷಯಗಳನ್ನು ಅಂದರೆ, ನಾನು ಶ್ರದ್ಧೆಯಿಂದ ಕಲಿತುಕೊಂಡಿರುವ ವಿಷಯಗಳನ್ನು ನಿಮ್ಮ ಕಿವಿಯವರೆಗೂ ಕೇಳಿಸುವ ಹಾಗೆ ಮಾಡಬಲ್ಲೆ. ಆದರೆ, ನಿಮ್ಮ ಮೆದುಳಿನಲ್ಲಿ ಹೋಗುವ ಹಾಗೆ ಮಾಡಲಾರೆ; ನಿಮ್ಮ ಗುರಿ, ನಿಮ್ಮ ಶ್ರದ್ಧೆ, ಕಲಿತುಕೊಳ್ಳಬೇಕು ಎನ್ನುವ ನಿಮ್ಮ ಧನಾತ್ಮಕತೆಯೇ ಅದನ್ನು ನಿಮ್ಮ ಮೆದುಳಿನೊಳಗೆ ಹೋಗುವ ಹಾಗೆ ಮಾಡುತ್ತದೆ.
ಬದುಕಿನಲ್ಲಿ ಯಶಸ್ಸನ್ನು ಬೆನ್ನಟ್ಟಿ ಹೋಗುವುದು ಸರಿ. ಆದರೆ ಈ ನಿಟ್ಟಿನಲ್ಲಿ ನಿಮ್ಮ ತಪ್ಪುಗಳು ಮತ್ತು ಅಡ್ಡದಾರಿ ಹಿಡಿದಿರುವುದನ್ನು ಒಪ್ಪಿಕೊಳ್ಳಿ. ನಿಮ್ಮೊಳಗೆ ನಕಾರಾತ್ಮಕ ಚಿಂತನೆಗಳು ಹುಟ್ಟುತ್ತಿವೆ, ಅದನ್ನು ನೀವೇ ಬೆಳೆಸುತ್ತಿದ್ದೀರಿ ಎಂಬುದನ್ನೂ ಮೊದಲು ಒಪ್ಪಿಕೊಳ್ಳಿ. ನಾವು ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವುದರಿಂದ ಅಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಹುಡುಕಲು ಮಾನಸಿಕವಾಗಿ ಸಿದ್ದವಾಗುತ್ತೀರಿ ಇಂಥ ಹೊತ್ತಿನಲ್ಲಿಯೇ ಅಧ್ಯಾತ್ಮಿಕತೆ ಆರಂಭಗೊಳ್ಳುತ್ತದೆ. ಪ್ರಾಮಾಣಿಕತೆ ಇರುವ ಕಡೆ ಅಧ್ಯಾತ್ಮಿಕತೆ ಚಿಗುರುತ್ತದೆ. ನೀವು ನಕಾರಾತ್ಮಕವಾಗಿದ್ದಾಗ ಮಾತ್ರ ಅಂಥ ಚಿಂತನೆಗಳೇ ಹುಟ್ಟುತ್ತವೆ. ನೀವು ಅವುಗಳನ್ನು ಪ್ರೋತ್ಸಾಹಿಸುತ್ತಿರುವುದರಿಂದಲೇ ಅವು ನಿಮ್ಮನ್ನು ಆಳುತ್ತವೆ. ಅವುಗಳು ನಿಮ್ಮನ್ನು ಆವರಿಸಿಕೊಳ್ಳದಂತೆ ಎಚ್ಚರವಹಿಸಬೇಕು. ಇದಕ್ಕೆ ಅಸಲಿ ಪ್ರಾಮಾಣಿಕತೆ ಅಗತ್ಯ. ನೀವು ಅವುಗಳನ್ನು ಖಂಡಿಸಲು ಅಥವಾ ತಿರಸ್ಕರಿಸಲು ಹೋಗಬೇಡಿ. ಕೆಲವು ಸಲ ನಕಾರಾತ್ಮಕ ಚಿಂತನೆಗಳು ಬರುತ್ತವೆ, ಹೋಗುತ್ತವೆ. ಎಲ್ಲವನ್ನೂ ಸಹಜವೆಂದೇ ಪರಿಭಾವಿಸಿ. ಇಂಥ ಚಿಂತನೆಗಳನ್ನು ತಿರಸ್ಕರಿಸಲು ಯಾವುದೇ ತಂತ್ರಗಳು ಇಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ.
ಶರಣಾಗತಿಯು ನಿಮ್ಮೊಳಗೇ ಆಗುವಂಥದ್ದು. ಈ ಪ್ರಕ್ರಿಯೆ ನಿಮ್ಮೊರಗೆ ನಡೆಯುವುದಿಲ್ಲ. ಇಷ್ಟಕ್ಕೂ ಶರಣಾಗತಿಯೆಂದರೆ ನಿರಾಳತೆ, ವಿಶ್ವಾಸವಿಡುವುದು ಎಂದು ಸರಳವಾಗಿ ಹೇಳಬಹುದು. ಹೀಗಾಗಿ ಶರಣಾಗತಿಯನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು. ಭಾಷೆ ದೃಷ್ಟಿಯಲ್ಲಿ ಶರಣಾಗತಿ ಎಂದರೆ ಒಬ್ಬ ಇನ್ನೊಬ್ಬನಿಗೆ ಸೋತು, ಅವನು ಹೇಳಿದಂತೆ ಕೇಳುವುದು ಎಂಬರ್ಥವಿದೆ. ಧಾರ್ಮಿಕ ಪರಿಭಾಷೆಯಲ್ಲಿ ವಿಶ್ವಾಸವಿಡುವುದು ಮತ್ತು ನಿರಾಳತೆ ಭಾವ ಸವಿಯುವ ಪ್ರಕ್ರಿಯೆಯೇ ಶರಣಾಗತಿ. ನಾವು ನಮ್ಮ ನಡವಳಿಯನುಸಾರ ಧೋರಣೆ ಹೊಂದುವುದಕ್ಕಿಂತಲೂ, ವಿಶ್ವಾಸದ ನೆಲೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬ ಇಂಗಿತ ಇಲ್ಲಿಯದು.
ಈಜಲು ಹೋಗಿ ನೀರಿನಲ್ಲಿ ಮುಳುಗಿ ಸತ್ತವರ ಶವಗಳನ್ನು ನೋಡಿ. ಅವು ತೇಲುತ್ತಿರುತ್ತವೆ. ಬದುಕಿದ್ದಾಗ ಈಜದವನು, ಸತ್ತಾಗ ಈಜುವುದು(ತೇಲುವುದು) ನಿಜಕ್ಕೂ ಪವಾಡವೇ ಸರಿ. ಅಚ್ಚರಿಯೂ ಹೌದು. ಇಲ್ಲಿ ನಿಜಕ್ಕೂ ಏನು ಸಂಭವಿಸಿದೆ? ಬದುಕಿದ್ದಾಗ ಅರಿವಿಗೆ ಬಾರದ ನದಿಯ ರಹಸ್ಯಗಳು, ಸತ್ತು ಶವವಾದ ಮೇಲೆ ಗೊತ್ತಾಗುತ್ತದೆ. ಸತ್ತಿರುವ ವ್ಯಕ್ತಿಯು ನೀರಿನೊಂದಿಗೆ ಸೆಣಸುವುದಿಲ್ಲ. ನದಿ ಅನ್ನುವುದು ಶತ್ರುವಲ್ಲ ಎಂಬುದನ್ನು ಅರಿತ ಸತ್ತ ಮನುಷ್ಯ, ನೀರಿನ ಬಗ್ಗೆ ಭಯ ಪಡುವುದಿಲ್ಲ. ಬದಲಿಗೆ ವಿಶ್ವಾಸವಿಡುವ ಕಾರಣ, ಮುಳುಗದೇ ನೀರಿನಲ್ಲಿ ತೇಲುತ್ತಾನೆ.
ಈಜುವುದು ಎಂದರೆ ಏನು? ಇದರ ವಿವರಣೆಯನ್ನು ಗಮನಿಸೋಣ. ನೀವು ಈಜುವುದಕ್ಕೆ ನದಿ ಅಥವಾ ಇತರೆ ನೀರಿನ ಆಸರೆಯಿಡುವ ತಾಣಕ್ಕೆ ತೆರಳುವಿರಿ ಮತ್ತು ಈಜುವಿರಿ. ಇಲ್ಲಿ ನಿಜಕ್ಕೂ ನೀವು ಏನು ಮಾಡುವಿರಿ? ಈಜುವಿಕೆ ಪ್ರಕ್ರಿಯೆಯಲ್ಲಿ ವಿಶ್ವಾಸದ ಪಾತ್ರ ಮಹತ್ವದ್ದು. ಅಂದರೆ ನೀವು ನೀರನ್ನು ನಂಬುತ್ತೀರಿ. ಈಜುವ ನನ್ನನ್ನು ನೀರು ಮುಳುಗಿಸುವುದಿಲ್ಲ ಎನ್ನುವ ವಿಶ್ವಾಸ ಇಲ್ಲಿಯದು. ಒಳ್ಳೆಯ ಈಜುಗಾರ ನೀರನ್ನು ಬಹಳಷ್ಟು ನೆಚ್ಚಿಕೊಳ್ಳುತ್ತಾನೆ. ಆತ ಎಂದಿಗೂ ನೀರಿನ ಜತೆ ಕದನಕ್ಕೆ ಇಳಿಯು ವುದಿಲ್ಲ. ನೀರಿನ ಮೇಲೆ ಆಕ್ರಮಣ ಮಾಡುವುದಿಲ್ಲ. ಅಲ್ಲದೇ ಆತನಿಗೆ ಭಯ ಮತ್ತು ಆತಂಕ ಒಂದೂ ಇಲ್ಲ. ವಿಶ್ವಾಸ ಇರುವ ಕಡೆ ಭಯಕ್ಕೆ ಜಾಗವಿರುವುದಿಲ್ಲ. ಈಜಲು ನೀವು ಹೊರಟಾಗ ಮನದಲ್ಲಿ ಕಳವಳವಿದ್ದರೆ, ನೀರನ್ನು ನಂಬದೇ ಸೆಟೆದು ನಿಂತರೆ ಅಪಾಯ ತಪ್ಪಿದ್ದಲ್ಲ. ಆ ನೀರು ನಿಮ್ಮನ್ನು ತನ್ನೊಳಗೆ ಎಳೆದುಕೊಂಡು ತಳಕ್ಕೆ ಮುಟ್ಟಿಸುತ್ತದೆ. ನಿರಾಳತೆಯಿಂದ ಇದ್ದ ಪಕ್ಷದಲ್ಲಿ ನಿಮ್ಮ ಕಾಳಜಿಯನ್ನು ನೀರೇ ತೆಗೆದುಕೊಳ್ಳುತ್ತದೆ.
ಯಾವುದೇ ಉದ್ವಿಗ್ನತೆ, ತಲ್ಲಣಗಳಿಲ್ಲದ ಶವ ಶಾಂತ ಸ್ಥಿತಿ ತಲುಪಿರುತ್ತದೆ. ಇಂಥ ಮನಸ್ಥಿತಿಯಿದ್ದಾಗ ಸೆಣಸಾಟಕ್ಕೆ ಅಸ್ಪದವೇ ಇಲ್ಲ. ಇಂಥ ಶವವನ್ನು ತೇಲಿಸುವ ನದಿ ಕಾಳಜಿ ತೋರುತ್ತದೆ. ಯಾವ ನದಿಯೂ ಶವವನ್ನು ಮುಳುಗಿಸಿದ ಉದಾಹರಣೆಗಳಿಲ್ಲ. ಆದರೆ ಬದುಕಿರುವ ವ್ಯಕ್ತಿಗೆ ನೀರಿನ ಮೇಲೆ ನಂಬಿಕೆಯಿಲ್ಲ. ನಾನು ಈಜಲು ನದಿಗಿಳಿದ ತಕ್ಷಣವೇ ಅದು ನುಂಗಿಬಿಡುತ್ತದೆ ಎನ್ನುವ ಭಯ ಮತ್ತು ಅನುಮಾನ.

ವಿಶ್ವಾಸ ಇಡುವುದು ಎಂದರೆ ನೀವು ಸೆಣಸದೇ ಇರುವುದು ಎಂದರ್ಥ. ಶರಣಾಗುವುದು ಎಂದರೆ ಯಾವುದೇ ಅನುಮಾನವಿಲ್ಲದೇ, ಬದುಕಿನ ಬಗ್ಗೆ ಕಳವಳಗೊಳ್ಳದೇ ನಿರಾಳಭಾವ ಹೊಂದುವುದು. ಬದುಕನ್ನು ಶತ್ರು ಎಂದು ಭಾವಿಸದೇ, ನಿಮ್ಮ ಗೆಳೆಯನಂತೆ ಸ್ವೀಕರಿಸುವುದೇ ಶರಣಾಗತಿ. ಒಂದು ಸಲ ನೀವು ನದಿ ಮೇಲೆ ವಿಶ್ವಾಸವಿಟ್ಟರೆ, ಈಜುವಿಕೆ ಕೆಲಸವಾಗದೇ, ಕಷ್ಟವಾಗದೇ ಆನಂದವಾಗಿ ರೂಪಾಂತರವಾಗುತ್ತದೆ. ನಾನು ಬೇರೆ, ನದಿ ಬೇರೆ ಎನ್ನುವ ಭಾವವನ್ನು ತೊರೆದು, ನಾವೇ ನದಿಯಾಗಿ, ನದಿಯೇ ನಾವಾಗುವ ಈ ಮಿಲನ ಕಾರ್ಯ ಪರಮಾನಂದಕರ.
ನೀವು ಜಗತ್ತಿನ ಯಾವುದೇ ಭಾಗದಲ್ಲೇ ವಾಸ ಮಾಡಿ. ಆದರೆ, ಬದುಕಿನಲ್ಲಿ ಒಂದು ವಿಷಯದಲ್ಲಿ ಸಾಮ್ಯತೆ ಇದ್ದೇ ಇರುತ್ತದೆ. ತಾವು ಶಿಸ್ತಿನಿಂದ ಇರಬೇಕು, ಬದುಕು ಯೋಜನೆಯಂತೆಯೇ ಸಾಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಇದಕ್ಕಾಗಿ ಟೈಮ್ ಟೇಬಲ್ ಹಾಕಿಕೊಳ್ಳುತ್ತಾರೆ, ಸಂಕಲ್ಪಗಳನ್ನೂ ಮಾಡುತ್ತಾರೆ. ನಾವು ಅಂದುಕೊಂಡಂತೆಯೇ ಬದುಕು ಸಾಗಬೇಕು ಎಂಬ ಹಂಬಲ ಸಹಜವಾಗಿಯೇ ಇರುವಂಥದ್ದು. ನಿಮ್ಮ ಬದುಕು ವ್ಯವಸ್ಥಿತವಾಗಿ ಸಾಗಬೇಕು ಅನ್ನುವುದಾದರೆ ಸೂಕ್ತ ಟೈಮ್ ಟೇಬಲ್ ಹಾಕಿಕೊಂಡು ಅದನ್ನು ಅನುಸರಿಸುವುದು ಮುಖ್ಯ. ಯೋಜಿತವಲ್ಲದ ಬದುಕು ಗೊಂದಲದಿಂದ, ಅಹಿತದಿಂದ ಕೂಡಿರುತ್ತದೆ. ಬದುಕು ಸೊಗಸಾಗಿರಬೇಕು, ಭವಿಷ್ಯದಲ್ಲಿ ಕಲ್ಲು-ಮುಳ್ಳುಗಳು ಬೇಡ ಅನ್ನುವುದಾದರೆ ಶಿಸ್ತು ಮತ್ತು ಯೋಜನೆಗಳು ಬೇಕು. ಕಷ್ಟವಾದರೂ ಅವುಗಳನ್ನು ತಪ್ಪದೆ ಪರಿಪಾಲಿಸಬೇಕು. ಯೋಜಿತ ಬದುಕು ನಮ್ಮದಾದರೆ ಸಾಧ್ಯವಿರುವಷ್ಟು ಮಟ್ಟಿಗೆ ಉತ್ತಮ ಸಾಧನೆ ಮಾಡಬಹುದು, ಹಿತವೆನ್ನಿಸುವ ಇತರೆ ಸಾಧ್ಯತೆಗಳನ್ನೂ ಬಳಸಿಕೊಂಡು ಮುನ್ನುಗ್ಗಬಹುದು.
''ಸದಾ ನಮ್ಮೊಂದಿಗೆ ಇರುವಂಥ ಸ್ನೇಹಿತರು ಯಾರೂ ಇಲ್ಲ,'' ಎಂದಿದ್ದಾರೆ ಅರಿಸ್ಟಾಟಲ್. ಅಂದರೆ, ಯಾವುದೇ ಗೆಳೆತನ ಅಥವಾ ಸಂಬಂಧ ಜೀವಿತಾವಧಿ ಇರುವಂಥದ್ದಲ್ಲ. ಎಲ್ಲವೂ ಕ್ಷಣಿಕ, ಬದುಕಿನ ಯಾವುದೋ ಒಂದು ಘಟ್ಟದಲ್ಲಿ ಎಲ್ಲಕ್ಕೂ ಪೂರ್ಣ ವಿರಾಮ. ಮನುಷ್ಯನ ಜತೆಗಾರ ಒಂಟಿತನವೇ ಎಂಬುದನ್ನು ಅರಿಸ್ಟಾಟಲ್ ಹೇಳಿಕೆ ಧ್ವನಿಸುತ್ತದೆ. ಯಾವ ಬಂಧವೂ ಶಾಶ್ವತ ಎನ್ನುವ ನಿರೀಕ್ಷೆ ತಪ್ಪು. ಕಾಲ ಬ್ರಹ್ಮಾಂಡವೆಂಬ ಸಾಗರದಲ್ಲಿ ಎಲ್ಲವೂ ಕರಗಿ ನೀರಾಗುತ್ತವೆ. ಎಷ್ಟೇ ಅಂಟಿಕೊಂಡ ಬಂಧಗಳೂ ಬೇರೆಯಾಗುತ್ತವೆ. ಸಂಘಟನೆ, ವಿಘಟನೆ ಎನ್ನುವುದು ಇಲ್ಲಿ ಸಾಮಾನ್ಯ.

ಮನುಷ್ಯ ಹುಟ್ಟಿದಾಗ ಕುಟುಂಬದ ಆಸರೆ, ಹೆತ್ತವರ ಆತ್ಮೀಯ ಬಂಧ ಲಭ್ಯ. ಇನ್ನು, ಬೆಳೆದು ಶಾಲೆ-ಕಾಲೇಜಿಗೆ ಹೋದಂತೆ ನಾನಾ ಗೆಳೆಯರು ಜತೆಯಾಗುತ್ತಾರೆ. ಬಿಟ್ಟು ಅಗಲಲು ಸಾಧ್ಯವೇ ಇಲ್ಲ ಎನ್ನುವಂಥ ಸ್ನೇಹಬಂಧ ಸೃಷ್ಟಿಯಾಗುತ್ತದೆ. ಓದು ಮುಗಿಯುತ್ತಿದ್ದಂತೆಯೇ ಗೆಳೆಯರು ಚೆದುರುತ್ತಾರೆ. ಬಂಧಗಳು ಸಡಿಲ. ನಂತರ ಉದ್ಯೋಗ ಪರ್ವ. ಕೆಲಸಕ್ಕೆ ಸೇರಿದ ಮೇಲೆ ಸಹೋದ್ಯೋಗಿಗಳು ಗೆಳೆಯರಾಗುತ್ತಾರೆ. ಅಲ್ಲೊಂದು ಬಂಧ ಸೃಷ್ಟಿಯಾಗುತ್ತದೆ. ಆಮೇಲೆ ಮದುವೆ. ಪತ್ನಿ/ಪತಿಯ ಸಾಂಗತ್ಯ ಲಭ್ಯ. ಮಕ್ಕಳು ಮರಿ ಎನ್ನುವಂಥ ವಾತ್ಸಲ್ಯದ ಸೇತುವೆಯನ್ನು ಕಟ್ಟಿಕೊಳ್ಳುತ್ತೇವೆ. ಇಲ್ಲಿಗೆ ಎಲ್ಲವೂ ಮುಗಿಯದು. ಪ್ರತಿಯೊಂದೂ ಅಷ್ಟೆ. ಬಿಡುವ, ಕಳಚುವ ಕಾಲ ಬಂದಾಗ ತನ್ನಷ್ಟಕ್ಕೆ ತಾನೇ ಎಲ್ಲವೂ ಆಗುತ್ತದೆ. ಮಕ್ಕಳು, ಪತ್ನಿ, ಗೆಳೆಯರು, ಸಹೋದ್ಯೋಗಿ ಸೇರಿದಂತೆ ಎಲ್ಲರ ಜತೆಗೆ ದೈಹಿಕ ಮತ್ತು ಮಾನಸಿಕವಾಗಿ ದೂರವಾಗುತ್ತೇವೆ.

ಮನುಷ್ಯ ಸಂಘಜೀವಿ. ಆತನಿಗೆ ಜತೆಯಲ್ಲಿ ಯಾರಾದರೂ ಬೇಕೇ ಬೇಕು. ಹೀಗಾಗಿಯೇ, ಎಲ್ಲವನ್ನೂ ತನ್ನ ಜತೆ ಅಂಟಿಸಿಕೊಳ್ಳುತ್ತಾನೆ. ಆದರೆ, ಅವು ನಿರ್ದಿಷ್ಟ ಕಾಲ ಮುಗಿದ ತಕ್ಷಣ ನಾಪತ್ತೆ. ಒಂಟಿತನವೆನ್ನುವುದೇ ಸದಾ ಇರುವಂಥದ್ದು. ದೇಹ ಮತ್ತು ಮನಸ್ಸನ್ನು ನಾವು ಪ್ರೀತಿಸುತ್ತೇವೆ. ಅವುಗಳ ಅಗತ್ಯ ಪೂರೈಸಲು ಆಹಾರ, ರಂಜನೆಯನ್ನು ನೀಡುತ್ತೇವೆ. ಮೈಮನಗಳಿಗೆ ಮುದ ನೀಡುವಂಥ ಸಂಬಂಧಗಳನ್ನು ಸೃಷ್ಟಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಬದುಕು ಹಿತವಾಗಿರಲು ಏನೇನು ಅಗತ್ಯವಿದೆಯೋ ಅದೆಲ್ಲವನ್ನೂ ಸಂಪಾದಿಸಲು ಹೆಣಗುತ್ತೇವೆ. ಏರುವ ವಯಸ್ಸು ಮತ್ತು ಕಾಡುವ ಅನಾರೋಗ್ಯವು ಮನುಷ್ಯನ ಬದುಕು ಅತ್ಯಲ್ಪ ಎಂಬುದನ್ನು ಪದೇ ಪದೆ ನೆನಪಿಸುತ್ತಲೇ ಇರುತ್ತವೆ. ಇದೆಲ್ಲವೂ ಪ್ರಕೃತಿ ನಿಯಮ. ಎಲ್ಲಕ್ಕೂ ಒಂದು ಆದಿ, ಅಂತ್ಯ ಇದ್ದೇ ಇದೆ. ಒಂದು ಬಂಧ ಆರಂಭವಾಗಿದೆಯೆಂದರೆ, ಅದರ ಅಂತ್ಯವನ್ನು ಒಂದು ದಿನ ಭೇಟಿಯಾಗಲೇಬೇಕು. ಹಾವು ಪೊರೆ ಕಳಚಿದಂತೆ, ಹಳೆಯದನ್ನು ಬಿಟ್ಟು ಹೊಸತನ್ನು ಒಪ್ಪಿಕೊಳ್ಳಬೇಕು, ಅಪ್ಪಿಕೊಳ್ಳಬೇಕು. ಬೇರೆಯಾಗುವುದು ಇಲ್ಲವೇ, ಅಂತ್ಯವಾಗುವುದು ಎಂದರೆ, ಮತ್ತೆ ಇನ್ನಾವುದಕ್ಕೋ ಆರಂಭ ಎಂದರ್ಥ. ಬದುಕಿನ ಈ ಕೂಡಿ-ಕಳೆಯುವ ಆಟವನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಇಲ್ಲಿ ಮತ್ತೊಂದು ಸ್ವಾರಸ್ಯಕರ ಕತೆ ಇದೆ. ಇದನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರೋ ಗೊತ್ತಿಲ್ಲ, ಬಾರ್‌ನಲ್ಲಿದ್ದ ಒಂದು ಗುಂಪು ರಾತ್ರಿ ಬಹು ಹೊತ್ತಿನ ತನಕ ಮನಬಂದಂತೆ ಹರಟೆ ಹೊಡೆಯುತ್ತಾ ಕುಳಿತಿತ್ತು. ಕುಡಿದ ಮತ್ತಿನಲ್ಲಿ ಮಾತುಕತೆ ಎಲ್ಲೆಲ್ಲಿಗೋ ಹೋಗಿ, ಎಲ್ಲೆಲ್ಲಿಗೋ ನಿಲ್ಲುತ್ತಿತ್ತು. ಮಧ್ಯರಾತ್ರಿಯಾಗುತ್ತಿದ್ದಂತೆಯೇ ಬಾರ್ ಮುಚ್ಚುವ ಸಮಯವಾಯಿತು. ಒಬ್ಬೊಬ್ಬರೇ ಜಾಗ ಖಾಲಿ ಮಾಡತೊಡಗಿದರು. ಅವರ ಪೈಕಿ ನಾಲ್ಕು ಮಂದಿ ಗೆಳೆಯರ ಗುಂಪೊಂದು ಬಾರ್‌ನಿಂದ ಹೊರಬಂದಿತು.
ಆಕಾಶದಲ್ಲಿನ ಚಂದ್ರನನ್ನು ನೋಡಿ ಅವರಲ್ಲಿ ಒಬ್ಬಾತ ಬಹಳ ಖುಷಿ ಪಟ್ಟ. ಗೆಳೆಯರೇ ಈ ಬೆಳದಿಂಗಳ ರಾತ್ರಿಯನ್ನು ನದಿಯಲ್ಲಿ ದೋಣಿ ವಿಹಾರ ಮಾಡುತ್ತಾ ಕಳೆದರೆ ಹೇಗಿರುತ್ತದೆ, ಅಲ್ಲವೇ? ಎಂದ. ಹೌದು ಅದರ ಸೊಬಗೇ ಬೇರೆ. ಹಿತವಾದ ತಂಗಾಳಿ, ಚಂದ್ರನ ಹಾಲು ಬೆಳದಿಂಗಳು... ಆಹಾ... ಅದರ ಸವಿಯೇ ಸವಿ...ಎಂದು ಇನ್ನೊಬ್ಬ ಧ್ವನಿ ಸೇರಿಸಿದ. ಈ ಆಲೋಚನೆ ಇತರರಿಗೆ ಇಷ್ಟವಾಯಿತು. ತಡ ಮಾಡದೇ ಎಲ್ಲರೂ ನದಿ ದಂಡೆಯತ್ತ ಹೊರಟರು.
ಸಾಕಷ್ಟು ಕುಡಿದಿದ್ದ ಆ ಗೆಳೆಯರು ಹೇಗೋ ನದಿ ದಂಡೆಗೆ ಬಂದರು. ಅವರ ಅದೃಷ್ಟಕ್ಕೆ ದಡದಲ್ಲೊಂದು ದೋಣಿಯೂ ಇತ್ತು. ತಡ ಮಾಡದೇ ಎಲ್ಲರೂ ದೋಣಿ ಏರಿ ಕುಳಿತುಬಿಟ್ಟರು. ಒಂದಿಬ್ಬರು ದೋಣಿಯ ಉಟ್ಟು ಹಾಕತೊಡಗಿದರು. ಕೆಲವರು ಹಾಡುಗಳನ್ನು ಹಾಡತೊಡಗಿದರು. ನದಿಯ ಸೌಂದರ್ಯ, ದೋಣಿಯಾನದ ಆನಂದ ಎಲ್ಲವನ್ನೂ ಕೊಂಡಾಡುತ್ತಾ ಆ ಗುಂಪು ನಿದ್ದೆಯಲ್ಲಿ ಜಾರಿತು.
ಅಷ್ಟರಲ್ಲಿ ಬೆಳಗಾಯಿತು. ಹಕ್ಕಿಗಳ ಕಲರವ ತುಂಬಿಕೊಂಡಿತ್ತು. ಸೂರ್ಯನ ಎಳೆ ಬಿಸಿಲು ಮೈಮೇಲೆ ಬಿದ್ದದ್ದರಿಂದ ದೋಣಿಯಲ್ಲಿದ್ದವರಿಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡುತ್ತಾರೆ.. ಎಲ್ಲರಿಗೂ ಅಚ್ಚರಿ. ಏಕೆಂದರೆ ದೋಣಿಯಲ್ಲಿ ರಾತ್ರಿ ಎಲ್ಲಿಂದ ಹೊರಟಿದ್ದರೋ, ಅಲ್ಲಿಯೇ ಇದ್ದರು. ಹಗ್ಗ ಎಷ್ಟು ಉದ್ದವಿದೆಯೋ ಅಷ್ಟು ಉದ್ದ ಮಾತ್ರ ದೋಣಿ ಸಾಗಿತ್ತು. ಏಕೆಂದರೆ ದಡದ ಕಂಬದಿಂದ ದೋಣಿಗೆ ಕಟ್ಟಿದ್ದ ಹಗ್ಗ ಬಿಚ್ಚುವುದನ್ನು ಎಲ್ಲರೂ ಮರೆತಿದ್ದರು! ಸುಮ್ಮನೇ ಉತ್ಸಾಹದಿಂದ, ಮೈನೋಯಿಸಿ ಕೊಂಡು ಉಟ್ಟು ಹಾಕಿದರೇ ಹೊರತು, ದೋಣಿ ಮುಂದೆ ಹೋಗುತ್ತಿಲ್ಲ.. ಇದಕ್ಕಾಗಿ ಹಗ್ಗ ಬಿಚ್ಚಬೇಕು ಎಂದು ಯಾರೂ ಯೋಚಿಸಲಿಲ್ಲ. ಹಗ್ಗ ಬಿಚ್ಚದೇ ದೋಣಿ ಮುಂದೆ ಸಾಗಲು ಹೇಗೆ ಸಾಧ್ಯ? ತಮ್ಮ ಮೂರ್ಖತನ ಕಂಡು ಎಲ್ಲರೂ ಜೋರಾಗಿ ನಕ್ಕರು.
ಬಹುಶಃ ಈ ಕತೆ ಎಲ್ಲರಿಗೂ ಗೊತ್ತು. ನಿಜಕ್ಕೂ ನಮ್ಮ ಸ್ಥಿತಿ ಸಹ ಹೀಗೆಯೇ ಇದೆ. ಅದರಲ್ಲೂ ಹೊಸದಾಗಿ ಉತ್ಸಾಹದಿಂದ ಹೊರಡುವ ಅಧ್ಯಾತ್ಮ ಸಾಧಕರ ಪರಿಸ್ಥಿತಿ ಇದನ್ನೇ ಹೋಲುತ್ತದೆ. ಅಧ್ಯಾತ್ಮಿಕ ಪಥದಲ್ಲಿ ಧ್ಯಾನ ಮತ್ತು ಸಾಧನೆ ಮೂಲಕ ನಾವು ತುಂಬಾ ದೂರಸಾಗಿದ್ದೇವೆ ಮುಂದೆಮುಂದೆ ಸಾಗುತ್ತಿದ್ದೇವೆ ಎಂದು ಭಾವಿಸುತ್ತೇವೆ. ಆದರೆ ಇದೊಂದು ಭ್ರಮೆ. ನಿಜವಾದ ವಾಸ್ತವವೇ ಬೇರೆ.
ನಮ್ಮ ಅರಿವಿನ ದೋಣಿಯನ್ನು ಬಹಳ ದೂರಕ್ಕೆ ಕೊಂಡೊಯ್ದಿದ್ದೇವೆ ಎಂದು ಭಾವಿಸುವ ನಾವು, ಮೊದಲು ಎಲ್ಲಿದ್ದೇವೆಯೋ ಅಲ್ಲಿಯೇ ಇದ್ದೇವೆ ಎನ್ನುವುದನ್ನು ಆತ್ಮಾವಲೋಕನದಿಂದ ಅರಿಯಬಹುದು. ಏಕೆಂದರೆ ದೋಣಿಯನ್ನು ಹಗ್ಗ ಬಂಧಿಸಿದಂತೆ, ನಮ್ಮನ್ನು ಈ ಪ್ರಾಪಂಚಿಕ ವಸ್ತುಗಳು ಹಿಡಿದಿಟ್ಟಿವೆ. ಈ ಬಂಧಗಳನ್ನು ಕಳಚಿಕೊಳ್ಳದೇ ಹೋದರೆ ಅರಿವಿನ ದೋಣಿ ಮುಂದೆ ಸಾಗಲು ಹೇಗಾದೀತು? ಇದು ಮನದಟ್ಟಾಗದೇ ಮುನ್ನಡೆದರೆ ಹಗ್ಗ ಕಟ್ಟಿದ ದೋಣಿಗೆ ಉಟ್ಟು ಹಾಕಿದಂತೆಯೇ ಆಗುತ್ತದೆ ನಮ್ಮ ಸ್ಥಿತಿ.
ಮನುಷ್ಯನಿಗೆ ದೇವರು ಕೊಟ್ಟಿರುವ ದೊಡ್ಡ ವರ ಯಾವುದು ಹೇಳಿ? ಪ್ರಶ್ನೆಗೆ ಉತ್ತರವಾಗಿ ನಾನಾ ವಸ್ತು, ಸಂಗತಿಗಳು ಮನದಲ್ಲಿ ಮೂಡಬಹುದು. ಆದರೆ ನಮ್ಮ ಪಾಲಿಗೆ, ಮನುಷ್ಯನಿಗೆ ದೇವರು ಕೊಟ್ಟಿರುವ ದೊಡ್ಡ ವರ -'ಮರೆವು' ಎಂದೇ ಅನಿಸುತ್ತದೆ. ಸ್ಮರಣ ಶಕ್ತಿ ಹೆಚ್ಚಿಸಿಕೊಳ್ಳಲು ಜನರು ನಾನಾ ಕಸರತ್ತುಗಳನ್ನು ಮಾಡುತ್ತಿರುವ ದಿನಗಳಲ್ಲಿ 'ಮರೆವು' ಮುಖ್ಯವೆನ್ನುವ ನಮ್ಮ ಅಭಿಪ್ರಾಯ ವಿಚಿತ್ರವಾಗಿ ತೋರಬಹುದು. ಆದರೆ ಅದು ಸತ್ಯ.

ಮರೆವು ಅನ್ನುವುದು ಇಲ್ಲದೇ ಹೋಗಿದ್ದರೆ, ಮನುಷ್ಯನ ಗತಿ ಏನಾಗುತ್ತಿತ್ತು, ಒಂದು ಕ್ಷಣ ಯೋಚಿಸಿ. ಯಾವುದೋ ದುಃಖದಲ್ಲಿ ಸಿಲುಕಿದ ಮನುಷ್ಯ ಕ್ರಮೇಣ ಅದನ್ನು ಮರೆಯುತ್ತಾ ಹೋಗಿ, ಸಹಜ ಬದುಕಿಗೆ ಮರಳುತ್ತಾನೆ. ಮರೆವು ಇಲ್ಲದೇ ಹೋಗಿದ್ದರೆ, ಆ ದುಃಖದ ಕಟ್ಟೆಯಲ್ಲೇ ಕೊಳೆಯಬೇಕಿತ್ತು. ಹೀಗಾಗಿಯೇ, 'ಕಾಲಕ್ಕೆ ಮರೆವೇ ಮದ್ದು' ಎನ್ನುವ ಮಾತಿದೆ. ಪರಿಸ್ಥಿತಿ ವಿಷಮಿಸಿದಾಗ, ಅನ್ಯ ಮಾರ್ಗಗಳು ಇಲ್ಲದೇ ಹೋದಾಗ, ಕಾಲನ ಕೈಗೆ ಒಪ್ಪಿಸಿ ನಿರಾಳವಾಗುವುದೇ ಉತ್ತಮ ಮಾರ್ಗ. ಮರೆವಿನ ಮಹತ್ವವನ್ನು ವಿಜ್ಞಾನ ಸಹ ಒಪ್ಪುತ್ತದೆ. ನಮಗೆ ಬೇಕಿಲ್ಲದ, ಅನಗತ್ಯವಾದ ಸಂಗತಿಗಳನ್ನು ನಮ್ಮ ಸ್ಮರಣಕೋಶದಿಂದ ತೆಗೆದುಹಾಕಬೇಕು' ಅನ್ನುತ್ತದೆ ಇಲಿನಾಯ್ಸ್ ಯೂನಿವರ್ಸಿಟಿಯ ಅಧ್ಯಯನ ವರದಿ. ಮರೆವು ಜಾಸ್ತಿಯಾಗುತ್ತಿದೆ ಎಂದು ಅಲವತ್ತುಕೊಳ್ಳುವ ಜನರಿನ್ನು ಆತಂಕ ಪಡಬೇಕಾಗಿಲ್ಲ. ತಾವು ಮರೆಯುತ್ತಿರುವ ವಿಷಯಗಳು ಎಂಥವು ಅನ್ನುವುದನ್ನು ಒಮ್ಮೆ ಪರಿಶೀಲಿಸಿಕೊಂಡು, ಅನಂತರ ಅದರ ಗಂಭೀರತೆಯ ಬಗ್ಗೆ ಯೋಚಿಸಿದರಾಯ್ತು.

ನಮ್ಮ ಪ್ರಾಚೀನ ಜ್ಞಾನ ಹೇಳುವಂತೆ, ಅನಗತ್ಯ ಚಿಂತನೆಗಳನ್ನು ಆಗಾಗ ಗುಡಿಸಿಹಾಕಬೇಕು. ನಾವು ಮರೆಯುತ್ತಿರುವಂಥ ಸಂಗತಿಗಳು ಹಾಗೆ ಅನಗತ್ಯವಾಗಿದ್ದವೇ ಆದಲ್ಲಿ, ನಮಗೆ ನಾವಾಗಿಯೇ ಗುಡಿಸಿ ಹಾಕುವ ಹೆಚ್ಚುವರಿ ಕೆಲಸ ತಪ್ಪುತ್ತದೆಯಷ್ಟೆ. ಕಸದ ತೊಟ್ಟಿ ಯಂತೆ ಸಿಕ್ಕಿದ್ದೆಲ್ಲವನ್ನೂ ಮಿದುಳಿನ ಸ್ಮರಣಕೋಶದಲ್ಲಿ ತುಂಬಿಕೊಂಡಿದ್ದರೆ ಏನುಪಯೋಗ?

ಇತ್ತೀಚೆಗೆ ಶಿಕಾಗೋದ ಇಲಿನಾಯ್ ಯುನಿವರ್ಸಿಟಿಯ ಮನಶ್ಶಾಸ್ತ್ರಜ್ಞರ ತಂಡವೊಂದು ಈ ಕುರಿತು ಅಧ್ಯಯನ ನಡೆಸಿ ತನ್ನ ವರದಿ ಹೊರತಂದಿದೆ. ಅದರ ನೇತೃತ್ವ ವಹಿಸಿದ್ದ ಪ್ರೊ.ಬೆನ್ ಸ್ಟಾರ್ಮ್ ಹೇಳುವಂತೆ, ''ಅನಗತ್ಯ ನೆನಪುಗಳನ್ನು ಗುಡ್ಡೆ ಹಾಕಿಕೊಳ್ಳು ವುದರಿಂದ ನಾವು ಹಲವು ಬಾರಿ ಅಗತ್ಯವಾದುದನ್ನು ಬೇಕಾದ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾರದೆ ಹೋಗುತ್ತೇವೆ. ಆದ್ದರಿಂದ ಯಾವುದು ನಮಗೆ ಬೇಕಿಲ್ಲವೋ ಅಂಥವನ್ನು ಮತ್ತೆಮತ್ತೆ ನೆನೆಯುತ್ತಾ ಉಳಿಸಿಕೊಳ್ಳುವುದನ್ನು ಬಿಟ್ಟುಬಿಡಬೇಕು''. ಇದರ ಜೊತೆಗೆ ಸ್ಟಾರ್ಮ್, ಯಾರು ನೆನಪಿಟ್ಟುಕೊಳ್ಳುವ ಸಂಗತಿಗಳ ಆಯ್ಕೆಯಲ್ಲಿ ಚಾಣಾಕ್ಷತೆ ತೋರುತ್ತಾರೋ ಅವರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದರಲ್ಲಿ ಹೆಚ್ಚು ಸಮರ್ಥರಾಗಿರುತ್ತಾರೆ ಎಂದೂ ಮಾತು ಸೇರಿಸುತ್ತಾರೆ. ನೀವು ಹಳತನ್ನು ಬಿಟ್ಟು ಹೊಸ ಸಿಮ್ ಖರೀದಿಸುತ್ತೀರಿ. ನಂತರವೂ ಹಳೆಯ ನಂಬರ್ ನೆನಪಿಟ್ಟುಕೊಳ್ಳುವುದರಿಂದ ಏನು ಪ್ರಯೋಜನ? ಅದೊಂದು ನಿಮ್ಮ ಸ್ಮರಣಶಕ್ತಿಯ ಪ್ರದರ್ಶನ ವಿಷಯವಾಗಬಹುದಷ್ಟೇ ಹೊರತು ಉಪಯೋಗವೇನೂ ಆಗದು,'' ಎನ್ನುತ್ತಾರವರು. ಸಾಧ್ಯವಾದಷ್ಟೂ ಖಾಲಿಯಿರಿ ಎನ್ನುತ್ತದೆ ಅಧ್ಯಾತ್ಮ. ಖಾಲಿ ಇರುವುದು ಎಂದರೆ ಭೂತಕಾಲದಿಂದ ಹೊರಬರುವುದು ಮತ್ತು ಭವಿಷ್ಯದ ಬಗ್ಗೆ ಕಲ್ಪನೆಗಳನ್ನು- ಭ್ರಮೆಗಳನ್ನು ತುಂಬಿಕೊಳ್ಳದೆ ಇರುವುದು. ನೆನಪುಗಳನ್ನು ಅಳಿಸಿಹಾಕಿದಾಗಲೇ ನಾವು ಭೂತಕಾಲದಿಂದ ಹೊರಬರಲು ಸಾಧ್ಯವಾಗು ವುದು. ನಾವು ಯಾವುದೇ ವಸ್ತು, ವ್ಯಕ್ತಿ, ಘಟನೆಗಳ ವ್ಯಾಮೋಹದಿಂದ ಹೊರಬಂದಾಗ ಮಾತ್ರ ಅವಕ್ಕೆ ಅಂಟಿಕೊಂಡ ನೆನಪಿನ ಹಿಡಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದು.
''ಸಾಹಸ ಮಾಡೋ ಡಿಂಬಕ  ... ಬಯಸಿದ್ದು ಲಭಿಸುತ್ತದೆ,'' ಎನ್ನುತ್ತಾ  ಪಾತಾಳ ಭೈರವಿ ಸಿನಿಮಾದಲ್ಲಿ ಖಳನಾಯಕ ನಮಗೆ ಒಂದು ದೊಡ್ಡ ಬೋಧನಾ ರೂಪದ ಸಂದೇಶವನ್ನು ನೀಡಿದ್ದಾನೆ. ಕೇವಲ 'ಪಾತಾಳ ಭೈರವಿ' ಸಿನಿಮಾದಲ್ಲೇ ಅಲ್ಲ, ಯಾವ ಸಿನಿಮಾ ನೋಡಿದರೂ ಅದರಲ್ಲಿ ಸಾಹಸ ಎನ್ನುವುದೇ ಮೂಲ ಕಥಾವಸ್ತುವಾಗಿ ಹೀರೊ, ಹೀರೊಯಿನ್‌ಗಳ ಸುತ್ತಾ ಹೆಣೆಯಲ್ಪಟ್ಟಿರುತ್ತದೆ. ಸಾಹಸಕೃತ್ಯಗಳ ಹಿನ್ನೆಲೆಯಲ್ಲಿ ಅವರು ನಟಿಸದಿದ್ದರೆ ಆ ಸಿನಿಮಾ ಸಪ್ಪೆಯಾಗುತ್ತದೆ. ಅದನ್ನು ಯಾವ ಪ್ರೇಕ್ಷಕರು ಸಹ ನೋಡುವುದೇ ಇಲ್ಲ. ಅಷ್ಟೇಅಲ್ಲದೇ, ಬಾಕ್ಸಾಫೀಸ್‌ನಲ್ಲಿ ಅದು ಘೋರವಾಗಿ ಉರುಳಿ ಬೀಳುತ್ತದೆ. ಹಾಗೆಯೇ ನಮ್ಮ ಜೀವನವೂ ಇದೆ. ಈ ಭೂಮಿಯ ಮೇಲೆ ಜನ್ಮತಾಳಿದ ನಮ್ಮೆಲ್ಲರ ಜೀವನಗಳು ಕೂಡ ಸಾಹಸದಿಂದ ಕೂಡಿಕೊಂಡಿವೆ. ಸಿನಿಮಾಗಳಲ್ಲಿ ಸಾಹಸ ಕಥಾವಸ್ತುವು ಎಷ್ಟು ಸ್ಪಷ್ಟವಾಗಿ ರೂಪಿಸಲ್ಪಡುತ್ತದೊ ಅಷ್ಟೇ ಸ್ಪಷ್ಟವಾಗಿ ನಮ್ಮ ಜೀವನಗಳಲ್ಲಿ ಕೂಡ ಸಾಹಸ ಎನ್ನುವುದು ಅಂತರ್ಲೀನವಾಗಿ ಇರುತ್ತದೆ. ಕೇವಲ ತಿಂಡಿ, ನಿದ್ದೆ, ಬಟ್ಟೆಗಾಗಿಯೇ ಜೀವನವನ್ನು ಮೀಸಲಾಗಿಡದೇ, ಹತ್ತಾರು ಜನಕ್ಕೆ ಉಪಯೋಗವಾಗುವ ಮಹತ್ತರವಾದ ಲೋಕಕಲ್ಯಾಣ ಕಾರ್ಯಕ್ರಮಗಳನ್ನು ಕೈಹಿಡಿದು, ಅವುಗಳ ಅನುಸರಣೆಗಾಗಿ ತ್ರಿಕರಣಶುದ್ಧಿಯಾಗಿ ನಮ್ಮ ಜೀವನವನ್ನು ಅಂಕಿತಗೊಳಿಸುವುದೇ ಸಾಹಸ. ಅದಕ್ಕೆ ಏಸು ಪ್ರಭುವು, ''ಕೇವಲ ರೊಟ್ಟಿಯಿಂದ ಮಾತ್ರವೇ ಮಾನವನು ಜೀವಿಸುವುದಿಲ್ಲ,'' ಎನ್ನುತ್ತಾ ಸಮಸ್ತ ಮಾನವಕುಲಕ್ಕೆ ಒಳ್ಳೆಯ ಸಂದೇಶವನ್ನು ನೀಡಿದರು.
ಹಣ ಸಂಪಾದಿಸಿ ಕೂಡಿಟ್ಟು, ಮದುವೆ ಮಾಡಿಕೊಂಡು ಮಕ್ಕಳನ್ನು ಹಡೆದು, ಅವರನ್ನು ಬೆಳೆಸಿ ದೊಡ್ಡವರನ್ನು ಮಾಡುತ್ತೇವೆ. ಅವರು ಕೂಡಾ ಮಕ್ಕಳನ್ನು ಹಡೆಯುತ್ತಿದ್ದರೇ ''ನೋಡಿ ನಾನು ತಾತನಾಗಿದ್ದೇನೆ, ಅಮ್ಮಮ್ಮ ಆಗಿದ್ದೇನೆ, ಅಜ್ಜಿ ಆಗಿದ್ದೇನೆ,'' ಎಂದು ಖುಷಿಪಡುತ್ತಾ ತುಂಬಾ ದೊಡ್ಡ ಘನಕಾರ್ಯ ಸಾಧಿಸಿದ್ದೇವೆ ಎಂದುಕೊಂಡರೇ ಲಾಭವಿಲ್ಲ. ಇಂತಹ ಘನಕಾರ್ಯಗಳನ್ನು ಬಾಯಿಯಿಲ್ಲದ ಪಶುಪಕ್ಷ್ಯಾದಿಗಳು ಸಹಿತ ಮಾಡಬಲ್ಲವು. ಅದು ಪ್ರಕೃತಿ ಸಹಜ. ಆದ್ದರಿಂದ, ನಾವು ಇಷ್ಟಕ್ಕೆ ಪುನಃ ಪುನಃ ಜನ್ಮ ಪಡೆಯಬೇಕಾದ ಅವಶ್ಯಕತೆ ಇಲ್ಲವೇ ಇಲ್ಲ. ಶರೀರ ಮುಡಿದುಕೊಂಡ ನಂತರ ಕಾಡಿಗೆ ಕಾಲು ಚಾಚಿಕೊಂಡು, 'ರಾಮ', 'ಕೃಷ್ಣಾ' ಎಂದುಕೊಳ್ಳುತ್ತಾ ಅನೇಕ ಜನ ತಮ್ಮ ಉಳಿದ ಜೀವನವನ್ನು ಕಳೆಯುತ್ತಿರುತ್ತಾರೆ. ಹಾಗೆ ಕಳೆಯುವುದರಲ್ಲಿ ಸಹ ಸಾಹಸ ಇಲ್ಲ ಎಂದು ಹೇಳಲಾಗುವುದಿಲ್ಲ. ಆದರೆ, ಅಂತಹ ಜೀವನಗಳಲ್ಲಿ ಸಾಹಸ ಎನ್ನುವುದು ತುಂಬಾ ತುಂಬಾ ಕಡಿಮೆಯಾಗಿದ್ದು ಅದು ಅವರ ಜೀವನ ಪರಮಾರ್ಥವನ್ನು ನೆರವೇರಿಸಿಕೊಳ್ಳುವುದರಲ್ಲಿ ಸ್ವಲ್ಪವೂ ಸಹಾಯಕಾರಿಯಾಗಿರುವುದಿಲ್ಲ. ಆತ್ಮಸ್ವರೂಪರಾಗಿ ಅವರು ತುಂಬಾ ಕಷ್ಟಪಟ್ಟು ಮೇಲಿನ ಲೋಕಗಳಿಂದ ತಂದುಕೊಂಡಂತಹ ಅವರ ಅಮೂಲ್ಯವಾದ ಜೀವನಕಾಲ ಕೂಡಾ ಮಾನವ ದೇಹದಲ್ಲಿ ಸೇರಿದ ನಂತರ ವ್ಯರ್ಥವಾಗುತ್ತದೆ. ಅವರಿಗೆ ಮಾರ್ಗದ ದಣಿವು ಮಾತ್ರವೇ ಉಳಿಯುತ್ತದೆ.
ಶ್ರೀಕೃಷ್ಣ, ಗೌತಮಬುದ್ಧ, ಏಸು ಪ್ರಭು, ಮಹಾತ್ಮಾ ಗಾಂಧಿ, ಮದರ್ ತೆರೇಸಾ, ಮೇಡಮ್ ಬ್ಲವಾಟ್‌ಸ್ಕೀ, ಸತ್ಯಸಾಯಿ, ಓಶೋ ಅಂತಹ ಮಹಾತ್ಮರ ಜೀವನ ಚರಿತ್ರೆಗಳನ್ನು ಓದುವಾಗ, ಕೇಳಿಸಿಕೊಳ್ಳುವಾಗ ನಮ್ಮ ಮೈ ಜುಂ ಎನ್ನುತ್ತದೆ. ಸಾಧಾರಣ ಮನುಷ್ಯರಂತೆಯೇ ಜನ್ಮ ಪಡೆದುಕೊಂಡು ಅಸಾಧಾರಣವಾದ ಸಾಹಸ ಕೃತ್ಯಗಳನ್ನು ಕೈಗೊಂಡ ಇವರೆಲ್ಲಾ ಚರಿತ್ರೆಯಲ್ಲಿ ನಿಜವಾದ ಹೀರೋಗಳ ಹಾಗೆ ಉಳಿದಿದ್ದಾರೆ. ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿ ಯೋಗೀಶ್ವರರಾಗಿದ್ದಾರೆ. ಮಾನವ ಜಾತಿಯ ಉದ್ಧಾರಕ್ಕಾಗಿ ಅವರು ಹಗಲು-ರಾತ್ರಿ ಶ್ರಮಿಸುತ್ತಾ, ಈ ಭೂಮಿಯ ಮೇಲೆ ಮಹಾ ಮಹಾ ಆಂದೋಲನಗಳಿಗೆ ಕಾರಣಕರ್ತರಾದರು.
ಈ ಮೆಟೀರಿಯಲ್ ಜಗತ್ತಿನಲ್ಲಿ ಓಟ ಸಹಜವೆನ್ನಿಸಿಬಿಟ್ಟಿದೆ. ಇಲ್ಲಿ ಎಲ್ಲದಕ್ಕೂ ಓಡಲೇಬೇಕು. ವೇಗವೇ ಪ್ರಧಾನ. ಓಡಿ ಓಡಿ ಸುಸ್ತಾದಾಗ, ಶಾಂತಿ-ನೆಮ್ಮದಿಗಾಗಿ ಅಧ್ಯಾತ್ಮದತ್ತ ವಾಲುತ್ತೇವೆ. ಆದರೆ ಇಲ್ಲಿ ಸಹ ನಮ್ಮ ಓಟ ಮತ್ತು ಗೊಂದಲಗಳು ತಿಳಿಯಾಗುವುದಿಲ್ಲ. ಮತ್ತದೇ ಓಟ. ಅಧ್ಯಾತ್ಮ ಸಾಧನೆಗಾಗಿ ಗುರುವನ್ನು ಹುಡುಕುತ್ತೇವೆ. ಯಾರು ಹಿತ, ಅವರೋ ಇವರೋ ಅಂದುಕೊಳ್ಳುತ್ತಾ ಗುರುಗಳನ್ನು ಬದಲಿಸುತ್ತಲೇ ಸಾಗುತ್ತೇವೆ. ನಾನಾ ಧರ್ಮ ಮತ್ತು ಸಂಪ್ರದಾಯಗಳತ್ತ ಇಣುಕಿ ನೋಡುತ್ತೇವೆ.  ಓಶೋ ನನ್ನ ಪಾಲಿನ ಪರಮ ಗುರು ಎಂದು ಮೊದಲಿಗೆ ಅಂದುಕೊಳ್ಳುವ ಕೆಲವರು, ನಂತರದ ದಿನಗಳಲ್ಲಿ ಇನ್ನೊಬ್ಬರತ್ತ ಸಾಗುತ್ತಾರೆ. ಅಲ್ಲಿಂದ ರಾಮದೇವ್‌ರನ್ನು ಹಿಂಬಾಲಿಸುತ್ತಾರೆ. ನಂತರ ಇನ್ನೊಬ್ಬರ ಆಶ್ರಮದ ಬಾಗಿಲು ತಟ್ಟುತ್ತಾರೆ.
ಮತ್ತೆ ಕೆಲವರು ನಾನಾ ಅಧ್ಯಾತ್ಮ ಗುರುಗಳ ಸಿ.ಡಿ ಮತ್ತು ಪುಸ್ತಕಗಳನ್ನು ಮೇಜಿನ ಮೇಲೆ ಹರಡಿಕೊಳ್ಳುತ್ತಾರೆ. ಈ ಗುರುಗಳ ಬೋಧೆಯನ್ನು ತಲೆಗೆ ತುಂಬಿಕೊಳ್ಳುತ್ತಾರೆ. ಈ ಮಧ್ಯೆ, ಯಾರೋ ಒಬ್ಬರು ಬಂದು ಇನ್ನೊಬ್ಬ ಗುರುವಿನ ಮಹಿಮೆ ಮತ್ತು ಶಕ್ತಿ ಬಗ್ಗೆ ಹೇಳಿದಾಗ, ಅತ್ತ ಕಡೆಗೆ ಓಡುತ್ತಾರೆ. ಇಲ್ಲವೇ, 'ನೀನು ನಂಬಿರುವ ಗುರು ಸರಿಯಿಲ್ಲ' ಎಂದು ಯಾರಾದರೂ ಹೇಳಿದರೆ, ತಮ್ಮ ದಿಕ್ಕನ್ನು ಬದಲಿಸುತ್ತಾರೆ. ಇದೊಂದು ರೀತಿ ಶಾಪಿಂಗ್ ಇದ್ದಂತೆ. ಇಲ್ಲಿ ಸರಿಯಿಲ್ಲ ಎಂದರೆ, ಇನ್ನೊಬ್ಬ ಗುರುವಿನ ಅಂಗಡಿ ಮುಂದೆ ಜನ ನಿಂತುಕೊಳ್ಳುತ್ತಾರೆ. ನಾವು ಇಂಥ ಅಧ್ಯಾತ್ಮದ ಶಾಪಿಂಗ್ ಮಾಡುತ್ತಾ ಮಾಡುತ್ತಾ, ಶಾಂತಿ-ನೆಮ್ಮದಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತೇವೆ.
ಬುದ್ಧನ ಆರಾಧಕರಾಗಿದ್ದವರು, ನಂತರದ ದಿನಗಳಲ್ಲಿ ಕೃಷ್ಣ ಭಜನೆ-ನೃತ್ಯವನ್ನು ಮಾಡಬಹುದು. ಕೇವಲ ಆರು ತಿಂಗಳಲ್ಲಿಯೇ ಇಷ್ಟೆಲ್ಲ ಗತಿಸಬಹುದು. ಇಂಥ ಸಂದಿಗ್ಧ ಮನಸ್ಥಿತಿಯವರು ಎಲ್ಲಿಯೂ ನಿಲ್ಲದೇ ಇನ್ನಷ್ಟು ಖಿನ್ನರಾಗಿ, ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಅಧ್ಯಾತ್ಮಕ್ಕೆ ಸಂಬಂಧಿಸಿದ ದುಬಾರಿ ಕೋರ್ಸ್‌ಗಳನ್ನು ಮಾಡುತ್ತಾರೆ. ಕಾರ್ಯಾಗಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲಿ ಅಧ್ಯಾತ್ಮ ಗುರುವಿನ ಪರಿಣಾಮಕಾರಿ ಮಾತು ಮತ್ತು ನಿದರ್ಶನಗಳಿಗೆ ಕಿವಿ ತೆರೆದುಕೊಳ್ಳುತ್ತಾರೆ. ಇನ್ನು ಕೆಲವೇ ದಿನಗಳಲ್ಲಿ ನಾವು ಬದಲಾಗುತ್ತೇವೆ ಎಂದು ಭಾವಿಸುತ್ತಾರೆ. ಆದರೆ ಇದ್ಯಾವುದೂ ಸಾಧ್ಯವಾಗುವುದಿಲ್ಲ.
ಇದೆಲ್ಲ ಸರಿ, ಮುಂದೇನು ಎನ್ನುವ ಪ್ರಶ್ನೆ ಎಲ್ಲರದು. ಅಲೆದಾಟ ನಿಲ್ಲಿಸಿ, ನಿಮ್ಮೊಳಗಿನ ಶಕ್ತಿ ಚೈತನ್ಯವನ್ನು ಗುರ್ತಿಸಿಕೊಳ್ಳಿ. ಅಹಂನ್ನು ಸುಟ್ಟು, ನಿಮ್ಮ ಹೃದಯಕ್ಕೆ ಶರಣಾಗಬೇಕು. ಆಗ ಅಲ್ಲಿರುವ ಭಗವಂತನು, ನಿಮಗೆ ಮಾರ್ಗದರ್ಶನ ನೀಡುತ್ತಾನೆ. ಯಾವ ಗುರು ಅಸಲಿ ಅಥವಾ ನಕಲಿ ಎಂದು ಅರಿಯುವ ಸಾಮರ್ಥ್ಯ ನಿಮ್ಮದಾಗುತ್ತದೆ. ಆಗ ನಿಮ್ಮ ಹೃದಯವೇ ಗುರುವಾಗುತ್ತದೆ.
ಕಬೀರರು ಹೇಳುವಂತೆ, 'ನೀವು ನಿಮ್ಮೊಳಗಿನ ಗುರುವನ್ನು ಅಂದರೆ ದೇವರನ್ನು ಆರಾಧಿಸಿ. ನಿಮ್ಮ ಒಳಗಣ್ಣು ತೆರೆಸಲು ಗುರುವಿನಿಂದ ಮಾತ್ರ ಸಾಧ್ಯ. ಹೀಗಾಗಿಯೇ ಗುರುವು ದೇವರಿಗೆ ಸಮಾನ'. ಗುರುವನ್ನು ಹುಡುಕುವುದನ್ನು ಬಿಟ್ಟು, ಧ್ಯಾನದ ಮೂಲಕ ನಿಮ್ಮ ಅಧ್ಯಾತ್ಮದ ಪಯಣ ಆರಂಭವಾಗಲಿ. ವಿಕಸನ ಕ್ರಾಂತಿ ಸುಖಕರವಾಗಿರಲಿ.