ಖುಷಿಪಡಲು ರೋಮಾಂಚನವನ್ನು ಅನುಭವಿಸಲು, ಹೊಸ ಅನುಭವವನ್ನು ಪಡೆಯಲು, ಏನಾದರೂ ಸಾಹಸ ಮಾಡಲು ಹರೆಯದವರು ಹಾತೊರೆಯುವುದು ಎಷ್ಟು ಸಹಜವೋ. ತಾವು ಏನೂ ತಿಳಿಯದ. ಮುಗ್ಧ ಮಕ್ಕಳಲ್ಲ್ಲ ತಾವು
ದೊಡ್ಡವರಾಗಿದ್ದೇವೆ. ದೊಡ್ಡವರ ರೀತಿಯಲ್ಲಿ ನಡೆದುಕೊಳ್ಳಬಲ್ಲೆವು ಎಂಬ ಮನೋಭಾವನೆಯನ್ನು ಬೆಳೆಸಿ
ಕೊಂಡುಬಿಡುತ್ತಾರೆ ಎನ್ನುವುದೂ ಅಷ್ಟೇ ನಗ್ನಸತ್ಯ. ಸಹವಯಸ್ಕರು ಮಾಡುವ ಯಾವುದೇ
ಕೆಲಸ/ಚಟುವಟಿಕೆಯನ್ನು ತಾವೂ ಮಾಡಲು ಹಾತೊರೆಯುತ್ತಾರೆ. ಜೊತೆಗೆ ತಮಗಾಗುವ ಬೇಸರ, ದುಃಖ ನೋವನ್ನು ಮರೆಯುವ ಅಗತ್ಯ ಅವರಿಗೆ ಇರುತ್ತದೆ. ಇದರ ಪರಿಣಾಮವೇ
ಹದಿಹರೆಯದವರು ಅನೇಕ ನಶೆ ತರಿಸುವ ವಸ್ತುಗಳನ್ನು ಉಪಯೋಗಿಸಲು ಆರಂಬಿಸುತ್ತಾರೆ, ಕಾಲಕ್ರಮೇಣ ಆ
ನಶೆಯಲ್ಲಿ ಸಿಗುವ ಅಲ್ಪ ಸಂತೋಷಕ್ಕೆ ಮಾರುಹೋಗಿ ಅತಿಯಾಗಿ ಉಪಯೋಗಿಸಲು ಪ್ರಾರಂಬಿಸಿ ಬಿಡುತ್ತಾರೆ.
ಅವರು ಉಪಯೋಗಿಸುವ ಸಾಮಾನ್ಯ ಪದಾರ್ಥಗಳೆಂದರೆ.
- ಬೀಡಿ/ಸಿಗರೇಟು
- ಪಾನ್
ಮಸಾಲಗಳು, ಗುಟ್ಕಾ ಖೈನಿಗಳು
- ಬೀರ್, ಬ್ರಾಂದಿ, ವಿಸ್ಕಿ, ವೈನ್, ವೋಡ್ಕಾಗಳಂತಹ
ಮದ್ಯಸಾರವಿರುವ ಪಾನೀಯಗಳು
- ‘ಕೋಲಾದಂತಹ
ತಂಪು ಪಾನೀಯಗಳು
- ಗಾಂಜಾ, ಭಂಗಿಸೊಪ್ಪು, ಹಶೀಶ್, ಚರಸ್‌ನಂತಹ, ಕೇನಾಬಿಸ್
ಪದಾರ್ಥಗಳು
- ಬ್ರೌನ್‌ಶುಗರ್, ಹೆರಾಯಿನ್‌ನಂತಹ
ಅಫೀಮು ಪದಾರ್ಥಗಳು
- ಕೆಮ್ಮಿನ
ಸಿರಪ್‌ಗಳು
- ನೋವು
ಶಮನ ಮಾಡುವ ಮಾತ್ರೆಗಳು, ಇಂಜೆಕ್ಷನ್‌ಗಳು
- ಕೊಕೇನ್, ಮಾಂಡ್ರಾಕ್ಸ್
ಅಂತಹ ನಶೆ ಪದಾರ್ಥಗಳು
- ಡಯಾಜೆಪಾಂ, ಆಲ್ಟ್ರೋಜೆಲಾಂ
ನೈಟ್ರೊಜೆಪಾಂ ನಂತಹ ನಿದ್ರಾಮಾತ್ರೆಗಳು
- ಕ್ಸೀರಾಕ್ಸ್
ಇಂಕ್, ನೇಲ್‌ಪಾಲೀಶ್ ರಿಮೂವರ್, ಗ್ಲೂ, ಪೆಟ್ರೋಲ್, ಅಯೋಡೆಕ್ಸ್
ನಂತಹ ವಸ್ತುಗಳು.
ಹರೆಯಕ್ಕೆ ಬಂದಂತ ಹೆಚ್ಚಿನ ಹುಡುಗರು ಧೂಮಪಾನ ಮಾಡುವ ಕೆಲಸಕ್ಕೆ ಕೈ
ಹಾಕುತ್ತಾರೆ. “ಮನೆಯಲ್ಲಿ ಅಪ್ಪ, ಅಜ್ಜ
ಸೇದುತ್ತಾರೆ. ಮಾವ,
ದೊಡ್ಡಪ್ಪ, ಚಿಕ್ಕಪ್ಪ, ಅಣ್ಣ
ಸೇದುತ್ತಾರೆ. ನನ್ನ ನೆಚ್ಚಿನ ಶಿಕ್ಷಕರು ಸಿನೇಮಾ ನಟ, ಸ್ಪೋರ್ಟ್ಸ್ ಹೀರೋ ಸೇದುತ್ತಾರೆ. ನನ್ನ ಸಹವಯಸ್ಕರು ಸೇದುತ್ತಾರೆ. ನಾನೇಕೆ
ಸೇದಬಾರದು? ಸೇದು ಎಂದು ಸ್ನೇಹಿತರು ಒತ್ತಾಯ ಬೇರೆ ಇದೆ. ‘ಗಂಡಸಲ್ಲವೇನೋ ನೀನು ಸಿಗರೇಟನ್ನು ಹಿಡಿ ಒಂದು ದಮ್ ಎಳಿ, ಅದರ ಮಜವನ್ನು ಅನುಭವಿಸು ಎಂದು ಅವರೆಲ್ಲ ಹೇಳುತ್ತಾರೆ. ಸಿಗರೇಟ್
ಎಳೆಯದಿದ್ದರೆ ‘ನೀನೊಬ್ಬ ಹೆದರುಪುಕ್ಲ ಹೆಣ್ಣಿಗ. ತಾಕತ್ ಇಲ್ಲದವನು ಎಂದು ಹೀಯಾಳಿಸುತ್ತಾರೆ
ಹಾಗೆಯೇ ಸಿಗರೇಟ್ ಸೇವನೆ ಬಗ್ಗೆ ಅನೇಕ ಜನಪ್ರಿಯ
ನಂಬಿಕೆಗಳಿವೆ. ಅವುಗಳಲ್ಲಿ ಬಹುಪಾಲು ನಂಬಿಕೆಗಳು ಅವಾಸ್ತವಿಕ, ಉತ್ಪ್ರೇಕ್ಷಿತ ಹಾಗೂ ಅವೈಜ್ಞಾನಿಕ ಇಂತಹ ಕೆಲವು ನಂಬಿಕೆಗಳಿವು.
- ಸಿಗರೇಟ್
ಸೇವನೆಯಿಂದ ಏಕಾಗ್ರತೆ ಹೆಚ್ಚುತ್ತದೆ. ವಿಚಾರ ಶೀಲತೆ ಹೆಚ್ಚುತ್ತದೆ (ಖಂಡಿತ ಇಲ್ಲ).
- ಸಿಗರೇಟ್
ಸೇವನೆಯಿಂದ ಟೆಂಶನ್ ಕಡಿಮೆಯಾಗುತ್ತದೆ. (ಸ್ವಲ್ಪಮಟ್ಟಿಗೆ ನಿಜ, ಸಿಗರೇಟಲ್ಲಿರುವ
ನಿಕೋಟಿನ್ ಸ್ವಲ್ಪ ಮಟ್ಟಿಗೆ ಮನಸ್ಸಿಗೆ ಹಿತವೆನಿಸುವ ಅನುಭವವನ್ನು ನೀಡುತ್ತದೆ).
- ಸಿಗರೇಟ್
ಸೇವನೆಯು ಪುರುಷತನದ ಲಕ್ಷಣ. ಸ್ತ್ರೀಯರಲ್ಲಿ ಅವರ ಧೈರ್ಯ ಮತ್ತು ಆಧುನಿಕತೆಯ ಸೂಚಕ. (ಇದು
ಜನರ ಕಲ್ಪನೆ).
- ಸಿಗರೇಟ್
ಸೇವನೆಯಿಂದ ಮಲಬದ್ಧತೆ ದೂರವಾಗುತ್ತದೆ(ಹಾಗೇನೂ ಇಲ್ಲ).
- ಸಿಗರೇಟ್
ಸೇವನೆಯಿಂದ ಮಿದುಳು ಚುರುಕಾಗುತ್ತದೆ, ಸಮಸ್ಯಾ
ವಿಶ್ಲೇಷಣೆ ಮತ್ತು ನಿರ್ಧಾರ ಕೈಗೊಳ್ಳುವ ಶಕ್ತಿ ಹೆಚ್ಚುತ್ತದೆ.(ಹಾಗೇನೂ ಇಲ್ಲ).
- ಸಿಗರೇಟು
ಸೇದುವ ಹುಡುಗನನ್ನು ಹುಡುಗಿಯರು ಇಷ್ಟಪಡುತ್ತಾರೆ (ಇದೊಂದು ಮಿಥ್ಯೆ ಮಾಧ್ಯಮದ ಪ್ರಚಾರ).
- ಸಿಗರೇಟು
ಸೇವನೆಯಿಂದ ವ್ಯಕ್ತಿಯ ಸ್ಥಾನ,
ಪ್ರತಿಷ್ಠೆ ಹೆಚ್ಚುತ್ತದೆ. (ಇದೂ
ಒಂದು ಅಪ್ಪಟ ಸುಳ್ಳು)
- ಸಿಗರೇಟು
ಬೀಡಿಯಲ್ಲಿರುವ ‘ನಿಕೋಟಿನ್ ಅವಲಂಬನೆಯನ್ನುಂಟುಮಾಡುವ ವಸ್ತು. ಒಮ್ಮೆ ತೆಗೆದುಕೊಂಡ
ಮೇಲೆ ಪದೇ-ಪದೇ ತೆಗೆದುಕೊಳ್ಳಬೇಕೆಂಬ ಆಸೆಯನ್ನು ಹುಟ್ಟು ಹಾಕುತ್ತದೆ. ಅವಲಂಬನೆ ಬೆಳೆದ
ಮೇಲೆ ಒಂದು ದಿನ ಸೇದದಿದ್ದರೆ ಅಥವಾ ಸೇದುವ ಪ್ರಮಾಣವನ್ನು ತಗ್ಗಿಸಿದರೆ, ಹಿಂದೆಗೆತದ
ಚಿನ್ಹೆಗಳು, ಕಾಣಿಸಿಕೊಳ್ಳುತ್ತವೆ. ಉದಾ:
- ಏನನ್ನೋ ಕಳೆದುಕೊಂಡಂತಹ ಅನುಭವ.
- ಚಡಪಡಿಕೆ ಗೊಂದಲ.
- ಮನಸ್ಸಿಗೆ ನೆಮ್ಮದಿ ಇರುವುದಿಲ್ಲ.
- ಕೈಕಾಲುಗಳು ನವಿರಾಗಿ ನಡುಗುತ್ತವೆ, ನೋಯುತ್ತವೆ.
- ಕಲಿಕೆ ಮತ್ತಿತರ ಬೌದ್ಧಿಕ ಚಟುವಟಿಕೆಗಳು ಕುಗ್ಗುತ್ತವೆ.
- ನಿದ್ದೆ ಬರುವುದಿಲ್ಲ.
- ಮಂಕುತನ/ಜಡತ್ವ.
- ತಲೆನೋವು, ವಾಕರಿಕೆ.
ಸಿಗರೇಟನ್ನು ಸೇದಿದ ಕೂಡಲೇ ಈ ಹಿಂದೆಗೆತದ ಚಿನ್ಹೆಗಳು
ಮರೆಯಾಗುತ್ತವೆ. ಹೀಗಾಗಿ ವ್ಯಕ್ತಿ ಸದಾ ಸಿಗರೇಟ್ ಸೇವನೆಯ ಚಟಕ್ಕೆ ಒಳಗಾಗುತ್ತಾನೆ, ಚೇಯ್ನ್‌ಸ್ಮೋಕರ್ ಆಗಿ ಬಿಡುತ್ತಾನೆ.
ಸಹವಯಸ್ಕರ ಒತ್ತಡ ಮತ್ತು ಅವರ ಮಾದರಿ, ಸಿನೇಮಾ, ದೃಶ್ಯ
ಮಾಧ್ಯಮಗಳ ಪ್ರಭಾವ. ಸಿಗರೇಟು ಕಂಪನಿಗಳು ಮಾಡುವ, ಒಡ್ಡುವ ಆಕಷಕ ಜಾಹೀರಾತುಗಳು, ಹದಿಹರೆಯದವರ ಮನಸ್ಸಿನ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಧೂಮಪಾನ ಹಾಗೂ
ಧೂಮಪಾನದ ಬಗ್ಗೆ ಇರುವ ಜನಪ್ರಿಯ ನಂಬಿಕೆಗಳಿಂದ ಹರೆಯದವರು ಧೂಮಪಾನ ಮಾಡಲು ಪ್ರೇರಣೆಯನ್ನು
ಪಡೆಯುತ್ತಾರೆ.
ಇದರ ಬಗ್ಗೆ ಹರೆಯದವರೊಂದಿಗೆ ಮುಕ್ತ ಚರ್ಚೆ ಮಾಡಿ, ಧೂಮಪಾನ ಮಾಡಬೇಕೇ ಬೇಡವೇ ಎಂಬುದನ್ನು ಪ್ರತಿಯೊಬ್ಬ ಹರೆಯದ ಮತ್ತೆ
ನಿರ್ಧರಿಸುವಂತೆ ಮಾಡಬೇಕು. ಧೂಮಪಾನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರ ಗಮನ ಸೆಳೆಯಬೇಕು.
ಶ್ವಾಸಕೋಶದ ಕ್ಯಾನ್ಸರ್
- ರಕ್ತನಾಳಗಳು
ಕಟ್ಟಿಕೊಂಡು, ಗ್ಯಾಂಗ್ರೀನ್ ಆಗುವ ಬರ್ಗರ‍್ಸ್ ಕಾಯಿಲೆ.
- ದೃಷ್ಟಿ
ನಾಶ.
- ಹೃದಯಾಘಾತಗಳು
- ಕೆಮ್ಮು
(ಸ್ಮೋಕರ‍್ಸ್ ಕಾಫ್)
- ಹಲ್ಲುಗಳು
ಹಳದಿ ಬಣ್ಣಕ್ಕೆ ತಿರುಗುವುದು ಇತ್ಯಾದಿ ಅನಾರೋಗ್ಯ ಸಮಸ್ಯೆಗಳನ್ನು ಅವರ ಮುಂದಿಡಬೇಕು.
ಸಿಗರೇಟು ಸೇದುವುದು ಶಿಷ್ಟಾಚಾರವಲ, ಆರೋಗ್ಯಕಾರಿಯಲ್ಲ, ಸೇದದಿರುವುದೇ
ಶಿಷ್ಟಾಚಾರ, ಆರೋಗ್ಯಕರ ಎಂಬುದನ್ನು ಬಿಂಬಿಸಬೇಕು.
ಜಗಿಯುವ ಹೊಗೆಸೊಪ್ಪು (Chewing tobacco)
ಇತ್ತೀಚಿನ ವರ್ಷಗಳಲ್ಲಿ ಜಗಿಯುವ ಹೊಗೆಸೊಪ್ಪನ್ನು
ಮೆಲ್ಲುವುದು ಅಬಾಲವೃದ್ಧರಾದಿಯಾಗಿ ಎಲ್ಲರಲ್ಲೂ ಕಂಡು ಬರುತ್ತದೆ. ವಿವಿಧ ಬ್ರಾಂಡ್‌ನ ಪಾನ್
ಮಸಾಲಗಳು, ಗುಟ್ಕಾಗಳು, ಖೈನಿಗಳು, ಸಣ್ಣ ಸಣ್ಣ ಪಾಕೆಟ್‌ಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ, ಪ್ರತಿ ಗೂಡು ಅಂಗಡಿ, ಬೀಡಾ
ಸಿಗರೇಟ್ ಅಂಗಡಿಗಳಲ್ಲಿ, ದಿನಸಿ
ಅಂಗಡಿ, ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ದೊರೆಯುತ್ತವೆ. ಸುವಾಸನೆಯನ್ನು ಬೀರುವ, ಜಗಿದರೆ ಮನಸ್ಸಿಗೆ ಕಿಕ್ ಕೊಡುವ ಈ ಜಗಿಯುವ ಹೊಗೆಸೊಪ್ಪನ್ನು ಯುವ ಜನ
ಎಗ್ಗಿಲ್ಲದೆ ಬಳಸಲು ಶುರು ಮಾಡಿದ್ದಾರೆ. ದಿನಕ್ಕೆ ಒಂದು ಪಾಕೇಟಿನಿಂದ ಶುರು ಮಾಡಿ ದಿನಕ್ಕೆ
ನೂರು ಪಾಕೇಟುಗಳನ್ನು ತಿನ್ನುವ ಮಟ್ಟವನ್ನು ತಲುಪುತ್ತಾರೆ. ಜಗಿಯುವುದು, ಎಲ್ಲೆಂದರೆ ಅದನ್ನು ಉಗಿಯುವುದು ಅವರ ದುರಭ್ಯಾಸವಾಗುತ್ತಿದೆ. ಜಗಿಯುವ
ಹೊಗೆಸೊಪ್ಪಿನಿಂದ ಬಾಯಿ ಕ್ಯಾನ್ಸರ್ ಬರುತ್ತದೆ ಎಂದು ದಂತವೈದ್ಯರು, ಕ್ಯಾನ್ಸರ್ ತಜ್ಞರು ಸಾಕ್ಷ್ಯಾಧಾರಗಳಿಂದ ನಿರೂಪಿಸಿದ್ದಾರೆ. ತಂಬಾಕನ್ನು
ನಿಷೇಧಿಸಿ ಎಂದು,
ಸರ್ಕಾರವನ್ನು ಒತ್ತಾಯ
ಮಾಡುತ್ತಿದ್ದಾರೆ. ಆದರೆ ಈ ವಾಣಿಯನ್ನು ಕೇಳಿಸಿಕೊಳ್ಳಲು ಸರ್ಕಾರವು ತಯಾರಿಲ್ಲ.
ಧೂಮಪಾನ-ಜಗಿಯುವ
ಹೊಗೆಸೊಪ್ಪಿನಿಂದ ಬಿಡುಗಡೆ ಹೇಗೆ?
ಸುಮಾರು ೩೦೦ಕ್ಕೂ ಹೆಚ್ಚಿನ ಅಪಾಯಕಾರಿ ರಾಸಾಯನಿಕ
ಕಣಗಳಿರುವ ಹೊಗೆಸೊಪ್ಪಿನಿಂದ ಮುಕ್ತಿ ಹೇಗೆ?
೧. ಸಿಗರೇಟ್ ಸೇವನೆಯನ್ನು, ಜಗಿಯುವ ಹೊಗೆಸೊಪ್ಪಿನ ಬಳಕೆಯನ್ನು ಥಟ್ಟನೆ ನಿಲ್ಲಿಸಿ, ಇನ್ನೆಂದೂ ಸೇವಿಸುವುದಿಲ್ಲ ಎಂದು ಪ್ರತಿದಿನ ಹೇಳಿಕೊಳ್ಳಿ.
೨. ಹೊಗೆಸೊಪ್ಪನ್ನು ಬಳಸುವ
ಸ್ನೇಹಿತರು/ಸಹೋದ್ಯೋಗಿಗಳಿಂದ ದೂರವಿರಿ. ಅದು ಸಿಗುವ ಸ್ಥಳ/ಅಂಗಡಿಗೆ ಹೋಗಬೇಡಿ, ಅದರತ್ತ ತಿರುಗಿಯೂ ನೋಡಬೇಡಿ.
೩. ಸೇದಬೇಕು, ತಿನ್ನಬೇಕು ಎನಿಸಿದಾಗ, ಮನಸ್ಸನ್ನು
ಇತರ ವಿಚಾರಗಳತ್ತ ಹರಿಸಿ, ಸಂಗೀತ
ಕೇಳಿ, ಚಿತ್ರ ಬಿಡಿಸಿ, ಜನರೊಂದಿಗೆ
ಮಾತನಾಡಿ ಧ್ಯಾನಮಾಡಿ.
೪. ಚಡಪಡಿಕೆ/ತಲೆನೋವು ಇತ್ಯಾದಿ ಹಿಂದೆಗೆತದ ಚಿನ್ಹೆಗಳು
ಕಂಡು ಬಂದರೆ, ನಿಮ್ಮ ಪರಿಚಯದ ವೈದ್ಯರನ್ನು ಕಂಡು ಶಮನಕಾರಿ ಮಾತ್ರೆಗಳನ್ನು ಬರೆಸಿಕೊಂಡು
(ಕ್ಲೊನಾಜೆಪಾಂ,
ಲೊರಾಜೆಪಾಂ) ಒಂದು ತಿಂಗಳ
ಕಾಲ ಸೇವಿಸಿ.
೫. ನಿಕೋಟಿನ್ ಪ್ಯಾಚ್‌ನ್ನು ಬಳಸಿ.
೬. ಬುಪ್ರೊ ಪ್ರಿಯಾನ್ ೧೫೦ ಮಿ.ಲಿ. ಗ್ರಾಂ
ಮಾತ್ರೆಯನ್ನು ಪ್ರತಿದಿನ ಬೆಳಿಗ್ಗೆ ಉಪಯೋಗಿಸಿ.
೭. ಆಪ್ತ ಸಲಹೆ, ಸಮಾಧಾನವನ್ನು ತರಬೇತಿ ಪಡೆದ ಆಪ್ತ ಸಮಾಲೋಚಕರಿಂದ/ ಮನೋವೈದ್ಯರಿಂದ ಪಡೆಯಿರಿ.
೮. ಆರೋಗ್ಯಕರ ಹವ್ಯಾಸಗಳನ್ನು ಬೆಳೆಸಿಕೊಳ್ಳಿ.
ಮದ್ಯಪಾನ
ಇತ್ತೀಚಿನ ವರ್ಷಗಳಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ
ಹೆಚ್ಚಾಗತೊಡಗಿದೆ. ಆದಾಯದ ಆಸೆಯಿಂದ ಸರ್ಕಾರವೂ ಇದಕ್ಕೆ ಪ್ರೋತ್ಸಾಹ ನೀಡುತ್ತಿದೆ.
ಮದ್ಯಪಾನೀಯಗಳನ್ನು ತಯಾರಿಸುವವರು ನೇರವಾಗಿ ಅಥವಾ ಪರೋಕ್ಷವಾಗಿ ಮದ್ಯ ಮಾರಾಟಕ್ಕೆ ಹೆಚ್ಚಿನ
ಉತ್ತೇಜನ ನೀಡುತ್ತಿದ್ದಾರೆ. ಯುವಕ-ಯುವತಿಯರನ್ನು ಮದ್ಯಪಾನದ ಬಲೆಯಲ್ಲಿ ಬೀಳಿಸಲು ಎಲ್ಲ
ಹುನ್ನಾರಗಳನ್ನು ಮಾಡುತ್ತಿದ್ದಾರೆ. ಕ್ರೀಡಾ ಸ್ಪರ್ಧೆಗಳನ್ನು, ಲಲಿತ ಕಲಾ ಚಟುವಟಿಕೆಗಳನ್ನು, ನೃತ್ಯ, ನಾಟಕಗಳನ್ನು
ಸ್ಪಾನ್ಸರ್ ಮಾಡುತ್ತಿದ್ದಾರೆ. ಹೆಸರಾಂತ ಸಿನೇಮಾ ನಟ ನಟಿಯರನ್ನು, ಕ್ರೀಡಾಪಟುಗಳನ್ನು ಮದ್ಯಪಾನ ಜಾಹಿರಾತಿಗೆ ಬಳಸುತ್ತಿದ್ದಾರೆ. ‘ಕುಡಿಯಿರಿ, ಮಜಾಮಾಡಿರಿ, ಆನಂದವನ್ನು ಸವಿಯಿರಿ ಎಂಬ ಆಕರ್ಷಕ ಜಾಹೀರಾತುಗಳನ್ನು ಕೊಡುತ್ತಿದ್ದಾರೆ.
ಎಲ್ಲೆಡೆ ಪಬ್‌ಗಳನ್ನು, ಬಾರ್
ಅಂಡ್ ರೆಸ್ಟೋರೆಂಟ್‌ಗಳನ್ನು, ವೈನ್
ಶಾಪ್‌ಗಳನ್ನು ತೆರೆದು, ಮದ್ಯಪಾನೀಯಗಳನ್ನು
ಮಾರಾಟ ಮಾಡುತ್ತಿದ್ದಾರೆ. ಹರೆಯದವರನ್ನು ಮತ್ತಷ್ಟು ಆಕರ್ಷಿಸಲು ವಿಶೇಷ ರಿಯಾಯಿತಿ ದರಗಳಲ್ಲಿ ‘ಬೀರ್ ಪಾನೀಯವನ್ನು ಮಾರಾಟ ಮಾಡುತ್ತಾರೆ. ಜೊತೆಗೆ ನಮ್ಮ ಸಮಾಜದಲ್ಲಿ
ಆಲ್ಕೋಹಾಲ್ ಬಗ್ಗೆ ಅನೇಕ ತಪ್ಪು, ಅವೈಜ್ಞಾನಿಕವಾದ
ಜನಪ್ರಿಯ ನಂಬಿಕೆಗಳಿವೆ. ಉದಾಹರಣೆಗೆ:
- ಆಲ್ಕೋಹಾಲ್
ಕೆಮ್ಮಿಗೆ ಶೀತಕ್ಕೆ ಉಸಿರಾಟದ ಸಮಸ್ಯೆಗೆ ಒಳ್ಳೆಯ ಮದ್ದು(ಖಂಡಿತಾ ಅಲ್ಲ).
- ಆಲ್ಕೋಹಾಲ್
ಶಕ್ತಿವರ್ಧಕ (ಅಲ್ಲ).
- ಆಲ್ಕೋಹಾಲ್
ಸೇವನೆಯಿಂದ ಚರ್ಮದ ಬಣ್ಣ ಉತ್ತಮಗೊಳ್ಳುತ್ತದೆ (ಕಪ್ಪಗಿದ್ದವರು, ಕೆಂಪಾಗುತ್ತಾರೆ
ಎಂಬ ಸುಳ್ಳು ನಂಬಿಕೆ ಪ್ರಚಲಿತವಿದೆ).
- ಆಲ್ಕೋಹಾಲ್
ಸೇವನೆಯಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಅವುಗಳ ಗಾತ್ರ ಹೆಚ್ಚುತ್ತದೆ. ಜಿಮ್ ಮಾಡಿ, ಬೀರ್
ಕುಡಿದರೆ ಒಳ್ಳೆಯ ಬಾಡಿ ಬಿಲ್ಡಿಂಗ್ ಮಾಡಬಹುದು ಎಂದು ಯುವಕರು ನಂಬುತ್ತಾರೆ. ಇದಕ್ಕೆ
ವೈಜ್ಞಾನಿಕ ಆಧಾರವಿಲ್ಲ.
- ಆಲ್ಕೋಹಾಲ್
ಧ್ಯೆರ್ಯವನ್ನು ಹೆಚ್ಚಿಸುತ್ತದೆ (ಆಲ್ಕೋಹಾಲ್ ಅಮಲಿನಲ್ಲಿ ಪರಿಣಾಮದ ಬಗ್ಗೆ ಲೆಕ್ಕಿಸದೆ
ವ್ಯಕ್ತಿ ಹುಂಬ ಧೈರ್ಯವನ್ನು ಪ್ರಕಟಿಸುತ್ತಾನೆ).
- ಆಲ್ಕೋಹಾಲ್
ಸೇವನೆ ಪುರುಷತನದ ಲಕ್ಷಣ (ಬೀರ್, ಬ್ರಾಂದಿ ಕುಡಿದು
ನಾನು ಗಂಡಸು ಎಂದು ಹೇಳಿಕೊಳ್ಳಬೇಕಿಲ್ಲ).
- ಆಲ್ಕೋಹಾಲ್
ಲೈಂಗಿಕ ಆಸೆ, ಶಕ್ತಿಯನ್ನು ಹೆಚ್ಚಿಸುತ್ತದೆ. (ಆಲ್ಕೋಹಾಲ್ ಲೈಂಗಿಕ ಆಸೆಯನ್ನು
ಹೆಚಿಸುತ್ತದೆಯಾದರೂ, ಲೈಂಗಿಕ ಸಾಮರ್ಥ್ಯವನ್ನು ಕುಗ್ಗಿಸುತ್ತದೆ. ಆಲ್ಕೋಹಾಲ್ ಲೈಂಗಿಕ
ದುಸ್ಸಾಹಸಗಳನ್ನು ಮಾಡಲು/ಲೈಂಗಿಕ ಅಪರಾಧಗಳನ್ನು ಮಾಡಲು ಪ್ರೇರೇಪಿಸುತ್ತದೆ.)
- ಆಲ್ಕೋಹಾಲ್
ಮೈ ನೋವು ಮನಸ್ಸಿನ ನೋವನ್ನು ಪರಿಹರಿಸುತ್ತದೆ. (ನೋವು ನಮ್ಮ ಅರಿವಿಗೆ ಬರುವುದಿಲ್ಲ, ನೋವಿನ
ಮೂಲವನ್ನು ಆಲ್ಕೋಹಾಲ್ ನಿವಾರಿಸುವುದಿಲ್ಲ).
- ಹೆಚ್ಚು
ಬೆಲೆಯ ಆಲ್ಕೋಹಾಲ್ ಪಾನೀಯಗಳನ್ನು ಸೇವಿಸುವುದು ಪ್ರತಿಷ್ಠೆಯ ಪ್ರತೀಕ. ಹೀಗೆಂದು
ಕುಡಿಯುವವರು ತಿಳಿಯುತ್ತಾರೆ.
- ಆಲ್ಕೋಹಾಲ್
ಸೇವನೆಯ ಜೊತೆಗೆ ಒಳ್ಳೆಯ ಮಾಂಸಾಹಾರ ತಿಂದರೆ, ಆಲ್ಕೋಹಾಲ್‌ನ
ದುಷ್ಪರಿಣಾಮ ಕಾಣಿಸಿಕೊಳ್ಳುವುದಿಲ್ಲ.( ಹಾಗೇನಿಲ್ಲ, ಆಲ್ಕೋಹಾಲ್‌ನ
ದುಷ್ಪರಿಣಾಮಕ್ಕೆ ವ್ಯಕ್ತಿ ಬಲಿ ಆಗೇ ಆಗುತ್ತಾನೆ) ದೀರ್ಘಕಾಲದ ಸೇವನೆಯಿಂದ ವ್ಯಕ್ತಿಯ
ಹಸಿವು ಕಡಿಮೆಯಾಗಿ, ಜೀರ್ಣಶಕ್ತಿ ಕಡಿಮೆಯಾಗಿ, ಅಸಿಡಿಟಿ
ಆಲ್ಸರ್ ಬಂದು, ಪೌಷ್ಟಿಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್ ಸೇವನೆ
ಇಂದು ಹರೆಯದವರಲ್ಲಿ ಫ್ಯಾಶನ್ ಆಗುತ್ತಿದೆ. ಸಂತೋಷಕ್ಕೆ, ದುಃಖಕ್ಕೆ, ಬಿಡುವಿನ
ವೇಳೆಯ ಉಪಯೋಗಕ್ಕೆ, ನೋವು,
ಅವಮಾನಗಳನ್ನು ಮರೆಯಲು
ಆಲ್ಕೋಹಾಲ್‌ನ ಮೊರೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ.
ಆಲ್ಕೋಹಾಲ್
ದೇಹ ಮತ್ತು ಮನಸ್ಸಿನ ಮೇಲೆ ಉಂಟುಮಾಡುವ ಪರಿಣಾಮಗಳು
೩೬೦
ಮಿಲಿ ಬೀರನ್ನು
೬೦ ಕಿಲೋ ತೂಗುವ ವ್ಯಕ್ತಿ ಕುಡಿದಾಗ ಒಂದರಿಂದ ಎರಡು ಗಂಟೆಯವರೆಗೆ, ಅವನ ರಕ್ತದಲ್ಲಿ ಪ್ರತಿ ೧೦೦ ಮಿಲಿಗೆ, ೩೦ಮಿಗ್ರಾಂ ಮದ್ಯಸಾರವಿರುತ್ತದೆ. ಈ ಹಂತದಲ್ಲಿ ಆತನಿಗೆ ತಾನು
ಚೆನ್ನಾಗಿದ್ದೇನೆ,
ಆರಾಮವಾಗಿದ್ದೇನೆ ಎಂಬ ಭ್ರಮೆ
ಉಂಟಾಗುತ್ತದೆ.
೧೦೦ ಮಿಲಿ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ೬೦
ಮಿ.ಗ್ರಾಂ,ಗೇರಿದರೆ ವ್ಯಕ್ತಿ ಸರಿ ತೀರ್ಮಾನಗಳನ್ನು ಕೈಗೊಳ್ಳಲಾರ. ಅವನ ಆಲೋಚನೆ, ವಿಶ್ಲೇಷಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ. ಆಲ್ಕೋಹಾಲ್ ಪ್ರಮಾಣ ೮೦
ಮಿ.ಗ್ರಾಂಗೇರಿದರೆ,
ಅವನ ಮಾತು ತೊದಲುತ್ತದೆ.
ನೇರವಾಗಿ ನಡೆಯಲಾರ. ಅಂಗಾಂಗಗಳ ಚಲನೆ ಅಸ್ತವ್ಯಸ್ತಗೊಳ್ಳುತ್ತದೆ. ೧೦೦ ಮಿ.ಗ್ರಾಂ ಮುಟ್ಟಿದರೆ
ವ್ಯಕ್ತಿ ಹತೋಟಿ ಇಲ್ಲದೆ ವರ್ತಿಸುತ್ತಾನೆ. ೧೫೦ ಮಿ.ಗ್ರಾಂಗೇರಿದಾಗ ವ್ಯಕ್ತಿ ನಿಲ್ಲಲಾರದೆ
ನೆಲಕ್ಕೆ ಬೀಳುತ್ತಾನೆ. ೩೦೦ ಮಿ.ಗ್ರಾಂ ಆದಾಗ ಆತ ಪ್ರಜ್ಞಾಹೀನ ಸ್ಥಿತಿಯನ್ನು ಮುಟ್ಟುತ್ತಾನೆ.
ಊಟ ಮಾಡುವ ಮೊದಲು, ಖಾಲಿಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸುವುದು, ಸೋಡಾ ಬೆರೆಸಿ ಆಲ್ಕೋಹಾಲ್ ಕುಡಿಯುವುದು, ವೇಗವಾಗಿ ಸ್ಟ್ರಾಂಗ್ ಆಲ್ಕೋಹಾಲ್ ಪಾನೀಯವನ್ನು ಕುಡಿಯುವುದರಿಂದ, ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ಶೀಘ್ರ ಗತಿಯಲ್ಲಿ ಏರುತ್ತದೆ. ವ್ಯಕ್ತಿ INTOXICATED STAGE (ನಶೆಯ ಸ್ಥಿತಿ)ಗೆ ಬೇಗ ಹೋಗುತ್ತಾನೆ.
ಪದೇ-ಪದೇ ಮದ್ಯಪಾನೀಯಗಳನ್ನು ಸೇವಿಸುವುದರಿಂದ ಶರೀರ
ಮತ್ತು ಮನಸ್ಸುಗಳ ಮೇಲೆ ಆಗುವ ದುಷ್ಪರಿಣಾಮಗಳು:
- ಅಧಿಕ
ಆಮ್ಲ ಸ್ಥಿತಿ, ಜಠರದಲ್ಲಿ ಹುಣ್ಣು, ಅಜೀರ್ಣ, ಅಪೌಷ್ಠಿಕತೆ
(ಮುಖ್ಯವಾಗಿ ವಿಟಮಿನ್ ಬಿ೧,
ಬಿ೬ ಮತ್ತು ಬಿ ೧೨ ಕೊರತೆ)
- ಲಿವರ್
ಹಾನಿ, ಜಾಂಡೀಸ್.
- ಹೃದಯಕ್ಕೆ
ಹಾನಿ, ಹೃದಯಾಘಾತ, ಹೃದಯ ಸ್ನಾಯುಗಳು
ದುರ್ಬಲವಾಗುವುದು.
- ಮಿದುಳು
ಮತ್ತು ಮನಸ್ಸು, ಏಕಾಗ್ರತೆ, ನೆನಪು
ಕಡಿಮೆಯಾಗುವುದು. ಕಲಿಕೆ ಕಷ್ಟವಾಗುವುದು, ನಿರ್ಧಾರ
ಕೈಗೊಳ್ಳುವ, ಸಮಸ್ಯೆ,
ವಿಷಯ ವಿಶ್ಲೇಷಣೆ ಮಾಡುವ
ಸಾಮರ್ಥ್ಯ ತಗ್ಗುವುದು, ನಿದ್ರಾಹೀನತೆ ಫಿಟ್ಸ್, ಕೈಕಾಲುಗಳ
ಜೋಮು, ನೈತಿಕ ಪ್ರಜ್ಞೆ ಹಾಳಾಗಿ ವ್ಯಕ್ತಿ ಸುಳ್ಳು, ಕಳ್ಳತನ
ಅಪರಾಧ ಮಾಡಲು ಮುಂದಾಗುವುದು. ಮೋಸ, ವಂಚನೆ ಮಾಡುವುದು.
ಓದು, ಕರ್ತವ್ಯ, ಜವಾಬ್ದಾರಿಯನ್ನು
ನಿರ್ಲಕ್ಷಿಸುವುದು, ಅಪರಾಧ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವುದು, ಅಪಘಾತಗಳಿಗೆ
ತುತ್ತಾಗುವುದು ಇತ್ಯಾದಿ.
- ಕಣ್ಣು
ದೃಷ್ಟಿ ಮಂಕಾಗುವುದು ಅಥವಾ ನಾಶವಾಗುವುದು.
- ಕುಡಿದು
ವಾಹನ ಚಾಲನೆ ಮಾಡಿ, ಅಪಘಾತ ಮಾಡುವುದು, ಪೊಲೀಸ್, ಕೋರ್ಟ್
ಕೇಸ್ ಆಗುವುದು, ಜಗಳ-ಹಿಂಸಾಚಾರದಲ್ಲಿ ತೊಡಗುವುದು.
- ಕುಡಿತದ ಚಟಕ್ಕೆ
ಬಿದ್ದ ವ್ಯಕ್ತಿ ಕುಡಿತಕ್ಕೋಸ್ಕರ ಏನನ್ನಾದರೂ ಮಾಡಲು ಸಮಾಜ ವಿರೋಧಿ ಹಾಗೂ ಅತಿ ಕೆಳಮಟ್ಟದ
ವರ್ತನೆಗಳನ್ನು ತೋರಲು ಸಿದ್ಧನಾಗುತ್ತಾನೆ. ತಂದೆ-ತಾಯಿ, ಮನೆಯವರನ್ನು
ಹಣಕ್ಕಾಗಿ ಪೀಡಿಸುವುದು, ಮನೆಯ ಸಾಮಾನುಗಳನ್ನು ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದು
ಮಾರುವುದು, ಪರಿಚಿತರು-ಅಪರಿಚಿತರಿಂದ ಹಣವನ್ನು ಸಾಲ ಪಡೆಯುವುದು. ಇತ್ಯಾದಿ
ವರ್ತನೆಗಳನ್ನು ತೋರುತ್ತಾನೆ.
- ಆಲ್ಕೋಹಾಲಿನ
ಅಮಲಿನಲ್ಲಿ ಲೈಂಗಿಕ ಅಪಚಾರ,
ದುರ್ವರ್ತನೆಗಳನ್ನು ತೋರಬಹುದು.
ಗಾಂಜಾ, ಭಂಗಿ, ಹಶೀಷ್, ಚರಸ್, ಗ್ರಾಸ್
ಸಿಗರೇಟಿನಲ್ಲಿ ಗಾಂಜಾಪುಡಿ ಸೇರಿಸಿ ಸೇದುವುದು, ಭಂಗಿ ಸೊಪ್ಪಿನ ರಸ ಕುಡಿಯುವುದು(ರಾಮರಸ), ಹಶೀಷ್, ಚರಸ್, ಗ್ರಾಸ್ ಸೇದುವುದು. ಹರೆಯದವರಲ್ಲಿ ಕಂಡುಬರುತ್ತದೆ. ಟೆಂಶನ್ ಕಡಿಮೆ
ಮಾಡಿಕೊಳ್ಳಲು, ಏಕಾಗ್ರತೆ ಹೆಚ್ಚಿಸಲು ಸೇದುತ್ತೇವೆಂದು ಹೇಳಿ, ಕಾಲಕ್ರಮೇಣ ಈ ವಸ್ತುಗಳ ಸೇವನೆಗೆ ಅವಲಂಬಿತರಾಗುತ್ತಾರೆ. ಹಾಗೆಯೇ ಹಾರ್ಡ್
ಕೋರ್ ಮಾದಕದ್ರವ್ಯಗಳಾದ ಬ್ರೌನ್‌ಶುಗರ್, ಹೆರಾಯಿನ್, ಕೊಕೇನ್‌ಗಳನ್ನು ಬಳಸುತ್ತಾರೆ. ನೋವು, ನಿವಾರಕ ಇಂಜೆಕ್ಷನ್‌ಗಳು(ಟಿಡಿಜೇಸಿಕ್, ಮಾರ್ಫಿನ್, ಪೆಥಿಡಿನ್)
ಅಥವಾ ಮಾತ್ರೆಗಳು ಸ್ಪಾಸ್ಮೋಪ್ರಾಕ್ಸಿವಾನ್, ಅನಾಲ್ಜಿನ್, ನೋವಾಲ್ಜಿನ್‌ಗಳು, ಶಮನಕಾರಿ
ಮಾತ್ರೆಗಳು (ಮಾಂಡ್ರಾಕ್ಸ್, ನೈಟ್ರೊವೆಟ್, ಆಲ್‌ಪ್ರೊಜೊಲಾಮ್, ಡೈಜೆಪಾಂ
ಇತ್ಯಾದಿ) ಕ್ಸೀರಾಕ್ಸ್ ಇಂಕನ್ನು ಮೂಸುವುದು, ನೇಲ್‌ಪಾಲಿಶ್ ರಿಮೂವರ್, ಪೆಟ್ರೋಲನ್ನು
ಸ್ನಿಫ್ ಮಾಡುವುದು,
ಬ್ರೆಡ್ ಜೊತೆಗೆ ಅಯೊಡೆಕ್ಸ್
ಹಾಕಿ ತಿನ್ನುವುದು,
ಹೀಗೆ ಹಲವು, ಹನ್ನೊಂದು ವಸ್ತುಗಳ ಸೇವನೆಯ ಚಟಕ್ಕೆ ಹರೆಯದವರು ಒಳಗಾಗುತ್ತಾರೆ. ತಮ್ಮ
ಬದುಕನ್ನೇ ಹಾಳುಮಾಡಿಕೊಳ್ಳುತ್ತಾರೆ.
ಚಟಕ್ಕೆ ಚಿಕಿತ್ಸೆ
ಆಲ್ಕೊಹಾಲ್‌ನಿಂದ ಹಿಡಿದು, ಯಾವುದೇ ವಸ್ತುವಿಗೆ ಚಟ ಹತ್ತಿದ್ದರೆ, ದುಶ್ಚಟ ನಿವಾರಣಾ ಕೇಂದ್ರಕ್ಕೆ, ಮನೋವೈದ್ಯ ವಿಭಾಗಕ್ಕೆ ಹೋಗಿ, ಹೊರರೋಗಿಯಾಗಿ, ಒಳರೋಗಿಯಾಗಿ
ಚಿಕಿತ್ಸೆ ಪಡೆಯಿರಿ. ಚಿಕಿತ್ಸೆ ನಾಲ್ಕು ಹಂತಗಳಲ್ಲಿ ನಡೆಯುತ್ತದೆ.
ಡಿಟಾಕ್ಸಿಫಿಕೇಶನ್ ಹಂತ: ಔಷಧ, ಮಾದಕ
ವಸ್ತುವಿನ ಸೇವನೆಯನ್ನು ಥಟ್ಟನೆ ನಿಲ್ಲಿಸಬೇಕು. ಆಗ ಕಾಣಿಸಿಕೊಳ್ಳುವ ‘ವಿತ್‌ಡ್ರಾಯಲ್ ಸಿಂಪ್ಟಮ್ಸ್ ಹಿಂದೆಗೆತದ ಲಕ್ಷಣಗಳಾದ ನಿದ್ರಾಹೀನತೆ, ಚಡಪಡಿಕೆ, ತಲೆನೋವು, ಮೂಗಿನಲ್ಲಿ ನೀರು ಸುರಿಯುವುದು, ಸ್ನಾಯುಗಳ ಬಿಗಿತ ನೋವು, ಫಿಟ್ಸ್, ಗೊಂದಲ, ಅರೆ
ಪ್ರಜ್ಞಾ ಸ್ಥಿತಿಯನ್ನು ಶಮನಕಾರಿ ಮಾತ್ರೆ ಇಂಜೆಕ್ಷನ್ ಕೊಟ್ಟು ಹತೋಟಿಯಲ್ಲಿಡಲಾಗುವುದು. ಇದು
ಒಂದು ವಾರ ಕಾಲ ವಿಟಮಿನ್‌ಗಳು, ಪೌಷ್ಟಿಕ
ಆಹಾರವನ್ನು ನೀಡಲಾಗುತ್ತದೆ.
- ಮಾದಕ
ವಸ್ತು ಸೇವನೆಯ ಚಟಕ್ಕೆ ಕಾರಣವಾದ ವೈಯುಕ್ತಿಕ ಕೌಟುಂಬಿಕ, ಆರ್ಥಿಕ, ಔದ್ಯೋಗಿಕ
ಹಾಗೂ ಸಾಮಾಜಿಕ ಕಾರಣಗಳನ್ನು ಪತ್ತೆ ಮಾಡಿ ವಿಶ್ಲೇಷಿಸುವುದು. ಅವುಗಳನ್ನು ಬದಲಿಸಲು
ಸಂಬಂಧಪಟ್ಟವರಿಗೆ ಸೂಚಿಸುವುದು.
- ದೇಹ
ಮತ್ತು ಮಿದುಳಿಗಾದ ಹಾನಿಯನ್ನು ಸರಿಪಡಿಸುವುದು.
- ಮನೋ
ಚಿಕಿತ್ಸೆ, ಕುಟುಂಬ ಚಿಕಿತ್ಸೆ ಹಾಗೂ ನಡವಳಿಕೆ ಚಿಕಿತ್ಸೆ ಮುಖಾಂತರ ವ್ಯಕ್ತಿಗೆ
ಮತ್ತೆ ಮದ್ಯ-ಮಾದಕವಸ್ತುವಿನ ಸೇವನೆಯ ಆಸೆ ಬರದಂತೆ ಅಥವಾ ಬಂದರೂ ಅದಕ್ಕೆ ಒಳಗಾಗದಂತೆ
ತರಬೇತಿ ನೀಡುವುದು. ಆಲ್ಕೋಹಾಲ್ ಬೇಡ, ಅಫೀಮು ಬೇಡ
ಎನ್ನಲು ನೆರವಾಗುವ ಡೈಸಲ್‌ಫುರಾಮ್, ನಾಲ್‌ಟ್ರಾಕ್ಸಾನ್
ಔಷಧಿಯನ್ನು ನೀಡುವುದು.
ಹರೆಯದವರು ಹೊಗೆಸೊಪ್ಪು, ಮದ್ಯಸಾರ ಮಾದಕ ಪದಾರ್ಥಗಳನ್ನು ಉಪಯೋಗಿಸದಂತೆ ಹಾಗೂ ಅದರ ಅಭ್ಯಾಸ/ಚಟಕ್ಕೆ
ಬೀಳದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಚರ್ಚೆ, ಸಂವಾದಗಳ ಮೂಲಕ ಸೂಕ್ತ ತಿಳುವಳಿಕೆಗಳನ್ನು ಶಾಲಾ-ಕಾಲೇಜುಗಳಲ್ಲಿ ನೀಡಬೇಕು.
ಧೂಮಪಾನ, ಮದ್ಯಪಾನ, ಮಾದಕ
ವಸ್ತುಗಳ ಸೇವನೆ ಎಷ್ಟೊಂದು ಅಪಾಯಕಾರಿ ಎಂಬುದನ್ನು ಅವರಿಗೆ ಅರ್ಥವಾಗುವಂತೆ ಹೇಳಬೇಕು. ಈ
ವಸ್ತುಗಳು ನಮಗೆ ಬೇಡ,
ನಾವು ಅವನ್ನು
ಸೇವಿಸುವುದಿಲ್ಲ ಎಂದು ನಿರ್ಧಾರ ಮಾಡಲು ಅವರಿಗೆ ನೆರವಾಗಬೇಕು.
ಪುಸ್ತಕ: ಹರೆಯದವರ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?
ಲೇಖಕರು: ಸಿ. ಆರ್. ಚಂದ್ರಶೇಖರ್
ಪ್ರಕಾಶಕರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು